1901-1934

ಮಾನವೀಯತೆಯ ಮಹಾಮೂರ್ತಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು

ಲೇಖಕರು: ಪ್ರೊ ಮಲ್ಲೇಪುರಂ ಜಿ ವೆಂಕಟೇಶ್ - ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು

ಕರ್ನಾಟಕದ ವೀರಶೈವ ಮಹಾಂತರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶ್ರೇಷ್ಠರು ಇವರ ಕಣ್ಣಿನಲ್ಲಿ ಬೆಳೆದ ಅನೇಕ ಶಿವಯೋಗಿಗಳು ಬಾಳಬೆಳಕನ್ನು ತೆರೆದುಕೊಂಡರು ಅಂಥವರಲ್ಲಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು ಇವರು ಜೀವನದ ಉದ್ದಕ್ಕೂ ಹಾನಗಲ್ಲ ಶಿವಯೋಗಿಗಳನ್ನು ನೆನೆಯುತ್ತಲೇ ಸಾರ್ಥಕ ಶಿವಬದುಕನ್ನು ನಡೆಸಿದರು.

ಪೂರ್ವಜರುಬಾಲ್ಯ

ಕಲಬುರ್ಗಿ ಜಿಲ್ಲೆಯ ಯಾತನೂರು 19ನೆಯ ಶತಮಾನಕ್ಕೆ ಒಂದು ಪುಟ್ಟಗ್ರಾಮ ಅಲ್ಲಿ ವೀರಶೈವ ಮನೆತನಕ್ಕೆ ಸೇರಿದವರೆ ಹೆಚ್ಚಾಗಿದ್ದರು ಅಲ್ಲಿನ ಚೆನ್ನಯ್ಯ ಮತ್ತು ಶಿವಲಿಂಗವ್ವ ಜಂಗಮ ದಂಪತಿಗೆ ಇಬ್ಬರು ಮಕ್ಕಳು, ವೀರಯ್ಯ ಮತ್ತು ಸಿದ್ದಯ್ಯ ಆ ಗ್ರಾಮಕ್ಕೆಮೂರು ವರ್ಷ ಬರಗಾಲ ತುಂಬಿತ್ತು ಚೆನ್ನಯ್ಯ ಆ ಊರನ್ನು ಬಿಟ್ಟು ತಮ್ಮ ಪೂರ್ವಜರ ಊರಾದ ಸಿಂದಗಿ ತಾಲ್ಲೂಕಿನ ಕುಮಸಗಿಗೆ ಬಂದರು ತಮ್ಮ ಪೂರ್ವಜರು ನೆಲೆಸಿದ್ದ ಮಠವನ್ನುದುರಸ್ತಿಗೊಳಿಸಿದರು ಆದರೆ, ಬಡತನ ಉದ್ದಕ್ಕೂ ಕಾಡುತ್ತಿತ್ತು ಚೆನ್ನಯ್ಯ ಅನಿವಾರ್ಯವಾಗಿ ಆ ಊರನ್ನು ಬಿಟ್ಟು ಸಿಂದಗಿಗೆ ಬರಬೇಕಾಯಿತು ಆ ಕಾಲಕ್ಕೆ ಅದೊಂದು ದೊಡ್ಡಗ್ರಾಮ ಊರಿನ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನ ಊರಾನಮಠ ಆ ಮಠದ ಸ್ವಾಮಿಗಳು ರೇವಣಸಿದ್ಧರು ಅವರು ಚೆನ್ನಯ್ಯನ ಕುಟುಂಬವನ್ನು ಸ್ವಾಗತಿಸಿದರು ಇವರ ಮಧ್ಯಮಪುತ್ರನೇ ಲಿಂಗಯ್ಯ, ಸೋಮವ್ವ ತನ್ನ ತವರುಮನೆ ಸಾಲೋಟಗಿಗೆ ಹೋದಾಗ ಗಡ್ಡಿ ಲಿಂಗಯ್ಯನ ಜಾತ್ರೆಗೆ ಹೋಗಬೇಕೆಂಬ ಹಂಬಲ ಆಕೆಗೆ ಉಂಟಾಯಿತು ಜಾತ್ರೆಯಲ್ಲಿ ತೇರೆಳೆಯುವ ಸಂದರ್ಭದಲ್ಲಿ ಗಂಡು ಮಗುವನ್ನು ಹೆತ್ತಳು 21 08 1906ರಂದು ಪುಬ್ಬಾ ನಕ್ಷತ್ರದಲ್ಲಿ ಗಂಡುಮಗು ಶಿವಶಕ್ತಿಯ ಪ್ರಭಾವದಿಂದ ಇಳೆಗೆ ಅವತರಿಸಿತು ಆ ಮಗುವೇ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರು.

ಲಿಂಗಯ್ಯನ ಬಾಲ್ಯದ ಬದುಕು ಸುಖವಾಗಿರಲಿಲ್ಲ ಅವನು ಕೈಯಲ್ಲಿ ಜೋಳಿಗೆ ಹಿಡಿದು ಕೋರಾನ್ನ ಭಿಕ್ಷೆಗೆ ಹೋಗುತ್ತಿದ್ದ ಹಿರಿಯ ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ ಆದರೂ ಬಡತನ ಹಾಸಿಕೊಂಡಿತ್ತು ಲಿಂಗಯ್ಯ ನಾಲ್ಕನೆಯ ತರಗತಿ ಓದುತ್ತಿದ್ದ ಆಗ ಒಂದು ಅಪೂರ್ವ ಘಟನೆ ನಡೆಯಿತು! ಬೀಳೂರು ಶ್ರೀಗಳು ಮಹಿಮಾವಂತರು ಅವರು ಲಿಂಗಯ್ಯನನ್ನು ನೋಡಿ, ‘ಈ ಹುಡುಗನ್ನ ನಮ್ಮ ಜತೀಗಿ ಕಳಿಸ್ತೀರೇನು?’ಎಂದು ಕೇಳಿದರು ನಾಲ್ಕನೆಯ ಇಯತ್ತೆ ಮುಗಿದ ನಂತರ ಕಳುಹಿಸುವುದಾಗಿ ದಂಪತಿ ವಾಗ್ದಾನವಿತ್ತರು ಅದರಂತೆ ಸ್ವಾಮಿಗಳಿಗೆ ಲಿಂಗಯ್ಯನನ್ನು ಒಪ್ಪಿಸಿದರು ಆಗ ಲಿಂಗಯ್ಯನಿಗೆ ಎಳೆಹರೆಯ ಶ್ರೀಮಠದ ಭಕ್ತರೊಬ್ಬರು ಲಿಂಗಯ್ಯನನ್ನು ಶಿವಯೋಗ ಮಂದಿರಕ್ಕೆ ಕಳುಹಿಸಿದರೆ ಒಳಿತೆಂದಾಗ ರೇವಣಸಿದ್ಧಸ್ವಾಮಿಗಳು ಒಪ್ಪಿದರು ಲಿಂಗಯ್ಯ ಶಿವಯೋಗಮಂದಿರಕ್ಕೆ ಬಂದ ಅಲ್ಲಿ ಹಾನಗಲ್ಲ ಶಿವಯೋಗಿಗಳು ಮಧ್ಯಾಹ್ನದ ಪೂಜೆಯಲ್ಲಿದ್ದರು ಲಿಂಗಯ್ಯ ಸಾಷ್ಟಾಂಗ ನಮಸ್ಕಾರ ಮಾಡಿದ ಶಿವಯೋಗಿಗಳು ಲಿಂಗಯ್ಯನ ಮೈಹಿಡಿದು ಎತ್ತಿದರು.

ಶಿವಯೋಗ ಮಂದಿರದ ಸಾಧನೆಯ ಹಾದಿಯಲ್ಲಿ ಮುಳುಗಿಹೋದ ಲಿಂಗಯ್ಯ ಹಾನಗಲ್ಲ ಕುಮಾರಸ್ವಾಮಿಗಳ ಪೂಜಾಮರಿಯಾಗಿ ಸೇವೆಗೆ ನಿಂತುಕೊಂಡ ಲಿಂಗಯ್ಯ ಎಲ್ಲರ ಬಾಯಲ್ಲೂ ಲಿಂಗಾರ್ಯರಾಗಿ ರೂಪಾಂತರಗೊಂಡರು ಕಂಚಗಲ್ಲಮಠದ ಬಿದರೆ ಪಟ್ಟಾಧ್ಯಕ್ಷರು ಯೋಗಿರಾಜ, ಯೋಗ ಸಾರ್ವಭೌಮರೆಂದು ಹೆಸರು ಪಡೆದಿದ್ದರು ಕುಮಾರಸ್ವಾಮಿಗಳು ಅವರನ್ನು ಶಿವಯೋಗಮಂದಿರಕ್ಕೆ ಕರೆತಂದು ಯೋಗವನ್ನು ಹೇಳಿಕೊಡಲು ವ್ಯವಸ್ಥೆ ಮಾಡಿದರು.

ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರ ಹಸ್ತಾಕ್ಷರ ದಲ್ಲಿ ಔಷಧಿ

ಬಿದರೆ ಪಟ್ಟಾಧ್ಯಕ್ಷರ ಯೋಗಕೃಪೆಗೆ ಲಿಂಗಾರ್ಯರು ಒಳಗಾದರು ಯೋಗದ ಎಲ್ಲಾ ಬಗೆಗಳಲ್ಲಿ ಪರಿಣತಿ ಸಾಧಿಸಿದರು ಇವುಗಳ ಜತೆಗೆ ವೈದ್ಯವಿದ್ಯೆಯಲ್ಲೂ ಪರಿಣತರಾದರು ಯೋಗ-ಆಯುರ್ವೆದ ಒಂದೇ ನಾಣ್ಯದ ಎರಡು ಮುಖಗಳಂತೆ ಅವರು ಬೆಳಗಿದರು.

ಸಿಂದಗಿಯ ಹಿರಿಯ ಮಠದ ನಿಯೋಜಿತ ಉತ್ತರಾಧಿಕಾರಿಯೆಂದು ರೇವಣಸಿದ್ಧಸ್ವಾಮಿಗಳು ಮೊದಲೇ ಹೇಳಿದ್ದರು ಆ ಮಠದ ಪರಂಪರೆಯಲ್ಲಿ ಆಗಿಹೋದ ಶಾಂತೇಶಸ್ವಾಮಿಗಳ ನೆನಪಿನಲ್ಲಿ ‘ಶಾಂತವೀರದೇವರು’ ಎಂದು ಶಿವಯೋಗಮಂದಿರದ ಪ್ರತಿಯೊಬ್ಬರು ಕರೆಯುತ್ತಿದ್ದರು ಶಾಂತವೀರದೇವರ ಪೂಜೆ ವಿಶಿಷ್ಟವಾದುದು ಅವರು ಪಶ್ಚಿಮ ಪದ್ಮಾಸನದಲ್ಲಿ ಕುಳಿತು ವಿಗ್ರಹದಂತೆ ನಿಶ್ಚಲರಾಗಿ ರೆಪ್ಪೆಮಿಟುಕಿಸದೆ ಬಿಟ್ಟ ಕಂಗಳಿಂದ ಅಂಗೈಯೊಳಗಿನ ಇಷ್ಟಲಿಂಗವನ್ನು ನೋಡುತ್ತ ಭಾವಲಿಂಗಕ್ಕೆ ತಲುಪಿ, ಅಲ್ಲಿಂದ ಪ್ರಾಣಲಿಂಗಕ್ಕೆ ಸಾಗುತ್ತಿದ್ದ ಪರಿ ಅನನ್ಯವಾದುದು ಶಾಂತವೀರದೇವರಲ್ಲಿ ಈಗ ಯೋಗ-ಶಿವಯೋಗದ ಸಮನ್ವಯ ಸಿದ್ಧಿಗೊಂಡಿತ್ತು 1930ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಶಿವೈಕ್ಯರಾದರು ಇದು ಶಾಂತವೀರ ದೇವರನ್ನು ದಿಗ್ಬ್ರಾಂತ ಗೊಳಿಸಿತು ಸ್ವಲ್ಪ ಮಟ್ಟಿಗೆ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪ್ರಾರಂಭಿಕ ಸಂಸ್ಕೃತ ಅಭ್ಯಾಸವೇನೊ ಸಾಗಿತ್ತು ಶಿವಯೋಗಮಂದಿರದ ಕೆಲವು ಸಾಧಕರು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಹೊರಟಿದ್ದರು ಶಾಂತವೀರದೇವರಿಗೆ ಕಾಶಿಗೆ ಹೋಗಬೇಕೆಂಬ ಹಂಬಲ ಬಲಿಯಿತು ಮನೆಯಲ್ಲಿ ವಿಷಯ ತಿಳಿಸಿದಾಗ ತಾಯಿ ‘ಏಳಿ ದೇವ್ರ ನೀವು ಚಿಂತಿ ಮಾಡಬ್ಯಾಡ್ರಿ ನಿಮ್ಮ ಖರ್ಚು ನಾನು ಪೂರೈಸ್ತೀನಿ! ಎಮ್ಮಿ ಕಟೀನಿ-ಹಣ ನಿಮಗೆ ಕಳಸ್ತೀನಿ ಇದು ಸತ್ಯ’ ಎಂದು ಧೈರ್ಯ ತುಂಬಿದರು.

1937ರಲ್ಲಿ ಶಿರಿಯಾಳಕೊಪ್ಪದ ಶಿವಯೋಗಿದೇವರು, ಗೌರಾಪುರದ ಜಿ ಎಂ ಉಮಾಪತಿ ಶಾಸ್ತ್ರಿಗಳು ಮತ್ತು ಶಿವಮೂರ್ತಿ ದೇವರು ಈ ಮೂವರೊಡನೆ ಶಾಂತವೀರದೇವರು ಕಾಶಿಯನ್ನು ತಲುಪಿದರು ಅಲ್ಲಿ ಮುರುಘಾಮಠಕ್ಕೆ ಸೇರಿದ ಜಯದೇವವಾಡಿಯಲ್ಲಿ ಉಳಿದುಕೊಂಡರು ಅಲ್ಲಿರುವಾಗ ತಾಂತ್ರಿಕ ಕಾರಣಗಳಿಂದ ಜಯದೇವ ವಾಡಿಯನ್ನು ಬಿಡಬೇಕಾಯಿತು ಶಾಂತವೀರದೇವರು ತಮ್ಮ ಯೋಗಪ್ರದರ್ಶನದ ಮೂಲಕ ಮೀರಾಘಾಟ್ ಬಳಿಯಲ್ಲಿದ್ದ ಉದಾಸಿಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡರು ಶಾಂತವೀರದೇವರು ‘ಬಂಗಾಲಿ ಲೋಲಾʼಕ್ಕೆ ಹೋಗಿ ವೈದಿಕ ಮತ್ತು ಜ್ಯೋತಿಷ್ಯಗಳನ್ನು ಕಲಿಯುತ್ತಿದ್ದರು ಉಳಿದ ಮೂವರು ಕ್ರಮಾಗತಶಿಕ್ಷಣವನ್ನು ಪಡೆಯುತ್ತಿದ್ದರು 1942ರ ಚಲೇಜಾವ್ ಚಳವಳಿ ದೇಶಾದ್ಯಂತ ವ್ಯಾಪಿಸಿ ದಾಗ ಕಾಶಿಯನ್ನು ಬಿಟ್ಟು ಊರಿಗೆ ಮರಳಿದರು.

ಸೇವಾಭಾವ

ಶಾಂತವೀರದೇವರು ಕಾಶಿಯಿಂದ ಬಂದಮೇಲೆ ಪಟ್ಟಾಭಿಷೇಕ ಮಾಡೋಣ ಎಂದು ಊರಿನ ಜನ ಸಮಯವನ್ನುಮುಂದೂಡತೊಡಗಿದರು ಒಮ್ಮೆ ಸಭೆ ಸೇರಿತ್ತು ಸಭೆಯಲ್ಲಿದ್ದ ಜನ ‘ಮಳೆ ಬರಲಿ ಮಾಡೋಣವಂತೆ’ ಎಂದಾಗ ಶಾಂತವೀರದೇವರಿಗೆ ಬೇಸರವಾಗಿ ‘ಈಗ ಮಾಡುವುದಾದರೆ ಮಾಡಿರಿ ಇಲ್ಲವಾದರೆ ಪಟ್ಟವೇ ಬೇಡ’ ಎಂದರು ಪ್ರಕೃತಿಯ ಮಾಯೆಯೊ ಎಂಬಂತೆ ಆ ರಾತ್ರಿ ಉಧೋ ಮಳೆ ಸುರಿಯಿತು ಊರೆಂಬೋ ಊರು ಕತ್ತಲ ಗವಿಯಾಯಿತು ಊರಿನ ಪ್ರಮುಖರು ಪಟ್ಟಾಧಿಕಾರಕ್ಕೆ ಸಿದ್ಧತೆ ಮಾಡತೊಡಗಿದರು.

೧೯೪೩ ರ ಇಸವಿ ಸಿಂದಗಿಯಲ್ಲಿ ಸಂಭ್ರಮವೋ ಸಂಭ್ರಮ ಶಾಂತವೀರದೇವರಿಗೆ ಹುಕ್ಕೇರಿಮಠದ ಶ್ರೀಗಳಿಂದ ಚಿನ್ಮಯದೀಕ್ಷೆ ನೆರವೇರಿತು ಯಾದವಾಡದ ಶಿವಮೂರ್ತಿ ಪಟ್ಟಾಧ್ಯಕ್ಷರಿಂದ ಕ್ರಿಯಾದೀಕ್ಷೆಯನ್ನು ಪಡೆದು ‘ಶ್ರೀಮದ್‌ಘನಲಿಂಗ ಚಕ್ರವರ್ತಿ ಶಾಂತವೀರ ಶಿವಾಚಾರ್ಯರು’ ಎಂಬ ನೂತನ ಅಭಿದಾನ ಹೊಂದಿದರು ಅನಂತರ ಊರಿನ ಪ್ರಮುಖರ ಜತೆ ಮಾತನಾಡಬೇಕೆಂದು ಬಯಸಿದರು ಆದರೆ, ಊರಿನ ಜನ ಸ್ಪಂದಿಸಲಿಲ್ಲ ಅವರ ಕಣ್ಣಮುಂದೆ ಹಾನಗಲ್ಲ ಕುಮಾರಸ್ವಾಮಿಗಳ ಕ್ರಿಯಾಪರಂಪರೆ ಇತ್ತು ಧರ್ಮಜಾಗೃತಿ ಮತ್ತು ಸಮಾಜದ ಏಳ್ಗೆಗಾಗಿ ದುಡಿಯಬೇಕೆಂಬ ಹಂಬಲ ತುಂಬಿತ್ತು ಶಾಂತವೀರದೇವರಿಗೆ ಮುಂದೇನು ಮಾಡಬೇಕೆಂದು ತೋಚದೆ ಮಾರ್ಗದರ್ಶನಕ್ಕಾಗಿ ಹುಕ್ಕೇರಿಮಠದ ಮಹಾತಪಸ್ವಿ ಶ್ರೀಶಿವಬಸವಸ್ವಾಮಿಗಳ ಬಳಿಹೋದರು ಸ್ವಾಮಿಗಳ ಆರೋಗ್ಯ ಸರಿಯಿರಲಿಲ್ಲ ಅವರ ಉಪಚಾರಕ್ಕೆ ನಿಂತರು ಮಠಕ್ಕೆ ಬಂದವರ ಉಪಚಾರ, ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲೆ ಬಿದ್ದಿತು ಶಾಂತವೀರದೇವರು ಅಷ್ಟಾವರಣಗಳ ಬಗೆಗೂ ಕಾಯಕ-ದಾಸೋಹದ ಬಗೆಗೂ ಜನರಿಗೆ ತಿಳಿಹೇಳತೊಡಗಿದರು ಆಗಾಗ್ಗೆ ರೋಗಿಗಳನ್ನು ಪರೀಕ್ಷಿಸಿ ಔಷಧಗಳನ್ನು ನೀಡುತ್ತಿದ್ದರು ಹುಕ್ಕೇರಿ ಶ್ರೀಗಳು ಇದರಿಂದ ಸಂಪ್ರೀತರಾದರು ಒಂದು ದಿನ ಶಾಂತವೀರ ಸ್ವಾಮಿಗಳನ್ನು ಕರೆದು ನೀವು ಸಿಂದಗಿ ಪಟ್ಟಾಧ್ಯಕ್ಷರಾದರೂ ನಿಮ್ಮ ಕಾರ್ಯಕ್ಷೇತ್ರ ಹಾವೇರಿ ನೀವು ಇಲ್ಲಿದ್ದು ಕುಮಾರೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದರು 1951ರ ಮಾರ್ಚ್ ತಿಂಗಳಿನಲ್ಲಿ ಶ್ರೀಕುಮಾರೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಉದ್ಘಾಟನೆ ಆಯಿತು ಶ್ರೀಶಾಂತವೀರ ಸ್ವಾಮಿಗಳು ವಾತ್ಸಲ್ಯಮಯಿ ಅವರು ಅನೇಕ ಬಡ ಜಂಗಮಮಕ್ಕಳಿಗೆ ಊಟ-ಬಟ್ಟೆಕೊಟ್ಟು ಯೋಗ-ವೈದಿಕಗಳನ್ನು ಹೇಳತೊಡಗಿದರು.

ವಿದ್ಯಾಸಕ್ತಿ

ನರೇಗಲ್ಲಮಠದಲ್ಲಿ ವೈದಿಕ-ಜ್ಯೋತಿಷ್ಯ ಪಾಠಶಾಲೆ ಪ್ರಾರಂಭವಾಯಿತು ಹಾನಗಲ್ಲ ಕುಮಾರಸ್ವಾಮಿಗಳು ಕೆಲದಿನ ಅನುಷ್ಠಾನ ಮಾಡಿದ್ದ ಊರು ಸಂಗೂರು ಈ ಚಿಕ್ಕಹಳ್ಳಿಯಲ್ಲಿ ಶಿವಯೋಗಮಂದಿರವನ್ನು ಕಟ್ಟಿಸಿದರು ಮಂಡಗೈ ಭರಮಪ್ಪ ಎಂಬುವವನೊಬ್ಬ ಆಶ್ರಯಕ್ಕೆಬಂದಾಗ ಸ್ವಾಮಿಗಳು ‘ಭಸ್ಮ’ ತಯಾರಿಕೆಯ ಶಾಸ್ತ್ರೀಯ ವಿಧಾನವನ್ನು ಕಲಿಸಿ ಆ ಕಾಯಕಕ್ಕೆ ಅವನನ್ನು ತೊಡಗಿಸಿದರು ಸಂಗೂರಿನ ಮಠದ ಜಾಗದಲ್ಲಿ ಅರುವತ್ತು ಹಸುಗಳನ್ನುಳ್ಳ ಗೋಶಾಲೆ ಪ್ರಾರಂಭವಾಯಿತು ಹೀಗಾಗಿ, ಭಸ್ಮತಯಾರಿಕೆಗೆ ಅನುಕೂಲವಾಯಿತು ಅಲ್ಲಿ ಒಂದೆಡೆ ಪಶುಪಾಲನೆ, ಮತ್ತೊಂದೆಡೆ ಭಸ್ಮತಯಾರಿಕೆ, ಇನ್ನೊಂದೆಡೆ ವಟುಗಳ ಅಧ್ಯಯನ, ಯೋಗ, ಷಟ್ಕರ್ಮಸಾಧನ, ಗದ್ದುಗೆಯಲ್ಲಿ ಘಂಟಾರವ,ಭಕ್ತಾದಿಗಳ ಸಡಗರ, ಶಿವಯೋಗಿಗಳ ತೇರು-ಹೀಗೆ ಸಂಗೂರು ಸಂಭ್ರಮದಿಂದ ನಳನಳಿಸತೊಡಗಿತು ಇತ್ತ ನರೇಗಲ್ಲಮಠವನ್ನು ಸ್ವಾಮಿಗಳು ಶಿಷ್ಯರನ್ನೂ ವಟುಗಳನ್ನೂ ಕಟ್ಟಿಕೊಂಡು ಸಂಪೂರ್ಣ ದುರಸ್ತಿಗೊಳಿಸಿದರು ಗದುಗಿನ ಗೌಡಪ್ಪಗೌಡರು ಗದುಗಿನಲ್ಲಿ ಸ್ಥಳದಾನ ಮಾಡಿದರು ಅಲ್ಲಿ ಸಂಸ್ಕೃತ ಪಾಠಶಾಲೆ ತೆರೆದರು.

ಗದುಗಿನ ತೋಂಟದಾರ್ಯರು ಪೂರ್ವದಲ್ಲಿ ಸಿಂದಗಿಯ ಹಿರೇಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದವರೇ ಆದರೆ, ಆಕಸ್ಮಿಕವಾಗಿ ಗದುಗಿನ ತೋಂಟದಾರ್ಯಮಠಕ್ಕೆ ಸ್ವಾಮಿಗಳಾಗಿ ನಿಯುಕ್ತಿ ಆದಾಗ ಪಟ್ಟಾಧ್ಯಕ್ಷರು ಮಮ್ಮಲ ಮರುಗಿದರು ಆದರೆ, ಶಿವನ ಲೀಲೆ ಬೇರೆ ಇರಬಹುದೆಂದು ತಿಳಿದು ಸಮಾಧಾನಗೊಂಡರು ಪಾಠಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ಏಳುವುದು ತಡವಾದರೆ ಅವರ ಹಾಸಿಗೆ ಬಳಿಬಂದು ‘ಏಳ್ರಪಾ ಗದಿಗೆಯ್ಯನೋರೆ, ಏಳ್ರಪಾ ಶರಣಯ್ಯನೋರೆ, ನಿನ್ನೆ ಸಂಜೀಕ ಹಾಸಿಗೆ ಮ್ಯಾಲೆ ಮಕ್ಕೊಂಡಿರಿ ಅವು ಕುಂಯ್ಯೋ ಮರ್ರೋ ಅಂತ ಅಳಾಕಹತ್ತಾವು ಅವುಗಳ ಮೇಲೆ ಕರುಣೆ ತೋರ್ರಪಾ ಏಳಿ, ಏಳಿ ‘ಎಂದು ಎಬ್ಬಿಸಿದರೆ ಮುಸಿಮುಸಿ ನಗುತ್ತ ಹುಡುಗರು ಏಳುತ್ತಿದ್ದರು.

