ರಾವೂರ ಶ್ರೀ ನಿ. ಪ್ರ. ಸಿದ್ಧಲಿಂಗ ಸ್ವಾಮಿಗಳು : (೧೯೧೯)
ರಾವೂರ ಶ್ರೀ ನಿ. ಪ್ರ. ಸಿದ್ಧಲಿಂಗ ಸ್ವಾಮಿಗಳು ಸಿದ್ಧಲಿಂಗೇಶ್ವರ ಮಠದ ಅಧಿಕಾರಿಗಳು. ಅವರ ಜನ್ಮಸ್ಥಳ ಕೊಟಬಾಗಿ (ಜಿ, ಧಾರವಾಡ) ಜನನ ವರ್ಷ ೧೯೦೮.. ಮೊದಲು ಕೊಟಬಾಗಿಯ ಹಿರಿಯ ಮಠಕ್ಕೆ ಅಧಿಕಾರಿಗಳಾಗಿ ಶ್ರೀ ಷಣ್ಮುಖ ದೇವರೆಂದು ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದರು.
ಅವರು ಪಂ. ರೇವಣಸಿದ್ಧ ಶಾಸ್ತ್ರಿಗಳು ಮತ್ತು ಪಂ ಸೋಮಶೇಖರ ಶಾಸ್ತ್ರಿಗಳವರಲ್ಲಿ ವ್ಯಾಕರಣ-ತರ್ಕ ವಿಷಯಗಳ ಅಧ್ಯಯನ ಮಾಡಿ ೧೯೨೭ರಲ್ಲಿ ಪ್ರೌಢ ಶಿಕ್ಷಣಕ್ಕೆಂದು ಕಾಶಿಗೆ ತೆರಳಿದರು. ಅಲ್ಲಿ ಶ್ರೀ ಜ. ಜಯದೇವ ಮುರಘರಾಜೇಂದ್ರ ಫ್ರೀ ಬೋರ್ಡಿಂಗಿನಲ್ಲಿದ್ದು ರಾಜಕೀಯ ಸಂಸ್ಕೃತ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ‘ನವ್ಯ ವ್ಯಾಕರಣ ಶಾಸ್ತ್ರಿ’ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
೧೯೪೮ರಲ್ಲಿ ರಾವೂರು ಮತ್ತು ಆದವಾನಿಯ ಕಲ್ಲುಮಠದ ಅಧಿಕಾರಿಗಳಾದರು. ಪರಾಧೀನವಾದ ಮಠದ ಆಸ್ತಿಗಳನ್ನೆಲ್ಲ ಮರಳಿ ಸಂಪಾದಿಸಿ ಅಭಿವೃದ್ಧಿಗೊಳಿಸಿದರು. ಮಠದಲ್ಲಿ ದಾಸೋಹದ ವ್ಯವಸ್ಥೆಯಿದೆ. ಪ್ರತಿವರ್ಷ ಚೈತ್ರ ಬ. ನವಮಿಯಂದು ಜಾತ್ರೆಯಲ್ಲಿ ಕೀರ್ತನ-ಪ್ರವಚನಾದಿಗಳನ್ನು ನಡೆಯಿಸಿ ಸಾಮಾಜಿಕ, ನೈತಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ; ಅಲ್ಲದೆ ಪ್ರಭುದೇವರ ಶೂನ್ಯ ಸಂಪಾದನೆಯನ್ನು ಸಂಸ್ಕರಿಸಿ ನೂತನ ಆವೃತ್ತಿಯನ್ನು ಸುಂದರವಾಗಿ ಪ್ರಕಟಿಸಿದ್ದಾರೆ; ಇಷ್ಟರಲ್ಲಿಯೆ ಮತ್ತೆ ಕೆಲವು ಮಹತ್ವದ ಪ್ರಾಚೀನ ಗ್ರಂಥಗಳ ಪ್ರಕಾಶನದ ಕಾರ್ಯವನ್ನು ಕೈಕೊಂಡು ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ.