ಶ್ರೀ ನಿ. ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ (ಇಲಕಲ್ಲ):(1910)  

 ಶ್ರೀ ನಿ. ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ (ಇಲಕಲ್ಲ):(1910)

  ಶ್ರೀ ನಿ. ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ (ಇಲಕಲ್ಲ) ಪೀಠದ ಅಧಿಪತಿಗಳಾಗಿದ್ದರು. ಅವರು ಮೊದಲು ಹುನಗುಂದ ತಾಲೂಕಿನ ಕೊಪ್ಪದ ವಿರಕ್ತಮಠಕ್ಕೆ ಸ್ವಾಮಿಗಳಾಗಿದ್ದರು. ಶ್ರೀಗುರು ಮಹಾಂತ ಸ್ವಾಮಿಗಳ ನಂತರ ೧೯೩೯ರಲ್ಲಿ ಇಲಕಲ್ಲ ಮಠದ ಅಧಿಕಾರವನ್ನು ವಹಿಸಿಕೊಂಡರು. ಅವರು ಮಂದಿರದಲ್ಲಿ ಹುಕ್ಕೇರಿ ಸದಾಶಿವ ಶಾಸ್ತ್ರಿಗಳು ಮತ್ತು ಕಂದಗಲ್ಲ ಪರ್ವತ ಶಾಸ್ತ್ರಿಗಳಲ್ಲಿ ಸಾಹಿತ್ಯ-ವೇದಾಂತ ವಿಷಯಗಳ ಅಭ್ಯಾಸ ಮಾಡಿದರು. ಶ್ರೀಗಳವರು ಭಾಷಣ ಪ್ರವಚನಗಳನ್ನು ಮಾಡುವದರಲ್ಲಿ ಅದ್ವಿತೀಯರಾಗಿದ್ದರು. ಅವರ ಅಸ್ಖಲಿತವಾದ ವಾಣಿ ಹಾಸ್ಯಮಯ ಶೈಲಿ ಆಕರ್ಷಕವಾಗಿದ್ದವು. ಅವರು ಗಡಹಿಂಗ್ಲಜ ಪ್ರಾಂತದಲ್ಲಿ ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳವರೊಡನೆ ಸಂಚರಿಸಿ ಧರ್ಮ ಪ್ರಚಾರವನ್ನು ಮಾಡಿದರು.

ಕಪನಳ್ಳಿಯ ಶಿವಯೋಗಾಶ್ರಮದಲ್ಲಿ ಮತ್ತು ಗದಗಿನ ಆನಂದಾಶ್ರಮದಲ್ಲಿಯೂ ಅನುಷ್ಠಾನ ಮಾಡಿದರು. ಸಂಗಮದಲ್ಲಿ ನಿಧಿಯನ್ನು ಕೂಡಿಸಿ ಇಂಗ್ಲಿಷ್ ಸ್ಕೂಲನ್ನು ಸ್ಥಾಪಿಸಿದ್ದರು. ಹುನಗುಂದದ ‘ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ’ದ ಅಧ್ಯಕ್ಷರಾಗಿ ಅಲ್ಲಿಯ ವಿದ್ಯಾಸಂಸ್ಥೆಗಳ ಪ್ರಗತಿಗೆ ಕಾರಣರಾದರು. ಶ್ರೀ ಪಂಚಾಕ್ಷರ ಗವಾಯಿಗಳ ಸಂಚಾರಿ ಪಾಠಶಾಲೆಗೆ ಶ್ರೀಗಳವರು ಕೊನೆಯವರೆಗೂ ಸಹಾಯ ನೀಡಿದರು. ಶಿವಯೋಗ ಮಂದಿರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಗಳಾಗಿ ಅದರ ಸರ್ವತೋಮುಖ ಏಳ್ಗೆಗೆ ಶ್ರಮಿಸುತ್ತಿದ್ದರು. ದಿ. ೧೩-೮-೧೯೫೯ ರಂದು ಇಲಕಲ್ಲಲ್ಲಿ ಲಿಂಗೈಕ್ಯರಾದರು.