ಹಾನಗಲ್ಲ ಶ್ರೀ ಸದಾಶಿವ ಮಹಾಸ್ವಾಮಿಗಳು
ಲೇಖಕರು: ಶ್ರೀ ಚನ್ನಬಸವ ಸೋಮನಾಥಶಾಸ್ತ್ರೀ ಹಿರೇಮಠ, ಇಟಗಿ
ಗ್ರಂಥ ಋಣ: ಸುಕುಮಾರ ದೀಪ್ತಿ | ಸಂಪಾದಕರು: ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ – ವಿಜಯಪುರ
ಕಾಲ ಚಕ್ರದ ಕೊನೆ ಮೊದಲಂತೆ ಕಲಿಪುರುಷನ ಹಗಲಿರುಳಿನಂತೆ ಭಾರತಾಂಬೆಯ ಭಾಗ್ಯೋದಯದಿಂದ ಆಗಾಗ ಯುಗ ಯುಗಾಂತರದಿಂದಲೂ ಯುಗಪುರುಷರೂ, ಮಹಾ ತಪಸ್ವಿಗಳೂ, ಮಹಾ ಮಹಾ ಮಂತ್ರ ದ್ರಷ್ಟಾರರೂ, ಯೋಗಿ- ಶಿವಯೋಗಿಗಳೂ ಭಾರತ ಮಾತೆಯ ಪುಣ್ಯಗರ್ಭದಿಂದ ಉದಿಸಿ ಲೋಕವ ನಾಕಕ್ಕೆ ಹಿರಿದೆನ್ನುವಂತೆ ತೊಳಗಿ ಬೆಳಗಿ ಕೀರ್ತಿ ಜ್ಯೋತಿಗಳಾಗಿದ್ದಾರೆ ಆಗುತ್ತಲಿದ್ದಾರೆ.
ಖಣಿಯಿಂದ ರತ್ನ, ಮೃಗದಿಂದ ಕಸ್ತೂರಿ, ಪುಷ್ಟದಿಂದ ಪರಿಮಳವು ಹೊರ ಹೊಮ್ಮುವಂತೆ ಮಹಾತ್ಮರ ಉದಯವು ಕಿರಿ ಹಳ್ಳಿಗಳಲ್ಲಿ ಮತ್ತು ಬಡತನದ ಮನೆತನದಲ್ಲಿ ಎಂಬುದು ಸರ್ವಶೃತ ಅಂತೆಯೇ ಯುಗ ಪುರುಷ ಕಾರಣಿಕ ಪರಮ ಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀ ನಿ ಪ್ರ ಕುಮಾರ ಶಿವಯೋಗಿ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಸರ್ವಮಾನ್ಯ ಸಂಚಾಲಕರೂ ಸೌಹಾರ್ದದಿಂದ ಪಾಲಕರೂ ಆಗಿರುವ ಹಾನಗಲ್ಲಿನ ವೀರ ವಿರಕ್ತಮಠಾಧೀಶರಾಗಿರುವ ಪರಮಪೂಜ್ಯ ಶ್ರೀ ನಿ ಪ್ರ ಸ್ವರೂಪಿ ಸದಾಶಿವ ಮಹಾಸ್ವಾಮಿಗಳವರ ಉದಯವು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಎಂಬ ಹಳ್ಳಿಯಲ್ಲಿ ಆಯಿತು ಆ ಅರಳಿಕಟ್ಟಿ ಚಿಕ್ಕ ಗ್ರಾಮದಲ್ಲಿ ಸಧ್ಬಕ್ತಿ ಸದಾಚಾರ ಸಂಪನ್ನರೂ ಗುರು-ಲಿಂಗ-ಜಂಗಮ ಪ್ರಾಣಿಗಳೂ ಆದ ವೇ ಶ್ರೀ ಗಂಗಯ್ಯನವರು ಅವರ ಧರ್ಮ ಪತ್ನಿಯಾದ ಸಾಧ್ವೀಶೀಲವತೀ ರಾಚಮ್ಮನವರ ಪವಿತ್ರ ಗರ್ಭ ಸುಧಾಂಬುಧಿಯಲ್ಲಿ ಇಶ್ವಿ ಸನ್ ಸಾವಿರದ ಒಂಬೈನೂರಾ ಆರ (1906) ರಲ್ಲಿ ಬಾಂದಳದಲ್ಲಿ ಬಿದಿಗೆಯ ಚಂದ್ರನು ಉದಿಸಿ ಬಂದಂತೆ ಜನ್ಮ ತಾಳಿದರು ಇವರಿಗೆ ತಾಯ್ತುಂದೆಗಳು ಬಂಧು ಬಳಗದವರು ಮತ್ತು ಹಲವಾರು ಸುಮಂಗಲೆಯರು.