ಪ್ರಸಂಗಗಳು: ಪೂಜ್ಯ ಸಿಂದಗಿ ಪಟ್ಟಾಧ್ಯಕ್ಷರು ಉತ್ತರಕರ್ನಾಟಕದ ಹಳ್ಳಿಹಳ್ಳಿಗಳನ್ನು ಸುತ್ತಿದರು ಆಯಾ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲೂ ‘ಶಿವನ ಡಂಗುರ’ವನ್ನು ಸಾರಿದರು ಅವರು ಶಿವಸಂಸ್ಕಾರ ಹೊಂದುವಂತೆ ಮಾಡಿದರು ಅವರ ವೈದ್ಯಕೀಯದಿಂದ ಸಹಸ್ರಾರು ಜನ ನಿರೋಗಿಗಳಾದರು ಒಬ್ಬಾಕೆ ಮುದುಕಿ, ಹಾವೇರಿಯ ಕಳ್ಯಾಳ ಗ್ರಾಮದವಳು ಆಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ ಆಕೆಗೆ ಔಷಧಕೊಟ್ಟು ಕಳಿಸಿದರು.

ಮುಂದೆ ತಿಂಗಳಿಗೆ ಕಣ್ಣು ನಿಚ್ಚಳವಾಗಿ ಕಾಣತೊಡಗಿತು 1969ನೆಯ ಇಸ್ವಿ, ಹಾವೇರಿಯ ದ್ಯಾವಪ್ಪಶೆಟ್ಟರ ಮನೆಯಲ್ಲಿ ಶ್ರೀಗಳ ಪೂಜೆ ಆ ಮನೆಯ ತಾಯಿಗೆ ಸಂಕಟ ಆಕೆಯ ಕೂಸಿಗೆ ಆರೋಗ್ಯ ಸರಿಯಿರಲಿಲ್ಲ ಸ್ವಾಮಿಗಳು ಆ ಮಗುವನ್ನು ಕರೆಸಿದರು ಅದು ಶವದಂತೆ ಇತ್ತು ಎಲ್ಲರನ್ನೂ ಹೊರಗೆ ಕಳುಹಿಸಿದರು ಸ್ವಾಮಿಗಳು ಅದೇನು ವೈದ್ಯ ಮಾಡಿದರೆ ಮಗು ಕಿಲಕಿಲನೆ ನಗುತ್ತಿತ್ತು ಇಂಥ ಘಟನೆಗಳು ಸಹಸ್ರಾರು ಒಮ್ಮೆ ಗದುಗಿನ ಪುಟ್ಟರಾಜ ಗವಾಯಿಗಳೊಂದಿಗೆ ಸ್ವಾಮಿಗಳು ಮದರಾಸಿಗೆ ಹೋಗಿದ್ದರು.

ನಟಸಾರ್ವಭೌಮ ರಾಜಕುಮಾರರಿಗೆ ಪುಟ್ಟರಾಜ ಗವಾಯಿಗಳಲ್ಲಿ ಅಪರಿಮಿತ ಭಕ್ತಿ, ರಾಜಕುಮಾರ್ ಲಿಂಗಪೂಜೆ ನೋಡಬೇಕೆಂದು ಅಪೇಕ್ಷೆಪಟ್ಟರು ಆದರೆ,ಲಿಂಗದೀಕ್ಷೆಯಿಲ್ಲದವರಿಗೆ ಅದು ಸಾಧ್ಯವಿಲ್ಲವೆಂದು ಸ್ವಾಮಿಗಳು ತಿಳಿಸಿದರು.  ‘ನೀವು ಲಿಂಗಧಾರಿಗಳಾಗಲು ಇಚ್ಚಿಸಿದರೆ, ಲಿಂಗದೀಕ್ಷೆ ಮಾಡಿ ಲಿಂಗ ನೀಡುವೆವು’ ಎಂದರು ರಾಜಕುಮಾರ್ ಒಪ್ಪಿದರು ರಾಜ್ ತಾಯಿ ಮೊದಲು, ಅನಂತರ ಉಳಿದವರು ಲಿಂಗದೀಕ್ಷೆಯನ್ನು ಹೊಂದಿದರು.

ಹಾವೇರಿಯ ಹಿರೇಮಠಕ್ಕೆ ಸಿದ್ಧರಾಮದೇವರು ಎಂಬುವರನ್ನು ಉತ್ತರಾಧಿಕಾರಿ ಮಾಡಲು ಸಿದ್ಧಗೊಳಿಸಿದ್ದರು ಆದರೆ, ಅವರು ಗದುಗಿನ ಸ್ವಾಮಿಗಳಾಗಿ ಮುಂದೆ ಪ್ರಸಿದ್ಧರಾದರು ಇದು ಶ್ರೀಗಳ ಖಿನ್ನತೆಗೆ ಕಾರಣವಾಯಿತು ಮತ್ತೊಂದು ಅಂಥದೇ ಮರಿ ತಯಾರು ಮಾಡಲು ಸಾಧ್ಯವಿಲ್ಲದ ವಯಸ್ಸು, ಆಗ ಸ್ವಾಮಿಗಳಿಗೆ ಎಪ್ಪತ್ತು ವರ್ಷ ಅವರು ಈ ಸನ್ನಿವೇಶದಿಂದ ದಿಗ್ಬ್ರಾಂತ ಪರಿಭ್ರಮಣಕ್ಕೊಳಗಾದರು ಅವರು ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಓಡಾಡತೊಡಗಿದರು ಅವರು ಸೇಡು ತೀರಿಸಿಕೊಳ್ಳುವಂತೆ ದೇಹದಂಡನೆಯನ್ನು ಮಾಡತೊಡಗಿದರು 1980, ಜನವರಿ 14 ಸಂಕ್ರಮಣದ ದಿನ, ಸಂಗೂರಿನ ಕುಮಾರೇಶ್ವರ ಜಾತ್ರೆ ಅವರು 24 ಗಂಟೆ ನೀರಲ್ಲಿ ನಿಂತು ಭಕ್ತರಿಗೆ ಆಶೀರ್ವಾದ ಮಾಡಿದರು.

ಜನವರಿ 16ರಂದು ವರ್ದಿ ಎಂಬ ಹಳ್ಳಿಗೆ ಹೋಗಿ ಪಾದಪೂಜೆ-ಭಿಕ್ಷೆ ಮುಗಿಸಿಕೊಂಡು ಕಾಡಶೆಟ್ಟಿಹಳ್ಳಿಗೆ ಬಂದಾಗ ಜ್ವರವೋ ಜ್ವರ, ಹಾವೇರಿಗೆ ಬಂದಾಗ ಪಾರ್ಶ್ವವಾಯು ಬಡಿದಿತ್ತು ಹುಬ್ಬಳ್ಳಿಯ ಬಿ ಆರ್ ಪಾಟೀಲ ವೈದ್ಯರ ದವಾಖಾನೆಗೆ ಸ್ವಾಮಿಗಳನ್ನು ಕರೆತಂದರು ಗದುಗಿನ ಶ್ರೀಗಳಿಗೆ ವಿಷಯ ತಿಳಿದು ಬಂದರು 1980ನೆಯ ಇಸವಿ ಮಾರ್ಚ್ 16 ಮಹಾಶಿವರಾತ್ರಿಯ ದಿನ ಸಿಂದಗಿಯ ಪಟ್ಟಾಧ್ಯಕ್ಷರು ಸದ್ದುಗದ್ದಲವಿಲ್ಲದೆ ಶಿವೈಕ್ಯರಾದರು.

ಸಿಂದಗಿಯ ಶಾಂತವೀರ ಶಿವಾಚಾರ್ಯರು ಸಹಸ್ರಾರು ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿದರು ಅವರಲ್ಲಿ ಕೆಲವರನ್ನು ಶಾಸ್ತ್ರಿಗಳನ್ನಾಗಿ, ಸ್ವಾಮಿ ಗಳನ್ನಾಗಿ ಮಾಡಿದರು ಹಳ್ಳಿಹಳ್ಳಿಗಳಲ್ಲಿ ಸಹಸ್ರಾರು ಜನರಿಗೆ ವೈದ್ಯರಾದರು ಪ್ರೀತಿ, ಕರುಣೆ, ಸೇವೆ, ಮಮತೆ, ತ್ಯಾಗ, ಆತ್ಮೀಯತೆ-ಇವುಗಳಿಗೆ ಅಮೃತಮಯ ಸ್ಪರ್ಶವನ್ನು ನೀಡಿದರು ಅವರು ಇಲ್ಲದಿದ್ದರೆ ಉತ್ತರಕರ್ನಾಟಕದ ಕೆಲವೊಂದು ಪ್ರದೇಶ ಧರ್ಮಾಚರಣೆಗಳಿಂದ ವಂಚಿತವಾಗುತ್ತಿತ್ತು ಅವರ ಬದುಕನ್ನು ನೆನೆಯುವುದೇ ಪೂಜೆ ನಾವು ಅವರನ್ನು ಅರಿಯುವುದೇ ಆರಾಧನೆ, ಅನುಸರಿಸುವುದೇ ಉಪಾಸನೆ!

ಹಾನಗಲ್ಲ ಶ್ರೀ ಸದಾಶಿವ ಮಹಾಸ್ವಾಮಿಗಳು

ಲೇಖಕರು: ಶ್ರೀ ಚನ್ನಬಸವ ಸೋಮನಾಥಶಾಸ್ತ್ರೀ ಹಿರೇಮಠ, ಇಟಗಿ

ಗ್ರಂಥ ಋಣ: ಸುಕುಮಾರ ದೀಪ್ತಿ | ಸಂಪಾದಕರು: ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ – ವಿಜಯಪುರ

ಕಾಲ ಚಕ್ರದ ಕೊನೆ ಮೊದಲಂತೆ ಕಲಿಪುರುಷನ ಹಗಲಿರುಳಿನಂತೆ ಭಾರತಾಂಬೆಯ ಭಾಗ್ಯೋದಯದಿಂದ ಆಗಾಗ ಯುಗ ಯುಗಾಂತರದಿಂದಲೂ ಯುಗಪುರುಷರೂ, ಮಹಾ ತಪಸ್ವಿಗಳೂ, ಮಹಾ ಮಹಾ ಮಂತ್ರ ದ್ರಷ್ಟಾರರೂ, ಯೋಗಿ- ಶಿವಯೋಗಿಗಳೂ ಭಾರತ ಮಾತೆಯ ಪುಣ್ಯಗರ್ಭದಿಂದ ಉದಿಸಿ ಲೋಕವ ನಾಕಕ್ಕೆ ಹಿರಿದೆನ್ನುವಂತೆ ತೊಳಗಿ ಬೆಳಗಿ ಕೀರ್ತಿ ಜ್ಯೋತಿಗಳಾಗಿದ್ದಾರೆ ಆಗುತ್ತಲಿದ್ದಾರೆ.

ಖಣಿಯಿಂದ ರತ್ನ, ಮೃಗದಿಂದ ಕಸ್ತೂರಿ, ಪುಷ್ಟದಿಂದ ಪರಿಮಳವು ಹೊರ ಹೊಮ್ಮುವಂತೆ ಮಹಾತ್ಮರ ಉದಯವು ಕಿರಿ ಹಳ್ಳಿಗಳಲ್ಲಿ ಮತ್ತು ಬಡತನದ ಮನೆತನದಲ್ಲಿ ಎಂಬುದು ಸರ್ವಶೃತ ಅಂತೆಯೇ ಯುಗ ಪುರುಷ ಕಾರಣಿಕ ಪರಮ ಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀ ನಿ ಪ್ರ ಕುಮಾರ ಶಿವಯೋಗಿ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಸರ್ವಮಾನ್ಯ ಸಂಚಾಲಕರೂ ಸೌಹಾರ್ದದಿಂದ ಪಾಲಕರೂ ಆಗಿರುವ ಹಾನಗಲ್ಲಿನ ವೀರ ವಿರಕ್ತಮಠಾಧೀಶರಾಗಿರುವ ಪರಮಪೂಜ್ಯ ಶ್ರೀ ನಿ ಪ್ರ ಸ್ವರೂಪಿ ಸದಾಶಿವ ಮಹಾಸ್ವಾಮಿಗಳವರ ಉದಯವು, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಎಂಬ ಹಳ್ಳಿಯಲ್ಲಿ ಆಯಿತು ಆ ಅರಳಿಕಟ್ಟಿ ಚಿಕ್ಕ ಗ್ರಾಮದಲ್ಲಿ ಸಧ್ಬಕ್ತಿ ಸದಾಚಾರ ಸಂಪನ್ನರೂ ಗುರು-ಲಿಂಗ-ಜಂಗಮ ಪ್ರಾಣಿಗಳೂ ಆದ ವೇ ಶ್ರೀ ಗಂಗಯ್ಯನವರು ಅವರ ಧರ್ಮ ಪತ್ನಿಯಾದ ಸಾಧ್ವೀಶೀಲವತೀ ರಾಚಮ್ಮನವರ ಪವಿತ್ರ ಗರ್ಭ ಸುಧಾಂಬುಧಿಯಲ್ಲಿ ಇಶ್ವಿ ಸನ್‌ ಸಾವಿರದ ಒಂಬೈನೂರಾ ಆರ (1906) ರಲ್ಲಿ ಬಾಂದಳದಲ್ಲಿ ಬಿದಿಗೆಯ ಚಂದ್ರನು ಉದಿಸಿ ಬಂದಂತೆ ಜನ್ಮ ತಾಳಿದರು ಇವರಿಗೆ ತಾಯ್ತುಂದೆಗಳು ಬಂಧು ಬಳಗದವರು ಮತ್ತು ಹಲವಾರು ಸುಮಂಗಲೆಯರು.

ಭವರೋಗ ಕಳಿಯಲ್ಕೆ ಶಿವಯೋಗ ಬೆಳಸಲ್ಕೆ ಶಿವನಿಳೆಗೆ ಬಂದೆ ಜೋ ಜೋ
ಕವಿದಿರ್ದ ಕತ್ತಲೆಯ ಶಿವತೇಜೋ ಬಲದಿಂದ ಬೆಳಗಿ ಕಳೆಯಲು ಬಂದೆ

ಎಂದು ಮುಂತಾಗಿ ಮುದ್ದಿಕ್ಕಿ ಜೋಗುಳ ಹಾಡಿ ಶ್ರೀ ಗುರುವಿನಿಂ ಲಘು ದೀಕ್ಷೆಗೈದ ಶಿಶುವಂ ಕಣ್ಮನದುಂಬಿ ನೋಡಿದ ಒಳಗಣ್ಣಿನ ಶ್ರೀ ಗುರುಗಳು ಹೊಂಬೆಳಗಿನ ಈ ಶಿಶುವಿಗೆ ಚಂದ್ರಶೇಖರ ಎಂದು ಬಳಗದಿಂದೊಡಗೂಡಿ ನಾಮಕರಣ ಮಾಡಿದರು ಕೆಲವೇ ದಿನಗಳಲ್ಲಿ ದೇವರ ಕೋಣೆಯಲ್ಲಿ ಶಿವ ತೇಜೋಮೂರ್ತಿ ಯಾದ ಚಂದ್ರಶೇಖರಯ್ಯನ ತಲೆಯ ಮೇಲೆ ಘಣಿರಾಜನು (ನಾಗರಾಜ) ಹೆಡೆ ಎತ್ತಿ ಲೀಲಾಜಾಲವಾಗಿ ಆನಂದದಿಂದ ಆಡತೊಡಗಿತ್ತು. ಇದನ್ನು ಕಂಡು ಮಾತಾಪಿತರು ಆಶ್ಚರ್ಯಚಕಿತರಾಗಿ ಭಯಬೀತರಾಗಿ, ಶಿವಸಂಕೇತದಂತ 1907ರಲ್ಲಿ ಬಿಕ್ಷಾಟನೆಗಾಗಿ ದಯಮಾಡಿಸಿದ ಶ್ರೀ ಶಿವಯೋಗಮಂದಿರದ ಸಂಸ್ಥಾಪಕರೂ, ದೀಪಕರೂ, ಪರಮ ಪರಂಜ್ಯೋತಿ ಸ್ವರೂಪರೂ ಆದ ಪೂಜ್ಯ ಕಾರಣಿಕ ಶ್ರೀ ನಿ ಪ್ರ ಕುಮಾರ ಶಿವಯೋಗಿಗಳಿದ್ದೆಡೆಗೆ ಧಾವಿಸಿ ಬಂದು ಸನ್ನಿಧಿಯಲ್ಲಿ ನಡೆದ ಘಟನೆಯನ್ನು ಆರಿಕೆ ಮಾಡಿಕೊಳ್ಳಲು, ಶ್ರೀಗಳವರು ಥಟ್ಟನೆ ಆತನಿಂದ ಲೋಕೋಪಕಾರವಾಗಬೇಕಾಗಿದೆ ಸಮಾಜ ಜೀವಿಯಾಗಬೇಕಾಗಿದೆ ಮತ್ತು ಆ ಕೂಸು ನಿಮ್ಮದಾಗದೆ ಶ್ರೀಗುರುವಿನದಾಗುವದು, ಶ್ರೀ ಗುರುವಾಗುವದು ಸಮಾಜಜೀವಿ, ಸಮಾಜೋದ್ಧಾರಕ ವಸ್ತುವಾಗುವುದು ಆದ್ದರಿಂದ ಈ ಘಟನೆ ನಡೆದಿದೆ ನೀವು ಅಂಜಬೇಡಿರಿ ಅಂಥ ಪುಣ್ಯ ಪುರುಷನನ್ನು ಪಡೆದ ಗರ್ಭವೇ ಮಹಾ ಗರ್ಭ, ನೀವೇ ಭಾಗ್ಯಶಾಲಿಗಳು, ಧನ್ಯರು, ಎಂದು ಆನಂದದಿಂದ ಆಶೀರ್ವದಿಸಿದರು ದಿವ್ಯಜ್ಞಾನಿಗಳಾದ ಶ್ರೀ ಕುಮಾರ ಶಿವಯೋಗಿಶ್ವರರ ಅಮರವಾಣಿ ಎಂದಾದರೂ ಸುಳ್ಳಾದೀತೆ ? ಅದೆಂದು ಸಾಧ್ಯ !

ಹತ್ತೊಂಬತ್ತು ನೂರಾ ಹದಿನೈದು (1915) ರಲ್ಲಿ ಅಲ್ಲಿಯ ಮಠದ ಶಿಷ್ಯ ಪ್ರಮುಖರು ಶ್ರೀ ಚಂದ್ರಶೇಖರನನ್ನು ತಮ್ಮ ಊರ ಹಿರಿಯ ಮಠದ ಅಧಿಕಾರಿಯನ್ನಾಗಿಸಲು, ಹಾನಗಲ್ಲ ಕುಮಾರ ಶಿವಯೋಗಿಗಳವರ ಪಾದಾರವಿಂದಗಳಲ್ಲಿ ಅರ್ಪಿಸಿದರು. ಆಗ ಮಹಾಶಿವಯೋಗಿಗಳು ಆತನ ಪೂರ್ವಾಶ್ರಮದ ಹೆಸರಿನ ಸ್ಥಾನದಲ್ಲಿ ಶ್ರೀ ರೇಣುಕಾರ್ಯನೆಂದು ನೂತನ ಪುಣ್ಯ ನಾಮವನ್ನು ದಯಪಾಲಿಸಿ ಅವರಿಗೆ ಅಧ್ಯಯನ, ಅನುಷ್ಠಾನಾದಿಗಳಿಂದ ಸರ್ವ ಸೌಹಾರ್ದ ಸೌಕರ್ಯಗಳಿಂದ ತರಬೇತು ಕೊಡಿಸಿದರು. ತತ್ಪರಿಣಾಮವಾಗಿ ಕನ್ನಡ-ಸಂಸ್ಕೃತ ಘನ ವಿದ್ವಾಂಸರೂ, ಶಿವಾನುಭವಿಗಳೂ ಶಿವಯೋಗಿ ಸಿದ್ಧರೂ ಆದ ಶ್ರೀ ವ್ಯಕ್ರನಾಳ ಪಟ್ಟಾಧ್ಯಕ್ಷರಿಂದ ವೀರ ಮಾಹೇಶ್ವರ ದೀಕ್ಷೆ ಪಡೆದರು ಗಣಿಯಿಂದ ಹೊರ ಹೊಮ್ಮಿ, ಶಿಲ್ಪಿಯಿಂದ ಸಂಸ್ಕರಿಸಿದ ರತ್ನದಂತೆ ಮೇಧಾವಿ (ಜಾಣ) ಯಾದ ಈ ವಟುವು ಕನ್ನಡ, ಸಂಸ್ಕೃತ, ಸಂಗೀತ, ಚಿತ್ರಕಲೆಗಳಲ್ಲಿ ಪರಿಣತೆಯಿಂದ ಪಳಗಿದನು.

ಈತನಲ್ಲಿರುವ ಸಹಜ ಶೀಲ ಸೌಜನ್ಯ ಶಾಂತಿ-ದಾಕ್ಷಿಣ್ಯಾದಿ ಗುಣಗಳನ್ನು ಕ್ರಮೇಣ ನಿರೀಕ್ಷಿಸಿ ಶ್ರೀ ಕುಮಾರ ಪರಂಜ್ಯೋತಿಃ ಪ್ರಭಾ ಹೊಂಗಿರಣ (ತಪೋನಿಧಿಗಳ ಪ್ರೇಮಾಂತಃಕರಣ)ಗಳು ಶ್ರೀಗಳ ಪ್ರಜ್ಞಾಂತಃ ಪಟಲದ ಮೇಲೆ ಸಂಪೂರ್ಣ ಬಿದ್ದಂತೆ ಪ್ರಕಾಂಡ ಪಂಡಿತರಿಂದ, ಸೂಜ್ಞರಿಂದ ಪದವಾಕ್ಯ- -ಪ್ರಮಾಣಜ್ಞರೂ ಶಿವಾನುಭವಿಗಳೂ ಆದ ಇವರು ಶ್ರೀ ಶಿವಯೋಗಿಯ ಕರುಣೆಯ ಪಡೆದು ಚಿದ್ಗುರುವಿನಿಂದ ಅನುಗ್ರಹಿತರಾಗಿ ಶ್ರೀ ರೇಣುಕಾ ದೇಶಿಕ ರಾದರಲ್ಲದೆ ಅಧ್ಯಯನವನ್ನು ಪುಷ್ಪದೊಳಗಿನ ಮಧುವಿಗೆರಗುವ ತುಂಬಿಯಂತೆ ಸದ್ವಿದ್ಯಾ ವ್ಯಸನಿ-ವ್ಯಾಸಂಗವನ್ನು ಮುಂದುವರಿಸುವದರೊಂದಿಗೆ ಶ್ರೀ ಶಿವಯೋಗಮಂದಿರದ ಕಾರ್ಯಭಾರವು ಚರಿತ್ರ ನಾಯಕನ ದಾಯಿತು ಯಾವಾಗಲೂ ಬೆಳೆಯುವ ಸಿರಿಯ ಮೊಳಕೆಯಲ್ಲಿ ನೋಡು ಎಂಬಂತೆ ಮಹಾತ್ಮರ ಜೀವನದ ಉಜ್ವಲತೆಯು ಜ್ಯೋತಿ ಸ್ವರೂಪವಾಗಿ ಪ್ರಜ್ವಲಿಸುತ್ತಿತ್ತು.

ಹಾನಗಲ್ಲ ಮಠದ ಪರಮ ಗುರು ಶ್ರೀ ಕುಮಾರ ಪರಂಜ್ಯೋತಿಯ ಬೆಳಗು, ಮಹಾ ಬೆಳಗಿನಲ್ಲಿ ಬೆರೆದ ಬಳಿಕ ಉತ್ತರಾಧಿಕಾರ ಸ್ಥಾನಾಪನ್ನರಾದ ಪರಮಪೂಜ್ಯ ಶ್ರೀ ನಿ ಪ್ರ ಮಹೇಶ್ವರ ಮಹಾಸ್ವಾಮಿಗಳು ತಮ್ಮ ಅಂಗಕರಣಂಗಳನ್ನು ಲಿಂಗಕಿರಣಂಗಳನ್ನಾಗಿಸಿದ ಬಳಿಕ (ಲಿಂಗರೂಪಿಗಳಾದ ಬಳಿಕ) ಹಲವಾರು ಗಣ್ಯ ಪೂಜ್ಯರು ವಿಚಾರಿಸಿ ಮಠಗಳು ಮಹದರುವಿನ ಚಿದ್ಬೆಳಕನ್ನೀಯುವ ಶಿವಾದ್ವೈತದ ಹೊಂಬೆಳಗಿನ ಹೊನಲನ್ನು ಹೊರಚಿಮ್ಮುವ ದೀಪಸ್ತಂಭಗಳು ನಾಸ್ತಿಕರನ್ನು ಆಸ್ತಿಕರನ್ನಾಗಿ, ಮಾನವತೆಯಿಂದ ಮನಸ್ವಿಗಳನ್ನಾಗಿಸುವ, ಮಠದ ಪೀಠಗಳಿಗೆ ಯೋಗ್ಯತಾ ಸಂಪನ್ನರನ್ನೇ ಹುಡುಕುತ್ತಿರುವಾಗ ಶಿವಯೋಗ ಧಾಮದ ಶ್ರೀ ಶಿವಯೋಗ ಮಂದಿರದಲ್ಲಿ ಶಿವಯೋಗ ಸದಾಚಾರ ಸತತಾಭ್ಯಾಸದಲ್ಲಿ ಪಳಗಿದ ಕುಶಲ ಮತಿ-ಮೇಧಾವಿಗಳಾದ ಶ್ರೀ ರೇಣುಕ ದೇಶಿಕರನ್ನು ಆ ಮಠದ (ಹಾನಗಲ್ಲ ವಿರಕ್ತಮಠ) ಉತ್ತರಾಧಿಕಾರಿಗಳನ್ನಾಗಿ ಮಾಡಲು ಹುಬ್ಬಳ್ಳಿಯ ಮೂರು ಸಾವಿರಮಠದ ಅಂದಿನ ಜಗದ್ಗುರುಗಳಾದ ಲಿಂ ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ನವಲಗುಂದದ ಲಿಂ ಶ್ರೀ ನಿ ಪ್ರ ಬಸವಲಿಂಗ ಮಹಾಸ್ವಾಮಿಗಳು, ಗುತ್ತಲದ ಲಿಂ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಶ್ರೀಮಾನ್‌ ದೇವಿಹೊಸೂರ ಶೆಟ್ಟರು ಇನ್ನುಳಿದ ಪ್ರಮುಖ ಸದ್ಭಕ್ತರ ಬಯಕೆಯಂತೆ ಶ್ರೀ ರೇಣುಕ ದೇಶಿಕರನ್ನು ಹಾನಗಲ್ಲಿನ ವಿರಕ್ತ ಪೀಠಾಧಿಕಾರಿಗಳನ್ನಾಗಿ ಮಾಡಿದರು.

