ಅನಂತಪುರದ ಶ್ರೀ ನಿ. ಪ್ರ. ಜ. ಸಚ್ಚಿದಾನಂದ ಮುರಘಾರಾಜೇಂದ್ರ ಸ್ವಾಮಿಗಳು : ೧೯೧೫
ಅನಂತಪುರದ ಶ್ರೀ ನಿ. ಪ್ರ. ಜ. ಸಚ್ಚಿದಾನಂದ ಮುರಘಾರಾಜೇಂದ್ರ ಸ್ವಾಮಿಗಳು ಮುರಘಾ ಸಂಸ್ಥಾನಮಠದ ಅಧ್ಯಕ್ಷರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂತಪುರ (ಆನಂದಪುರ) ಬಹಳ ಪ್ರಾಚೀನವಾದ ಗ್ರಾಮ. ಅದು ಕಲಚುರಿ ರಾಜರ ಗುರುಗಳಾದ ಪರಮ ಶೈವಾಚಾರ ಅನಂತ ಶಿವಶಕ್ತಿಯಾಚಾರ್ಯರ ಕ್ಷೇತ್ರವಾಗಿದ್ದಿತು.
ಅದರ ಅವಶೇಷಗಳು ತೀರ್ಥಗಳು, ಗುಡಿಗಳು ಮತ್ತು ಶಿಲಾಶಾಸನಗಳ ರೂಪದಲ್ಲಿ ಅಲ್ಲಿ ಇವೆ. ಆನಂದಪುರಕ್ಕೆ ಎರಡು ಮೈಲು ದೂರದಲ್ಲಿ ಆಚಾರಪುರದ ಹತ್ತಿರ ಮುರಘಾಮಠವಿದೆ. ಅದರ ಶಾಖಾಮಠಗಳು ಬೆಕ್ಕಿನಕಲ್ಲು, ಎಲವಟ್ಟಿ, ಭದ್ರಾವತಿ, ಶಿವಮೊಗ್ಗ, ಹಾರ್ನಹಳ್ಳಿ, ಸಂಸಿ, ಸೊಲ್ಲಾಪುರ ಮೊದಲಾದ ಗ್ರಾಮ-ನಗರಗಳಲ್ಲಿವೆ.
ಶ್ರೀ ಇಮ್ಮಡಿಯ ಗುರುಸಿದ್ದ ಸ್ವಾಮಿಗಳು, ಶ್ರೀ ಗಂಗಾಧರ ಸ್ವಾಮಿಗಳು, ಶ್ರೀ ಮುದ್ವೀರ ಸ್ವಾಮಿಗಳು, ಶ್ರೀ ಶಾಂತವೀರ ಸ್ವಾಮಿಗಳು, ಶ್ರೀ ಸಿದ್ಧಲಿಂಗ ಸ್ವಾಮಿಗಳು, ಶ್ರೀ ಗುರುಬಸವ ಸ್ವಾಮಿಗಳು, ಶ್ರೀ ಲಿಂಗ ಸ್ವಾಮಿಗಳು ಹೀಗೆ ಗುರು ಪರಂಪರೆಯು ನಡೆದು ಬಂದಿದೆ.
ಶ್ರೀ ಇಮ್ಮಡಿಯ ಮುರಿಗೆ ಗುರುಸಿದ್ದ ಸ್ವಾಮಿಗಳು ಕನ್ನಡ-ಸಂಸ್ಕೃತಗಳಲ್ಲಿ ಪಂಡಿತರೂ ಕವಿಗಳೂ ಆಗಿದ್ದರು. ಅವರು ‘ಹಾಲಾಸ್ಯ ಪುರಾಣ’ವನ್ನು ಅನೇಕ ಕಂದ ಷಟ್ಪದಿಗಳನ್ನು ಶತಕ ರೂಪದಲ್ಲಿ ರಚಿಸಿದ್ದಾರೆ. ಶ್ರೀ ಮುದ್ವೀರ ಸ್ವಾಮಿಗಳು ಪರಮ ತಪಸ್ವಿಗಳು ಯೋಗಿಗಳೂ ಆಗಿದ್ದರು. ಅವರು ಗೌರಾಪುರ (ಅಜ್ಜಂಪುರದ ಹತ್ತಿರ, ತಾ ತರಿಕೆರೆ) ದಲ್ಲಿ ಜನಿಸಿದವರು. ಗವಿಮಠದಲ್ಲಿ ಅವರ ಗದ್ದುಗೆಯಿದೆ.
ಶ್ರೀ ಲಿಂ. ಜಗದ್ಗುರು ಲಿಂಗಮಹಾಸ್ವಾಮಿಗಳ ನಂತರ ಶ್ರೀ ನಿ. ಪ್ರ. ಜಗದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳು ಈ ಪೀಠವನ್ನು ಅಲಂಕರಿಸಿದರು. ಅವರು ಮಂದಿರದಲ್ಲಿ ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ ಸಂಸ್ಕೃತ ವ್ಯಾಸಂಗವನ್ನು ಮುಗಿಸಿ ದಿನಾಂಕ ೨೩-೫-೧೯೨೬ ರಂದು ಪೀಠಾಧಿಕಾರವನ್ನು ಪಡೆದರು.
ಅವರು ಮಠವನ್ನು ವಿಸ್ತರಿಸಿ ಕಟ್ಟಿಸಿರುವರು. ಶಿವಮೊಗ್ಗೆಯ ಬೆಕ್ಕಿನ ಕಲ್ಮಠದಲ್ಲಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿ ನಡೆಯಿಸಿದ್ದಾರೆ. ಅಲ್ಲಿ ಹೈಸ್ಕೂಲು ಮತ್ತೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ಪ್ರಸಾದದ ಅನುಕೂಲತೆ ಕಲ್ಪಿಸಿಕೊಡಲಾಗಿದೆ.
ಮಳಲಿಯಲ್ಲಿ ಅಡಿಕೆ ತೋಟವನ್ನು ಅಭಿವೃದ್ಧಿಗೆ ತಂದು ಸಂಸ್ಥಾನದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ಅದರ ವಿನಿಯೋಗದಿಂದ ವಿದ್ಯೆ ಮತ್ತು ಧರ್ಮಗಳ ಪ್ರಸಾರ ಕಾರ್ಯವನ್ನು ಕೈಕೊಂಡಿದ್ದಾರೆ.