ಭವರೋಗ ಕಳಿಯಲ್ಕೆ ಶಿವಯೋಗ ಬೆಳಸಲ್ಕೆ ಶಿವನಿಳೆಗೆ ಬಂದೆ ಜೋ ಜೋ
ಕವಿದಿರ್ದ ಕತ್ತಲೆಯ ಶಿವತೇಜೋ ಬಲದಿಂದ ಬೆಳಗಿ ಕಳೆಯಲು ಬಂದೆ
ಎಂದು ಮುಂತಾಗಿ ಮುದ್ದಿಕ್ಕಿ ಜೋಗುಳ ಹಾಡಿ ಶ್ರೀ ಗುರುವಿನಿಂ ಲಘು ದೀಕ್ಷೆಗೈದ ಶಿಶುವಂ ಕಣ್ಮನದುಂಬಿ ನೋಡಿದ ಒಳಗಣ್ಣಿನ ಶ್ರೀ ಗುರುಗಳು ಹೊಂಬೆಳಗಿನ ಈ ಶಿಶುವಿಗೆ ಚಂದ್ರಶೇಖರ ಎಂದು ಬಳಗದಿಂದೊಡಗೂಡಿ ನಾಮಕರಣ ಮಾಡಿದರು ಕೆಲವೇ ದಿನಗಳಲ್ಲಿ ದೇವರ ಕೋಣೆಯಲ್ಲಿ ಶಿವ ತೇಜೋಮೂರ್ತಿ ಯಾದ ಚಂದ್ರಶೇಖರಯ್ಯನ ತಲೆಯ ಮೇಲೆ ಘಣಿರಾಜನು (ನಾಗರಾಜ) ಹೆಡೆ ಎತ್ತಿ ಲೀಲಾಜಾಲವಾಗಿ ಆನಂದದಿಂದ ಆಡತೊಡಗಿತ್ತು. ಇದನ್ನು ಕಂಡು ಮಾತಾಪಿತರು ಆಶ್ಚರ್ಯಚಕಿತರಾಗಿ ಭಯಬೀತರಾಗಿ, ಶಿವಸಂಕೇತದಂತ 1907ರಲ್ಲಿ ಬಿಕ್ಷಾಟನೆಗಾಗಿ ದಯಮಾಡಿಸಿದ ಶ್ರೀ ಶಿವಯೋಗಮಂದಿರದ ಸಂಸ್ಥಾಪಕರೂ, ದೀಪಕರೂ, ಪರಮ ಪರಂಜ್ಯೋತಿ ಸ್ವರೂಪರೂ ಆದ ಪೂಜ್ಯ ಕಾರಣಿಕ ಶ್ರೀ ನಿ ಪ್ರ ಕುಮಾರ ಶಿವಯೋಗಿಗಳಿದ್ದೆಡೆಗೆ ಧಾವಿಸಿ ಬಂದು ಸನ್ನಿಧಿಯಲ್ಲಿ ನಡೆದ ಘಟನೆಯನ್ನು ಆರಿಕೆ ಮಾಡಿಕೊಳ್ಳಲು, ಶ್ರೀಗಳವರು ಥಟ್ಟನೆ ಆತನಿಂದ ಲೋಕೋಪಕಾರವಾಗಬೇಕಾಗಿದೆ ಸಮಾಜ ಜೀವಿಯಾಗಬೇಕಾಗಿದೆ ಮತ್ತು ಆ ಕೂಸು ನಿಮ್ಮದಾಗದೆ ಶ್ರೀಗುರುವಿನದಾಗುವದು, ಶ್ರೀ ಗುರುವಾಗುವದು ಸಮಾಜಜೀವಿ, ಸಮಾಜೋದ್ಧಾರಕ ವಸ್ತುವಾಗುವುದು ಆದ್ದರಿಂದ ಈ ಘಟನೆ ನಡೆದಿದೆ ನೀವು ಅಂಜಬೇಡಿರಿ ಅಂಥ ಪುಣ್ಯ ಪುರುಷನನ್ನು ಪಡೆದ ಗರ್ಭವೇ ಮಹಾ ಗರ್ಭ, ನೀವೇ ಭಾಗ್ಯಶಾಲಿಗಳು, ಧನ್ಯರು, ಎಂದು ಆನಂದದಿಂದ ಆಶೀರ್ವದಿಸಿದರು ದಿವ್ಯಜ್ಞಾನಿಗಳಾದ ಶ್ರೀ ಕುಮಾರ ಶಿವಯೋಗಿಶ್ವರರ ಅಮರವಾಣಿ ಎಂದಾದರೂ ಸುಳ್ಳಾದೀತೆ ? ಅದೆಂದು ಸಾಧ್ಯ !
ಹತ್ತೊಂಬತ್ತು ನೂರಾ ಹದಿನೈದು (1915) ರಲ್ಲಿ ಅಲ್ಲಿಯ ಮಠದ ಶಿಷ್ಯ ಪ್ರಮುಖರು ಶ್ರೀ ಚಂದ್ರಶೇಖರನನ್ನು ತಮ್ಮ ಊರ ಹಿರಿಯ ಮಠದ ಅಧಿಕಾರಿಯನ್ನಾಗಿಸಲು, ಹಾನಗಲ್ಲ ಕುಮಾರ ಶಿವಯೋಗಿಗಳವರ ಪಾದಾರವಿಂದಗಳಲ್ಲಿ ಅರ್ಪಿಸಿದರು. ಆಗ ಮಹಾಶಿವಯೋಗಿಗಳು ಆತನ ಪೂರ್ವಾಶ್ರಮದ ಹೆಸರಿನ ಸ್ಥಾನದಲ್ಲಿ ಶ್ರೀ ರೇಣುಕಾರ್ಯನೆಂದು ನೂತನ ಪುಣ್ಯ ನಾಮವನ್ನು ದಯಪಾಲಿಸಿ ಅವರಿಗೆ ಅಧ್ಯಯನ, ಅನುಷ್ಠಾನಾದಿಗಳಿಂದ ಸರ್ವ ಸೌಹಾರ್ದ ಸೌಕರ್ಯಗಳಿಂದ ತರಬೇತು ಕೊಡಿಸಿದರು. ತತ್ಪರಿಣಾಮವಾಗಿ ಕನ್ನಡ-ಸಂಸ್ಕೃತ ಘನ ವಿದ್ವಾಂಸರೂ, ಶಿವಾನುಭವಿಗಳೂ ಶಿವಯೋಗಿ ಸಿದ್ಧರೂ ಆದ ಶ್ರೀ ವ್ಯಕ್ರನಾಳ ಪಟ್ಟಾಧ್ಯಕ್ಷರಿಂದ ವೀರ ಮಾಹೇಶ್ವರ ದೀಕ್ಷೆ ಪಡೆದರು ಗಣಿಯಿಂದ ಹೊರ ಹೊಮ್ಮಿ, ಶಿಲ್ಪಿಯಿಂದ ಸಂಸ್ಕರಿಸಿದ ರತ್ನದಂತೆ ಮೇಧಾವಿ (ಜಾಣ) ಯಾದ ಈ ವಟುವು ಕನ್ನಡ, ಸಂಸ್ಕೃತ, ಸಂಗೀತ, ಚಿತ್ರಕಲೆಗಳಲ್ಲಿ ಪರಿಣತೆಯಿಂದ ಪಳಗಿದನು.
ಈತನಲ್ಲಿರುವ ಸಹಜ ಶೀಲ ಸೌಜನ್ಯ ಶಾಂತಿ-ದಾಕ್ಷಿಣ್ಯಾದಿ ಗುಣಗಳನ್ನು ಕ್ರಮೇಣ ನಿರೀಕ್ಷಿಸಿ ಶ್ರೀ ಕುಮಾರ ಪರಂಜ್ಯೋತಿಃ ಪ್ರಭಾ ಹೊಂಗಿರಣ (ತಪೋನಿಧಿಗಳ ಪ್ರೇಮಾಂತಃಕರಣ)ಗಳು ಶ್ರೀಗಳ ಪ್ರಜ್ಞಾಂತಃ ಪಟಲದ ಮೇಲೆ ಸಂಪೂರ್ಣ ಬಿದ್ದಂತೆ ಪ್ರಕಾಂಡ ಪಂಡಿತರಿಂದ, ಸೂಜ್ಞರಿಂದ ಪದವಾಕ್ಯ- -ಪ್ರಮಾಣಜ್ಞರೂ ಶಿವಾನುಭವಿಗಳೂ ಆದ ಇವರು ಶ್ರೀ ಶಿವಯೋಗಿಯ ಕರುಣೆಯ ಪಡೆದು ಚಿದ್ಗುರುವಿನಿಂದ ಅನುಗ್ರಹಿತರಾಗಿ ಶ್ರೀ ರೇಣುಕಾ ದೇಶಿಕ ರಾದರಲ್ಲದೆ ಅಧ್ಯಯನವನ್ನು ಪುಷ್ಪದೊಳಗಿನ ಮಧುವಿಗೆರಗುವ ತುಂಬಿಯಂತೆ ಸದ್ವಿದ್ಯಾ ವ್ಯಸನಿ-ವ್ಯಾಸಂಗವನ್ನು ಮುಂದುವರಿಸುವದರೊಂದಿಗೆ ಶ್ರೀ ಶಿವಯೋಗಮಂದಿರದ ಕಾರ್ಯಭಾರವು ಚರಿತ್ರ ನಾಯಕನ ದಾಯಿತು ಯಾವಾಗಲೂ ಬೆಳೆಯುವ ಸಿರಿಯ ಮೊಳಕೆಯಲ್ಲಿ ನೋಡು ಎಂಬಂತೆ ಮಹಾತ್ಮರ ಜೀವನದ ಉಜ್ವಲತೆಯು ಜ್ಯೋತಿ ಸ್ವರೂಪವಾಗಿ ಪ್ರಜ್ವಲಿಸುತ್ತಿತ್ತು.
ಹಾನಗಲ್ಲ ಮಠದ ಪರಮ ಗುರು ಶ್ರೀ ಕುಮಾರ ಪರಂಜ್ಯೋತಿಯ ಬೆಳಗು, ಮಹಾ ಬೆಳಗಿನಲ್ಲಿ ಬೆರೆದ ಬಳಿಕ ಉತ್ತರಾಧಿಕಾರ ಸ್ಥಾನಾಪನ್ನರಾದ ಪರಮಪೂಜ್ಯ ಶ್ರೀ ನಿ ಪ್ರ ಮಹೇಶ್ವರ ಮಹಾಸ್ವಾಮಿಗಳು ತಮ್ಮ ಅಂಗಕರಣಂಗಳನ್ನು ಲಿಂಗಕಿರಣಂಗಳನ್ನಾಗಿಸಿದ ಬಳಿಕ (ಲಿಂಗರೂಪಿಗಳಾದ ಬಳಿಕ) ಹಲವಾರು ಗಣ್ಯ ಪೂಜ್ಯರು ವಿಚಾರಿಸಿ ಮಠಗಳು ಮಹದರುವಿನ ಚಿದ್ಬೆಳಕನ್ನೀಯುವ ಶಿವಾದ್ವೈತದ ಹೊಂಬೆಳಗಿನ ಹೊನಲನ್ನು ಹೊರಚಿಮ್ಮುವ ದೀಪಸ್ತಂಭಗಳು ನಾಸ್ತಿಕರನ್ನು ಆಸ್ತಿಕರನ್ನಾಗಿ, ಮಾನವತೆಯಿಂದ ಮನಸ್ವಿಗಳನ್ನಾಗಿಸುವ, ಮಠದ ಪೀಠಗಳಿಗೆ ಯೋಗ್ಯತಾ ಸಂಪನ್ನರನ್ನೇ ಹುಡುಕುತ್ತಿರುವಾಗ ಶಿವಯೋಗ ಧಾಮದ ಶ್ರೀ ಶಿವಯೋಗ ಮಂದಿರದಲ್ಲಿ ಶಿವಯೋಗ ಸದಾಚಾರ ಸತತಾಭ್ಯಾಸದಲ್ಲಿ ಪಳಗಿದ ಕುಶಲ ಮತಿ-ಮೇಧಾವಿಗಳಾದ ಶ್ರೀ ರೇಣುಕ ದೇಶಿಕರನ್ನು ಆ ಮಠದ (ಹಾನಗಲ್ಲ ವಿರಕ್ತಮಠ) ಉತ್ತರಾಧಿಕಾರಿಗಳನ್ನಾಗಿ ಮಾಡಲು ಹುಬ್ಬಳ್ಳಿಯ ಮೂರು ಸಾವಿರಮಠದ ಅಂದಿನ ಜಗದ್ಗುರುಗಳಾದ ಲಿಂ ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ನವಲಗುಂದದ ಲಿಂ ಶ್ರೀ ನಿ ಪ್ರ ಬಸವಲಿಂಗ ಮಹಾಸ್ವಾಮಿಗಳು, ಗುತ್ತಲದ ಲಿಂ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಶ್ರೀಮಾನ್ ದೇವಿಹೊಸೂರ ಶೆಟ್ಟರು ಇನ್ನುಳಿದ ಪ್ರಮುಖ ಸದ್ಭಕ್ತರ ಬಯಕೆಯಂತೆ ಶ್ರೀ ರೇಣುಕ ದೇಶಿಕರನ್ನು ಹಾನಗಲ್ಲಿನ ವಿರಕ್ತ ಪೀಠಾಧಿಕಾರಿಗಳನ್ನಾಗಿ ಮಾಡಿದರು.