ಜಡೆಮಠದ ಲಿಂ ಶ್ರೀ ನಿ ಪ್ರ ಸಿದ್ದಬಸವ ಮಹಾಸ್ವಾಮಿಗಳವರಿಂದ ಅಧಿಕಾರ ಪಡೆದು ಪಂ ಸೋಮನಾಥ ಶಾಸ್ತ್ರಿಗಳು ಇಟಗಿ ಗೊಗ್ಗೀಹಳ್ಳಿ ಸಂಸ್ಥಾನಮಠ ಅವರ ಪೌರೋಹಿತ್ಯದಲ್ಲಿ ಶೂನ್ಯ ಸಿಂಹಾನಾಧೀಶರಾದರು ಕ್ರೀ ಶ 1936ರಲ್ಲಿ ಆ ಶುಭ ಮಂಗಲ ಸಮಯಕ್ಕೆ ಪರಮ ಗುರುವಿನ ಮೊದಲ ಪುಣ್ಯನಾಮವಾದ ಶ್ರೀ ನಿ ಪ್ರ ಸದಾಶಿವ ಸ್ವಾಮಿಗಳೆಂದು ಅಭಿನವ ಅಭಿದಾನವಾಯಿತು.

ಪರಮಗುರು ಪರಮಾರಾಧ್ಯರಾದ ಶ್ರೀ ನಿ ಪ್ರ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗ ಮಂದಿರದ ಶ್ರೇಯಸ್ಸಿಗಾಗಿ ತಮ್ಮ ಮಠವನ್ನು ಬದಿಗಿರಿಸಿ, ಲೋಕವೇ ನನ್ನ ಮಠ, ಮಾನವ ಕುಲಕೋಟಿಯ ಸರ್ವಾಂಗೀಣ ಶ್ರೇಯಸ್ಸೇ ನನ್ನ ಶ್ರೇಯಸ್ಸು, ಎಂದು ಭಾವಿಸಿ ಅಧ್ಯಾತ್ಮ ತತ್ವ್ತಾಮೃತ ಪಿಪಾಸುಗಳ ನೆಲೆವೀಡಾದ ಋಷಿಪುಂಗವರ, ಮಹಾ ಶಿವಯೋಗಿಗಳ ತಪೋ ಧನವನ್ನು ಮುಡುಪಿಟ್ಟ ಭಾರತ ಹೃದಯ ಪೀಠದಂತಿರುವ ಶ್ರೀ ಶಿವಯೋಗಮಂದಿರವೆ ಮಹಾ ಮಠವೆಂದು ಭಾವಿಸಿ ಶಿವಯೋಗ ನಿದ್ರೆಯಲ್ಲಿ ಕಾಲಕಳೆಯುತ್ತ ಪ್ರತಿಯೊಬ್ಬ ವ್ಯಕ್ತಿಯೂ ಶಿವ ಭಾವನೆಯಿಂದ, ವ್ಯಕ್ತಿ-ವ್ಯಕ್ತಿಯೂ ಶಿವಯೋಗಮಂದಿರವಾಗ ಬೇಕೆಂದು ಶ್ರೀ ಗುರು ಕುಮಾರೇಶನ ಹಿರಿಯಾಸೆಯಂತೆ ಅವರ ಆಶಯವೆಂಬ ದಾರಿ ದೀಪದ ಹೊಂಗಿರಣದ ಮುಂಬೆಳಗಿನಲ್ಲಿ ಸಹಜವಾಗಿ ಮುನ್ನಡೆಯುತ್ತ ಶಿವ- ಜೀವನದ ಹೂದೋಟದಲ್ಲಿ ಹೂಗಳಂತೆ ಅರಳುತ್ತಿರುವ ವಟು ಶಿವಯೋಗ ಸಾಧಕರಿಗೆ ಸಮಯೋಚಿತವಾಗಿ ಧರ್ಮದ ಸಮನ್ವಯದ ಸಾಹಿತ್ಯದ ತಿಳುವಳಿಕೆಯೊಂದಿಗೆ ಪಂಡಿತರಿಂದ ಕನ್ನಡ, ಸಾಹಿತ್ಯ ಸಂಗೀತ-ನ್ಯಾಯ-ವ್ಯಾಕರಣ ವಚನ ವಾಜ್ಮಯ ರೂಪಷಡ್ರಸಾನಿತ್ವ ಮೃಷ್ಟಾನ್ನವನ್ನು ಉಣಿಸಿ ತಣಿಸುತ್ತ, ತಮ್ಮ ಜೀವನವನ್ನೇ ಅವರ ಆತ್ಮೋನ್ನತಿಗೆ ಮೀಸಲಾಗಿರಿಸಿ ಸತ್ಕಾರ್ಯ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸಮಾಜದ ಮೂಲ ಸ್ತಂಭಗಳಂತಿರುವ ಗುರು-ವಿರಕ್ತ ಮೂರ್ತಿಗಳನ್ನು ಭೇದ ಭಾವವಿಲ್ಲದೆ ಮಮತೆಯಿಂದ ತರಬೇತಿಗೊಳಿಸಿ, ಶಿವಯೋಗಿ, ವಟು, ಸಾಧಕರು ಆದರ್ಶ ಸಮಾಜ ಸುಧಾರಕರು, ಧರ್ಮ ಪ್ರಚಾರ ದುರಂಧರರು, ಶಿವಯೋಗದಲ್ಲಿ ಪಳಗಿದವರು (ಶಿವಯೋಗಿ ಸಿದ್ದರು) ಆಗಬೇಕೆಂಬ ಹಿರಿಯಾಸೆ ಶ್ರೀಗಳವರದು ಆ ದಿಶೆಯಲ್ಲಿ (ವಟುಗಳ ಪುರೋಭಿವೃದ್ಧಿಗೆ) ತನು-ಮನ-ಧನವನ್ನೇ ಧಾರೆಯೆರೆದು ವಟು ಪಟುಗಳ ಮೂಲಕ ಶ್ರೀ ವೀರಶೈವ ಧರ್ಮವು ಅಷ್ಟೇ ಅಲ್ಲದೆ ಸರ್ವಧರ್ಮ ಸರ್ವಾಂಗ ಸುಂದರವಾಗಲಿ, ಮಾನವ ದೇವನಾಗಲಿ ಎಂಬ ಮಹದಾಶೆಯಿಂದ ಸತತವೂ ದುಡಿಯುತ್ತಿದ್ದಾರೆ ಸಾಧಕರಿಗಾಗಿ ಆಗಾಗ ಪಾಕ್ಷಿಕ, ಮಾಸಿಕ, ವಾಕ್‌ ಸ್ಪಧೆರ್ಯನ್ನೇರ್ಪಡಿಸುತ್ತಿದ್ದಾರೆ ಇದರಿಂದ ಆತ್ಮೋನ್ನತಿಗೆ ಅಧ್ಯಾತ್ಮ ತಾಯಿಯಂತೆ ವಟು ವಾತ್ಸಲ್ಯವು ಸಹಜವಾಗಿಯೇ ಎಷ್ಟಿದೆ ಎಂಬುದು ರವಿ ಪ್ರಕಾಶದಂತೆ ಸ್ಪಷ್ಟವಾಗುವುದು.

ಪರೋಪಕಾರವೇ ಮಹಾತ್ಮರ ಜನ್ಮ ಸಿದ್ಧ ಗುಣವಾಗಿರುವದು ಅದು ನಿಜ ಅಂತೆಯೇ ಜನಸೇವೆಯೇ ಶಿವನ ಸೇವೆ, ದೇಶ ಸೇವೆಯೇ ಈಶ ಸೇವೆ, ಎಂಬುದನ್ನು ಮನಗಂಡು ತಮ್ಮ ಸರ್ವಸ್ವವನ್ನೆ ಪರರ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದಾರೆ  ಶ್ರೀಗಳು ಸಮಾಜದಲ್ಲಿ ನಡೆಯುತಕ್ಕ ಅನ್ಯಾಯ, ಅನಾಚಾರ, ಅತ್ಯಾಚಾರಗಳನ್ನು ಉಚ್ಛೃಂಖಲ ವಿಚಾರಗಳನ್ನು ಕಂಡು ಕನಿಕರಬಟ್ಟು ಸಮಾಜವನ್ನು ಚೇತರಿಸಲು ಎಚ್ಚರಿಸಲು ತಮ್ಮ ಅಮೋಘ ಜ್ಞಾನಜ್ಯೋತಿಯನ್ನು ಹೊರ ಹೊಮ್ಮಿಸಿ ಅವರಲ್ಲಿರುವ ಮೂಢ ನಂಬುಗೆಯ ಹೋಗಲಾಡಿಸಿ ಓಂಕಾರಸ್ವರೂಪವಾದ ಶಿವಾದ್ವೈತ, ಶಕ್ತಿವಿಶಿಷ್ಟಾದ್ವೈತ ರೂಪವಾದ ಷಡಕ್ಷರಿ ಮಹಾ ಮಂತ್ರರ್ಥರೂಪ ವಾದ ಇಷ್ಟಲಿಂಗ ವನ್ನು ಪೂಜಿಸಲು ಮೃದು ಮಧುರ ಸದುಕ್ತಿಗಳಿಂದ ಸಲಹೆ- ಸೂಚನೆಗಳನ್ನು ನೀಡಿ ಜನರನ್ನು ಎಚ್ಚರಿಸುತ್ತಾರೆ.

ಬಾಹ್ಯಾಚಾರಿ ಶ್ರೇಷ್ಠ ಲಿಂಗಾರ್ಚನಾರೂಪ ಕ್ರಿಯೆಗಳು ಅತ್ಯವಶ್ಯವು ನಿಜವಾದ ಶಕ್ತಿಯ ಕೇಂದ್ರ ಸೂಕ್ಷ್ಮ-ಕಾರಣಗತ ಪ್ರಾಣ-ಭಾವಗಳೇ ಅಲ್ಲ ಸ್ಥೂಲಾಂಗಗತ ಇಷ್ಟಲಿಂಗ ವೂ ಅಹುದು ಮನಸ್ಸು ಮೂರ್ತವಸ್ತು ನಿರಾಕಾರ ವಸ್ತುವನ್ನು ಗ್ರಹಿಸದು ಸ್ಥೂಲೇಂದ್ರಿಯಗಳಿಗೆ ಗೋಚರ ಗ್ರಾಹ್ಯವಾಗಬೇಕಾದರೆ ಇಷ್ಟಲಿಂಗೋಪಾಸನೆ ಬೇಕೇ ಬೇಕು ಹಾಲು ಹೆಪ್ಪು ಗಟ್ಟಿ ಸ್ಥೂಲವಾದಾಗ ಅದರ ಶಕ್ತಿ ಸಣ್ಣದೇ ? ಸಂಸ್ಕಾರದಿಂದ ಬೆಣ್ಣೆ ಸಂಸ್ಕಾರದಿಂದ ತುಪ್ಪ ಅದರ ಮಾಧುರ್ಯ ಸಾಲದೆ ಸಣ್ಣದೇ ? ಬೀಜ ಮೊಳೆತು ಬೆಳೆದು ಹಣ್ಣಾಗಿ ನಿಂತಾಗ ಕೇವಲ ಬೀಜಕ್ಕಿಂತ ಹಣ್ಣು ಕಡಿಮೆಯೇನು ? ಬೀಜ ಸೂಕ್ಷ್ಮವಿರಬಹುದು ಹಣ್ಣು ಸ್ಥೂಲವಿರಬಹುದು ಆದರೆ ಹಣ್ಣಿನಲ್ಲಿ ಆ ಬೀಜವು ಇದ್ದು ಮಿಗಿಲಾಗಿ ಮಧುರ ರಸವೂ ಇರುತ್ತದೆ ಈ ರಸ ಬೀಜದಲ್ಲಿ ಇದ್ದರೂ ಅಭಿವ್ಯಕ್ತವಾಗಿರದು ಸವಿಯಲುಬಾರದು ಈ ದೃಷ್ಟಿಯಿಂದ ಸ್ಥೂಲಕ್ಕೆ ಇರುವ ಕೊರತೆಯೇನು? ಜೀವನ ಉಪಯುಕ್ತತೆಯ ಹಂತದಲ್ಲಿ ಬಾಹ್ಯೇಂದ್ರಿಯ ಹಾಗೂ ಮನೋಗ್ರಾಹ್ಯ ಇಷ್ಟಲಿಂಗ ಕ್ಕೆ ಶ್ರೇಷ್ಠತೆಯಿಲ್ಲದಿಲ್ಲ ಅತ್ಯಾಧಿಕ್ಯತೆಯಿದೆ ಸೂಕ್ಷ-ಸ್ಥೂಲಗಳೆರಡರ ಸಮಷ್ಟಿ ಸಹಕಾರವೇ ಜೀವನ, ಜೀವನ ನಾಣ್ಯದ ಎರಡು ಮಗ್ಗಲುಗಳು ಈ ಮೂಲಕ ಶಕ್ತಿ ರಹಸ್ಯವನ್ನರಿಯಬೇಕು ಅರಿತು ಅನುಭವಿಸಬೇಕು ಅನುಭವಿಸಿ ಆನಂದಿಸಬೇಕು ರೂಹಿಲ್ಲದ (ಕಣ್ಮನೋ ಗೋಚರ) ನೆನಹು ಅರಣ್ಯರೋಧನ ಕನ್ನಡಿಯಿಲ್ಲದೆ ತನ್ನ ಮುಖವ ಕಾಣಬಹುದೆ ? ಭೂಮಿಯಿಲ್ಲದೆ ಬಂಡಿ ನಡೆಯಬಹುದೆ? ಆಕಾಶದಲ್ಲಿ ಹಾರುವ ಪಟಕ್ಕಾದರೂ ಸೂತ್ರವಿರಬೇಕು ದೇಹವಿಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಉಂಟೆ ? ಆತ್ಮನಿಗೆ ಆಶ್ರಯ ಉಂಟೆ ಬಯಲು ಬಮ್ಮವಾದಿಗಳಿಗೆ ನೆಲೆ ಕಲೆ ಉಂಟೆ? ಮುಮುಕ್ಷುಗಳಿಗೆ ಇಷ್ಟಲಿಂಗದ ಅವಶ್ಯಕತೆಯಿದೆ ಗರ್ಭದೊಳಿರುವ ಶಿಶುವಿನ ಕುರುಹು (ಗಂಡೋ? ಹೆಣ್ಣೋ? ಗುಣೀಯೋ ದುರ್ಗುಣಿಯೋ ಎಂದು) ಕಂಡು ಆನಂದಿಸಲು ಅಸಾಧ್ಯ ಅಸಮಂಜಸ, ಅದೇ ಶಿಶು ಹೊರ ಬಂದ ಮೇಲೆ ಶಿಶುವನ್ನು ನೋಡಿ ಲಾಲಿಸಿ ಮುದ್ದಾಡುವ ತಾಯಿಗಾದ ಆನಂದಕ್ಕೆ ಮೇರೆಯು ಉಂಟೆ ? ಮೂರು ಅಂಗಗಳಿಗೆ ಮೂರು ಲಿಂಗ, ಸ್ಥೂಲ ಸೂಕ್ಷ್ಮಕಾರಣ ಶರೀರಗಳಿಗೆ ಕ್ರಮವಾಗಿ ಇಷ್ಟ, ಪ್ರಾಣ, ಬಾವವೆಂದು ಮೂರು ಲಿಂಗ ಸಂಬಂಧವನ್ನು ಶ್ರೀ ಗುರು ತನ್ನ ಜ್ಞಾನ ಕ್ರಿಯಾರೂಪ ಯೋಗಿಕ ಶಕ್ತಿಯಿಂದ ಕೇಂದ್ರೀಕರಿಸಿ ತನ್ನ ಶಿಷ್ಯನಾದ ಉಪಾಸಕನ ಸಹಸ್ರಾರದಲ್ಲಿರುವ ಚಿತ್ಕಲೆಯನೆ ಕರ ದಿಷ್ಟಲಿಂಗವ ನ್ನಾಗಿ ಕರುಣಿಸಿ ಸ್ಥೂಲ – ಸೂಕ್ಷ್ಮ – ಕಾರಣ ಮೂರು ಹಂತದ ಕಾಜಿನ ಪೆಟ್ಟಿಗೆ ಇದ್ದು ಅದರ ಮೇಲೆ ದೀಪವನ್ನಿಟ್ಟಂತೆ ೧) ದೀಪ ೨) ದೀಪದ ಕಿರಣ ೩) ದೀಪ ಪ್ರಕಾಶವಿದ್ದಂತೆ ಕ್ರಮವಾಗಿ, ೧) ಇಷ್ಟ ೨) ಪ್ರಾಣ ೩) ಭಾವ ಲಿಂಗ ರೂಪಗಳು ಕಂಗೊಳಿಸುತ್ತಿದ್ದು ಆ ದೀಪವನ್ನೇ ತೆಗೆದು ಬಿಟ್ಟರೆ ದೀಪದ ಕಿರಣ ಪ್ರಕಾಶ ಎಲ್ಲವೂ ಇಲ್ಲವಾದಂತೆ ಇಷ್ಟಲಿಂಗವು ಉಪಾಸಕನಿಗೆ ಅತ್ಯವಶ್ಯ ಮನಸ್ಸು ಬಲು ಚಂಚಲ ಇದಕ್ಕೆ ಏನಾದರೂ ಉದ್ಯೋಗಬೇಕು ಯೋಗಃ ಚಿತ್ತವೃತ್ತಿ ನಿರೋಧಃ ಎಂದು ಅದರ ಹರಿದಾಡುವಿಕೆಯನ್ನು ಕೇವಲ ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ ಮಹಾಪೂರಕ್ಕೆ ಆಣೆಕಟ್ಟು ಕಟ್ಟಿ ನಿಲ್ಲಿಸಿದರೆ ಆಗದು ಆ ಪ್ರವಾಹಕ್ಕೆ ಸದುಪಯೋಗ ಭೂ ಸುಧಾರಣೆ ಬೆಳೆಸುವ ಮುಂತಾದವುಗಳಿಗೆ ಉಪಯೋಗಿಸುವಂತೆ ಗುರು-ಚರ-ಧ್ಯಾನ-ಪೂಜಾ ಸಕಲೇಷ್ಟವಾದ ವಾದ ಇಷ್ಟಲಿಂಗ ದ ನಿಷ್ಠೆಯ ಧ್ಯಾನ, ಜಪ, ತಪಃ ಪೂಜಾಧಿಗಳಲ್ಲಿ ಮನ ತೊಡಗಿದರೆ ಮನಸ್ಸಿನ ಸದುದ್ಯೋಗ ಸಾಥರ್ಕವಾಗುವದು.

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ, ಎನ್ನಗುಳ್ಳದೊಂದು ಮನ, ಆ ಮನ ನಿಮ್ಮೊಳ ಒಡವೆರೆದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ? ಎಂಬ ಮಹಾ ವೈರಾಗ್ಯ ಶಿರೋಮಣಿ, ಮಹಾ ಶಿವಶರಣೆ ಅಕ್ಕಮಹಾದೇವಿಯ ಅನುಭವದ ಅಮರ ವಾಣಿಯಂತೆ ಮನಸ್ಸನ್ನು ಮಹಾದೇವನಲ್ಲಿ ತೊಡಗಿಸಿದರೆ ಭವದ ಭೀತಿ ಇನ್ನಿಲ್ಲ, ನಿರ್ಭವ.

ಯಾವ ಪ್ರಕಾರವಾಗಿ ಬೀಜವು ಮೊಳೆತು ಪಲ್ಲವಿಸಿ ವೃಕ್ಷವಾಗುವದಕ್ಕೆ ಸ್ಥಲ, ಜಲ, ಕಾಲಾವಧಿಗಳು ಹೇಗೆ ಅವಶ್ಯವೋ ಹಾಗೆ ಶಿವನನ್ನು ಕಾಣಲು, ನೆಮ್ಮದಿಯಿಂದ ಸಾಕ್ಷತ್ಕಾರವಾಗಲು ಪ್ರತಿಯೊಬ್ಬ ಮಾನವನು ಅದರಲ್ಲೂ ವೀರಶೈವನು ಶಿವಾದ್ವೈತ ರೂಪವಾದ ಲಿಂಗಾಂಗ ಸಾಮರಸ್ಯ ರೂಪವಾದ ಶಿವದೀಕ್ಷೆ ವೀರ ಮಾಹೇಶ್ವರ ದೀಕ್ಷೆ ಯನ್ನು ಹೊಂದಲೇಬೇಕೆಂದೂ ಇದರಿಂದ ಮಾನವ ಕೋಟಿಗೆ ಜಯವಾಗುತ್ತದೆ ನಿಜವಾದ ಸುಖ ಶಾಂತಿಯು ನೆಲೆಸುತ್ತದೆ ಮತ್ತು ಭಾರತ ಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿ ಬಂದದ್ದು ಸಾರ್ಥಕವಾಗುತ್ತದೆ ಎಂಬುದನ್ನು ನಿಃಸಂದೇಹವಾಗಿ ಹೇಳಬಹುದು ಎಂದು ಬಂದಂಥ ಸಕಲ ಭಕ್ತರಿಗೆ ಬೋಧೆ ಮಾಡುತ್ತಹೋದ ಹೋದಲ್ಲಿ, ಗ್ರಾಮ ಗ್ರಾಮಗಳಲ್ಲಿ, ಸೀಮೆ ಸೀಮೆಗಳಲ್ಲಿ ಸಂಚರಿಸಿ ಉಕ್ಕಿದ ಆನಂದದಿ ಭಕ್ತರ ಮೇಲಣ ವಾತ್ಸಲ್ಯದಿಂದ ತಾಯಿ ತನ್ನ ಭಾಗ್ಯದ ಮಗುವಿಗೆ ಮಮತೆಯಿಂದ, ನೇಹದಿಂದ ಹೇಳಿ ಸಂತೈಸುವಂತೆ ಮನಂಬುಗುವಂತೆ ಇಂಥ ಗಂಭೀರ ಅರ್ಥಗರ್ಭೀತ ಮಹತ್ವಪೂರ್ಣ ತತ್ತ್ವರೂಪ ಉಕ್ಕಿನ ಕಡಲೆಗಳನ್ನು ತಮ್ಮ ಅಮೋಘ ಅನುಭಾವಾಮೃತ ರಸಾಯನದಿಂದ ಪಂಚಪಕ್ವಾನ್ನವನ್ನೇ ಮಾಡಿ ಉಣಿಸಿ ತಣಿಸಿಂದತೆ ಬೋಧಿಸುತ್ತಾರೆ ತತ್‌ ಪರಿಣಾಮವಾಗಿ ಸಂಸಾರದಂದುಗದಲ್ಲಿ ಬೆಂದು ಬೆಂಡಾಗಿ ಘಾಸಿಗೊಂಡು ದಿಕ್ಕು ತೋಚದೆ ಧಾವಿಸಿ ಬಂದ ಸಾವಿರಾರು ಜನ ನಿಜಸುಖಾಮೃತ ಪಿಪಾಸುಗಳಿಗೆ ಸಂದರ್ಶನ ಸದ್ಭೋಧೆಯಿತ್ತು ಸಂತೈಸುತ್ತಿರುವರು ಇದು ಶ್ರೀಗಳವರ ಸತ್ಯ-ಶುಧ್ಧ ಕಾಯಕವಾಗಿ ಬಿಟ್ಟಿದೆ ಇದನ್ನು ಅನುಲಕ್ಷಿಸಿ ಶ್ರೀಗಳು ವ್ಯಕ್ತಿ-ವ್ಯಕ್ತಿಗಳನ್ನು ಶೋಧಿಸಿ ತಮ್ಮ ಅಂತಃಕರಣ ತಪಃಕಿರಣಗಳಿಂದ ಪರಿಪೂತ ಗೊಳಿಸಿ, ಕರುಣಾಮೃತದಿಂದ ಪರಿಮಾರ್ಜಿಸಿ ಅಮರ ಶಕ್ತಿಗಳನ್ನಾಗಿಸಿ, ವ್ಯಕ್ತಿ ವ್ಯಕ್ತಿಯ ಶಕ್ತಿಯೆ ಸಮಷ್ಟಿ ಸಮಾಜ, ಉನ್ನತ, ಮಹಾ ಮೇರು, ಸರ್ವಾಂಗ ಸುಂದರ ಸಮಾಜ ನಿರ್ಮಾಣವೇ ಶ್ರೀಗಳ ಉದ್ದೇಶವಾಗಿದೆ ಸಮಾಜದ ಹಿತ ಸಾಧನೆಯನ್ನೇ ಕುರಿತು ನಿತ್ಯವೂ ಅವರು ಚಿಂತಿಸುತ್ತಿದ್ದಾರೆ.

ಶ್ರೀ ಮದ್ವೀರಶೈವ ಶಿವಯೋಗಮಂದಿರದಲ್ಲಿ ಪ್ರಮಥರ ಹಸು ಮಕ್ಕಳಂತಿರುವ ಸಾಧಕರಿಗೆ ಶ್ರೀಗಳು ಅವರ ಪೋಷಣೆ ಪಾಲನೆಗಾಗಿ ಹಳ್ಳಿ ಹಳ್ಳಿಗೆ ಭಿಕ್ಷಾಟನೆಗೆಂದು ದಯ ಮಾಡಿಸಿದರೆ ಅಲ್ಲಲ್ಲಿ ಸದ್ಭಕ್ತರು ಆನಂದದ ಭರದಲ್ಲಿ ಧನ-ಧಾನ್ಯಗಳನ್ನು ಕೊಡುವ ಭಕ್ತರು ಹೆಚ್ಚು ಸಲ್ಲಿಸ ಹೋದರೆ, ಇಷ್ಟೇಕೆ ಅಪ್ಪಾ, ಇದಿಷ್ಟೇ ಸಾಕು, ಇದು ನಿನಗೆ ಆಶೀರ್ವಾದವಿರಲಿ, ಎಂದು ಕೆಲವೇ ಭಾಗವನ್ನು ಸ್ವೀಕರಿಸಿ ಹರಸುತ್ತಾರೆ ಅದು ಸೂಕ್ತ ಭ್ರಮರವು ಪುಷ್ಪದೊಳಗಿನ ಮಧುವನ್ನು ಈಂಟುವಾಗ ಪಾನ ಮಾಡಲು ಹೂಗಳ ಮೇಲೆ ಕುಳಿತರೂ, ಹೂವಿಗೆ ಭಾರವಾಗದಂತೆ ವ್ಯವಹರಿಸುವಂತೆ ಶ್ರೀಗಳು ಯಾರಿಗೂ ಭಾರವಾಗದಂತೆ ಭಿಕ್ಷಾಟನೆ ಲೀಲೆಗೈಯುತ್ತಾರೆ ಅಂತೆಯೇ ಅವರ ಭಿಕ್ಷೆಯು ಭಿ-ಕ್ಷಾ-ಭಯಂ ಸಂಸಾರ ತಾಪತ್ರಯೋದ್ಭೂತ ಭಯಂ, ಕ್ಷೀಯತೇ ಅನಯಾ – ಇತಿ –ಭಿಕ್ಷಾ ಎಂದೇ ಜನವು ಭಾವಿಸಿ ಕೃತಾರ್ಥರಾಗುತ್ತಲಿದ್ದಾರೆ ಮಾನವದ ಕುಲ ಮೂಲ ಸಂಬಂಧದಂತಿರುವ ವಿದ್ಯಾರ್ಥಿಗಳ, ಅಲ್ಲದೆ ಅವಿಮುಕ್ತ ಕ್ಷೇತ್ರವಾಗಿರುವ ಶ್ರೀ ಶಿವಯೋಗಮಂದಿರದಲ್ಲಿ ಆ ಪರಂಜ್ಯೋತಿಯ ಕಿರಣಗಳಂತಿರುವ ಭಾವೀ ವೀರಶೈವ ಧರ್ಮ ಗುರುಗಳಾದ ಶ್ರೀ ಶಿವಯೋಗ ಸಾಧಕರ ಪೋಷಣೆಗಾಗಿ ಪಾಮರರನ್ನು ಪಾವನರನ್ನಾಗಿಸುವ ಭಿಕ್ಷಾಟನ ಲೀಲೆಯನ್ನು ಸಹಜ ಸೌಹಾರ್ದ ಸೌಜನ್ಯ ಭಾವದಿಂದಲೇ ಶ್ರೀಗಳು ನಡೆಸುತ್ತಿದ್ದಾರೆ ಕೆಲ ಸಮಯ ಮಳೆ-ಬೆಳೆಗಳ ಕುಗ್ಗು-ನುಗ್ಗುಗಳನ್ನರಿತು ಭಿಕ್ಷೆಗೆ ಹೋಗುವುದನ್ನು ನಿಲ್ಲಿಸಿದರೆ ಆ ಗ್ರಾಮದ ಭಕ್ತ ಪ್ರಮುಖರು ಬಂದು ಆಗ್ರಹದಿಂದ ಕರೆದದ್ದೂ, ಕರೆಯುವದೂ ಉಂಟು.

