ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು :(1915)
ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಲಿಂ. ಶ್ರೀ ಜ. ಗಂಗಾಧರ ಮಹಾಸ್ವಾಮಿಗಳ ನಂತರ ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠವನ್ನು ಅಲಂಕರಿಸಿದರು.
ಬೆಳಗಾಂವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕ್ರಿ. ಶ. ೧೮೯೮, ಸಪ್ಟೆಂಬರ ೭ ನೆಯ ದಿನಾಂಕ ಜನಿಸಿದರು. ಅವರು ಕೊಣ್ಣೂರಿನ ಪ್ರಸಿದ್ಧ ಗುರುಪೀಠವಾದ ಶ್ರೀ ಕೆಂಪಯ್ಯ ಸ್ವಾಮಿ ಮಠಕ್ಕೆ ಅಧಿಕಾರಿಗಳಾಗಿ ಮಂದಿರದಲ್ಲಿ ಶಿಕ್ಷಣ ಪಡೆಯಲು ಬಂದರು.
ಕನ್ನಡ-ಸಂಸ್ಕೃತ ಶಿಕ್ಷಣದೊಂದಿಗೆ ಯೋಗ ಸಾಧನೆಯಲ್ಲಿಯೂ ಪ್ರಾವೀಣ್ಯ ಪಡೆದರು. ಕೊಣ್ಣೂರ ಮಠದ ಅಭಿವೃದ್ಧಿಯನ್ನು ಮಾಡಿ ಅಲ್ಲಿ ಸಂಸ್ಕೃತ ಪಾಠ ಶಾಲೆ ಮತ್ತು ಇಂಗ್ಲಿಷ್ ಸ್ಕೂಲನ್ನು ಸ್ಥಾಪಿಸಿ ವಿದ್ಯಾವಿತರಣೆಯ ಪವಿತ್ರ ಕಾರ್ಯ ಪ್ರಾರಂಭಿಸಿದರು. ನೂರು ಜನ ವಿದ್ಯಾರ್ಥಿಗಳು ಮತ್ತು ಐದು ಜನ ಪ್ರಾಧ್ಯಾಪಕರ ಉಚಿತ ಪ್ರಸಾದ-ವಸತಿಗಳ ವೆಚ್ಚವನ್ನು ಮಠದ ವತಿಯಿಂದಲೇ ಏರ್ಪಡಿಸಿದರು.
ಕಾಶಿಯಲ್ಲಿ ಕಲಿಯುವ ಅನೇಕ ವಿದ್ಯಾರ್ಥಿಗಳಿಗೆ ವೇತನವನ್ನು ದಯಪಾಲಿಸಿ ಪ್ರೌಢ ಶಿಕ್ಷಣಕ್ಕೆ ಪ್ರೋತ್ಸಾಹವಿತ್ತರು. ಶಿವಯೋಗ ಮಂದಿರದ ಸಲುವಾಗಿ ಹತ್ತು ಸಾವಿರ ರೂಪಾಯಿಗಳ ಭಿಕ್ಷೆಯನ್ನು ಮಾಡಿ ಕಳಿಸಿದ್ದರು. ಶ್ರೀ ಕೆಂಪಯ್ಯದೇವರ ಕಾರ್ಯದಕ್ಷತೆಯನ್ನು ಕಂಡು ಹುಬ್ಬಳ್ಳಿ-ಧಾರವಾಡ ಮಹಾಜನಗಳ ಪ್ರಾರ್ಥನೆಯಂತೆ ಲಿಂ. ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳವರು ಅವರನ್ನು ಹುಬ್ಬಳ್ಳಿಯ ಶ್ರೀ ಮೂರುಸಾವಿರ ಪೀಠಕ್ಕೆ ಅಧಿಕಾರಿಗಳನ್ನಾಗಿ ಮಾಡಿದರು. ಶ್ರೀ
ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳವರು ಹುಬ್ಬಳ್ಳಿಯ ಪೀಠವನ್ನು ಅಲಂಕರಿಸಿದಂದಿನಿಂದ ಕನ್ನಡ ನಾಡಿನ ಶಿಕ್ಷಣ ಪ್ರಪಂಚದಲ್ಲಿ ಸುವರ್ಣ ಯುಗವು ಪ್ರಾರಂಭವಾಯಿತು. ವಿವೇಕಪೂರ್ಣವಾದ ವಿಚಕ್ಷಣವಾದ ವ್ಯಾವಹಾರಿಕವಾದ
ಶೈಕ್ಷಣಿಕ ದೃಷ್ಟಿಯುಳ್ಳ ಶ್ರೀ ಜಗದ್ಗುರುಗಳ ಆದರ್ಶ ಧೈಯಗಳು ನಾಡಿನ ಸರ್ವತೋಮುಖ ಪ್ರಗತಿಗೆ ಪೋಷಕವಾದವು. ಬರಿಯ ವ್ಯಾಪಾರ ಕೇಂದ್ರವಾಗಿದ್ದ ಹುಬ್ಬಳ್ಳಿ ನಗರವು ಶ್ರೀ ಜಗದ್ಗುರುಗಳವರ ಕೃಪಾಶೀರ್ವಾದದಿಂದ ಕರ್ನಾಟಕದ ಶೈಕ್ಷಣಿಕ ಕೇಂದ್ರವಾಗಿ ‘ವಿದ್ಯಾನಗರ’ವಾಗಿ ಬೆಳೆಯುವಂತಾಯಿತು. ಶ್ರೀ ಮಠದಲ್ಲಿ ಜ. ಗಂಗಾಧರ ಸ್ವಾಮಿಗಳು ಸಂಸ್ಕೃತ ಕಾಲೇಜನ್ನು ನಡೆಯಿಸಿದರು.