ಜಡೆಮಠದ ಲಿಂ ಶ್ರೀ ನಿ ಪ್ರ ಸಿದ್ದಬಸವ ಮಹಾಸ್ವಾಮಿಗಳವರಿಂದ ಅಧಿಕಾರ ಪಡೆದು ಪಂ ಸೋಮನಾಥ ಶಾಸ್ತ್ರಿಗಳು ಇಟಗಿ ಗೊಗ್ಗೀಹಳ್ಳಿ ಸಂಸ್ಥಾನಮಠ ಅವರ ಪೌರೋಹಿತ್ಯದಲ್ಲಿ ಶೂನ್ಯ ಸಿಂಹಾನಾಧೀಶರಾದರು ಕ್ರೀ ಶ 1936ರಲ್ಲಿ ಆ ಶುಭ ಮಂಗಲ ಸಮಯಕ್ಕೆ ಪರಮ ಗುರುವಿನ ಮೊದಲ ಪುಣ್ಯನಾಮವಾದ ಶ್ರೀ ನಿ ಪ್ರ ಸದಾಶಿವ ಸ್ವಾಮಿಗಳೆಂದು ಅಭಿನವ ಅಭಿದಾನವಾಯಿತು.
ಪರಮಗುರು ಪರಮಾರಾಧ್ಯರಾದ ಶ್ರೀ ನಿ ಪ್ರ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗ ಮಂದಿರದ ಶ್ರೇಯಸ್ಸಿಗಾಗಿ ತಮ್ಮ ಮಠವನ್ನು ಬದಿಗಿರಿಸಿ, ಲೋಕವೇ ನನ್ನ ಮಠ, ಮಾನವ ಕುಲಕೋಟಿಯ ಸರ್ವಾಂಗೀಣ ಶ್ರೇಯಸ್ಸೇ ನನ್ನ ಶ್ರೇಯಸ್ಸು, ಎಂದು ಭಾವಿಸಿ ಅಧ್ಯಾತ್ಮ ತತ್ವ್ತಾಮೃತ ಪಿಪಾಸುಗಳ ನೆಲೆವೀಡಾದ ಋಷಿಪುಂಗವರ, ಮಹಾ ಶಿವಯೋಗಿಗಳ ತಪೋ ಧನವನ್ನು ಮುಡುಪಿಟ್ಟ ಭಾರತ ಹೃದಯ ಪೀಠದಂತಿರುವ ಶ್ರೀ ಶಿವಯೋಗಮಂದಿರವೆ ಮಹಾ ಮಠವೆಂದು ಭಾವಿಸಿ ಶಿವಯೋಗ ನಿದ್ರೆಯಲ್ಲಿ ಕಾಲಕಳೆಯುತ್ತ ಪ್ರತಿಯೊಬ್ಬ ವ್ಯಕ್ತಿಯೂ ಶಿವ ಭಾವನೆಯಿಂದ, ವ್ಯಕ್ತಿ-ವ್ಯಕ್ತಿಯೂ ಶಿವಯೋಗಮಂದಿರವಾಗ ಬೇಕೆಂದು ಶ್ರೀ ಗುರು ಕುಮಾರೇಶನ ಹಿರಿಯಾಸೆಯಂತೆ ಅವರ ಆಶಯವೆಂಬ ದಾರಿ ದೀಪದ ಹೊಂಗಿರಣದ ಮುಂಬೆಳಗಿನಲ್ಲಿ ಸಹಜವಾಗಿ ಮುನ್ನಡೆಯುತ್ತ ಶಿವ- ಜೀವನದ ಹೂದೋಟದಲ್ಲಿ ಹೂಗಳಂತೆ ಅರಳುತ್ತಿರುವ ವಟು ಶಿವಯೋಗ ಸಾಧಕರಿಗೆ ಸಮಯೋಚಿತವಾಗಿ ಧರ್ಮದ ಸಮನ್ವಯದ ಸಾಹಿತ್ಯದ ತಿಳುವಳಿಕೆಯೊಂದಿಗೆ ಪಂಡಿತರಿಂದ ಕನ್ನಡ, ಸಾಹಿತ್ಯ ಸಂಗೀತ-ನ್ಯಾಯ-ವ್ಯಾಕರಣ ವಚನ ವಾಜ್ಮಯ ರೂಪಷಡ್ರಸಾನಿತ್ವ ಮೃಷ್ಟಾನ್ನವನ್ನು ಉಣಿಸಿ ತಣಿಸುತ್ತ, ತಮ್ಮ ಜೀವನವನ್ನೇ ಅವರ ಆತ್ಮೋನ್ನತಿಗೆ ಮೀಸಲಾಗಿರಿಸಿ ಸತ್ಕಾರ್ಯ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸಮಾಜದ ಮೂಲ ಸ್ತಂಭಗಳಂತಿರುವ ಗುರು-ವಿರಕ್ತ ಮೂರ್ತಿಗಳನ್ನು ಭೇದ ಭಾವವಿಲ್ಲದೆ ಮಮತೆಯಿಂದ ತರಬೇತಿಗೊಳಿಸಿ, ಶಿವಯೋಗಿ, ವಟು, ಸಾಧಕರು ಆದರ್ಶ ಸಮಾಜ ಸುಧಾರಕರು, ಧರ್ಮ ಪ್ರಚಾರ ದುರಂಧರರು, ಶಿವಯೋಗದಲ್ಲಿ ಪಳಗಿದವರು (ಶಿವಯೋಗಿ ಸಿದ್ದರು) ಆಗಬೇಕೆಂಬ ಹಿರಿಯಾಸೆ ಶ್ರೀಗಳವರದು ಆ ದಿಶೆಯಲ್ಲಿ (ವಟುಗಳ ಪುರೋಭಿವೃದ್ಧಿಗೆ) ತನು-ಮನ-ಧನವನ್ನೇ ಧಾರೆಯೆರೆದು ವಟು ಪಟುಗಳ ಮೂಲಕ ಶ್ರೀ ವೀರಶೈವ ಧರ್ಮವು ಅಷ್ಟೇ ಅಲ್ಲದೆ ಸರ್ವಧರ್ಮ ಸರ್ವಾಂಗ ಸುಂದರವಾಗಲಿ, ಮಾನವ ದೇವನಾಗಲಿ ಎಂಬ ಮಹದಾಶೆಯಿಂದ ಸತತವೂ ದುಡಿಯುತ್ತಿದ್ದಾರೆ ಸಾಧಕರಿಗಾಗಿ ಆಗಾಗ ಪಾಕ್ಷಿಕ, ಮಾಸಿಕ, ವಾಕ್ ಸ್ಪಧೆರ್ಯನ್ನೇರ್ಪಡಿಸುತ್ತಿದ್ದಾರೆ ಇದರಿಂದ ಆತ್ಮೋನ್ನತಿಗೆ ಅಧ್ಯಾತ್ಮ ತಾಯಿಯಂತೆ ವಟು ವಾತ್ಸಲ್ಯವು ಸಹಜವಾಗಿಯೇ ಎಷ್ಟಿದೆ ಎಂಬುದು ರವಿ ಪ್ರಕಾಶದಂತೆ ಸ್ಪಷ್ಟವಾಗುವುದು.