ಶಿವಯೋಗಮಂದಿರದಲ್ಲಿ ಪರಮಪೂಜ್ಯ ಶ್ರೀ ನಿ ಪ್ರ ಸದಾಶಿವ ಶಿವಯೋಗಿಗಳು –

ಸರ್ವಲೋಕೋಪಕಾರಾಯ ಯೋದೇವಃ ಪರಮೇಶ್ವರಃ
ಚರತ್ಯತಿಥಿರೂಪೇಣ ನಮಸ್ತೆ ಜಂಗಮಾತ್ಮನೇ

ಎಂಬಂತೆ ಅವತರಿಸಿ ಶಿವರೂಪಿ ಜಂಗಮಪುಂಗವರಾಗಿ ಕಂಗೊಳಿಸುತ್ತ ದಾಸೋಹಂ ಭಾವದಿ ನೆಲೆಸಿದ್ದಾರೆ ಅವರ ಅಂತಃಕರಣ ಹೇಳಲಸಾಧ್ಯ; ಅದು ಅನುಪಮ ವಾದುದು ವೀರ ವಿರಕ್ತ ಮಹಾಸ್ವಾಮಿಗಳ ಪ್ರಮಥರ ಸಮೂಹದಲ್ಲಿ ಅಗ್ರಗಣ್ಯರಾಗಿ ಜೀತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ಎಂಬಂತೆ ವಿರಾಗಿಗಳೂ, ಜಿತಾಕ್ಷರೂ, ತಪೋಧನರೂ, ತೇಜಸ್ವಿಗಳೂ ಆಗಿದ್ದಾರೆ.

ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳು

ಲೇಖಕರು: ಈಶ್ವರ ಸಣಕಲ್ಲ (ಲೇಖನ ಸಂಗ್ರಹ)

ಈಶ್ವರ ಸಣಕಲ್ಲ ಇವರು ೧೯೦೬ ಡಿಸೆಂಬರ ೨೦ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡದಲ್ಲಿ ಜನಿಸಿದರು ತಾಯಿ ನೀಲಾಂಬಿಕೆ ; ತಂದೆ ಮಹಾರುದ್ರಪ್ಪ ಬಾಲ್ಯದಲ್ಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಅನುಭವಕ್ಕೆ ಅಭಿವ್ಯಕ್ತಿಯ ರೂಪುಕೊಟ್ಟರು ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ ಇವರು ಸುಮಾರು ೨೦ ಕೃತಿಗಳನ್ನು ರಚಿಸಿದ್ದಾರೆ ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.

ಇವರ ಬಟ್ಟೆ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ ಇವರು ೧೯೮೦ ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ ನೆಯ ಅಖಿಲ ಭಾರತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು ಈಶ್ವರ ಸಣಕಲ್ಲರ ಉದಾತ್ತ ಆದರ್ಶವು ಅವರ ಕವನವೊಂದರಲ್ಲಿ ಬರುವ ಈ ಸಾಲುಗಳಿಂದ ವ್ಯಕ್ತವಾಗುತ್ತದೆ: “ಜಗವೆಲ್ಲ ನಗುತಿರುಲಿ ; ಜಗದಳವು ನನಗಿರಲಿ” ಈಶ್ವರ ಸಣಕಲ್ಲರು ೧೯೮೪ ಡಿಸೆಂಬರ ೩ರಂದು ತೀರಿಕೊಂಡರು.

ಅನಾದ್ಯನಂತವಾಗಿ ಹಬ್ಬಿರುವ ಆಕಾಶದಗಲದ ಮಹಾಮೌನದಲ್ಲಿ ಅಖಂಡ ತೇಜಃಪುಂಜವಾದ,ಅವಿರತ ಜ್ಯೋತಿರ್ಮಯವಾದ, ಅಪ್ರತಿಮ ಪ್ರಕಾಶ ಪೂರ್ಣವಾದ ಅಸಂಖ್ಯ ಕೋಟಿ ಗ್ರಹನಕ್ಷತ್ರಗಳುಮೂಡಿ, ಲೀಲೆಯಲ್ಲಿ ಆಡಿ, ವೇಗದಲ್ಲಿ ಪರಿಭ್ರಮಿಸುತೋಡಿ, ನಿರ್ಧಿಷ್ಟ ದೇಹದಲ್ಲಿ ತೀಡಿ, ತಮ್ಮ ಆಯುವನ್ನು ದೂಡಿ, ಮೈದೋರಿ ಮೈಗರೆವ ಮಹಾಸ್ವಪ್ನದಂತೆ ಮರೆಯಾಗುತ್ತವೆ ಅದೇ ಆಕಾಶದ ಅದೇ ಮೌನದಲ್ಲಿ ಈ ಜ್ಯೋತಿಷ್ಪ್ರಪಂಚದ ಆಚೆ ಆಚೆ, ಮೇಲೆ ಮೇಲೆ, ನಿಬಿಡತಮ ನೀಹಾರಿಕಾವಲಯವು ಮೇರೆ ಮೀರಿ ಹಬ್ಬಿ ಹಿಂಜಿದರಳಿಯ ರಾಶಿಯಂತೆ ರಂಜಿಸಿ, ಮತ್ತೆ, ಮೈದಳೆದ ಭಾವ ಮೈಯಳಿದು ಹೋಗುವಂತೆ, ಕರಗಿ ಹೋಗುತ್ತದೆ ಅದೇ ಮುಗಿಲಗಲ ಅದೇ ಮೌನಸಾಮ್ರಾಜ್ಯದಲ್ಲಿ ಹಗಲಿರುಳು ಕಣ್ಣುಮುಚ್ಚಾಟ, ಮಳೆಗಾಲದ ಗುಡುಗು ಸಿಡಿಲು ಮಿಂಚು ಮಳೆಗಳ ಹುಚ್ಚಾಟ, ಕಟಗುಡುವ ಚಳಿಗಾಲದ ಕುಳಿರ್ಗಾಳಿಯ, ತೀಟದಲ್ಲಿ ತುಟಿಯ ಕಚ್ಚಾಟ, ಹಿಗ್ಗಿನ ಸುಗ್ಗಿಯ ಕಂಪಿನ, ಇಂಪಿನ, ಜೊಂಪಿನ, ಪೆಂಪಿನ ಬುಗ್ಗೆಯಲ್ಲಿ ಚಿಮ್ಮಿದ ಕಾಮನ ಬಿಲ್ಲಿನ ಸೊಲ್ಲಿನ ಮೆಚ್ಚಾಟ; ಬಲ್ವೇಸಗೆಯ ಬಿರುಬಿಸಿಲ ಬೇಗೆಯ ಕಿಚ್ಚಾಟ-ಇಂತು ಕ್ಷಣ, ದಿನ-ಮಾಸ-ಋತು-ವರ್ಷ-ಯುಗ ಕಲ್ಪಗಳ ಲೀಲಾತಲ್ಪದಲ್ಲಿ, ಕಲ್ಪನೆಯ ವಿವಿಧ ಭಂಗಿಯಲ್ಲಿ, ವಿವಿಧ ವರ್ಣವಿನ್ಯಾಸದಲ್ಲಿ ಲಾಸ್ಯವಾಡಿ, ಹೃನ್ಮಂದಿರದಲ್ಲಿ ಸೃತಿಯ ಮುದ್ರೆಯೊತ್ತಿ, ಮತ್ತೆ ಸರಿದು ಹೋಗುವಳು ಇಂತು ವಿಶ್ವದ ಮಹಾಪ್ರಪಂಚದ, ಮಾಯಾ ಪ್ರಪಂಚದ, ದ್ವಂದ್ವ ಪ್ರಪಂಚದ ಅಸಂಖ್ಯ ಮುಖಲೀಲೆಗೆ ತನ್ನಲ್ಲಿ ಅವಕಾಶವನ್ನಿತ್ತಿದ್ದರೂ ಅದರಿಂದ ಆ ಆಕಾಶದ ಮಹಾಮೌನವು ಅತೀತ! ನಿರ್ಲಿಪ್ತ !

ಅಂತೆ ಶ್ರೀ ಶ್ರೀ ಶ್ರೀಮನ್ನಿರಂಜನ ಪ್ರಣವಸ್ವರೂಪಿ ಶ್ರೀ ನಾಗನೂರ ರುದ್ರಾಕ್ಷಿಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು! ಇವರಲ್ಲಿ ಕಲ್ಯಾಣ ದೃಷ್ಟಿಯ ಶಿವನೂ, ಕಾಯಕನಿಷ್ಠೆಯ ಬಸವನೂ ಸಂಗಮಿಸಿ, ಸಂಯಮಿಸಿ ಇವರು ಶ್ರೀ ಶಿವಬಸವ ಮಹಾಸ್ವಾಮಿಗಳಾಗಿಹರು! ಇವರ ದೇಹವು ಎಪ್ಪತ್ತರಾಚೆಗೆ ಸರಿದರೂ, ಇವರ ಉತ್ಸಾಹವು ಇನ್ನೂ ಇಪ್ಪತ್ತರ ಈಚೆಗೇನೇ ಉಳಿದಿದೆ! ಉರುಳುತಿರುವ ಸಂವತ್ಸರಗಳು ಇವರ ಮುಪ್ಪು ಸಾವುಗಳ ಲೆಕ್ಕ ಹಾಕುತ್ತಿದ್ದರೆ, ಅರಳುತ್ತಿರುವ ತಪಸ್ಚೈತನ್ಯವು ಇವರ ಪ್ರಾಯದ ಒಪ್ಪು-ಕಾವುಗಳ ಎಣಿಕೆ ಹಾಕುತ್ತಿದೆ ಇಂತಹ ಇಳಿವಯಸ್ಸಿನಲ್ಲಿಯೂ ಬಾಗದ ಇವರ ನಡು ಇವರ ಪರಿಶುದ್ಧ ಚರಿತ್ರಕ್ಕೆ ಸಾಕ್ಷಿಯಾಗಿದೆ ! ಎತ್ತರದ ನಿಲವು ! ಭವ್ಯ ವ್ಯಕ್ತಿತ್ವ ಮಾತುಗಾರಿಕೆಯಿರಬಹುದು; ಆದರೆ ಮಾತು ತುಟಿ ಮೀರಿ ಬಂದುದೇ ವಿರಳ! ಜೀವನದ ಬಹುಭಾಗವೆಲ್ಲ ಮೌನ! ಮಹಾಮೌನ! ಆ ಮೌನದ ಸಂದು ಸಂದುಗಳಲ್ಲಿ, ಕೀಲುಕೀಲುಗಳಲ್ಲಿ ಕೃತಿಯ ಸ್ಪಂದನ! ಸತ್ಮತಿಯ ಸಂಸ್ಕೃತಿಯ ನಂದನ! ಶಿವಾಕೃತಿಯ ಚಂದನ !

ಸೇವಾಧರ್ಮವೇ ಇವರ ಜೀವನ ಮರ್ಮವು “ಮಾನವನ ಹೃದಯದಲ್ಲಿ ಗುಪ್ತವಾಗಿ ಹುದುಗಿರುವ ಪರಿಪೂರ್ಣತೆಯ ಆವಿಷ್ಕಾರವೇ ಶಿಕ್ಷಣವೆಂದು ಬಗೆದು ಅಂತಹ ಶಿಕ್ಷಣವನ್ನು ಪಡೆದು ಲೋಕವೆಲ್ಲಾ ಪರಿಪೂರ್ಣತೆಯ ಎಡೆಗೆ ಸಾಗಲೆಂದು ಯೋಚಿಸಿದರು ಆ ಯೋಚನೆಗೆ ತಕ್ಕ ಯೋಜನೆ ಆವುದೆಂದು ತರ್ಕಿಸಿದರು ಹೊಟ್ಟೆಗೆ ಗತಿಯಿಲ್ಲದೆ, ಶಿಕ್ಷಣ ಪಡೆಯಲು ತಕ್ಕ ಸೌಕರ್ಯವಿಲ್ಲದೆ, ಅಸಂಖ್ಯ ಅಸಹಾಯ ಪರಿಸ್ಥಿತಿಯಲ್ಲಿ ತೆವಳಿ ತೊಳಲಾಡುತ್ತಿರುವ ಬಡ ವಿದ್ಯಾರ್ಥಿ ಲೋಕದ ವಿದ್ಯಾರ್ಜನೆಗೆ, ಅಧ್ಯಯನ-ಅಭ್ಯಾಸಗಳಿಗೆ, ವಿವಿಧ ಬಗೆಯ ಶಿಕ್ಷಣ ಸಂಸ್ಥೆಗಳ ಕೇಂದ್ರವಾದ ಬೆಳಗಾವಿಯಂಥ ಪಟ್ಟಣದಲ್ಲಿ ಪ್ರಸಾದ ನಿಲಯ ಸ್ಥಾಪನೆಯೇ ಪರಮಸಾಧನವೆಂದು ನಿಶ್ಚಯಿಸಿದರು

ಆ ನಿಶ್ಚಯದ ನಿರ್ಣಯವೇ ಇಂದು ಭವ್ಯ ಪ್ರಸಾದ ನಿಲಯವಾಗಿ ರೂಪುಗೊಂಡಿದೆ!ಇಂತು ಪ್ರಸಾದ ನಿಲಯದ ಮುಖಾಂತರವಾಗಿ ಅವರು ಕೈಕೊಂಡ ವಿದ್ಯಾರ್ಥಿಲೋಕಸೇವಾ ಧರ್ಮವೇ ಅವರಿಗೆ ಶಿವನ ಮರ್ಮವನ್ನು ಬಿತ್ತರಿಸಿತು! ಈ ಪ್ರಸಾದ ನಿಲಯದ ಯೋಜನೆಯು, ಅವರ ತಪದ ಮಹಾಮೌನವು ಮಥಿಸಿ ತಂದ ದಿವ್ಯ ನವನೀತ! ಇದನ್ನು ಆಶ್ರಯಿಸಿದವರು,ಸೇವಿಸಿದವರು, ವಿದ್ಯಾಪಾತ್ರರಾದರು! ಮಾನವರಾದರು; ಮಾನವತೆಯಲ್ಲಿ ಪರಿಪೂರ್ಣರಾದರು! ಅಮೃತ ಪುತ್ರರಾದರು!

ಈ ಮೊದಲು ಹೇಳಿದಂತೆ, ಆಕಾಶದ ಮಹಾಮೌನವು ವಿಶ್ವದ ಅನಂತ ನಿರಂತರ ವಿವಿಧ ಲೀಲೆಗಳನ್ನು ಒಳಗೊಂಡು ಅವುಗಳಿಂದ ಅತೀತವೂ, ನಿರ್ಲಿಪ್ತವೂ ಆಗಿರುವಂತೆ, ಈ ಮಹಾಸ್ವಾಮಿಗಳ ಮೌನಾಕಾಶವು ಲೋಕಕಲ್ಯಾಣದ ಇನಿತೆಲ್ಲ ಯೋಚನೆ, ಯೋಜನೆ, ಸತ್ಕೃತಿಗಳನ್ನು ಒಳಗೊಂಡಿದ್ದರೂ ಅವೆಲ್ಲವುಗಳಿಂದ ಅವರು ಅತೀತರು; ನಿರ್ಲಿಪ್ತರು!

ಈ ನಿಸ್ವಾರ್ಥ ಸೇವೆ, ನಿರ್ಲಿಪ್ತತೆ ಒಂದೇ ದಿನದ ಅನಾಯಾಸದ ಗೆಲುವಲ್ಲ! ಜನ್ಮಜನ್ಮಗಳ ತಪದ ಸಾಧನೆಯ ಬಲವು; ಜೊತೆಗೆ ಮಹಾಗುರುವಿನ ಮಹಾಕೃಪೆಯ ಮಹಾನುಗ್ರಹದ ಬಲವು! ಸತ್‌ ಶರಣರ, ಸಜ್ಜನರ, ಸತ್ಸಂಗದ ಸಹವಾಸದ ಫಲವು; ಸಮ್ಮತಿಗಾಗಿ, ಪರಹಿತ ಕಲ್ಯಾಣಕ್ಕಾಗಿ ಮೈದಳೆದ ಉತ್ಕಟ ಸತ್ಸಂಕಲ್ಪ ಶಕ್ತಿಯ ಫಲವು! ಲೋಕದ ಹೊಗಳಿಕೆ-ತೆಗಳಿಕೆ, ಹಿಗ್ಗು-ಕುಗ್ಗು, ಸೋಲು-ಗೆಲುವು, ಸುಖ-ದುಃಖ, ಮಾನ-ಅಪಮಾನ ಈ ಮೊದಲಾದ ದ್ವಂದ್ವಪ್ರಪಂಚವನ್ನು ಮೀರಿ ನಿಂತ ಸುಸ್ಥಿರ-ಸಹಜ ಸಮತೆಯ ನಿಲುವು! ಆನುವಂಶಿಕ ಸಂಸ್ಕಾರದಲ್ಲಿ ಬೆಳಗಿದ ಬೆಳಕಿನ ಹೊಳವು ದಾಸೋಹಂಭಾವದಲ್ಲಿ ಸೋಹಂಭಾವವಲಯಿಸಿ ವಿನಯವೇ ಮೂರ್ತಿವೆತ್ತಂತಿರುವ ಕೈಂಕರ್ಯದ ಸುಳುವು! ಇವೆಲ್ಲವೂ ಸಮನಿಸಿ ನಾಗನೂರು ಶ್ರೀ ಶಕ್ತಿಯಾಯಿತು! ಶಿವಬಸವ ನಿರಂಜನ ವ್ಯಕ್ತಿಯಾಯಿತು!


ಶಿವಯೋಗಮಂದಿರದ ಪುಣ್ಯಪರಿಸರದಲ್ಲಿ

ಶಿವಯೋಗಮಂದಿರದಲ್ಲಿಯೂ ಅವರ ಮೊದಲಿನ ಜೀವನಕ್ರಮವೇ ಮುಂದುವರಿಯಿತು ದಿನವೂ ಬ್ರಾಹ್ಮಿ ಮುಹೂರ್ತದಲ್ಲಿ ಶಿವಸ್ಮರಣೆಯೊಂದಿಗೆ ಏಳುವುದು, ಪ್ರಾತರ್ವಿಧಿಗಳನ್ನು ಮುಗಿಸುವುದು,ಸ್ನಾನ, ಶಿವಪೂಜೆ, ಸಂಸ್ಕೃತ ಪಾಠಶಾಲಾಧ್ಯಯನ ಇವುಗಳಲ್ಲಿಯೇ ಇವರ ಮನಸ್ಸು ತನ್ಮಯವಾಯಿತು; ತಲ್ಲೀನವಾಯಿತು ಅವಿರಳ ಜ್ಞಾನಪಥವಾದ ಅಂತರ್ಮುಖತೆ ಇನ್ನೂ ಬೆಳೆಯಿತು ಶಕ್ಯವಿದ್ದಷ್ಟೂ ಎಲ್ಲರ ಸಂಗವನ್ನೂ, ಸಂಪರ್ಕವನ್ನೂ ಕಡಿಮೆ ಮಾಡಿಕೊಂಡು, ಕಡಿದುಕೊಂಡು,ಏಕಾಂತ ಪ್ರಶಾಂತ ವಾತಾವರಣದಲ್ಲಿ ಅಧ್ಯಯನಲೀನರಾಗಿ, ಧ್ಯಾನಲೀನರಾಗಿ ಅಂತರ್ಮುಖತೆ-ಯಿಂದ ಅಂತಸ್ಸಮಾಧಿಗೆ ಒಳಗೆ ಒಳಗೆ, ಕೆಳಗೆ ಕೆಳಗೆ ಇಳಿಯತೊಡಗಿದರು ಹೀಗಾಗಿ ಬಾಹ್ಯ ಪ್ರಪಂಚವು ದೂರವಾಗಿ, ಮರೆಯಾಗಿ ಅಂತಃಪ್ರಪಂಚದ ಬಿತ್ತರವೂ, ಎತ್ತರವೂ, ಆಳವೂ ಗೋಚರಿಸತೊಡಗಿದವು ಇದರ ಮುಂದೆ ಬಾಹ್ಯ ಪ್ರಪಂಚವು ಅಲ್ಪವೂ, ಕ್ಷುದ್ರವೂ, ಸಂಕುಚಿತವೂ ಎನಿಸತೊಡಗಿತು ಲೋಕದ ಸ್ಥಾನಮಾನ-ಅಧಿಕಾರ, ಕೀರ್ತಿ, ಕಾಂಚನ, ಪ್ರಶಂಸೆ, ನಿಂದೆ ಈ ಎಲ್ಲವುಗಳಿಂದಲೂ ದೂರವಾಗಿ ಲೋಕದ ದ್ವಂದ್ವದಿಂದ ಅತೀತರಾಗಿ ಇರಲು ಯತ್ನಿಸಿದರು ಈ ಮೇರೆಗೆ ಒಂದು ದಿವ್ಯಾದರ್ಶವು ಶ್ರೀ ಶಿವಯೋಗಮಂದಿರದ ಪ್ರಶಾಂತವಾತಾವರಣದಲ್ಲಿ ಇವರ ಬಾಳನ್ನು ಇಂತು ರೂಪಿಸುತ್ತಲಿದ್ದಿತು ಇವರ ಪರಿಶುದ್ಧ ಆಚಾರ, ಉಚ್ಚವಿಚಾರ, ಪವಿತ್ರ ಚಾರಿತ್ರ್ಯ, ಅನನ್ಯ ಭಕ್ತಿ, ಅಪ್ರತಿಮ ದಾಸೋಹಭಾವ, ಅನುಪಮ ಸೇವೆ, ಅವಿಚಲ ಕಾಯಕನಿಷ್ಠೆ, ಅಚಲ ಸಂಯಮಶೀಲ, ಸರ್ವಭೂತದಯಾದೃಷ್ಟಿ, ವಿಶ್ವಮಾನ್ಯಧರ್ಮದೃಷ್ಟಿ ಇವೆಲ್ಲವು ಗಳಿಂದ ಆಕರ್ಷಿತರಾದ ಶ್ರೀ ಶಿವಯೋಗಮಂದಿರ ಸಂಸ್ಥಾಪಕರಾದ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರ ಕೃಪಾದೃಷ್ಟಿಯು ಇವರ ಮೇಲೆ ಬಿದ್ದಿತು ಪರಿಣಾಮವಾಗಿ ಇವರು ಅವರ ಪ್ರೀತಿಯ ಶಿಷ್ಯರಾಗಿ ಅನನ್ಯ ಭಾವದಿಂದ ಸೇವೆ ಸಲ್ಲಿಸತೊಡಗಿದರು ಇವರ ದ್ವಾದಶ ವರ್ಷದ ದೀರ್ಘ ಅವಿರತ ಅವಿಚ್ಛಿನ್ನ ಸೇವೆಗೆ ಮೆಚ್ಚಿ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಇವರನ್ನು ಆಶೀರ್ವದಿಸಿದರು; ಅನುಗ್ರಹಿಸಿದರು ಇಂತು ಎಲ್ಲರ ಮೆಚ್ಚಿಗೆಗೂ ಪಾತ್ರರಾದರು ಇವರು ಮಂದಿರದಲ್ಲಿರುವಾಗ ಬೇರೆ ಬೇರೆ ಊರುಗಳ ಅಪಾರ ಉತ್ಪನ್ನವಿರುವ ಅದೆಷ್ಟೋ ಮಠಗಳ ಅಧಿಕಾರ ಸ್ವೀಕಾರಕ್ಕಾಗಿ ಆಯಾ ಊರವರು ಬಂದು ಬಂದು ಇವರನ್ನು ಪ್ರಾರ್ಥಿಸಿಕೊಂಡರು ಹಾನಗಲ್ಲ ಊರವರೂ ಬಂದು ಬೇಡಿಕೊಂಡರಂತೆ; ಇವರು ಯಾವುದಕ್ಕೂ ಆಶಿಸಲಿಲ್ಲ; ಜಗ್ಗಲಿಲ್ಲ; ಯಾರ ಬೇಡಿಕೆಗೂ ಸೊಪ್ಪು ಹಾಕಲಿಲ್ಲ ‘ಉತ್ಪನ್ನವಿಲ್ಲದಿದ್ದರೂ ಅಡ್ಡಿಯಿಲ್ಲ; ಚಿಕ್ಕದಿದ್ದರೂ ಚಿಂತೆಯಿಲ್ಲ; ನನ್ನ ಈಗಿನ ನಾಗನೂರ ಮಠವೇ ನನಗಿರಲಿ’ ಎಂದು ನಿರ್ಧಾರದ ಧ್ವನಿಯಲ್ಲಿ, ಸಂತೃಪ್ತ ಭಾವದಲ್ಲಿ ಉತ್ತರಿಸಿದರು ಇದನ್ನು ಕಂಡ ಪೂಜ್ಯ ಶ್ರೀ ಕುಮಾರ ಸ್ವಾಮಿಗಳವರು “ಚಿಕ್ಕದಾಗಿ ಕಾಣುವ ಚಿಕ್ಕೆ ಕೋಟಿ ಕೋಟಿ ಯೋಜನೆಗಳಾಚೆಯಿಂದ ತನ್ನ ಥಳಥಳಿಸುವ ಬೆಳಕನ್ನು ಹರಡಿ ವಿಶ್ವದ ಅಂಧ ತಮಂಧವನ್ನು ಸೀಳುವುದು ಅಂತೆಯೇ ಬಾಳು, ನಿನ್ನ ಮಠವು ಚಿಕ್ಕದಾಗಿದ್ದರೂ ಆ ಮಠದ ಮೂಲದಿಂದ ಅಖಂಡ ಅನಂತ ಪ್ರಕಾಶದ, ಕಣ್ಣು ಕೋರೈಸುವ ಲಕ್ಷೋಪಲಕ್ಷ ಉಜ್ವಲ ಅಕ್ಷಯ ದಿಧಿತಿಗಳು ಅಸಂಖ್ಯ ಹೃದಯಗಳನ್ನು ತಟ್ಟಿ ಮುಟ್ಟಿ, ಅಲ್ಲಿಯ ಕಾರ್ಗತ್ತಲೆಯನ್ನು ಮೆಟ್ಟಿ ಪ್ರಜ್ಞಾನ ಬ್ರಹ್ಮವಾಗಿ ತೊಳಗಿ ಬೆಳಗಬಲ್ಲವು ಆ ದಿವ್ಯ ಪ್ರಕಾಶದ ಪೂತ ಧವಳ ಪುಣ್ಯ ಪ್ರವಾಹದಲ್ಲಿ ನೀನು ಮಿಂದು ಕರಗಿ ಹೋಗುವಿ, ಆ ಬೆಳಕಿನಲ್ಲಿ ಬೆಳಕಾಗಿ ಬೆಳೆದು ಹೋಗುವಿ! ನಿನ್ನ ಸೇವೆಯಲ್ಲಿಯೇ ಶಿವನ ಸಾಕ್ಷಾತ್ಕಾರವಾಗುವುದು ನಿನ್ನ ಈ ಸೌಜನ್ಯದ ವಿನಯದ ಕೈಂಕರ್ಯದ ಶೀಲದಲ್ಲಿಯೇ ಜಗದೋದ್ಧಾರದ ಶೀಲವು ಕಾಣುವುದು ಎಲ್ಲವನ್ನೂ ಪ್ರಸಾದ ಭಾವನೆಯಿಂದ ಕಾಣುವ ನಿನಗೆ ಪ್ರಸಾದವೇ ಪರಮ ಧೈಯವಾಗುವುದು ಅನುಪಮ ಶ್ರೇಯವಾಗುವುದು ನಿತ್ಯ ಪ್ರಕಾಶವಾಗುವುದು ಸತ್ಯ ಪರಮಾತ್ಮವಾಗುವುದು ಇದರಲ್ಲಿಯೇ ನಿನ್ನ ಜೀವನದ ಸುಳುಹೂ ಇದೆ ಹೊಳಹೂ ಇದೆ ನಿನಗೆ ಶುಭವಾಗಲಿ! ಮಂಗಳ ವಾಗಲಿ!! ಎಂದು ಹೃದಯ ತುಂಬಿ, ಕಂಠ ತುಂಬಿ, ಬಾಯಿತುಂಬಿ ಆಶೀರ್ವದಿಸಿದರು ಇಂತು ನೀಡಿದ ಆಶೀರ್ವಾದವು ಗಟ್ಟಿಗೊಳ್ಳುವಂತೆ ಕೊಡಗಲಿ ಗವಿಯಲ್ಲಿ ಶ್ರೀ ಶಿವಬಸವ ಸ್ವಾಮಿಗಳನ್ನು ಅನುಷ್ಠಾನಕ್ಕೂ ಕೂಡಿಸಿದರು

