ಕಪನಳ್ಳಿಯ ಶ್ರೀ ನಿ. ಪ್ರ. ರುದ್ರಮುನಿ ಸ್ವಾಮಿಗಳು

ಕಪನಳ್ಳಿಯ ಶ್ರೀ ನಿ. ಪ್ರ. ರುದ್ರಮುನಿ ಸ್ವಾಮಿಗಳು 

ಕಪನಳ್ಳಿಯ ಶ್ರೀ ನಿ. ಪ್ರ. ರುದ್ರಮುನಿ ಸ್ವಾಮಿಗಳು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಪನಳ್ಳಿಯ ಶಿವಯೋಗಾಶ್ರಮ (ಶಾಖಾ ಶಿವಯೋಗಮಂದಿರ) ದ ಅಧ್ಯಕ್ಷರಾಗಿದ್ದಾರೆ. ಸೀತಿಕೊಂಡ (ಜಿ. ಧಾರವಾಡ ತಾ. ಹಿರೇಕೆರೂರು) ಗ್ರಾಮದಲ್ಲಿ ಜನ್ಮ ತಾಳಿದರು.

ಮೊದಲು ಚಿಕ್ಕ ಜಂಬೂರ ಮಠದ ವತಿಯಿಂದ ಸಿಕಾರಿಪುರದ ಪಾಠಶಾಲೆಯಲ್ಲಿ ಕಲಿತು ಶಿವಯೋಗ ಮಂದಿರದಲ್ಲಿ ಪ್ರೌಢ ಶಿಕ್ಷಣ ಪಡೆಯಲು ಬಂದರು. ಪಂ. ಉಮಚಗಿ ಶಂಕರ ಶಾಸ್ತ್ರಿಗಳವರಿಂದ ಸಾಹಿತ್ಯ ಮತ್ತು ವೇದಾಂತ ವಿಷಯಗಳಲ್ಲಿ ವ್ಯಾಸಂಗ ಮಾಡಿದರು. ಯೋಗಸಾಧನೆ ಮತ್ತು ಅನುಷ್ಠಾನದಲ್ಲಿಯೂ ಪರಿಣಿತರಾದರು. ಕಪನಳ್ಳಿಯ ಶಿವಯೋಗಾಶ್ರಮದ ಸ್ಥಾಪನೆಯಾದ ಮೇಲೆ ಅಂಗಿರಸ ಸಂವತ್ಸರ ಮಾಘ ಬ. ೧೪ ರಲ್ಲಿ ಅಲ್ಲಿಯ ಅಧಿಕಾರವನ್ನು ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ವಹಿಸಿಕೊಂಡಿರುವರು. ಮೊದಲು ಈ ಶಾಖಾಮಂದಿರಕ್ಕೆ ಪರಮಪೂಜ್ಯ ಹಾನಗಲ್ಲ ಮಹಾಸ್ವಾಮಿಗಳವರು ಒಂದು ನೂರು ಎಕರೆ ಕಾಡನ್ನು ದೊರಕಿಸಿಕೊಟ್ಟಿದ್ದರು. ಶ್ರೀ ರುದ್ರಮುನಿ ಸ್ವಾಮಿಗಳು ಶ್ರಮವಹಿಸಿ ಅದರಲ್ಲಿ ೩೦ ಎಕರೆ ಭೂಮಿಯನ್ನು ಸಾಗು ಮಾಡಿಸಿದ್ದಾರೆ. ಒಂದು ಲಕ್ಷ ರೂಪಾಯಿಗಳ ವಿನಿಯೋಗದಿಂದ ಆಶ್ರಮದ ನೂತನ ಕಟ್ಟಡವನ್ನು ಕಟ್ಟಿಸಿದ್ದಾರೆ. ಗೋಶಾಲೆಯನ್ನು ಸ್ಥಾಪಿಸಿ ಅದನ್ನು ವ್ಯವಸ್ಥಿತವಾಗಿ ನಡೆಯಿಸಿದ್ದಾರೆ. ನೀರಾವರಿ ಯೋಜನೆಯಿಂದ ಸಾಕಷ್ಟು ಭತ್ತ-ಕಬ್ಬು ಬೆಳೆಯುವ ಅನುಕೂಲತೆಯನ್ನು ಮಾಡಿಕೊಂಡಿದ್ದಾರೆ. ಈ ಆಶ್ರಮದ ಸ್ಥಾಪನೆಯ ಕಾಲಕ್ಕೆ ಹಾನಗಲ್ಲ ಪೂಜ್ಯ ಶ್ರೀಗಳು ಯಾರನ್ನು ಬೇಡದೆ ಬಂದುದರಲ್ಲಿ ತೃಪ್ತರಾಗಿ ಅನುಷ್ಠಾನ ಮಾಡಬೇಕು” ಎಂದು ಅಪ್ಪಣೆ ಮಾಡಿದ ಪ್ರಕಾರ ಅದನ್ನು ಪರಿಪಾಲಿಸುತ್ತ ಮಲೆನಾಡ ಜನರಲ್ಲಿ ಧಾರ್ಮಿಕ ನೈತಿಕ ಜಾಗ್ರತಿಯನ್ನುಂಟು ಮಾಡುತ್ತಿರುವರು.