ಪರೋಪಕಾರವೇ ಮಹಾತ್ಮರ ಜನ್ಮ ಸಿದ್ಧ ಗುಣವಾಗಿರುವದು ಅದು ನಿಜ ಅಂತೆಯೇ ಜನಸೇವೆಯೇ ಶಿವನ ಸೇವೆ, ದೇಶ ಸೇವೆಯೇ ಈಶ ಸೇವೆ, ಎಂಬುದನ್ನು ಮನಗಂಡು ತಮ್ಮ ಸರ್ವಸ್ವವನ್ನೆ ಪರರ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದಾರೆ ಶ್ರೀಗಳು ಸಮಾಜದಲ್ಲಿ ನಡೆಯುತಕ್ಕ ಅನ್ಯಾಯ, ಅನಾಚಾರ, ಅತ್ಯಾಚಾರಗಳನ್ನು ಉಚ್ಛೃಂಖಲ ವಿಚಾರಗಳನ್ನು ಕಂಡು ಕನಿಕರಬಟ್ಟು ಸಮಾಜವನ್ನು ಚೇತರಿಸಲು ಎಚ್ಚರಿಸಲು ತಮ್ಮ ಅಮೋಘ ಜ್ಞಾನಜ್ಯೋತಿಯನ್ನು ಹೊರ ಹೊಮ್ಮಿಸಿ ಅವರಲ್ಲಿರುವ ಮೂಢ ನಂಬುಗೆಯ ಹೋಗಲಾಡಿಸಿ ಓಂಕಾರಸ್ವರೂಪವಾದ ಶಿವಾದ್ವೈತ, ಶಕ್ತಿವಿಶಿಷ್ಟಾದ್ವೈತ ರೂಪವಾದ ಷಡಕ್ಷರಿ ಮಹಾ ಮಂತ್ರರ್ಥರೂಪ ವಾದ ಇಷ್ಟಲಿಂಗ ವನ್ನು ಪೂಜಿಸಲು ಮೃದು ಮಧುರ ಸದುಕ್ತಿಗಳಿಂದ ಸಲಹೆ- ಸೂಚನೆಗಳನ್ನು ನೀಡಿ ಜನರನ್ನು ಎಚ್ಚರಿಸುತ್ತಾರೆ.
ಬಾಹ್ಯಾಚಾರಿ ಶ್ರೇಷ್ಠ ಲಿಂಗಾರ್ಚನಾರೂಪ ಕ್ರಿಯೆಗಳು ಅತ್ಯವಶ್ಯವು ನಿಜವಾದ ಶಕ್ತಿಯ ಕೇಂದ್ರ ಸೂಕ್ಷ್ಮ-ಕಾರಣಗತ ಪ್ರಾಣ-ಭಾವಗಳೇ ಅಲ್ಲ ಸ್ಥೂಲಾಂಗಗತ ಇಷ್ಟಲಿಂಗ ವೂ ಅಹುದು ಮನಸ್ಸು ಮೂರ್ತವಸ್ತು ನಿರಾಕಾರ ವಸ್ತುವನ್ನು ಗ್ರಹಿಸದು ಸ್ಥೂಲೇಂದ್ರಿಯಗಳಿಗೆ ಗೋಚರ ಗ್ರಾಹ್ಯವಾಗಬೇಕಾದರೆ ಇಷ್ಟಲಿಂಗೋಪಾಸನೆ ಬೇಕೇ ಬೇಕು ಹಾಲು ಹೆಪ್ಪು ಗಟ್ಟಿ ಸ್ಥೂಲವಾದಾಗ ಅದರ ಶಕ್ತಿ ಸಣ್ಣದೇ ? ಸಂಸ್ಕಾರದಿಂದ ಬೆಣ್ಣೆ ಸಂಸ್ಕಾರದಿಂದ ತುಪ್ಪ ಅದರ ಮಾಧುರ್ಯ ಸಾಲದೆ ಸಣ್ಣದೇ ? ಬೀಜ ಮೊಳೆತು ಬೆಳೆದು ಹಣ್ಣಾಗಿ ನಿಂತಾಗ ಕೇವಲ ಬೀಜಕ್ಕಿಂತ ಹಣ್ಣು ಕಡಿಮೆಯೇನು ? ಬೀಜ ಸೂಕ್ಷ್ಮವಿರಬಹುದು ಹಣ್ಣು ಸ್ಥೂಲವಿರಬಹುದು ಆದರೆ ಹಣ್ಣಿನಲ್ಲಿ ಆ ಬೀಜವು ಇದ್ದು ಮಿಗಿಲಾಗಿ ಮಧುರ ರಸವೂ ಇರುತ್ತದೆ ಈ ರಸ ಬೀಜದಲ್ಲಿ ಇದ್ದರೂ ಅಭಿವ್ಯಕ್ತವಾಗಿರದು ಸವಿಯಲುಬಾರದು ಈ ದೃಷ್ಟಿಯಿಂದ ಸ್ಥೂಲಕ್ಕೆ ಇರುವ ಕೊರತೆಯೇನು? ಜೀವನ ಉಪಯುಕ್ತತೆಯ ಹಂತದಲ್ಲಿ ಬಾಹ್ಯೇಂದ್ರಿಯ ಹಾಗೂ ಮನೋಗ್ರಾಹ್ಯ ಇಷ್ಟಲಿಂಗ ಕ್ಕೆ ಶ್ರೇಷ್ಠತೆಯಿಲ್ಲದಿಲ್ಲ ಅತ್ಯಾಧಿಕ್ಯತೆಯಿದೆ ಸೂಕ್ಷ-ಸ್ಥೂಲಗಳೆರಡರ ಸಮಷ್ಟಿ ಸಹಕಾರವೇ ಜೀವನ, ಜೀವನ ನಾಣ್ಯದ ಎರಡು ಮಗ್ಗಲುಗಳು ಈ ಮೂಲಕ ಶಕ್ತಿ ರಹಸ್ಯವನ್ನರಿಯಬೇಕು ಅರಿತು ಅನುಭವಿಸಬೇಕು ಅನುಭವಿಸಿ ಆನಂದಿಸಬೇಕು ರೂಹಿಲ್ಲದ (ಕಣ್ಮನೋ ಗೋಚರ) ನೆನಹು ಅರಣ್ಯರೋಧನ ಕನ್ನಡಿಯಿಲ್ಲದೆ ತನ್ನ ಮುಖವ ಕಾಣಬಹುದೆ ? ಭೂಮಿಯಿಲ್ಲದೆ ಬಂಡಿ ನಡೆಯಬಹುದೆ? ಆಕಾಶದಲ್ಲಿ ಹಾರುವ ಪಟಕ್ಕಾದರೂ ಸೂತ್ರವಿರಬೇಕು ದೇಹವಿಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಉಂಟೆ ? ಆತ್ಮನಿಗೆ ಆಶ್ರಯ ಉಂಟೆ ಬಯಲು ಬಮ್ಮವಾದಿಗಳಿಗೆ ನೆಲೆ ಕಲೆ ಉಂಟೆ? ಮುಮುಕ್ಷುಗಳಿಗೆ ಇಷ್ಟಲಿಂಗದ ಅವಶ್ಯಕತೆಯಿದೆ ಗರ್ಭದೊಳಿರುವ ಶಿಶುವಿನ ಕುರುಹು (ಗಂಡೋ? ಹೆಣ್ಣೋ? ಗುಣೀಯೋ ದುರ್ಗುಣಿಯೋ ಎಂದು) ಕಂಡು ಆನಂದಿಸಲು ಅಸಾಧ್ಯ ಅಸಮಂಜಸ, ಅದೇ ಶಿಶು ಹೊರ ಬಂದ ಮೇಲೆ ಶಿಶುವನ್ನು ನೋಡಿ ಲಾಲಿಸಿ ಮುದ್ದಾಡುವ ತಾಯಿಗಾದ ಆನಂದಕ್ಕೆ ಮೇರೆಯು ಉಂಟೆ ? ಮೂರು ಅಂಗಗಳಿಗೆ ಮೂರು ಲಿಂಗ, ಸ್ಥೂಲ ಸೂಕ್ಷ್ಮಕಾರಣ ಶರೀರಗಳಿಗೆ ಕ್ರಮವಾಗಿ ಇಷ್ಟ, ಪ್ರಾಣ, ಬಾವವೆಂದು ಮೂರು ಲಿಂಗ ಸಂಬಂಧವನ್ನು ಶ್ರೀ ಗುರು ತನ್ನ ಜ್ಞಾನ ಕ್ರಿಯಾರೂಪ ಯೋಗಿಕ ಶಕ್ತಿಯಿಂದ ಕೇಂದ್ರೀಕರಿಸಿ ತನ್ನ ಶಿಷ್ಯನಾದ ಉಪಾಸಕನ ಸಹಸ್ರಾರದಲ್ಲಿರುವ ಚಿತ್ಕಲೆಯನೆ ಕರ ದಿಷ್ಟಲಿಂಗವ ನ್ನಾಗಿ ಕರುಣಿಸಿ ಸ್ಥೂಲ – ಸೂಕ್ಷ್ಮ – ಕಾರಣ ಮೂರು ಹಂತದ ಕಾಜಿನ ಪೆಟ್ಟಿಗೆ ಇದ್ದು ಅದರ ಮೇಲೆ ದೀಪವನ್ನಿಟ್ಟಂತೆ ೧) ದೀಪ ೨) ದೀಪದ ಕಿರಣ ೩) ದೀಪ ಪ್ರಕಾಶವಿದ್ದಂತೆ ಕ್ರಮವಾಗಿ, ೧) ಇಷ್ಟ ೨) ಪ್ರಾಣ ೩) ಭಾವ ಲಿಂಗ ರೂಪಗಳು ಕಂಗೊಳಿಸುತ್ತಿದ್ದು ಆ ದೀಪವನ್ನೇ ತೆಗೆದು ಬಿಟ್ಟರೆ ದೀಪದ ಕಿರಣ ಪ್ರಕಾಶ ಎಲ್ಲವೂ ಇಲ್ಲವಾದಂತೆ ಇಷ್ಟಲಿಂಗವು ಉಪಾಸಕನಿಗೆ ಅತ್ಯವಶ್ಯ ಮನಸ್ಸು ಬಲು ಚಂಚಲ ಇದಕ್ಕೆ ಏನಾದರೂ ಉದ್ಯೋಗಬೇಕು ಯೋಗಃ ಚಿತ್ತವೃತ್ತಿ ನಿರೋಧಃ ಎಂದು ಅದರ ಹರಿದಾಡುವಿಕೆಯನ್ನು ಕೇವಲ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ ಮಹಾಪೂರಕ್ಕೆ ಆಣೆಕಟ್ಟು ಕಟ್ಟಿ ನಿಲ್ಲಿಸಿದರೆ ಆಗದು ಆ ಪ್ರವಾಹಕ್ಕೆ ಸದುಪಯೋಗ ಭೂ ಸುಧಾರಣೆ ಬೆಳೆಸುವ ಮುಂತಾದವುಗಳಿಗೆ ಉಪಯೋಗಿಸುವಂತೆ ಗುರು-ಚರ-ಧ್ಯಾನ-ಪೂಜಾ ಸಕಲೇಷ್ಟವಾದ ವಾದ ಇಷ್ಟಲಿಂಗ ದ ನಿಷ್ಠೆಯ ಧ್ಯಾನ, ಜಪ, ತಪಃ ಪೂಜಾಧಿಗಳಲ್ಲಿ ಮನ ತೊಡಗಿದರೆ ಮನಸ್ಸಿನ ಸದುದ್ಯೋಗ ಸಾಥರ್ಕವಾಗುವದು.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ, ಎನ್ನಗುಳ್ಳದೊಂದು ಮನ, ಆ ಮನ ನಿಮ್ಮೊಳ ಒಡವೆರೆದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ? ಎಂಬ ಮಹಾ ವೈರಾಗ್ಯ ಶಿರೋಮಣಿ, ಮಹಾ ಶಿವಶರಣೆ ಅಕ್ಕಮಹಾದೇವಿಯ ಅನುಭವದ ಅಮರ ವಾಣಿಯಂತೆ ಮನಸ್ಸನ್ನು ಮಹಾದೇವನಲ್ಲಿ ತೊಡಗಿಸಿದರೆ ಭವದ ಭೀತಿ ಇನ್ನಿಲ್ಲ, ನಿರ್ಭವ.