ಇಷ್ಟೇ ಅಲ್ಲ, ತಾವು ಲಿಂಗೈಕ್ಯವಾಗುವ ಕಾಲವನ್ನು ಅಂತರ್ಜ್ಞಾನದಿಂದ ಕಂಡು ಹಿಡಿದ ಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಅದಕ್ಕಿಂತ ಕೆಲದಿನಗಳ ಪೂರ್ವದಲ್ಲಿ ಈ ಶ್ರೀ ಶಿವಬಸವ ಸ್ವಾಮಿಗಳನ್ನು ಕರೆಯಿಸಿಕೊಂಡು ಇವರಿಗೆ ಶ್ರೀ ಹಾಲಕೆರೆ ಅನ್ನದಾನೀಶ್ವರ ಮಹಾಶಿವಯೋಗಿ ಗಳಿಂದ ಆಶ್ರಮ (ಸ್ಥಳ) ದೀಕ್ಷೆಯನ್ನು ಕೊಡಿಸಿದರು ಒಂದು ದಿನ ಬಳಿಯಲ್ಲಿ ಕರೆದು “ನೀನು ಲೋಕೋಪಕಾರಿಯಾಗು! ಲೋಕೋದ್ಧಾರಕನಾಗು!” ಎಂದು ಆಶೀರ್ವದಿಸುತ್ತ ತಮ್ಮ ಕೊರಳಲ್ಲಿರುವ ರುದ್ರಾಕ್ಷಿ ಮಾಲೆಯನ್ನು ಇವರ ಕೊರಳಿಗೆ ಹಾಕಿದರು ಮತ್ತು ತಮ್ಮ ಪವಿತ್ರ ಹಸ್ತದಿಂದ ಆ ಪೂಜ್ಯ ಹಾನಗಲ್ಲ ಮಹಾಸ್ವಾಮಿಗಳು ಇವರಿಗೆ ಕರುಣಿಸಿದ ಭಸ್ಮದ ಘಟ್ಟಿಯೊಂದನ್ನು ಈ ರುದ್ರಾಕ್ಷಿ ಮಾಲೆಯನ್ನು ಈಗಲೂ ಈ ಶ್ರೀಗಳವರು ಗುರುಶಿಷ್ಯರ ಈ ಅನನ್ಯ ಅಭಿನ್ನ ಸಾಮರಸ್ಯದ ಸ್ಮಾರಕವಾಗಿ, ಗುರುವು ಶಿಷ್ಯನ ಮೇಲೆ ಗೆಯ್ದ ಮಹಾಕೃಪೆಯ ಪ್ರತೀಕವಾಗಿ, ಜತನದಿಂದ ಅಚ್ಚಳಿಯದಂತೆ ಕಾಯ್ದಿಟ್ಟಿರುವರು

ಈ ಮೇರೆಗೆ ಶಿವಯೋಗಮಂದಿರದಲ್ಲಿ ಹನ್ನೆರಡು ವರ್ಷಗಳ ಹರಿಗಡಿಯದ ತಪಃಪ್ರಭಾವದಿಂದ ತಪಃಪ್ರಭೆಯಿಂದ ಆಂತರಿಕ ವಿಕಾಸವನ್ನೂ ಪ್ರಕಾಶವನ್ನೂ ಅಳವಡಿಸಿಕೊಂಡರು ಅವರ ಬಾಳು ಕೊನರಿ ಚಿಗುರಿ ಹೂತು, ಕಾತು ಈ ತಪಸ್ತೇಜದಲ್ಲಿ ಹಣ್ಣು ಸಾರ್ಥಕತೆಯನ್ನು ಪಡೆಯಿತು ಧನ್ಯತೆಯನ್ನು ಹೊಂದಿತು.

ಪೂಜ್ಯ ಶ್ರೀ ಪಂಚಾಕ್ಷರಿ ಗವಾಯಿಗಳು

ಲೇಖಕರು: ಶ್ರೀ ಶಿರೀಷ ಜೋಶಿ, ಬೆಳಗಾವಿ | ಸೌಜನ್ಯ : ಸುಕುಮಾರ ದೀಪ್ತಿ

ಕಾಡಶೆಟ್ಟಿಹಳ್ಳಿ ಹಾವೇರಿ ಜಿಲ್ಲೆಯಲ್ಲಿರುವ ಚಿಕ್ಕ ಹಳ್ಳಿ ಈ ಊರಿನ ಬಡ ದಂಪತಿಗಳು ಗುರುಪಾದಯ್ಯ – ನೀಲಮ್ಮನವರು, ಇವರಿಗೆ ಜನಿಸಿದ ಮಗು (2ನೆಯ ಫೆಬ್ರುವರಿ, 1892) ಹುಟ್ಟಿನಿಂದಲೆ ಕುರುಡು ಇವರಿಗೆ ಜನಿಸಿದ ಮೊದಲ ಮಗ ಗುರುಬಸವಯ್ಯನಿಗೂ ಹುಟ್ಟುಕುರುಡು ದಂಪತಿಗಳಿಗೆ ಎರಡನೆಯ ಮಗನೂ ಕುರುಡಾಗಿರುವುದು ತೀವ್ರ ನಿರಾಸೆಯನ್ನು ತಂದಿತು. ಮಗುವಿಗೆ ಗದಿಗೆಯ್ಯನೆಂದು ಹೆಸರಿಟ್ಟರು. ಮಗುವಿಗೆ ಬಾಲ್ಯದಿಂದಲೇ ಸಂಗೀತವೆಂದರೆ ಪ್ರಾಣ. ಎಲ್ಲರ ಅನುಕಂಪವನ್ನು ಉಂಡು ಬೆಳೆಯುತ್ತಿದ್ದ ಗದಿಗೆಯ್ಯ ಸಂಗೀತದಲ್ಲಿ ತನ್ನ ಪ್ರಾಣವನ್ನೇ ಇಟ್ಟುಕೊಂಡವನು. ಗುರಬಸವಯ್ಯ ಹಾಗೂ ಗದಿಗೆಯ್ಯ ಒಟ್ಟಿಗೆ ಹಾಡುತ್ತಿದ್ದರೆ ಅದನ್ನು ಕೇಳಿ ಊರ ಜನ ಸಂತೋಷ ಪಡುತ್ತಿದ್ದರು.

ಇದೇ ಸುಮಾರಿಗೆ ಹಾನಗಲ್ಲ ಕುಮಾರಸ್ವಾಮಿಗಳು ಊರೂರಿಗೆ ಸಂಚರಿಸಿ ವೀರಶೈವ ಧರ್ಮದ ಪ್ರಚಾರ ಕಾರ್ಯ ಹಾಗೂ ಜನರಲ್ಲಿ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಕಾಡಶೆಟ್ಟಿಹಳ್ಳಿಗೆ ಹೆಕ್ಕಲು ಬಸವೇಶ್ವರ ಜಾತ್ರೆಗೆ ಬಿಜಯಂಗೈಯಲಿರುವ ಸುದ್ದಿ ಪ್ರಾಪ್ತವಾಯಿತು. ಹಳ್ಳಿ ಜಾತ್ರೆಯ ನಿರೀಕ್ಷೆಯಲ್ಲಿ ಸಡಗರದಿಂದ ತುಂಬಿತ್ತು. ಸ್ವಾಮಿಗಳ ಆಗಮನದ ವಾರ್ತೆ ಆ ಸಡಗರವನ್ನು ಇಮ್ಮಡಿಸಿತು. ಊರು ತನ್ನಷ್ಟಕ್ಕೆ ತಾನೇ ಶೃಂಗಾರಗೊಂಡಿತು. ಸ್ವಾಮಿಗಳು ದಯಮಾಡಿಸಿದರು. ಅವರ ಸ್ವಾಗತಕ್ಕೆ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗುರುಬಸವಯ್ಯ ಹಾಗೂ ಗದಿಗೆಯ್ಯ ಉತ್ತಮವಾಗಿ ಹಾಡಿ ಸ್ವಾಮಿಗಳ ಮನಸೆಳೆದರು!

ಬಾಲಕರೀರ್ವರ ಸಂಗೀತಾಸಕ್ತಿಯನ್ನು ಕಂಠಸಿರಿಯನ್ನು ಭಾವಪರವಶತೆಯನ್ನು ಗಮನಿಸಿದ ಶ್ರೀಗಳು ಮಕ್ಕಳ ಬಗೆಗೆ ವಿಚಾರಿಸಿ ವಿಷಯವನ್ನರಿತರು. ತಂದೆ ತಾಯಿಗಳನ್ನು ಕರೆಸಿ ಹೇಳಿದರು-

“ಈ ಮಕ್ಕಳನ್ನು ನಮಗೆ ಕೊಡಿ. ಅವರ ಭವಿಷ್ಯವನ್ನು ನಾವು ರೂಪಿಸುತ್ತೇವೆ”

ಹೆತ್ತ ಕರುಳು ಚುರ್ರೆಂದಿತು. ಗುರುಪಾದಯ್ಯನವರು ಧೈರ್ಯದಿಂದ ಮಕ್ಕಳನ್ನು ಶ್ರೀಗಳ ಉಡಿಯಲ್ಲಿ ಹಾಕುವ ನಿರ್ಧಾರ ಕೈಕೊಂಡರು. ಈಗಾಗಲೇ ಗುರುಬಸವಯ್ಯನಿಗೆ ಬಾಲ್ಯ ವಿವಾಹವಾಗಿರುವುದನ್ನು ಅರಿತ ಶ್ರೀಗಳು ಅವನನ್ನು ತಿರುಗಿ ಕಳುಹಿಸುವುದಾಗಿ ಹೇಳಿ ಮಕ್ಕಳನ್ನು ಶಿವಯೋಗಮಂದಿರಕ್ಕೆ ಕರೆದೊಯ್ದರು.

ಹಾನಗಲ್ಲಿನ ಶಿವಯೋಗ ಮಂದಿರದ ಕಟ್ಟುನಿಟ್ಟಿನ ಜೀವನಕ್ಕೆ ಹೊಂದಿಕೊಳ್ಳುವುದು ಬಾಲಕರೀರ್ವರಿಗೂ ಮೊದಮೊದಲು ತೊಂದರೆದಾಯಕವೆನಿಸಿತು. ಮಂದಿರದ ತ್ರಿಕಾಲ ಪೂಜಾ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸುವ ಭಾಗ್ಯ ಇಬ್ಬರಿಗೂ ದೊರಕಿತು.ಕುಮಾರ ಸ್ವಾಮಿಗಳ ಉದ್ದೇಶ ಬೇರೆಯೇ ಆಗಿತ್ತು. ಇಬ್ಬರೂ ಸಹೋದರರು ಒಳ್ಳೆಯ ಶರೀರವನ್ನು ಹೊಂದಿದ ಪ್ರಯುಕ್ತ ಅವರು ಸಂಗೀತಗಾರರಾಗಿ ರೂಪುಗೊಳ್ಳಬೇಕೆಂದು ಅಪೇಕ್ಷಿಸಿದರು. ಇದೇ ಸಮಯಕ್ಕೆ ತಂಜಾವೂರಿನಲ್ಲಿ ಸಂಗೀತ ಕಲಿತ ಗವಾಯಿಗಳೊಬ್ಬರು ಅಕಸ್ಮಾತ್ತಾಗಿ ಹಾನಗಲ್ಲಿಗೆ ಆಗಮಿಸಿದರು. ತಂಜಾವೂರಿನ ಗವಾಯಿಗಳು ಒಳ್ಳೆಯ ಸಂಗೀತಗಾರರಾಗಿದ್ದಂತೆ ಉತ್ತಮ ಶಿಕ್ಷಕರೂ ಆಗಿದ್ದರು. ಅವರು ಬಾಲಕದ್ವಯರಿಗೆ ಕರ್ನಾಟಕಿ ಸಂಗೀತವನ್ನು ಹೇಳಿಕೊಡಲಾರಂಭಿಸಿದರು.

ಪಂಚಾಕ್ಷರಿ ಗವಯಿಗಳು ಕಲಿಯುವ ಸಮಯದಲ್ಲಿ ಉತ್ತರಕರ್ನಾಟಕವೂ ಕರ್ನಾಟಕಿ ಸಂಗೀತದ ಕಂಪನ್ನೇ ಹೊಂದಿತ್ತು. ಇಲ್ಲಿ ಹಿಂದುಸ್ತಾನಿ ಸಂಗೀತ ಅದೇ ತಾನೆ ಕಾಲಿಡುತ್ತಿದ್ದರಿಂದ ಮತ್ತು ಆ ಕಾಲಕ್ಕೆ ಅದರ ವ್ಯಾಪ್ತಿ ಕೇವಲ ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿಗಳಿಗೆ ಸೀಮಿತವಾದ್ದರಿಂದ ಹಾನಗಲ್‌ಗಳಂಥ ಊರುಗಳಲ್ಲಿ ಹಿಂದುಸ್ತಾನಿ ಸಂಗೀತ ಇನ್ನೂ ಪ್ರವೇಶ ಮಾಡಿರಲಿಲ್ಲ!.

ನಲ್ವಡಿ ಕೃಷ್ಣರಾಜ ಒಡೆಯರರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿಯಿದ್ದ ಕಾರಣವಾಗಿ ಉತ್ತರ ಭಾರತದಿಂದ ಅಥವಾ ಪುಣೆ ಮುಂಬಯಿಗಳಿಂದ ಮೈಸೂರಿಗೆ ಹೋಗುತ್ತಿದ್ದ ಗವಾಯಿಗಳು ಹುಬ್ಬಳ್ಳಿ ಧಾರವಾಡ ಬೆಳಗಾವಿಗಳಲ್ಲಿ ಕೆಲವು ಕಾಲ ತಂಗಿ, ಇಲ್ಲಿ ತಮ್ಮ ಕಚೇರಿಗಳನ್ನು ನೀಡಿ ಮುಂದೆ ಸಾಗುತ್ತಿದ್ದರು. ಹೀಗಾಗಿ ಈ ಭಾಗದ ಜನರಿಗೆ ಹಿಂದುಸ್ತಾನಿ ಸಂಗೀತ ಪ್ರಿಯವಾಗತೊಡಗಿತು. ಪಿತ್ರೆ ವಕೀಲರಂಥ ಕೆಲವು ಉತ್ಸಾಹಿ ಯುವಕರು ಕಲಿಯಲು ಸನ್ನದ್ಧರಾದರು.

ಹೀಗೆ ಹಿಂದುಸ್ತಾನಿ ಸಂಗೀತ ಉತ್ತರಕರ್ನಾಟಕದಲ್ಲಿ ಪ್ರವೇಶ ಪಡೆಯಿತು. ಇತರ ಅನೇಕ ವಿದ್ವಾಂಸರು, ಗವಾಯಿಗಳು ಈ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ಬೆಳೆಯಲು ಕಾರಣರಾದರು. ನತ್ಥನಖಾನ ಭಾಸ್ಕರ ಭುವಾ, ಬಖಲೆ, ಉಸ್ತಾದ ಅಬ್ದುಲ್ ಕರೀಂಖಾನ, ಸಿತಾರಿಯಾ ರೆಹಮತ್‌ಖಾನ್ ಮೊದಲಾದವರು ಈ ಕಾರ್ಯವನ್ನು ಸಮರ್ಗವಾಗಿ ಮಾಡಿದರು. ಮುಂದೆ ಸವಾಯಿಗಂಧರ್ವರಂಥ ಅನೇಕ ಪಭೃತಿಗಳು ಅದನ್ನು ಬೆಳೆಸಿದರು.

ಆ ಕಾಲದಲ್ಲಿ ಕೆಲವು ಸಂಸ್ಥೆಗಳೂ ಉತ್ತರಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ನೆಲೆಗೊಳ್ಳಲು ಕಾರಣವಾದವು. ಉತ್ತರಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಮರಾಠಿ ನಾಟಕ ಕಂಪನಿಗಳು, ಇಲ್ಲಿಯ ಹುಟ್ಟಿ ಬೆಳೆದ ಕನ್ನಡ ನಾಟಕ ಕಂಪನಿಗಳು ತಮ್ಮ ರಂಗಗೀತೆಗಳ ಮುಖಾಂತರ ಇಲ್ಲಿನ ಜನರಲ್ಲಿ ಹಿಂದುಸ್ತಾನಿ ಸಂಗೀತದ ಅಭಿರುಚಿಯನ್ನೂ ಆಸಕ್ತಿಯನ್ನೂ ಬೆಳೆಸಿದುವು. ಪಂ.ಭಾಸ್ಕರ್ ಬುವಾ ಬಖಲೆಯವಗೆ ಎಂಟು ವರ್ಷಗಳ ಕಾಲ ಆಶ್ರಯ ನೀಡಿದ ಧಾರವಾಡದ ಟ್ರೈನಿಂಗ್ ಕಾಲೇಜು ಹಾಗೂ ಭೂಗಂಧರ್ವ ರೆಹಮತ್‌ಖಾನ್ ಮತ್ತು ಕಬೀರದಾಸರಿಗೆ ಆಶ್ರಯ ನೀಡಿದ ಸಿದ್ದಾರೂಢ ಶ್ರೀಮಠಗಳೂ ಹಿಂದುಸ್ತಾನಿ ಸಂಗೀತ ಇಲ್ಲಿ ಬೆಳೆಯಲು ಕಾರಣವಾದವು.

ಪಂಚಾಕ್ಷರಿಗವಾಯಿಗಳು ಕಲಿಯುವ ಸಮಯದಲ್ಲಿ ಹಿಂದುಸ್ತಾನಿ ಸಂಗೀತ ಹಾನಗಲ್ಲನ್ನು ಪ್ರವೇಶಿಸಿರಲಿಲ್ಲವಾಗಿ ಮತ್ತು ಅದನ್ನು ಕಲಿಸುವವರು ದುರ್ಮಿಳರಾದ್ದರಿಂದ ಅವರು ತಂಜಾವೂರಿನ ಗವಾಯಿಗಳಲ್ಲಿ ಕರ್ನಾಟಕ ಸಂಗೀತವನ್ನು ಕಲಿಯುವುದು ಅನಿವಾರ್ಯವಾಗಿತ್ತು,ಅವರು ಬಾಲಕರಿಗೆ ಮೊದಲು ಶೃತಿ ಪರಿಚಯವನ್ನು ಮಾಡಿಕೊಟ್ಟರು. ಸ್ವರ ಲಯಗಳ ಬಗೆಗೆ ತಿಳಿಸಿದರು. ಕರ್ನಾಟಕಿ ಸಂಗೀತವು ತಾಲ ಪ್ರಧಾನವಾದ್ದರಿಂದ ತಾಲ ಜ್ಞಾನ ಅತ್ಯಂತ ಮಹತ್ವದ ಸಂಗತಿಯಾಗಿದೆ. ತಾಲ ಬದ್ಧವಾಗಿ ಹಾಡುವುದು ಅಲ್ಲಿ ಅತ್ಯಂತ ಮುಖ್ಯವಾಗುತ್ತದೆ.

ಮಕ್ಕಳಿಬ್ಬರೂ ತೊಡೆ ತಟ್ಟಿಕೊಂಡು ಚಪ್ಪಾಳೆ ತಟ್ಟಿಕೊಂಡು ತಾಲ ಬದ್ಧವಾಗಿ ಹಾಡುವುದನ್ನು ಮೊದಲು ಕಲಿತರು. ನಂತರ ಪ್ರಾರಂಭವಾದದ್ದು ಜಂಟಿ ಸ್ವರಗಳನ್ನು ಹೇಳುವುದು. ಅವುಗಳನ್ನು ತಾಲಬದ್ಧವಾಗಿ ಪ್ರಸ್ತುತ ಪಡಿಸುವುದನ್ನು ರೂಢಿಸಿಕೊಂಡರು. ಈಗಲೂ ಜಂಟಿ ಸ್ವರಗಳನ್ನು ಹೇಳುವುದು ಅತ್ಯಂತ ಕಠಿಣವೆಂದೇ ಭಾವಿಸಲಾಗುತ್ತದೆ. ಅಂಥದನ್ನು ಬಾಲಕರಿಬ್ಬರೂ ಸುಲಭವಾಗಿ ಕಲಿತರು. ಸ್ವರ, ಸಂಗತಿ,ಜಟಿಲ ತಾಳ, ಲಯಗಳ ಗತಿ, ಗಮನಗಳನ್ನು ಆತ್ಮಸಾತ್ ಮಾಡಿಕೊಂಡರು. ತಂಜಾವೂರಿನ ಗವಾಯಗಳು ಗದಿಗೆಯ್ಯ ಹಾಗೂ ಗುರುಬಸವಯ್ಯನವರಿಗೆ ಕರ್ನಾಟಕ ಸಂಗೀತದ ಭದ್ರ ಬುನಾದಿಯನ್ನು ಹಾಕಿದರು. ಅವರ ಕಲಿಕೆ ಎಷ್ಟು ಕ್ಷಿಪ್ರವಾಗಿತ್ತೆಂದರೆ ಒಂದೆರಡು ವರ್ಷಗಳಲ್ಲಿ ಕಲಿಯಬೇಕಾದುದನ್ನು ಕೇವಲ ಆರು ತಿಂಗಳಲ್ಲಿ ಮುಗಿಸಿದರು. ಮುಂದೆ ಕೆಲವು ದಿನಗಳ ತರುವಾಯ ಅನಿವಾರ್ಯ ಕಾರಣಗಳಿಂದ ತಂಜಾವೂರಿನ ಗವಾಯಿಗಳು ಮರಳಿದರು. ಇವರ ಪ್ರಗತಿಯನ್ನು ಗಮನಿಸುತ್ತಿದ್ದ ಹಾನಗಲ್ ಕುಮಾರಸ್ವಾಮಿಗಳಿಗೆ ಸಂತೃಪ್ತಿಯಾಗಿತ್ತು. ಬಾಲಕರ ಸಂಗೀತ ಶಿಕ್ಷಣ ಮುಂದುವರಿಯಬೇಕೆಂದು ಅವರು ಅಪೇಕ್ಷಿಸಿದರು.

ಹೊಸಪೇಟೆಯಲ್ಲಿ ಒಬ್ಬ ಗವಾಯಿ ಇರುವುದು ಕುಮಾರಸ್ವಾಮಿಗಳಿಗೆ ತಿಳಿಯಿತು. ಹೊಸಪೇಟೆಯ ಗವಾಯಿ ಭೀಮರಾಯರನ್ನುಹಾನಗಲ್ಲಿಗೆ ಬರಮಾಡಿಕೊಂಡು ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಮಕ್ಕಳಿಗೆ ಸಂಗೀತ ಕಲಿಸುವಂತೆ ಸೂಚಿಸಿದರು. ಬಾಲಕರಿಬ್ಬರ ಸಂಗೀತ ಶಿಕ್ಷಣ ಮತ್ತೆ ಮುಂದಡಿಯಿಟ್ಟಿತು. ಭೀಮರಾಯರು ಮಕ್ಕಳ ಪ್ರತಿಭೆಯನ್ನು ಕಂಡು ಸಂತಸ ಪಟ್ಟರು. ಆತ್ಮೀಯತೆಯಿಂದ ಅವರಿಗೆ ಸಂಗೀತವನ್ನು ಹೇಳಿಕೊಡಲು ಉಪಕ್ರಮಿಸಿದರು. ಆದರೆ, ಇವರಿಗೂ ಬಹುಕಾಲ ಕಲಿಸುವ ಯೋಗವಿರಲಿಲ್ಲ, ಹಾನಗಲ್ಲಿನ ಹವೆಯು ಆಗಿ ಬರದ ಕಾರಣದಿಂದ ಭೀಮರಾಯರು ಹೊಸಪೇಟೆಗೆ ಮರಳಿದರು.