ನೂರಾರು ಜನ ವಿದ್ಯಾರ್ಥಿಗಳ ಅನುಕೂಲತೆಗಾಗಿ ಲಿಂಗರಾಜ ಫ್ರೀ ಬೋರ್ಡಿಂಗನ್ನು ಸ್ಥಾಪಿಸಿದರು. ಕ್ರಿ. ಶ. ೧೯೪೭ ರಲ್ಲಿ ಶ್ರೀ ಜಗದ್ಗುರು ಗಂಗಾಧರ ಸ್ವಾಮಿಗಳು ವಾಣಿಜ್ಯ ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ೧೯೫೨ ರಲ್ಲಿ ಶ್ರೀ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜನ್ನು ಪ್ರಾರಂಭಿಸಲು ೮೦ ಸಾವಿರ ರೂ.ಗಳ ದೇಣಿಗೆಯನ್ನು ದಯಪಾಲಿಸಿದರು. ಇವೆರಡೂ ಕಾಲೇಜಗಳ ಆಡಳಿತವನ್ನು ಬೆಳಗಾಂವಿಯ ಕೆ.ಎಲ್.ಇ. ಸೊಸೈಟಿಗೆ ಒಪ್ಪಿಸಿದರು. ಇವಲ್ಲದೆ ಜ. ಗಂಗಾಧರ ಹೈಸ್ಕೂಲು,
ಜ. ಗುರುಸಿದ್ಧೇಶ್ವರ ಕನ್ನಡ ಟ್ರೇನಿಂಗ ಕಾಲೇಜ, ಮಾದರಿಯ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮಠದ ಉದಾರ ಪೋಷಣೆಯಲ್ಲಿ ನಿರಾತಂಕವಾಗಿ ನಡೆಯುವಂತೆ ಏರ್ಪಡಿಸಿದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಅನೇಕ ಸಂಘ ಸಂಸ್ಥೆಗಳು ಶ್ರೀ ಜಗದ್ಗುರುಗಳವರ ದೇಣಿಗೆಯ ಲಾಭವನ್ನು ಪಡೆದು ಪ್ರಗತಿ ಸಾಧಿಸಿವೆ.
ಬೆಳಗಾಂವಿಯ ‘ವೀರಶೈವ ಪ್ರಸಾದ ನಿಲಯ’ದ ಕಟ್ಟಡಕ್ಕೆ ೬೦ ಸಾವಿರ ರೂಪಾಯಿಗಳ ಸಹಾಯ ದಯಪಾಲಿಸಿದರು. ಬೆಳಗಾಂವಿ ಜಿಲ್ಲೆಯ ಹುಕ್ಕೇರಿಯ ಘಟಪ್ರಭೆಯ ರೇಲ್ವೆ ನಿಲ್ದಾಣದ ಹತ್ತಿರ ನಿರ್ಮಿಸಿದ ಆರೋಗ್ಯ ಧಾಮಕ್ಕೆ ಐದು ಲಕ್ಷಕ್ಕಿಂತ ಹೆಚ್ಚಿಗೆ ದೇಣಿಗೆಯನ್ನು ಕೊಡಮಾಡಿದ್ದಾರೆ. ಅದನ್ನು ಮಾದರಿಯ ಸಹಕಾರಿ ಆರೋಗ್ಯಧಾಮವನ್ನಾಗಿ ಮಾರ್ಪಡಿಸಿ ನಾಡಿನ ಜನರ ಆರೋಗ್ಯ ರಕ್ಷಣೆಯ ಮಹಾಸೇವೆಯು ನಿರಾಬಾಧವಾಗಿ ನಡೆಯುವಂತೆ ಏರ್ಪಡಿಸಿರುವದು. ಶ್ರೀ ಜಗದ್ಗುರುಗಳವರ ಉದಾರತೆ ಮತ್ತು ವಿಶಾಲ ದೃಷ್ಟಿಗಳ ದ್ಯೋತಕವಾಗಿದೆ.
ಶ್ರೀ ಜಗದ್ಗುರುಗಳು ‘ಶ್ರೀ ಜ. ಗಂಗಾಧರ ಗಾಂಧೀ ಸ್ಮಾರಕ ನೇತ್ರ ಚಿಕಿತ್ಸಾ ಫಂಡ’ನ್ನು ಸ್ಥಾಪಿಸಿ ಅದಕ್ಕೆ ೧೦ ಸಾವಿರ ರೂ.ಗಳ ದೇಣಿಗೆಯನ್ನು ಕೊಡಮಾಡಿದರು. ಅದರಿಂದ ನೇತ್ರ ಚಿಕಿತ್ಸೆಯ ಹೆಚ್ಚಿನ ಶಿಕ್ಷಣ ಪಡೆಯಲು ಪರದೇಶಗಳಿಗೆ ಹೋಗುವ ಡಾಕ್ಟರರಿಗೆ ಸಹಾಯ ನೀಡುವ ಯೋಜನೆಯಾಯಿತು. ಇದರ ಲಾಭವನ್ನು ಪಡೆದುಕೊಂಡು ಡಾ. ಎಂ. ಸಿ ಮೋದಿ ಅವರು ಅಮೇರಿಕೆಗೆ ಹೋಗಿ ಬಂದರು; ಕನ್ನಡ ನಾಡಿನ ಜನತೆಯ ಸೇವೆ ಮಾಡಿ * ಪದ್ಮಶ್ರೀ’ಯ ಘನತೆಯನ್ನು ಪಡೆದು ಇಡಿಯ ಭಾರತದ ಕಣ್ಮಣಿಯಾಗಿದ್ದಾರೆ.
ಶ್ರೀ ಮಠದ ವತಿಯಿಂದ ಗ್ರಂಥಮಾಲೆಯನ್ನು ಪ್ರಾರಂಭಿಸಿದರು ಅದರಲ್ಲಿ ಅನೇಕ ಉತ್ತಮ ಕನ್ನಡ ವಚನ ಗ್ರಂಥಗಳನ್ನು ಮತ್ತು ‘ವೀರಶೈವಾನಂದ ಚ೦ದ್ರಿಕೆ’ಯಂಥ ಅಮೌಲ್ಯ ಸಂಸ್ಕೃತ ಗ್ರಂಥಗಳನ್ನು ಪ್ರಕಟಿಸಿದ್ದಲ್ಲದೆ ವೀರಶೈವವಾಗ್ಮಯದ ಪ್ರಸಾರ ಮತ್ತು ಪ್ರಕಾಶನಕ್ಕಾಗಿ ಎರಡು ಲಕ್ಷ ರೂಪಾಯಿಗಳ ನಿಧಿಯನ್ನು ಏರ್ಪಡಿಸಿರುವರು.
ಶ್ರೀ ಜಗದ್ಗುರುಗಳವರು ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿಯೂ ಅದರ ಸರ್ವಾಂಗೀಣ ಪ್ರಗತಿಗೆ ಉಪಾಯಗಳನ್ನು ಕೈಕೊಂಡಿದ್ದರು. ಅವುಗಳನ್ನು ಪೂರ್ಣ ಮಾಡಲು ಸಮರ್ಥರಾದ ಶಿವಯೋಗ ಮಂದಿರ ಮತ್ತು ಕಾಶಿಯಲ್ಲಿ ಕಲಿತು ವಿದ್ವಾಂಸರಾದ ಚಿತ್ತರಗಿ-ಇಲಕಲ್ಲ ಶ್ರೀ ವಿಜಯ ಮಹಾಂತ ದೇವರನ್ನು ಈ ಪೀಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಮಾಡಿದರು.
ಆಧುನಿಕ ಜೀವನದ ವಿಶಾಲ ದೃಷ್ಟಿಯನ್ನು ಪಡೆದ ಶ್ರೀ ಜಗದ್ಗುರುಗಳು ನಾಡಿನ ಉತ್ಕರ್ಷಕ್ಕಾಗಿ ಅನೇಕ ಮುಖವಾಗಿ ತ್ಯಾಗ ಮಾಡಿ ಕಾಯಕಯೋಗಿಗಳಾಗಿ ಬೆಳಗುತ್ತ ೧೯೫೮ ರಲ್ಲಿ ಲಿಂಗೈಕ್ಯರಾದುದು ನಾಡಿಗೆ ತುಂಬಿಬಾರದ ಹಾನಿಯಾಗಿದೆ.