ಯಾವ ಪ್ರಕಾರವಾಗಿ ಬೀಜವು ಮೊಳೆತು ಪಲ್ಲವಿಸಿ ವೃಕ್ಷವಾಗುವದಕ್ಕೆ ಸ್ಥಲ, ಜಲ, ಕಾಲಾವಧಿಗಳು ಹೇಗೆ ಅವಶ್ಯವೋ ಹಾಗೆ ಶಿವನನ್ನು ಕಾಣಲು, ನೆಮ್ಮದಿಯಿಂದ ಸಾಕ್ಷತ್ಕಾರವಾಗಲು ಪ್ರತಿಯೊಬ್ಬ ಮಾನವನು ಅದರಲ್ಲೂ ವೀರಶೈವನು ಶಿವಾದ್ವೈತ ರೂಪವಾದ ಲಿಂಗಾಂಗ ಸಾಮರಸ್ಯ ರೂಪವಾದ ಶಿವದೀಕ್ಷೆ ವೀರ ಮಾಹೇಶ್ವರ ದೀಕ್ಷೆ ಯನ್ನು ಹೊಂದಲೇಬೇಕೆಂದೂ ಇದರಿಂದ ಮಾನವ ಕೋಟಿಗೆ ಜಯವಾಗುತ್ತದೆ ನಿಜವಾದ ಸುಖ ಶಾಂತಿಯು ನೆಲೆಸುತ್ತದೆ ಮತ್ತು ಭಾರತ ಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿ ಬಂದದ್ದು ಸಾರ್ಥಕವಾಗುತ್ತದೆ ಎಂಬುದನ್ನು ನಿಃಸಂದೇಹವಾಗಿ ಹೇಳಬಹುದು ಎಂದು ಬಂದಂಥ ಸಕಲ ಭಕ್ತರಿಗೆ ಬೋಧೆ ಮಾಡುತ್ತಹೋದ ಹೋದಲ್ಲಿ, ಗ್ರಾಮ ಗ್ರಾಮಗಳಲ್ಲಿ, ಸೀಮೆ ಸೀಮೆಗಳಲ್ಲಿ ಸಂಚರಿಸಿ ಉಕ್ಕಿದ ಆನಂದದಿ ಭಕ್ತರ ಮೇಲಣ ವಾತ್ಸಲ್ಯದಿಂದ ತಾಯಿ ತನ್ನ ಭಾಗ್ಯದ ಮಗುವಿಗೆ ಮಮತೆಯಿಂದ, ನೇಹದಿಂದ ಹೇಳಿ ಸಂತೈಸುವಂತೆ ಮನಂಬುಗುವಂತೆ ಇಂಥ ಗಂಭೀರ ಅರ್ಥಗರ್ಭೀತ ಮಹತ್ವಪೂರ್ಣ ತತ್ತ್ವರೂಪ ಉಕ್ಕಿನ ಕಡಲೆಗಳನ್ನು ತಮ್ಮ ಅಮೋಘ ಅನುಭಾವಾಮೃತ ರಸಾಯನದಿಂದ ಪಂಚಪಕ್ವಾನ್ನವನ್ನೇ ಮಾಡಿ ಉಣಿಸಿ ತಣಿಸಿಂದತೆ ಬೋಧಿಸುತ್ತಾರೆ ತತ್ ಪರಿಣಾಮವಾಗಿ ಸಂಸಾರದಂದುಗದಲ್ಲಿ ಬೆಂದು ಬೆಂಡಾಗಿ ಘಾಸಿಗೊಂಡು ದಿಕ್ಕು ತೋಚದೆ ಧಾವಿಸಿ ಬಂದ ಸಾವಿರಾರು ಜನ ನಿಜಸುಖಾಮೃತ ಪಿಪಾಸುಗಳಿಗೆ ಸಂದರ್ಶನ ಸದ್ಭೋಧೆಯಿತ್ತು ಸಂತೈಸುತ್ತಿರುವರು ಇದು ಶ್ರೀಗಳವರ ಸತ್ಯ-ಶುಧ್ಧ ಕಾಯಕವಾಗಿ ಬಿಟ್ಟಿದೆ ಇದನ್ನು ಅನುಲಕ್ಷಿಸಿ ಶ್ರೀಗಳು ವ್ಯಕ್ತಿ-ವ್ಯಕ್ತಿಗಳನ್ನು ಶೋಧಿಸಿ ತಮ್ಮ ಅಂತಃಕರಣ ತಪಃಕಿರಣಗಳಿಂದ ಪರಿಪೂತ ಗೊಳಿಸಿ, ಕರುಣಾಮೃತದಿಂದ ಪರಿಮಾರ್ಜಿಸಿ ಅಮರ ಶಕ್ತಿಗಳನ್ನಾಗಿಸಿ, ವ್ಯಕ್ತಿ ವ್ಯಕ್ತಿಯ ಶಕ್ತಿಯೆ ಸಮಷ್ಟಿ ಸಮಾಜ, ಉನ್ನತ, ಮಹಾ ಮೇರು, ಸರ್ವಾಂಗ ಸುಂದರ ಸಮಾಜ ನಿರ್ಮಾಣವೇ ಶ್ರೀಗಳ ಉದ್ದೇಶವಾಗಿದೆ ಸಮಾಜದ ಹಿತ ಸಾಧನೆಯನ್ನೇ ಕುರಿತು ನಿತ್ಯವೂ ಅವರು ಚಿಂತಿಸುತ್ತಿದ್ದಾರೆ.