ಶಿರಾಳಕೊಪ್ಪದಲ್ಲಿ ಗದಿಗೆಯ್ಯನೆಂಬ ಸಂಗೀತಗಾರರಿದ್ಧ ವಾರ್ತೆ ತಿಳಿಯುತ್ತಲೇ ಅಲ್ಲಿಗೆ ಧಾವಿಸಿದ ಕುಮಾರಸ್ವಾಮಿಗಳು ಮಕ್ಕಳಿಗೆ ಸಂಗೀತ ಹೇಳಿಕೊಡಲು ಅವರನ್ನು ಒಪ್ಪಿಸಿದರು. ಮಕ್ಕಳಿಬ್ಬರೂ ಶಿರಾಳಕೊಪ್ಪದಲ್ಲಿಯೇ ಉಳಿಯಲು ವಸತಿಯ ಹಾಗೂ ಊಟದ ವ್ಯವಸ್ಥೆ ಮಾಡಿದರು. ಗದಿಗೆಯ್ಯನವರು ಮಕ್ಕಳಿಗೆ ಎಂಟು ವರ್ಷಗಳ ಕಾಲ ಸಂಗೀತವನ್ನು ಕಲಿಸಿದರು. ತಮ್ಮಲ್ಲಿದ್ದ ವಿದ್ಯೆಯನ್ನೆಲ್ಲ ಮಕ್ಕಳಿಗೆ ನಿರ್ವಂಚನೆಯಿಂದ ಧಾರೆ ಎರೆದರು. ಎಂಟು ವರ್ಷಗಳ ಅವಧಿಯಲ್ಲಿ ಮಕ್ಕಳಿಬ್ಬರೂ ಸಾಕಷ್ಟು ಸಾಧನೆಯನ್ನು ಮಾಡಿದರು. ಸ್ವತಂತ್ರವಾಗಿ ಕಚೇರಿಗಳನ್ನು ಮಾಡುವಷ್ಟು ಸಂಗೀತವನ್ನು ಸಿದ್ಧಿಸಿಕೊಂಡರು. ಗದಿಗೆಯ್ಯನವರು ಪ್ರಾಮಾಣಿಕವಾಗಿ ಒಂದು ಅಭಿಪ್ರಾಯವನ್ನು ಕುಮಾರಸ್ವಾಮಿಗಳ ಮುಂದಿಟ್ಟರು. ಅವರೆಂದರು, ‘ಬುದ್ಧಿ ನಾನು ಕಲಿಸುವುದೆಲ್ಲವೂ ಮುಗಿದಿದೆ. ಮಕ್ಕಳ ಬುದ್ದಿ ಎಂದಿಗೂ ತುಂಬಲಾರದ ಇಂಗು ಭೂಮಿ. ನಾನು ಹಾಕಿದ್ದೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅವರ ಜ್ಞಾನ ತೃಷೆ ಹಿಂಗಲಾರದು. ಅವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮೈಸೂರಿಗೆ ಕಳಿಸುವುದು ವಾಸಿ, ನಾನು ಮಕ್ಕಳನ್ನು ಮರಳಿ ತಮ್ಮ ಸಾನಿಧ್ಯಕ್ಕೆ ಒಪ್ಪಿಸುತ್ತಿದ್ದೇನೆ’.

ಕುಮಾರಸ್ವಾಮಿಗಳು ಮಕ್ಕಳನ್ನು ಮೈಸೂರಿಗೆ ಕಳಿಸುವಲ್ಲಿ ಕೆಲವು ಕಾಲಾವಕಾಶ ಬೇಕಾಗುತ್ತದೆ ಎಂದು ಯೋಚಿಸಿ ಅವರನ್ನು ನೆಲವಿಗಿಹಳ್ಳಿಗೆ ಕಳುಹಿದರು. ಅಲ್ಲಿ ಕಾಲರಾ ಬೇನೆಗೆ ತುತ್ತಾದ  ಗುರುಬಸವಯ್ಯ ಕೊನೆಯುಸಿರೆಳೆದರು. ಇದರಿಂದ ಗದಿಗಯ್ಯನಿಗೆ ಬಹು ದುಃಖವಾಯಿತು. ಶ್ರೀಗಳು ಬಂದು ಸಾಂತ್ವನವನ್ನು ಕೇಳಿದರು.

ಮುಂದೆ ಕೆಲವೇ ದಿನಗಳಲ್ಲಿ ಗದಿಗೆಯ್ಯನನ್ನು ಮೈಸೂರಿಗೆ ಉನ್ನತ ಸಂಗೀತ ಶಿಕ್ಷಣಕ್ಕಾಗಿ ಕಳುಹಿಸುವ ಏರ್ಪಾಟು ಮಾಡಿದರು.ಮೈಸೂರಿನಲ್ಲಿ ಗದಿಗಯ್ಯನ ಜೀವನ ಸುಖದ ಸುಪ್ಪತ್ತಿಗೆಯನೂ ಆಗಿರಲಿಲ್ಲ, ಮನಿಪ್ತ ಗೌರಿಶಂಕರ ಸ್ವಾಮಿಗಳಲ್ಲಿ  ಉಳಿದುಕೊಂಡು ಸಂಗೀತ ಕಲಿಯುತ್ತಿದ್ದರೂ ಅವರಿಗೆ ಭಾರವಾಗದೆಂಬ ಕಾರಣದಿಂದ ತಂಬೂರಿ ಸಾಥಿ ಮಾಡಿ, ಭಜನೆಗಳನ್ನು ಹಾಡಿ, ಕೀರ್ತನೆಗಳನ್ನುಹೇಳಿ ಚರಿತಾರ್ಥದ ವ್ಯವಸ್ಥೆ ಮಾಡಿಕೊಂಡರು.

ಶ್ರೀ.ಮ.ನಿ.ಪ್ರ. ಗೌರಿಶಂಕರ ಸ್ವಾಮಿಗಳು ಗದಿಗೆಯ್ಯನ ವ್ಯಕ್ತಿತ್ವದಿಂದ ತುಂಬ ಪ್ರಭಾವಿತರಾದರು. ಆತನ ನಡೆ, ನುಡಿ, ಚಿತ್ತಾಕರ್ಷಕ ವ್ಯಕ್ತಿತ್ವ ಮನೋಭೂಮಿಕೆ, ಸಾತ್ವಿಕತೆ ಇವೆಲ್ಲವೂ ಅವರ ಮೇಲೆ ಪ್ರಭಾವ ಬೀರಿದವು. ಅವನ ಮೇಲೆ ಇನ್ನಿಲ್ಲದ ವಾತ್ಸಲ್ಯ ಮೂಡಿತು.ಸಂಗೀತದಲ್ಲಿ ಸಿದ್ಧಿ ಪಡೆಯಲು ಬಂದಿರುವ ಈತನಿಗೆ ಗದಿಗೆಯ್ಯನೆಂಬ ಅಭಿಧಾನ ಸಲ್ಲದು, ಶಿವನು ಸಂಗೀತ ಪ್ರಿಯನಾದ್ದರಿಂದ ಶಿವನ ಹೆಸರೇ ಇವನಿಗೆ ಯೋಗ್ಯವೆಂದು ಭಾವಿಸಿ `ಪಂಚಾಕ್ಷರಿ’ ಎಂದು ಕರೆದರು. ಮೊದಲ ಸಲ ಗದಿಗೆಯ್ಯನನ್ನು ಹಾಗೆ ಕರೆದಾಗ ಅವನಿಗೂ ಅರ್ಥವಾಗಲಿಲ್ಲ. ನಂತರ, ಶ್ರೀಗಳೇ ತಿಳಿಸಿ ಹೇಳಿದಾಗ ಆತ ಅನಂದಗೊಂಡ. ಅಂದಿನಿಂದ ಗದಿಗೆಯ್ಯ ಎಂಬುದು ಮರೆಯಾಗಿ ಪಂಚಾಕ್ಷರಿ’ ಎಂಬುದು ಹೆಸರಾಯಿತು.

ಹೊಟ್ಟೆಯ ಹಸಿವು ಪಂಚಾಕ್ಷರಿಯನ್ನು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಆದರೆ ಸಂಗೀತದ ಹಸಿವು ಮಾತ್ರ ತಡೆಯಲಾರದಂತಿತ್ತು,ಪಂಚಾಕ್ಷರಿಯ ವ್ಯಕ್ತಿತ್ವದಿಂದ, ಹಾಡುಗಾರಿಕೆಯಿಂದ ಪ್ರಭಾವಿತರಾದ ಬಿಡಾರಂ ಕೃಷ್ಣಪ್ಪನವರು ಸಂಗೀತ ಕಲಿಸಲು ಒಪ್ಪಿಕೊಂಡರು.ಕಲವು ಕಾಲ ಅವರಲ್ಲಿ ಸಂಗೀತದ ಅಧ್ಯಯನ ನಡೆಯಿತಾದರೂ ಅವರಿಗೆ ಬಂದ ಕೌಟುಂಬಿಕ ತೊಂದರೆಗಳಿಂದಾಗಿ ಪಿಟೀಲು ವೆಂಕಟರಮಣಯ್ಯನವರಲ್ಲಿ ಪಂಚಾಕ್ಷರಿಯ ಸಂಗೀತದ ತಾಲೀಮು ಮುಂದುವರಿಯಿತು.

ಸ್ವತಃ ಬಿಡಾರಂ ಕೃಷ್ಣಪ್ಪನವರು ಮುಂದೆ ನಿಂತು ಪಂಚಾಕ್ಷರಿಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿದರು. ವೆಂಕಟರಮಣಯ್ಯನವರು ಅತ್ಯಂತ ಮುತುವರ್ಜಿಯಿಂದ ಸಂಗೀತ ಶಿಕ್ಷಣ ನೀಡಿದರು. ವೆಂಕಟರಮಣಯ್ಯನವರಲ್ಲಿ ಕಲಿಯಲಾರಂಭಿಸಿದ ನಂತರ ಪಂಚಾಕ್ಷರಿಗೆ ಕರ್ನಾಟಕಿ ಸಂಗೀತದ ಉನ್ನತ ಮಟ್ಟದ ಜ್ಞಾನವು ಪ್ರಾಪ್ತಿಯಾಯಿತು. ಪಂಚಾಕ್ಷರಿ ಶ್ರಮ ವಹಿಸಿ ಕಲಿತನು. ಮೈಸೂರಿನಲ್ಲಿದ್ದ ನಾಲ್ಕು ವರ್ಷಗಳ ಕಾಲ ತಪಸ್ಸಿನಂತೆ ಕಳೆದು ಸಂಗೀತದಲ್ಲಿ ಸ್ವತಃ ಉನ್ನತ ಮಟ್ಟವನ್ನು ತಲುಪಿದ್ದು ಸಾಮಾನ್ಯ ಸಾಧನೆಯೇನಲ್ಲ

ಈ ನಾಲ್ಕು ವರ್ಷಗಳು ಪಂಚಾಕ್ಷರಿಯ ಜೀವನದಲ್ಲಿ ಸಂಗೀತದ ಸಾಧನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲ ಘಟ್ಟ.ಈ ಕಾಲಾವಧಿಯಲ್ಲಿ ಗುರುವಿನ ಮುಖದಿಂದ ನೇರವಾಗಿ ಸಂಗೀತವನ್ನು ಕಲಿತದ್ದು ಒಂದು ಭಾಗ, ಇನ್ನೊಂದು ಮಹತ್ವದ ಭಾಗವೆಂದರೆ, ಮೈಸೂರಿನಲ್ಲಿ ಇರುವಷ್ಟು ಕಾಲವೂ ಉನ್ನತ ಮಟ್ಟದ ಅನೇಕ ಕಲಾವಿದರ ಸಂಗೀತವನ್ನು ಕೇಳುವ ಸದಾವಕಾಶ ಪಂಚಾಕ್ಷರಿಗೆ ಲಭ್ಯವಾಯಿತು. ಇದರಿಂದಾಗಿ ಅವನ ಸಂಗೀತಕ್ಕೆ ಒಂದು ಹೊಸ ಆಯಾಮ, ಮೆರಗು ಬಂದಿತು. ಕರ್ನಾಟಕಿ ಸಂಗೀತದ ಅನೇಕ ಮಹತ್ವದ ಸೂಕ್ಷ್ಮ ಸಂಗತಿಗಳು ಹೊಳೆದುದು ಇದೇ ಅವಧಿಯಲ್ಲಿ ವಿವಿಧ ಕಲಾವಿದರಿಂದ ಅನೇಕ ಮಹತ್ವದ ಕೀರ್ತನೆಗಳನ್ನು ಸಂಗ್ರಹಿಸಿದ್ದಲ್ಲದೇ ಹಾಡುಗಾರಿಕೆಯ ಮರ್ಮವನ್ನು ತಿಳಿಯಲು ಸಾಧ್ಯವಾಯಿತು.

ಮೈಸೂರಿನಲ್ಲಿರುವಾಗ ಅನೇಕ ಕಡೆಗಳಲ್ಲಿ ಸಂಗೀತ ಕಚೇರಿಗಳನ್ನು ಮಾಡುವ ಅವಕಾಶ ಪಂಚಾಕ್ಷರಿಗೆ ಲಭಿಸಿತು. ಹೀಗೆ ಅವಕಾಶ ದೊರೆತ ಎಲ್ಲ ಸಂದರ್ಭಗಳಲ್ಲೂ ತಾನೊಬ್ಬ ಪ್ರಬುದ್ಧ ಕಲಾವಿದನೆಂಬುದನ್ನು ಸಾಬೀತುಪಡಿಸಿದ. ಮೈಸೂರಿನ ಜನತೆ ಪಂಚಾಕ್ಷರಿಯನ್ನು ಸಂಗೀತದ ಘನ ವಿದ್ವಾಂಸನೆಂದು ಮನ್ನಿಸಿತು. ವಿದ್ಯಾರ್ಥಿಯಾಗಿ ಮೈಸೂರು ನಗರಕ್ಕೆ ಕಾಲಿಟ್ಟ ಗದಿಗೆಯ್ಯ ಪಂಚಾಕ್ಷರಿ ಎನಿಸಿಕೊಂಡು,ವಿದ್ವಾಂಸನಾಗಿ ರೂಪುಗೊಂಡ ಉಸ್ತಾದ ವಹೀದಖಾನರು ಕಿರಾಣಾ ಘರಾಣೆಯವರು. ಉಸ್ತಾದ ಅಬ್ದುಲ್ ಕರೀಂಖಾನರ ನಂತರ ಮೇರುಖಂಡದ ಗಾಯಕರು ಎಂದು ಹೆಸರುವಾಸಿಯಾದವರು. ಇವರ ಶಿಷ್ಯ ಉಸ್ತಾದ ಅಮೀರಖಾನರು ಸಹ ಅದೇ ಖ್ಯಾತಿಯನ್ನು ಪಡೆದರು. ಇವರ ಶಿಷ್ಯರಲ್ಲಿ  ಹೀರಾಬಾಯಿ ಬಡೋದೇಕರ್, ಶ್ರೀಮತಿ ಬೇಗಂ ಆಖೈರಿ, ಮುನ್ನಿಭಾಯಿ, ಹಾಗೂ ಪ. ಬಸವರಾಜ ರಾಜಗುರು ಪ್ರಸಿದ್ಧರಾಗಿದ್ದಾರೆ. ಇಂಥ ಶ್ರೇಷ್ಠ ತರಗತಿಯ ಗವಾಯಿಯನ್ನು ಹುಡುಕಿ ಹಾನಗಲ್ ಕುಮಾರಸ್ವಾಮಿಗಳು ಶಿವಯೋಗಮಂದಿರಕ್ಕೆ ಬರಮಾಡಿಕೊಂಡರು. ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಕುಮಾರಸ್ವಾಮಿಗಳು ಉಸ್ತಾದ ವಹೀದಖಾನರು ಸದಾಕಾಲ ಹರ್ಷಚಿತ್ತರಾಗಿರುವಂತೆ ನಿಗಾ ವಹಿಸಿದರು. ಅವರಿಗೆ ಬೇಕಾದ ಎಲ್ಲ ಅನುಕೂಲತೆಗಳನ್ನೂ ಒದಗಿಸಿದರು. ಅವರಿಗೆ ಪ್ರತಿತಿಂಗಳೂ ನೂರೈವತ್ತು ರೂಪಾಯಿಗಳ ಸಂಬಳ ನಿಗದಿಯಾಯಿತು.

ಒಂದು ಶುಭದಿನ ಉಸ್ತಾದ ವಹೀದಖಾನರು ಪಂಚಾಕ್ಷರಿಗವಯಿಗಳಿಗೆ ಸಂಗೀತದ ತಾಲೀಂನ್ನು ಪ್ರಾರಂಭಿಸಿದರು. ಈಗಾಗಲೇ ಹಿಂದುಸ್ತಾನಿ ಸಂಗೀತದಲ್ಲಿ ಸ್ವಪ್ರಯತ್ನದಿಂದ ಒಂದಿಷ್ಟು ಕೃಷಿ ಮಾಡಿಕೊಂಡಿದ್ದ ಪಂಚಾಕ್ಷರಿಗಮಯಿಗಳಿಗೆ ಕಲಿಸುವ ವಹೀದಖಾನರಿಗೆ ಯಾವ ತೊಂದರೆಯೂ ಆಗಲಿಲ್ಲ. ಪಂಚಾಕ್ಷರಿಗವಾಯಿಗಳು ಸೂಕ್ಷ್ಮ ಗ್ರಾಹಿಗಳು. ಗುರುವಿನ ಮುಖೇನ ಪ್ರಾಪ್ತವಾದ ಸಂಗೀತದ ಸುಧಾರಸವನ್ನು ಆನಂದದಿಂದ ಸ್ವೀಕರಿಸಿದರು. ನಾಲ್ಕುವರುಷಗಳ ಅವಿರತ ತಾಲೀಮಿನಲ್ಲಿ ಅವರೊಬ್ಬ ಪ್ರಬುದ್ಧ ಹಿಂದುಸ್ತಾನಿ ಗಾಯಕರಾಗಿ ರೂಪುಗೊಂಡರು.

ಇಷ್ಟೆಲ್ಲ ಉನ್ನತಿಗೇರಿದ್ದರೂ ಪಂಚಾಕ್ಷರಿಗವಯಿಗಳಿಗೆ ಮಾತ್ರ ಹಿಂದುಸ್ತಾನಿ ಸಂಗೀತದಲ್ಲಿ ತಾವು ಸಾಧಿಸಬೇಕಾದುದು ಇನ್ನೂ ಇದೆ ಎಂದೇ ಅನ್ನಿಸತೊಡಗಿತು. ಹೀಗಾಗಿ ಕೆಲವು ಕಾಲ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಆಗ ಸಂಗೀತಗಾರರಿಂದ ತುಂಬಿ ತುಳುಕುತ್ತಿತ್ತು. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಅನೇಕ ಸಂಗೀತಗಾರರು ಇಲ್ಲಿ ನೆಲೆಸಿದ್ದರು. ಸವಾಯಿಗಂಧರ್ವರ ಶಿಷ್ಯ ಕಾಗಲಕರಬುವಾ, ಗಾಯಕರಾದ ಉಮಾಮಹೇಶ್ವರಬುವಾ, ಉತ್ತರಕರಬುವಾ, ಬಾಬೂರಾವ ರಾಣೆ, ಹಾರ್ಮೋನಿಯಂ ಶಿಕ್ಷಕರಾದ ರಾಜವಾಡೆಬುವಾ, ಗೋವಿಂದರಾವ ಗಾಯಕವಾಡ, ವಿಟ್ಠಲರಾವ ಕೋರಗಾಂವಕರ ಮೊದಲಾದವರಿದ್ದರು.

ಶಿವರಾಮಬುವಾ ವಝೆ ಎಂಬ ಅಪ್ರತಿಮ ಗಾಯಕ ಕೂಡ ಆಗ ಬೆಳಗಾವಿಯಲ್ಲಿಯೇ ನೆಲೆಸಿದ್ದರು. ಇವರೆಲ್ಲರಿಗೂ ಕಳಶಪ್ರಾಯರಾಗಿ ರಾಮಕೃಷ್ಣಬುವಾ ವಝೆ ಬೆಳಗಾವಿಯಲ್ಲಿದ್ದರು. ಇಂಥ ನಗರಕ್ಕೆ ಪಂಚಾಕ್ಷರಿ ಗವಾಯಿಗಳು ಕಲಿಯಲು ಬರುವ ವ್ಯವಸ್ಥೆ ಆಯಿತು. ನಾಗನೂರು ಶಿವಬಸವಸ್ವಾಮಿಗಳ ಶ್ರೀಮಠದಲ್ಲಿ ಪಂಚಾಕ್ಷರಿಗವಾಯಿಗಳ ವಾಸ್ತವ್ಯದ ವ್ಯವಸ್ಥೆಯಾಯಿತು. ಗ್ವಾಲಿಯರ್ ಘರಾಣೆಯ ಅಧ್ವರ್ಯು ಎನಿಸಿದ ಪಂ.ರಾಮಕೃಷ್ಣಬುವಾ ವಝೆಯವರಲ್ಲಿ ಹಾಗೂ ಪ್ರೌಢ ದರ್ಜೆಯ ಗಾಯಕರೆನಿಸಿದ ಬಾಬೂರಾವ ರಾಣೆಯವರಲ್ಲಿ ಪಂಚಾಕ್ಷರಿಗವಾಯಿಗಳು ಕೆಲವು ಕಾಲ ಸಂಗೀತಾಧ್ಯಯನ ಮಾಡಿದರು.

ಪಂಚಾಕ್ಷರಿಗವಾಯಿಗಳ ಜೀವನವೇ ಸಂಗೀತ ಕಲಿಯುವುದಕ್ಕಾಗಿ ಮೀಸಲಾಯಿತು. ಒಂದು ಜನ್ಮದಲ್ಲಿ ಯಾರೂ ಪೂರ್ತಿಯಾಗಿ ಸಂಗೀತ ಕಲಿಯುವುದು ಸಾಧ್ಯವಿಲ್ಲವೆಂದು ಅವರು ಧೃಡವಾಗಿ ನಂಬಿದ್ದರು. ಈ ಜನ್ಮದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನೂ ಪೂರ್ತಿಕಲಿತು ಬಿಡಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿತ್ತು. ಹೀಗಾಗಿ ಅವರು ಸುರೇಶಬಾಬು ಮಾನೆಯವರಲ್ಲಿಯೂ ಸಂಗೀತ ಕಲಿತರು.ಇದಿಷ್ಟೇ ಸಾಲದೆಂಬಂತೆ ವಾದನಗಳ ಕಡೆಗೂ ವಾಲಿದರು. ಬಳ್ಳಾರಿ ರಾಘವಾಚಾರ್ಯರಲ್ಲಿ ಪಿಟೀಲು ನುಡಿಸುವದನ್ನು ಕಲಿತರು.

ವಾದನವನ್ನು ಕಲಿಯಲು ಪಂಚಾಕ್ಷರಿಗವಾಯಿಗಳಿಗೆ ಸೂಚಿಸಿದವರು ಹಾನಗಲ್ಲ ಕುಮಾರಸ್ವಾಮಿಗಳೇ! ಒಮ್ಮೆ ಅವರು ಹೇಳಿದರು-ನೀನು ಈಗಾಗಲೇ ಉಭಯಗಾನ ವಿಶಾರದನೆನಿಸಿರುವೆ. ಇವುಗಳ ಜೊತೆಗೆ ವಾದನದಲ್ಲಿಯೂ ಒಂದಿಷ್ಟು ಸಾಧಿಸು.’ ಅಂದಿನಿಂದ ಅವರು ವಾದನಕಲೆಯತ್ತಲೂ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಪಿಟೀಲು, ಹಾರ್ಮೋನಿಯಂ, ತಬಲಾ ನುಡಿಸುವುದನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸತೊಡಗಿದರು. ತಬಲಾ ಕಲಿಯುವ ಬಗೆಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಆದರೆ ತಬಲಾವಾದನವನ್ನು ಕಲಿಸುವ ಗುರು ದೊರೆಯಬೇಕಲ್ಲ! ಆಗ ಬೆಳಗಾವಿಯಲ್ಲಿ ಶಹಾಪೂರ ಮಲ್ಲೇಶಪ್ಪನೆಂಬುವವರು ಶ್ರೇಷ್ಠ ತಬಲಾವಾದಕರೆಂದು ಹೆಸರುವಾಸಿಯಾಗಿದ್ದರು. ತಮ್ಮ ದಿನನಿತ್ಯದ ಸಂಗೀತ ಪಾಠ ನಡೆಯುವಾಗ ಗವಾಯಿಗಳ ಶಿಷ್ಯರಲ್ಲಿ ಒಬ್ಬರಾದ ಶ್ರೀ ಶಿವಯ್ಯನವರು ತಬಲಾ ಸಾಥಿ ನೀಡುತ್ತಿದ್ದರು.

ಗವಾಯಿಗಳು ಅವರನ್ನೇ ಬೆಳಗಾವಿಗೆ ಕಳುಹಿಸಿ ಶಹಾಪುರದ ಮಲ್ಲೇಶಪ್ಪನವರಲ್ಲಿ ತಬಲಾವಾದನ ಕಲಿಯುವಂತೆ ಕಳುಹಿಸಿದರು. ಜೇಕಿನಕಟ್ಟೆಯ ಶಿವಯ್ಯನವರು ವ್ಯವಸ್ಥಿತವಾಗಿ ತಬಲಾ ಕಲಿತುಬಂದ ನಂತರ ಪಂಚಾಕ್ಷರಿಗವಯಿಗಳು ಅವನನ್ನ ತಮ್ಮ ಗುರುವೆಂದು ಭಾವಿಸಿ ತಬಲಾವಾದನವನ್ನು ಅಧ್ಯಯನ ಮಾಡಿದರು. ತಮ್ಮ ಶಿಷ್ಯನನ್ನೇ ಗುರುವೆಂದು ಭಾವಿಸುವ ಹೃದಯವಂತಿಕೆ ಸಂಗೀತಗಾರರಲ್ಲಿ ಕಂಡು ಬರುವುದು ವಿರಳವೇ ಸರಿ!

ಪಂಚಾಕ್ಷರಿಗಳು ತಮ್ಮ ತಬಲಾವಾದನದಲ್ಲಿಯೂ ವಿಶಿಷ್ಟತೆಯನ್ನು ಮೆರೆಯುತ್ತಿದ್ದು, ಎಲ್ಲರೂ ಬಲಗೈಯಿಂದ ತಬಲಾ ನುಡಿಸಿದರೆ,ಇವರು ಎಡಗೈಯಿಂದ ನುಡಿಸುತ್ತಿದ್ದರು. ಬಲಗೈ ಡಗ್ಗಾ ನುಡಿಸುತ್ತಿತ್ತು. ಸಾಮಾನ್ಯವಾಗಿ ಬಲಗೈಯನ್ನು ಸಂಗೀತಗಾರರು ಜತನವಾಗಿರಿಸಿ ಕೊಳ್ಳುತ್ತಾರೆ. ಆ ಕೈ ತಂಬೂರಿ ಮೀಟಲು, ಹಾರ್ಮೋನಿಯಂನ ಸ್ವರಗಳನ್ನು ನುಡಿಸಲು, ಪಿಟೀಲಿನ ಕಮಾನು ತೀಡಲು ಪ್ರಯೋಜನ ಕಾರಿಯಾಗುತ್ತದೆ. ಆದರೆ, ತಬಲಾವಾದನದಲ್ಲಿಯೂ ಬಲಗೈಯನ್ನೇ ಪ್ರಧಾನವಾಗಿ ಬಳಸಿದರೆ, ತಬಲಾವಾದನದಲ್ಲಿ ಹೆಚ್ಚಿನ ಮಾತ್ರೆಗಳು ತಬಲಾದ ಮೇಲೆಯೇ ನುಡಿಸಲ್ಪಡುವುದರಿಂದ ಅದಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಪಂಚಾಕ್ಷರಿಗವಾಯಿಗಳು ಎಡಗೈಯಿಂದ ತಬಲಾ ನುಡಿಸುವುದನ್ನು ರೂಢಿಸಿಕೊಂಡರು. ಪಂಚಾಕ್ಷರಿಗವಾಯಿಗಳ ಸಾಧನ ಎಂಥಹದ್ದೆಂದರೆ, ಅವರು ಕೆಲವೇ ದಿನಗಳಲ್ಲಿ ತಬಲಾ,ಪಿಟೀಲು, ಹಾರ್ಮೊನಿಯಂ, ಪಖಾವಜ್, ಸಾರಂಗಿ, ದಿಲ್‌ರುಬಾ, ಕೊಳಲು, ಹಾಯಿವಾದನಗಳನ್ನು ನುಡಿಸುವಲ್ಲಿ ನಿಷ್ಣಾತರೆನಿಸಿದರು.

ಆಗ ಪಂಚಾಕ್ಷರಿ ಗವಾಯಿಗಳಿಗೆ ಸುಮಾರು ಐವತ್ತು ಜನ ಶಿಷ್ಯರಿದ್ದರು. ಅವರಲ್ಲಿ ಕೆಲವರು ಸಂಸಾರಿಯಾಗುವ ತಯಾರಿಯಲ್ಲಿದ್ದವರು.ಮತ್ತು ಇನ್ನು ಕೆಲವರು ಆಗಲೇ ಸಂಸಾರಿಯಾದವರು. ಶಿವಯೋಗಮಂದಿರವು ವೀರಶೈವ ಮಠಾಧೀಶರಾಗುವವರಿಗೆ ಯೋಗ್ಯ ಶಿಕ್ಷಣ ನೀಡುವ ಕೇಂದ್ರವಾದ್ದರಿಂದ ಅಲ್ಲಿ ಸಂಸಾರಸ್ಥರಿಗೆ ತಂಗಲು ಅವಕಾಶವಿರಲಿಲ್ಲ. ಅಲ್ಲದೆ ಶಿವಯೋಗಮಂದಿರದಲ್ಲಿದ್ದು ಪಂಚಾಕ್ಷರಿಗವಾಯಿಗಳು ಸಂಗೀತಪಾಠ ಮಾಡುವುದು ಕೆಲವರಿಗೆ ಸರಿ ಬರಲಿಲ್ಲ.ಕೆಲವರು ಹಾನಗಲ್ಲ ಕುಮಾರಸ್ವಾಮಿಗಳವರೆಗೂ ದೂರನ್ನು ಒಯ್ದರು. ಈ ಸಂಗತಿ ಅವರನ್ನು ಚಿಂತೆಗೀಡುಮಾಡಿತು.

ಇದುವರೆಗೂ ಮಗನಂತೆ ಜೋಪಾನ ಮಾಡಿದ ಪೂಚಾಕ್ಷರಿಯನ್ನು ಇದ್ದಕ್ಕಿದ್ದ ಹಾಗೆ ಶಿವಯೋಗಮಂದಿರದಿಂದ ಹೊರಗೆ ಕಳಿಸುವುದು ಮಾನಸಿಕವಾಗಿ ಸಹಿಸಲಸಾಧ್ಯವಾದ ವಿಷಯವಾಗಿತ್ತು. ಆದರೆ, ಶಿವಯೋಗಮಂದಿರದ ವಟುಗಳು ನೀಡಿದ ದೂರಿನಲ್ಲಿಯೂ ತಥ್ಯವಿತ್ತು. ಇದು ಹಾನಗಲ್ಲ ಕುಮಾರಸ್ವಾಮಿಗಳಿಗೆ ಧರ್ಮಸಂಕಟದ ವಿಷಯವಾಗಿತ್ತು. ಕೊನೆಗೆ ಅವರು ಪಂಚಾಕ್ಷರಿಗವಾಯಿಗಳನ್ನು ಹಾರೈಸಿ ಬೀಳ್ಕೊಡುವ ನಿರ್ಧಾರಕ್ಕೆ ಬಂದರು. ಒಂದು ದಿನ ಪಂಚಾಕ್ಷರಿಗವಾಯಿಗಳನ್ನು ಕರೆದು ಹೇಳಿದರು- ‘ಪಂಚಾಕ್ಷರಿ, ನೀನು ಕೇವಲ ಕೆಲವರಿಗೆ ಸೀಮಿತವಾಗಬಾರದು. ನಿನ್ನ ಸಂಗೀತ ಲೋಕಾರ್ಪಣವಾಗಬೇಕು. ನೀನು ಸಮಾಜದ ಮಗನಾದ್ದರಿಂದ ಸಮಸ್ತ ಸಮಾಜಕ್ಕೂ ನಿನ್ನ ಸಂಗೀತ ಸಲ್ಲತಕ್ಕದ್ದು. ಆದ್ದರಿಂದ ನೀನು ನಿನ್ನ ಶಿಷ್ಯರೊಂದಿಗೆ ಸಂಗೀತ ಯಾತ್ರೆಯನ್ನು ಪ್ರಾರಂಭಿಸು. ಯಾವುದಕ್ಕೂ ಧೃತಿಗೆಡುವ ಕಾರಣವಿಲ್ಲ. ನಿನ್ನ ಬೆಂಬಲಕ್ಕೆ ನಾವಿದ್ದೇವೆ.’

ಓರ್ವ ಅಂಧ ಕಲಾವಿದ, ಜಗತ್ತನ್ನೇ ನೋಡದೆ, ಕುಮಾರಸ್ವಾಮಿಗಳ ಅಕ್ಕರೆಯಲ್ಲಿ ಬೆಳೆದ ಕೂಸು. ಇದ್ದಕ್ಕಿದ್ದ ಹಾಗೆ ಸಮಾಜದ ದಾರುಣ ಹೊಡೆತಕ್ಕೆ ತೆರೆದುಕೊಳ್ಳುವುದು ಕಲ್ಪಿಸಿಕೊಳ್ಳಲಾರದ ಸಂಗತಿಯಾಗಿತ್ತು. ಶಿವಯೋಗಮಂದಿರದಲ್ಲಿಯೇ ಉಳಿಸಿಕೊಳ್ಳುವಂತೆ ಗುರುಗಳನ್ನು ಪರಿಪರಿಯಾಗಿ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಆದರೆ, ಅದು ಅನಿವಾರ್ಯವೂ ಆಗಿತ್ತು, ಪಂಚಾಕ್ಷರಿಗವಾಯಿಗಳು ಕುಮಾರಸ್ವಾಮಿಗಳ ಆಶೀರ್ವಾದದ ಅಕ್ಷಯನಿಧಿಯೊಂದಿಗೆ ತಮ್ಮ ಶಿಷ್ಯರನ್ನು ಕಟ್ಟಿಕೊಂಡು ಶಿವಯೋಗಮಂದಿರದಿಂದ ಹೊರಬಿದ್ದರು.

ಹಾನಗಲ್ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿಯನ್ನು ಬೀಳ್ಕೊಡುವಾಗ ಮಾರ್ಗದರ್ಶನ ಪರವಾದ ಕೆಲವು ಮಾತುಗಳನ್ನು ಹೇಳಿದರು. ಸಂಗೀತವನ್ನು ಸಮಾಜ ಸೇವೆಯ ಮಂತ್ರವನ್ನಾಗಿ ಉಪಯೋಗಿಸುವಂತೆಯೂ, ಸರ್ವಧರ್ಮದ ವಿದ್ಯಾರ್ಥಿಗಳಿಗೆ ಅದರಲ್ಲೂ ಅಂಧ ಮತ್ತು ವಿಕಲಾಂಗ ಮಕ್ಕಳಿಗೆ ಅಕ್ಕರತೆಯಿಂದ ಸಂಗೀತವನ್ನು ಕಲಿಸುವಂತೆಯೂ ಉಪದೇಶಿಸಿದರು. ಸಮಾಜಕಲ್ಯಾಣಕ್ಕಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮಗಳಿಗೆ ಹಣ ಕೇಳದಿರುವಂತೆ ಸೂಚಿಸಿದರು. ‘ಇಷ್ಟೇ ಹಣವನ್ನು ಕೊಡಬೇಕೆಂದು ಕರಾರು ಹಾಕಬೇಡ, ನಿನಗೆ ಹಣದ ಅಡಚಣೆಯಿದ್ದಾಗ ನನ್ನನ್ನು ನೆನಪಿಸಿಕೋ. ನಿನ್ನ ಸದ್ಭಕ್ತರ ನೆರವಿನಿಂದ, ಅವರ ಸಹಾಯ ಸಹಕಾರದಿಂದ ಸಂಗೀತ ಶಾಲೆಯನ್ನು ನಡೆಸು ಕುಮಾರಸ್ವಾಮಿಗಳ ಈ ಮಾತಿಗೆ ಪಂಚಾಕ್ಷರಿಗವಾಯಿಗಳು ಪ್ರತಿಯಾಗಿ ಏನನ್ನೂ ಹೇಳದೇ, ಅವರ ಅಪ್ಪಣೆಯನ್ನು ಶಿರಸಾವಹಿಸಿ ಪಾಲಿಸುವುದಾಗಿ ವಚನವಿತ್ತರು. ಮತ್ತು ತಾವಿತ್ತ ವಚನದಂತೆ ನಡೆದುಕೊಂಡರು.

ಪಂಚಾಕ್ಷರಿ ಗವಾಯಿಗಳು ಮೊದಲಿನಿಂದಲೂ ರಂಗಭೂಮಿಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡವರು, ನಾಟಕಗಳ ಬಗೆಗೆ ವಿಶೇಷ ಪ್ರೀತಿಯಿದ್ದವರು, ನಾಟಕಗಳ ಮೂಲಕವೇ ಹಿಂದುಸ್ತಾನಿ ಸಂಗೀತದ ಒಳತಿರುಳನ್ನು ಅರಿಯಲು ಪ್ರಯತ್ನಿಸಿದವರು. ಲಿಂಗದಳ್ಳಿಯಲ್ಲಿ ಗವಾಯಿಗಳ ಸಂಗೀತಶಾಲೆ ಬೀಡು ಬಿಟ್ಟಾಗ ನಾಟಕ ಕಂಪನಿಯೊಂದನ್ನು ಪ್ರಾರಂಭಿಸುವ ವಿಚಾರ ಸುಳಿಯಿತು. ಲಿಂಗದಳ್ಳಿಯ ಭಕ್ತರು. ಕಲಾಪ್ರೇಮಿಗಳು, ಎಲ್ಲ ಬಗೆಯ ಸಹಾಯವನ್ನೂ ನೀಡಲು ಸಿದ್ಧರಾದರು. ಇದಕ್ಕೆ ಹಾನಗಲ್ಲ ಕುಮಾರಸ್ವಾಮಿಗಳ ಕೃಪಾಶೀರ್ವಾದವೂ ದೊರೆಯಿತು. ಹೀಗೆ ಪಂಚಾಕ್ಷರಿಗವಯಿಗಳ ನೇತೃತ್ವದಲ್ಲಿ ‘ಶ್ರೀ ಮಳೇಮಲ್ಲೇಶ್ವರ ಸಂಗೀತ ನಾಟಕ ಮಂಡಳಿ’ ಉದಯಿಸಿತು.

ಪ್ರಾರಂಭದಲ್ಲಿ ನಾಟಕ ಕಂಪನಿಗೆ ಒಳ್ಳೆಯ ಉತ್ತೇಜನ ದೊರೆಯಿತು. ಆಗಿನ ನಾಟಕಗಳಲ್ಲಿ ಸಂಗೀತಕ್ಕೆ ಒಳ್ಳೆಯ ಮಹತ್ವವಿದ್ದುದರಿಂದ, ಗವಾಯಿಗಳ ಕಂಪನಿಯಲ್ಲಿ ಒಳ್ಳೆಯ ಸಂಗೀತಗಾರರಿದ್ದುದರಿಂದ ನಾಟಕಗಳು ಆರ್ಥಿಕವಾಗಿಯೂ ಯಶಸ್ವಿಯಾದುವು. ಗವಾಯಿಗಳ ಕಂಪನಿಯು ಡಾ.ಪುಟ್ಟರಾಜ ಗವಯಿಗಳು ರಚಿಸಿದ ನಾಟಕಗಳನ್ನೇ ಹೆಚ್ಚಾಗಿ ಆಡುತ್ತಿತ್ತು. ಗವಾಯಿಗಳ ಕಂಪನಿಯು ಅಧ್ಯಾತ್ಮಿಕ ಮಹತ್ವವುಳ್ಳ ನಾಟಕಗಳೆಡೆಗೆ ಹೆಚ್ಚಿನ ಮಹತ್ವ ನೀಡಿತು. ಗವಾಯಿಗಳ ಕಂಪನಿಯಲ್ಲಿ ಸ್ತ್ರೀಯರಿಗೆ ಅವಕಾಶವಿರಲಿಲ್ಲ, ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ಕಂಪನಿಗೆ ಪ್ರಾರಂಭದಲ್ಲಿ ಒಳ್ಳೆಯ ಆದಾಯ ಪ್ರಾಪ್ತವಾದರೂ ಕುರವತ್ತಿ ಕ್ಯಾಂಪಿನಲ್ಲಿರುವಾಗ ಪರಿಕರಗಳನ್ನು ಒತ್ತೆಯಿಡುವ ಪ್ರಸಂಗ ಬಂತು.

ಬೇರೆ ಕಂಪನಿಗಳು ಭರ್ಜರಿ ಸೆಟ್ಟುಗಳೊಂದಿಗೆ ನಾಟಕಗಳನ್ನು ಪ್ರದರ್ಶಿಸುತ್ತಿರುವಾಗ ಅವುಗಳೆಡಗೆ ಜನತೆ ಆಕರ್ಷಿತವಾಗುವುದು ಸಾಮಾನ್ಯವಾಗಿತ್ತು. ಗವಾಯಿಗಳ ಕಂಪನಿಯಲ್ಲಿ ಅಭಿನಯ ಹಾಗೂ ಸಂಗೀತವೇ ಪ್ರಧಾನವಾದ ಕಾರಣದಿಂದ ಭರ್ಜರಿ ಸೆಟ್ಟುಗಳಿಗೆ ಮಹತ್ವವಿರಲಿಲ್ಲ. ಕಂಪನಿಗಾದ ನಷ್ಟವನ್ನು ಗವಾಯಿಗಳು ಸಂಗೀತ ಕಚೇರಿಗಳಲ್ಲಿ ಹಾಡಿ ತುಂಬಿಕೊಟ್ಟರು. ಒತ್ತೆಯಿಟ್ಟ ಪರಿಕರಗಳನ್ನು ಬಿಡಿಸಿಕೊಂಡರು. ಅಲ್ಲಿಂದ ಮುಂದೆ ಅವರು ನಾಟಕದ ಉಸಾಬರಿ ಸಾಕೆಂದು ಬಿಟ್ಟುಬಿಟ್ಟರು. ಮತ್ತೆ ತಮ್ಮ ಸಾಧನೆಯನ್ನು ಸಂಗೀತದಲ್ಲಿಯೇ ಕೇಂದ್ರೀಕರಿಸಿದರು.

ನರಗುಂದದ ನಾಗರಿಕರು ಗವಾಯಿಗಳಿಗೆ ಮತ್ತೊಮ್ಮೆ ನಾಟಕ ಕಂಪನಿಯನ್ನು ಸ್ಥಾಪಿಸುವಂತೆ ಒತ್ತಾಯಿಸತೊಡಗಿದರು. ಗವಾಯಿಗಳಿಗೆ ನಾಟಕ ಕಂಪನಿ ಸ್ಥಾಪಿಸುವ ಮನಸ್ಸು ಎಳ್ಳಷ್ಟೂ ಇರಲಿಲ್ಲ. ಆದರೆ, ನರಗುಂದದ ಜನರ ಒತ್ತಾಯಕ್ಕೆ ಅವರು ಮಣಿಯಲೇಬೇಕಾಯಿತು.ಈ ಕಂಪನಿಯ ಸ್ಥಾಪನೆಯಲ್ಲಿ ನರಗುಂದದ ನಾಗಭೂಷಣ ಶ್ರೀಗಳು ಮಹತ್ತರ ಪಾತ್ರವನ್ನು ವಹಿಸಿದರು. ಕಂಪನಿಯ ಮೊದಲ ನಾಟಕವಾಗಿ ಪುಟ್ಟರಾಜ ಗವಾಯಿಗಳು ಬರೆದ ‘ಶ್ರೀ ಸಿದ್ಧರಾಮೇಶ್ವರ’ ನಾಟಕವನ್ನು 1940ರ ವಿಜಯ ದಶಮಿಯಂದು ಪ್ರಯೋಗಿಸಲಾಯಿತು.

ಪಂಚಾಕ್ಷರಿಗವಾಯಿಗಳ ಕಂಪನಿಯಲ್ಲಿ ಗದಿಗೆಯ್ಯ ಬೀಳಗಿ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ದೊಡ್ಡಬಸವಾರ್ಯ ಆರಿಬೆಂಚಿ, ಚೆನ್ನಬಸವಯ್ಯ ನರೇಗಲ್ ಮೊದಲಾದವರು ತಮ್ಮ ಸಮರ್ಥ ಅಭಿನಯ ಹಾಗೂ ಸುಮಧುರ ಸಂಗೀತದಿಂದ ನಾಟಕದ ಯಶಸ್ಸಿಗೆ ಕಾರಣರಾದರು. ಸ್ವತಃ ಪಂಚಾಕ್ಷರಿ ಗವಾಯಿಗಳು ತಬಲಾ ಹಾಗೂ ಪುಟ್ಟರಾಜ ಗವಾಯಿಗಳು ಹಾರ್ಮೋನಿಯಂ ನುಡಿಸಿ ಹೆಚ್ಚಿನ ಮೆರಗು ತುಂಬುತ್ತಿದ್ದರು. ನಾಟಕ ಎಷ್ಟು ಸೊಗಸಾಗಿತ್ತೆಂದರೆ, ಜನ ಮತ್ತೆ ಮತ್ತೆ ನಾಟಕ ನೋಡಿದರು. ನಾಟಕ ಕಂಪನಿಯಿಂದಾಗಿ ಗವಾಯಿಗಳು ಋಣ ಮುಕ್ತರಾದರು.

ಪಂಚಾಕ್ಷರಿ ಗವಾಯಿಗಳ ವಿದ್ವತ್ತನ್ನು ಮನ್ನಿಸಿ ಅನೇಕರು ಅವರಿಗೆ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ. ‘ಉಭಯಗಾನ ವಿಶಾರದ’ ಎಂಬುದು ಅವರ ಜನಪ್ರಿಯ ಬಿರುದು. ಈ ಬಿರುದನ್ನು ಹಾನಗಲ್ ಕುಮಾರಸ್ವಾಮಿಗಳೇ ಪಂಚಾಕ್ಷರಿ ಗವಾಯಿಗಳಿಗೆ ಕರುಣಿಸಿದರು. ಈ ಬಿರುದನ್ನು ದಯಪಾಲಿಸಿದ್ದರ ಹಿಂದೆ ಒಂದು ಕತೆಯಿದೆ. ಕೆಲವರು ಗವಯಗಳ ವಿಷಯದಲ್ಲಿ ವಿನಾಕಾರಣ ಮಾತ್ಸರ್ಯವನ್ನು ತಾಳಿದ್ದರು. ಅವರಿಗೆ ದೊರೆಯುತ್ತಿದ್ದ ಮನ್ನಣೆ, ಗೌರವಗಳನ್ನು ಕಂಡು ಸಹಿಸದ ಕೆಲವರು ಇಲ್ಲಸಲ್ಲದ ಟೀಕೆಗಳನ್ನು ಪ್ರಾರಂಭಿಸಿದರು.

ಇದನ್ನು ತೊಡೆಯುವುದಕ್ಕಾಗಿ ಹಾನಗಲ್ ಕುಮಾರಸ್ವಾಮಿಗಳು 1915ರಲ್ಲಿ ಒಂದು ಸಂಗೀತ ವಿದ್ವದ್ ಗೋಷ್ಠಿಯನ್ನು ಕರೆದರು. ಇದಕ್ಕಾಗಿ ನಾಡಿನ ಶ್ರೇಷ್ಠ ಸಂಗೀತಗಾರರೆಲ್ಲ ಆಮಂತ್ರಿತರಾದರು. ಮೂರುದಿನಗಳ ಕಾಲ ನಡೆದ ಈ ಗೋಷ್ಠಿಯಲ್ಲಿ ಸಂಗೀತದ ಅತ್ಯಂತ ಜಟಿಲ ವಿಷಯಗಳನ್ನು ಚರ್ಚಿಸಲಾಯಿತು. ಎಲ್ಲದಕ್ಕೂ ಗವಾಯಿಗಳು ಸಮರ್ಥ ಉತ್ತರಗಳನ್ನು ದಯಪಾಲಿಸಿದರು. ಗೋಷ್ಠಿಯ ಕೊನೆಗೆ ಗವಾಯಿಗಳು ಸಂಗೀತದ ಅತ್ಯಂತ ಕ್ಲಿಷ್ಟಕರ ರಾಗಗಳನ್ನು, ಸ್ವರಮಾಲಿಕೆಗಳನ್ನು ಮೂರುದಿನವೂ ಪ್ರಸ್ತುತ ಪಡಿಸಿದರು. ಗೋಷ್ಠಿಯ ಕೊನೆಗೆ ಎಲ್ಲರೂ ಗವಾಯಿಗಳ ಪಾಂಡಿತ್ಯವನ್ನು ಹೊಗಳಿದರು. ಮತ್ಸರ ಪಟ್ಟು ಅಪಪ್ರಚಾರ ಮಾಡುತ್ತಿದ್ದವರಿಗೆ ಮುಖಭಂಗವಾಯಿತು. ಇದೇ ಸಂದರ್ಭದಲ್ಲಿ ಅವರಿಗೆ ‘ ಉಭಯಗಾನ ವಿಶಾರದ’ ಎಂಬ ಬಿರುದನ್ನು ದಯಪಾಲಿಸಲಾಯಿತು. ‘ಸಂಗೀತ ರತ್ನ’, ‘ಸಂಗೀತ ಸಾಮ್ರಾಟ’, ‘ಗಾನಯೋಗಿ’ ಭೂ ಗಂಧರ್ವಚಂದ್ರ’ ಮೊದಲಾದ ಬಿರುದುಗಳಿಂದ ಗವಾಯಿಗಳು ಅಲಂಕೃತರಾದರು.

1929ರಲ್ಲಿ ವಿಜಾಪುರದ ಸಿದ್ದೇಶ್ವರ ಸಂಸ್ಥೆಯು ಗವಾಯಿಗಳಿಗೆ ‘ಗಾನಕಲಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು. 1935ರಲ್ಲಿ ರಂಭಾಪುರಿ ಪೀಠಾಧೀಶ್ವರ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರು ಸಂಗೀತ ಸಾಗರ’ ಎಂಬ ಬಿರುದನ್ನಿತ್ತು ಗೌರವಿಸಿದರು.1938ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಖಿಲಭಾರತ ವೀರೈವ ಮಹಾಸಮ್ಮೇಳನದಲ್ಲಿ ಗಾಯನಾಚಾರ್ಯ’ ಎಂಬ ಬಿರುದನ್ನಿತ್ತು ಗೌರವಿಸಲಾಯಿತು. 1939ರಲ್ಲಿ ಹೊಂಬಳದ ಜ್ಞಾನವರ್ಧಕ ವಾಚನಾಲಯ ಮಂಡಳಿಯು ಗವಾಯಿಗಳಿಗೆ ಸಂಗೀತ ಸುಧಾನಿಧಿ’ ಎಂಬ ಬಿರುದನ್ನಿತ್ತು ಗೌರವಿಸಿತು.

ಹೀಗೆ ಅನೇಕ ಮಾನಸಮ್ಮಾನಗಳನ್ನು ಪಡೆದ ಗವಾಯಿಗಳು ಸಂಗೀತ ಸಾಧನೆ ಮತ್ತು ಬೋಧನೆಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಂಗೀತ ಅವರ ಜೀವನದ ಉಸಿರಾಗಿತ್ತು. ಈ ಪ್ರಸಂಗವನ್ನು ಗಮನಿಸಿ,ಗವಾಯಿಗಳಿಗೆ ನೆಚ್ಚಿನ ಕೆಲವು ವಸ್ತುಗಳಿದ್ದವು. ಅವುಗಳಲ್ಲಿ ದೊಡ್ಡ ಗಾತ್ರದ ತಾಮ್ರದ ತಂಬಿಗೆಯೂ ಒಂದು. ಅವರು ಸಂಚಾರ ದಲ್ಲಿದ್ದಾಗಲೂ ಕೂಡ ಅದವರ ಜೊತೆ ಇರಲೇ ಬೇಕಿತ್ತು. ಒಮ್ಮೆ ಯಾರದೋ ಅಚಾತುರ್ಯದಿಂದ ಈ ತಂಬಿಗೆ ಕಳೆದು ಹೋಯಿತು. ಗವಯಿಗಳು ತೀರ ಹಳಹಳಿಸಿದರು. ಅನೇಕ ವರ್ಷಗಳಿಂದ ಜೊತೆಗಿದ್ದ ತಂಬಿಗೆ ಇಲ್ಲವಾದುದು ಗವಾಯಿಗಳ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿತು. ಗುರುಗಳ ಈ ಅವಸ್ಥೆಯನ್ನು ಕಂಡು ಶಿಷ್ಯರು ವಾರಪೂರ್ತಿ ಅದಕ್ಕಾಗಿ ಹುಡುಕಾಟ ನಡೆಸಿದರು. ತಂಬಿಗೆ ಪತ್ತೆಯಾಗಲಿಲ್ಲ. ಆದರೂ ಮನದ ಮೂಲೆಯೊಂದರಲ್ಲಿ ಅದಿಲ್ಲವೆಂಬ ಭಾವ ಮನೆಮಾಡಿಕೊಂಡೇ ಇತ್ತು.