ಶ್ರೀ ಮದ್ವೀರಶೈವ ಶಿವಯೋಗಮಂದಿರದಲ್ಲಿ ಪ್ರಮಥರ ಹಸು ಮಕ್ಕಳಂತಿರುವ ಸಾಧಕರಿಗೆ ಶ್ರೀಗಳು ಅವರ ಪೋಷಣೆ ಪಾಲನೆಗಾಗಿ ಹಳ್ಳಿ ಹಳ್ಳಿಗೆ ಭಿಕ್ಷಾಟನೆಗೆಂದು ದಯ ಮಾಡಿಸಿದರೆ ಅಲ್ಲಲ್ಲಿ ಸದ್ಭಕ್ತರು ಆನಂದದ ಭರದಲ್ಲಿ ಧನ-ಧಾನ್ಯಗಳನ್ನು ಕೊಡುವ ಭಕ್ತರು ಹೆಚ್ಚು ಸಲ್ಲಿಸ ಹೋದರೆ, ಇಷ್ಟೇಕೆ ಅಪ್ಪಾ, ಇದಿಷ್ಟೇ ಸಾಕು, ಇದು ನಿನಗೆ ಆಶೀರ್ವಾದವಿರಲಿ, ಎಂದು ಕೆಲವೇ ಭಾಗವನ್ನು ಸ್ವೀಕರಿಸಿ ಹರಸುತ್ತಾರೆ ಅದು ಸೂಕ್ತ ಭ್ರಮರವು ಪುಷ್ಪದೊಳಗಿನ ಮಧುವನ್ನು ಈಂಟುವಾಗ ಪಾನ ಮಾಡಲು ಹೂಗಳ ಮೇಲೆ ಕುಳಿತರೂ, ಹೂವಿಗೆ ಭಾರವಾಗದಂತೆ ವ್ಯವಹರಿಸುವಂತೆ ಶ್ರೀಗಳು ಯಾರಿಗೂ ಭಾರವಾಗದಂತೆ ಭಿಕ್ಷಾಟನೆ ಲೀಲೆಗೈಯುತ್ತಾರೆ ಅಂತೆಯೇ ಅವರ ಭಿಕ್ಷೆಯು ಭಿ-ಕ್ಷಾ-ಭಯಂ ಸಂಸಾರ ತಾಪತ್ರಯೋದ್ಭೂತ ಭಯಂ, ಕ್ಷೀಯತೇ ಅನಯಾ – ಇತಿ –ಭಿಕ್ಷಾ ಎಂದೇ ಜನವು ಭಾವಿಸಿ ಕೃತಾರ್ಥರಾಗುತ್ತಲಿದ್ದಾರೆ ಮಾನವದ ಕುಲ ಮೂಲ ಸಂಬಂಧದಂತಿರುವ ವಿದ್ಯಾರ್ಥಿಗಳ, ಅಲ್ಲದೆ ಅವಿಮುಕ್ತ ಕ್ಷೇತ್ರವಾಗಿರುವ ಶ್ರೀ ಶಿವಯೋಗಮಂದಿರದಲ್ಲಿ ಆ ಪರಂಜ್ಯೋತಿಯ ಕಿರಣಗಳಂತಿರುವ ಭಾವೀ ವೀರಶೈವ ಧರ್ಮ ಗುರುಗಳಾದ ಶ್ರೀ ಶಿವಯೋಗ ಸಾಧಕರ ಪೋಷಣೆಗಾಗಿ ಪಾಮರರನ್ನು ಪಾವನರನ್ನಾಗಿಸುವ ಭಿಕ್ಷಾಟನ ಲೀಲೆಯನ್ನು ಸಹಜ ಸೌಹಾರ್ದ ಸೌಜನ್ಯ ಭಾವದಿಂದಲೇ ಶ್ರೀಗಳು ನಡೆಸುತ್ತಿದ್ದಾರೆ ಕೆಲ ಸಮಯ ಮಳೆ-ಬೆಳೆಗಳ ಕುಗ್ಗು-ನುಗ್ಗುಗಳನ್ನರಿತು ಭಿಕ್ಷೆಗೆ ಹೋಗುವುದನ್ನು ನಿಲ್ಲಿಸಿದರೆ ಆ ಗ್ರಾಮದ ಭಕ್ತ ಪ್ರಮುಖರು ಬಂದು ಆಗ್ರಹದಿಂದ ಕರೆದದ್ದೂ, ಕರೆಯುವದೂ ಉಂಟು.
ಶಿವಯೋಗಮಂದಿರದಲ್ಲಿ ಪರಮಪೂಜ್ಯ ಶ್ರೀ ನಿ ಪ್ರ ಸದಾಶಿವ ಶಿವಯೋಗಿಗಳು –
ಸರ್ವಲೋಕೋಪಕಾರಾಯ ಯೋದೇವಃ ಪರಮೇಶ್ವರಃ
ಚರತ್ಯತಿಥಿರೂಪೇಣ ನಮಸ್ತೆ ಜಂಗಮಾತ್ಮನೇ
ಎಂಬಂತೆ ಅವತರಿಸಿ ಶಿವರೂಪಿ ಜಂಗಮಪುಂಗವರಾಗಿ ಕಂಗೊಳಿಸುತ್ತ ದಾಸೋಹಂ ಭಾವದಿ ನೆಲೆಸಿದ್ದಾರೆ ಅವರ ಅಂತಃಕರಣ ಹೇಳಲಸಾಧ್ಯ; ಅದು ಅನುಪಮ ವಾದುದು ವೀರ ವಿರಕ್ತ ಮಹಾಸ್ವಾಮಿಗಳ ಪ್ರಮಥರ ಸಮೂಹದಲ್ಲಿ ಅಗ್ರಗಣ್ಯರಾಗಿ ಜೀತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ಎಂಬಂತೆ ವಿರಾಗಿಗಳೂ, ಜಿತಾಕ್ಷರೂ, ತಪೋಧನರೂ, ತೇಜಸ್ವಿಗಳೂ ಆಗಿದ್ದಾರೆ.