ಕೆಲವು ದಿನಗಳ ತರುವಾಯ ಒಮ್ಮ ಗುರುಗಳು ತಮ್ಮ ಸಂಚಾರವನ್ನು ಮುಗಿಸಿಕೊಂಡು ಬರುವಾಗ ಇದ್ದಕ್ಕಿದ್ದ ಹಾಗೆ ಒಂದು ನಾದ ಅವರನ್ನು ತಡೆದು ನಿಲ್ಲಿಸಿತು. ಮತ್ತೊಮ್ಮೆ ಗಮನವಿಟ್ಟು ಆ ನಾದವನ್ನು ಆಲಿಸಿದರು. ಹೌದು ಅದು ತಮ್ಮ ತಂಬಿಗೆಯ ನಾದವೇ ಸಂಶಯವಿಲ್ಲ! ಕೂಡಲೇ ಶಿಷ್ಯರನ್ನು ಕರೆದು ಅದನ್ನು ತರುವಂತೆ ಹೇಳಿದರು. ಮನೆಯೊಂದರಲ್ಲಿ ಅಳುತ್ತಿದ್ದ ಮಗುವನ್ನು ರಮಿಸಲು ಓರ್ವ ಅಜ್ಜಿ ಗವಾಯಿಗಳ ತಂಬಿಗೆಯನ್ನು ಬಾರಿಸಿ ಆಟವಾಡಿಸುತ್ತಿದ್ದಳು. ಶಿಷ್ಯರು ಆ ತಂಬಿಗೆಯ ವಿಚಾರ ಹೇಳಲು ಅಜ್ಜಿ ಗವಾಯಿಗಳಲ್ಲಿಗೆ ಬಂದು ತಂಬಿಗೆಯನ್ನು ಒಪ್ಪಿಸಿ ಕ್ಷಮೆಯಾಚಿಸಿದಳು. ಗವಾಯಿಗಳ ನಾದಗ್ರಹಣ ಶಕ್ತಿ ಇಷ್ಟೊಂದು ಸೂಕ್ಷ್ಮವಾಗಿತ್ತು. ಸಂಗೀತವನ್ನೇ ಅವರು ಬದುಕಿದರು. ಬದುಕಿನ ಕೊನೆಯಕ್ಷಣದವರೆಗೂ ಸಂಗೀತಕ್ಕಾಗಿ ಅವರ ಜೀವನ ತುಡಿಯುತ್ತಲೇ ಇತ್ತು.

1944ರಲ್ಲಿ ಮೃತ್ಯುಂಜಯ ಶ್ರೀಗಳ ಅಪ್ಪಣೆಯ ಮೇರೆಗೆ ಧಾರವಾಡ ಮುರುಘಾಮಠದಲ್ಲಿ ಶ್ರಾವಣ ಮಾಸದ ಸಂಗೀತ ಸೇವೆಯನ್ನು ಸಲ್ಲಿಸಿದರು. ಅಂದು ಮಿಯಾ ಮಲ್ದಾರ ರಾಗದಲ್ಲಿ ಕರೀಮ ನಾಮ ತೇರೋ’ ಬಡಾಖ್ಯಾಲ್ ಬಂದಿಶ್‌ನ್ನು ಹಾಗೂ ‘ಉಮಢಫುಮಢ ಘನ ಗರಜೆ’ ಬಂದಿಶ್ಯದಲ್ಲಿ ಛೋಟಾಖ್ಯಾಲ್‌ನ್ನು ಹಾಡಿದರು. ಅಲ್ಲಿಂದ ಬರುವಾಗ ಶ್ರೀಗಳಲ್ಲಿ ಅವರು ವಿನಂತಿಸಿ ಕೊಂಡರು ಈ ಜೀವನದಲ್ಲಿ ಇಷ್ಟು ಸಾಕು. ನನ್ನನ್ನು ತಮ್ಮ ಪಾದಗಳಲ್ಲಿ ಕರೆದುಕೊಳ್ಳಿ’ ಶ್ರೀಗಳು ಅವರ ಈ ಬೇಡಿಕೆಯಿಂದ ಗಂಭೀರರಾದರು ಮತ್ತು ಹೇಳಿದರು “ಗವಾಯಿಗಳೇ, ಕುಮಾರೇಶನ ಕರೆ ಇನ್ನೂ ಬಂದಿಲ್ಲ. ನೀವಿನ್ನೂ ಬಾಳಿ, ಸಂಗೀತವನ್ನು ಬೆಳಗಬೇಕಾದವರು”

ಬಹುಶಃ ಅದೇ ಅವರ ಕೊನೆಯ ಸಂಗೀತ ಕಚೇರಿ,

ಗದುಗಿಗೆ ಬರುತ್ತಲೇ ನಾಟಕ ಕಂಪನಿಯೊಂದಿಗಿದ್ದ ಪುಟ್ಟರಾಜ ಗವಾಯಿಗಳನ್ನು ಕರೆಸಿದರು. ಅವರು ಬರುವುದರೊಳಗಾಗಿ ಮೃತ್ಯುಪತ್ರ ಸಿದ್ಧವಾಗಿತ್ತು. ವೀರೇಶ್ವರ ಪುಣ್ಯಾಶ್ರಮವನ್ನು ಪುಟ್ಟರಾಜ ಗವಾಯಿಗಳ ಹೆಸರಿಗೆ ವರ್ಗಾಯಿಸಿಯಾಗಿತ್ತು. ಎಲ್ಲವನ್ನೂ ಅವರಿಗೆ ತಿಳಿಸಿ ಹೇಳಿದರು.

ಗವಾಯಿಗಳು ತಮಗಿರುವ ಅನಾರೋಗ್ಯದಿಂದ ಹೊರಬರುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ್ದರು. ಡಾ.ಮುನ್ಶಿಯವರು ಶಸ್ತ್ರ ಚಿಕಿತ್ಸೆಯಾದರೆ ಗವಾಯಿಗಳು ಬದುಕುವರೆಂದರು. ಆದರೆ ಗವಾಯಿಗಳು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ತಮ್ಮ ಅವತಾರವನ್ನು ಸಮಾಪ್ತಿ ಮಾಡುವ ಸಂಕಲ್ಪ ಮಾಡಿಯಾಗಿತ್ತು. 1944, ಜೂನ್ 14ನೆಯ ದಿನ, ಪಂಚಾಕ್ಷರಿ ಗವಾಯಿಗಳು ಕುಮಾರೇಶ್ವರನಲ್ಲಿ ಲೀನವಾದರು.ಅವರ ಗಂಧರ್ವಗಾನ ಈಗಲೂ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೇಳಿ ಬರುತ್ತಲೇ ಇದೆ!

ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರು ಯಾವ ಲೌಕಿಕ ಭೋಗಭಾಗ್ಯವನ್ನು ಬಯಸಿ ಪಡೆದವರಲ್ಲ ; ಆದರೆ ಅವರ ಅಧ್ಯಾತ್ಮ ಪರಿವಾರದಲ್ಲಿಯ ಅವರ ಶಿಷ್ಯ ಸಂಪತ್ತು ಅಪರಿಮಿತವಾದುದು, ಲೋಕೋತ್ತರವಾದುದು ಅವರು ತಮ್ಮ ಸಮಾಜಸೇವೆಯ ಕನಸನ್ನು ಲೋಕಹಿತಸಾಧನೆಯ ಆದರ್ಶವನ್ನೂ ಪೂರ್ಣ ಮಾಡುವ ಹಿರಿಯ ಹೊಣೆಗಾರಿಕೆಯನ್ನು ಮಂದಿರದ ಸಾಧಕರ ಮೇಲೆ ಕಾರ್ಯಕರ್ತರ ಮೇಲೆ ಬಿಟ್ಟು ಬಯಲಾದರು. ಅವರ ಸೇವಾಭಾವದ ಕಮ್ಮಟವಾದ ಮಂದಿರದಲ್ಲಿ ದೀಕ್ಷಿತರಾದ ಶ್ರೀಗಳವರು, ಸಂಗೀತಗಾರರು, ಕಲಾವಂತರು, ಅನುಭವಿಗಳು, ಸಂಶೋಧಕರು, ಶಾಸ್ತ್ರಿಗಳು ಶಿಕ್ಷಕರು ಮುಂತಾಗಿ ದಕ್ಷರಾದ ಕಾರ್ಯಕರ್ತರು ಈ ಲೋಕಸೇವೆಯ ಭಾರವನ್ನು ಹೊತ್ತು ಅನೇಕ ಮುಖವಾಗಿ ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ. ಇವರ ರೂಪದಲ್ಲಿ ಶ್ರೀಗಳವರ ಕಾರ್ಯಶಕ್ತಿ ಪ್ರಭೆಯ ಕಿರಣಗಳು ಅಲ್ಲಲ್ಲಿ ಮೂಡಿ ನಾಡಬಾನನ್ನು ಬೆಳಗಿದ್ದಾವೆ ಮಂದಿರದ ಫಲಿತಾಂಶಗಳ ಪ್ರತ್ಯಕ್ಷ ದಿಗ್ದರ್ಶನವನ್ನು ನಾಡಿನ ಸರ್ವತೋಮುಖವಾದ ಏಳ್ಗೆಗೆ ವಿನಿಯೋಗವಾಗುತ್ತಿರುವ ಶ್ರೀಗಳವರ ಈ ಶಿಷ್ಯ ಸಂಪತ್ತಿನಲ್ಲಿ ಕಾಣಬಹುದಾಗಿದೆ.

1. ಸವದತ್ತಿಯ ಶ್ರೀ ನಿ ಪ್ರ ಅಪ್ಪಯ್ಯ (ಶಿವಲಿಂಗ) ಸ್ವಾಮಿಗಳು

ಸವದತ್ತಿಯ ಶ್ರೀ ನಿ ಪ್ರ ಅಪ್ಪಯ್ಯ ಸ್ವಾಮಿಗಳು ಹಾನಗಲ್ಲ ಶ್ರೀಗಳವರ ಶಿಷ್ಯ ಸಂಪತ್ತಿಯ ಭಾಂಡಾರದಲ್ಲಿ ಮುಕುಟಮಣಿಯಾಗಿ ರಾರಾಜಿಸಿದರು ಅವರು ಮುಧೋಳ ಸ್ವತಂತ್ರಿ ಮಠದಲ್ಲಿ ಬಿದರಿ ಕುಮಾರ ಶಿವಯೋಗಿಗಳ ಕರುಣೆಯ ಕಂದರಾಗಿ ಶಾ ಶ ೧೮೧೬ನೆಯ ಕಾರ್ತಿಕ ಶು ೧ನೇ ಶುಭದಿನ ಜನಿಸಿದರು ವಟು ಮಹಾಲಿಂಗಾರ್ಯ ಗುರುಪುತ್ರನಾಗಿಯೆ ಬೆಳೆದನು  ಬಾಲ್ಯದಲ್ಲಿಯೆ ಬಿದರಿ ಶ್ರೀಗಳವರು ಮಹಾಲಿಂಗಾರ್ಯನನ್ನು ತಮಗೆ ಬೇಕೆಂದು ಕರೆತಂದರು ‘ಅಪ್ಪಯ್ಯ’ನೆಂದು ಪ್ರೀತಿಯಿಂದ ಕಂಡರು ಅಪ್ಪಯ್ಯ ದೇವರ ಶಿಕ್ಷಣದ ಭಾರ ಹಾನಗಲ್ಲ ಶ್ರೀಗಳವರದಾಯಿತು ಅಪ್ಪಯ್ಯ ದೇವರು ಕೆಲವು ವರ್ಷ ಹಾವೇರಿಯ ಹುಕ್ಕೇರಿಮಠದ ಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು ೧೯೦೯ ರಲ್ಲಿ ಶಿವಯೋಗ ಸಾಧಕರಾದರು ೧೫ ವರ್ಷ ಶಿವಯೋಗ ಮತ್ತು ಶಿವಾನುಭವ ಶಿಕ್ಷಣ ಪಡೆದರು ಹಾವೇರಿ ಶ್ರೀಗಳವರಿಂದ ಅನುಗ್ರಹ ಹೊಂದಿ ಕಾಲು ನಡಿಗೆಯಿಂದ ಎಡೆಯೂರ ಶ್ರೀ ಕ್ಷೇತ್ರದ ಯಾತ್ರೆಯನ್ನು ಮಾಡಿ ಶ್ರೀ ಸಿದ್ಧಲಿಂಗ ಶಿವಯೋಗಿಯ ದರ್ಶನ ಪಡೆದರು ಅಂದಿನಿಂದ ಶಿವಯೋಗದಲ್ಲಿ ಸಿದ್ದಿ ಪಡೆಯುವ ಹಂಬಲ ಬಲವಾಯಿತು ಸವದತ್ತಿಯ ಕಲ್ಮಠಕ್ಕೆ ಅಧಿಕಾರಿಗಳಾದ ಮೇಲೆ ಬಿದರಿ ಗುರುವರ್ಯರು ತಪಗೈದು ಸಿದ್ಧಿಪಡೆದ ನವಿಲುತೀರ್ಥ’ದಲ್ಲಿ ಅನುಷ್ಠಾನ ಮಾಡಿದರು ಅವರ ಶಿವಯೋಗ ಸಿದ್ಧಿಯನ್ನು ಕಂಡು ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರಿಗೆ ಅಮಿತಾನಂದವಾಯಿತು ಅಪ್ಪಯ್ಯ ಸ್ವಾಮಿಗಳು ಗುರುಪುತ್ರರಾಗಿದ್ದರಿಂದ ಅವರ ಮೇಲೆ ಉಭಯ ಶ್ರೀಗಳವರದೂ ಅಪಾರವಾದ ಪ್ರೇಮ ಹಾವೇರಿ ಶ್ರೀಗಳವರು ಅವರ ನೆನಹಿಗಾಗಿಯೇ ‘ಶಿವಲಿಂಗ ವಿಜಯ’ ಮುದ್ರಣ ಮಂದಿರವನ್ನು ಸ್ಥಾಪಿಸಿದ್ದರಂತೆ ಎಳೆಯ ವಯಸ್ಸಿನಲ್ಲಿಯೆ ಶ್ರೀ ಅಪ್ಪಯ್ಯ ಸ್ವಾಮಿಗಳ ಜೀವನ ಫಲ ಶಿವಯೋಗ ನಿಷ್ಪತ್ತಿ ಪಡೆದು ಪರಿಪಕ್ವವಾಗಿತ್ತು, ಅದನ್ನು ಶಕೆ ೧೮೪೬ ಮಾರ್ಗಶಿರ ಶು ೭(ಕ್ರಿ ಶ ೧೯೨೪) ರಂದು ಶಿವ ತನಗೆ ಬೇಕೆಂದು ಎತ್ತಿಕೊಂಡ.

2. ಗುಳೇದಗುಡ್ಡದ ಶ್ರೀ ನಿ ಪ್ರ ಒಪ್ಪತ್ತಿನ ಸ್ವಾಮಿಗಳು

ಗುಳೇದಗುಡ್ಡದ ಶ್ರೀ ನಿ ಪ್ರ ಒಪ್ಪತ್ತಿನ ಸ್ವಾಮಿಗಳು ಮಂದಿರದಲ್ಲಿ ಶಿಕ್ಷಣ ಪಡೆದು ಒಪ್ಪತ್ತೇಶ್ವರ ಮಠಕ್ಕೆ ಅಧಿಕಾರಿಗಳಾಗಿ ಹೋದ ಮೇಲೆಯೂ ಸಂಸ್ಥೆಯ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡುತ್ತಿದ್ದರು ಅವರು ಪ್ರತಿವರ್ಷ ಭಿಕ್ಷೆ ಮಾಡಿ ಮಂದಿರದ ದಾಸೋಹ ಕಾರ್ಯಕ್ಕೆ ನೆರವಾಗಿದ್ದರು ಶಿವರಾತ್ರಿಯ ಉತ್ಸವದಲ್ಲಿ ಅವರ ನೇತೃತ್ವದಲ್ಲಿ ದಾಸೋಹದಲ್ಲಿ ಶಿವಪೂಜೆ ಮತ್ತು ಅನ್ನಸಂತರ್ಪಣೆಯ ಕಾರ್ಯ ಸಾಂಗವಾಗಿ ನಡೆಯುತ್ತಿದ್ದಿತು ಅವರು ಖಿಲವಾದ ತಮ್ಮ ಮಠವನ್ನು ಬಹಳ ಅಭಿವೃದ್ಧಿಗೆ ತಂದಿದ್ದರು

3. ಬಾಗಲಕೋಟೆಯ ಶ್ರೀ ನಿ ಪ್ರ ಶಿವಮೂರ್ತಿ ಸ್ವಾಮಿಗಳು

ಬಾಗಲಕೋಟೆಯ ಶ್ರೀ ನಿ ಪ್ರ ಶಿವಮೂರ್ತಿ ಸ್ವಾಮಿಗಳು ಚರಂತಿಮಠದ ಅಧಿಕಾರಿಗಳಾಗಿ ಮಂದಿರದಲ್ಲಿ ೨೦ ವರ್ಷ ಶಿಕ್ಷಣ ಪಡೆದವರು, ಹಾನಗಲ್ಲ ಶ್ರೀಗಳವರ ಅಪ್ಪಣೆಯಂತೆ ಅವರು ಅನಂತಪುರ-ಕೆಳದಿ ಪ್ರಾಂತದಲ್ಲಿ ಕೀರ್ತನ- ಪ್ರವಚನಗಳನ್ನು ಮಾಡಿಸಿ ಶಿವಾನುಭವ ಪ್ರಸಾರವನ್ನು ಕೈಕೊಂಡರು ಕಪನಳ್ಳಿಯಲ್ಲಿ ಅನುಷ್ಠಾನವನ್ನು ಮಾಡಿ ಶಿವಯೋಗ ಸಿದ್ಧಿಯನ್ನು ಪಡೆದಿದ್ದರು ಅನಂತಪುರದ ಶ್ರೀ ಲಿಂಗಸ್ವಾಮಿಗಳು ಲಿಂಗೈಕ್ಯರಾದ ಮೇಲೆ ಆ ಸಂಸ್ಥಾನಮಠದ ವ್ಯವಸ್ಥೆಯನ್ನು ಕೆಲವು ವರ್ಷ ನೋಡಿಕೊಂಡಿದ್ದರು; ಅದರ ಅಭಿವೃದ್ಧಿಯನ್ನು ಮಾಡಿದರು ಬಾಗಲಕೋಟೆಯಲ್ಲಿರುವ ‘ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ’ ಕ್ಕೆ ೮-೧೦ ಸಾವಿರ ರೂಪಾಯಿ ಬೆಲೆ ಬಾಳುವ ತಮ್ಮ ಮಠದ ಜಮೀನನ್ನು ದಾನವಾಗಿ ದಯಪಾಲಿಸಿ ವಿದ್ಯಾದಾನದ ಕಾರ್ಯಕ್ಕೆ ಪ್ರೋತ್ಸಾಹವಿತ್ತರು ಶ್ರೀಗಳವರು ಯಾವಾಗಲೂ ಶಿವಯೋಗಮಂದಿರದ ಅಭಿವೃದ್ಧಿಯ ಕಾರ್ಯಗಳಲ್ಲಿ ಅಭಿಮಾನದಿಂದ ಸಹಕರಿಸುತ್ತಿದ್ದರು ಶ್ರೀಗಳವರೆ ಬಾಗಲಕೋಟೆಯ ಕರವೀರಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು ಎರಡು ಮಠಗಳ ಪ್ರಗತಿಯ ಬಗ್ಗೆ ಉಪಾಯಗಳನ್ನು ಕೈಕೊಂಡಿದ್ದರು ಅನಿರೀಕ್ಷಿತವಾಗಿ ಕ್ರಿ ಶ ೧೯೪೭ರಲ್ಲಿ ಲಿಂಗೈಕ್ಯರಾದರು.

4. ಕಂಚುಕಲ್ಲಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು

ಕಂಚುಕಲ್ಲ-ಬಿದರೆ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ದೊಡ್ಡಮಠದ ಅಧಿಕಾರಿಗಳಾಗಿದ್ದರು ಜಿ ಚಿಕ್ಕಮಗಳೂರ ಕಡೂರ ತಾಲೂಕಿನ ಕೆ ಬಿದರೆಯ ದೊಡ್ಡಮಠ ಹೆಸರಾದ ಗುರುಪೀಠ ಈ ಮಠದ ಅನೇಕ ತಪಸ್ವಿಗಳ ಪ್ರಾಚೀನ ಪರಂಪರೆಯಲ್ಲಿ ಲಿಂ ಶ್ರೀ ದೊಡ್ಡಜ್ಜಯ್ಯನವರು ಬಹಳ ಕೀರ್ತಿ ಪಡೆದ ಮಹಿಮರು ಅವರ ಉತ್ತರಾಧಿಕಾರಿಗಳೆ ಮರುಳಸಿದ್ದ ದೇವರು ಅವರು ಹಾನಗಲ್ಲ ಶ್ರೀಗಳವರ ನೇತೃತ್ವದಲ್ಲಿ ಯೋಗವಿದ್ಯೆಯ ಶಿಕ್ಷಣ ಪಡೆದರು ಷಟ್ಕರ್ಮಗಳಲ್ಲಿ ನಿಪುಣರಾಗಿ ಪ್ರಾಣಾಯಾಮವನ್ನು ಪೂರ್ಣವಾಗಿ ಸಾಧಿಸಿದ್ದರು.

ಕ್ರಿ ಶ ೧೯೨೧ ರಲ್ಲಿ ನಾಶಿಕದಲ್ಲಿ ಕೂಡಿದ ಕುಂಭಮೇಳದಲ್ಲಿ ಉತ್ತರ ಹಿಂದುಸ್ತಾನದ ಯೋಗಿಗಳೆಲ್ಲ ಸೇರಿದ್ದರು ಹಾನಗಲ್ಲ ಶ್ರೀಗಳವರು ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಮತ್ತು ಕೆಲವು ಸಾಧಕರನ್ನು ಕೂಡಿಕೊಂಡು ಕುಂಭಮೇಳಕ್ಕೆ ದಯಮಾಡಿಸಿದ್ದರು. ಅಲ್ಲಿಯ ಸಿದ್ಧಯೋಗಿಗಳೆಲ್ಲ ಬಿದರೆ ಶ್ರೀ ಪಟ್ಟಾಧ್ಯಕ್ಷರ ಯೋಗಸಾಧನೆಯನ್ನು ಕಂಡು ಅಪ್ರತಿಭರಾದರು; ಶ್ರೀ ಪಟ್ಟದ್ದೇವರಿಂದ ಯೋಗದ ವಿಶೇಷ ಸಾಧನೆಗಳನ್ನು ಕಲಿತುಕೊಂಡರು; ‘ಯೋಗರಾಜ’ರೆಂದು ಬಿರುದುಕೊಟ್ಟು ಮನ್ನಿಸಿದರು ಮಂದಿರದ ಸಾಧಕರು ಯೋಗಸಿದ್ಧರಾಗಬೇಕೆಂಬ ಶ್ರೀಗಳವರ ಧೈಯವನ್ನು ಪೂರ್ಣವಾಗಿ ಸಾಧಿಸಿದ ಶ್ರೇಯ ಬಿದರಿ ಪಟ್ಟಾಧ್ಯಕ್ಷರಿಗೆ ಸಲ್ಲಬೇಕು ಅವರು ಕೊನೆಯವರೆಗೂ ಮಂದಿರದಲ್ಲಿಯೇ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದರು ಅವರ ಪ್ರಾಣಾಯಾಮ ಸಿದ್ಧಿಯನ್ನು ಕಂಡು ಪರದೇಶದ ಡಾಕ್ಟರರೂ ಕೂಡ ಆಶ್ಚರ್ಯಪಡುತ್ತಿದ್ದರು.

ಅವರು ಶಿವಯೋಗದಲ್ಲಿಯೂ ಸಿದ್ಧಿಪಡೆದವರು ಸಾವಿರಾರು ಜನ ಶಿಷ್ಯರಿಗೆ ಶಿವದೀಕ್ಷೆಯನ್ನು ದಯಪಾಲಿಸಿದರು. ಎಡಹಳ್ಳಿಯ ಶ್ರೀ ಮಲ್ಲಪ್ಪ ದೇಸಾಯರಿಗೆ ದೀಕ್ಷಾಗುರುಗಳಾಗಿದ್ದರು ಶ್ರೀ ಪಟ್ಟದ್ದೇವರು ಮಂದಿರದ ಸೇವೆಯನ್ನು ಮಾಡುತ್ತಲೆ ದಿನಾಂಕ ೨೭-೬-೧೯೩೧ ರಲ್ಲಿ ಗಿರಿಯಾಪುರ (ಜಿ ಚಿಕ್ಕಮಗಳೂರು) ದಲ್ಲಿ ಲಿಂಗೈಕ್ಯರಾದರು.

5. ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು

ವ್ಯಾಕರಣಾಳ ಶ್ರೀ ಸಿದ್ಧಲಿಂಗ ಪಟ್ಟಾಧ್ಯಕ್ಷರು ಕುಷ್ಟಗಿ ತಾಲೂಕಿನ ವ್ಯಾಕರಣನಾಳ ಮತ್ತು ಮುದಗಲ್ಲ ಹಿರೇಮಠಗಳ ಅಧಿಕಾರಿಗಳಾಗಿದ್ದರು ಅವರು ಮಂದಿರದಲ್ಲಿಯೆ ಸಂಸ್ಕೃತ ಪ್ರೌಢಶಿಕ್ಷಣ ಪಡೆದು ಸಾಧಕರಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಂದಿರದ ಸಾಧಕರ ಮತ್ತು ವಟುಗಳ ಪಾಲಕರಾಗಿ ಒಳ್ಳೆ ಶಿಸ್ತಿನಿಂದ ವ್ಯವಸ್ಥೆಯನ್ನು ನೋಡಿಕೊಂಡಿದ್ದರು. ಅವರು ಆಶುಕವಿಗಳಾಗಿದ್ದರು. ಸಂಸ್ಕೃತದಲ್ಲಿ ಅನೇಕ ಸ್ತೋತ್ರಪರ ಅಷ್ಟಕಗಳನ್ನು ರಚಿಸಿದ್ದಾರೆ. ಅವರು ಯೋಗಸಾಧನೆಯಲ್ಲಿಯೂ ಉತ್ತಮ ಪ್ರಗತಿಯನ್ನು ಪಡೆದಿದ್ದರು. ಮಂದಿರಕ್ಕೆ ಯೋಗಶಿಕ್ಷಣಾರ್ಥಿಗಳಾಗಿ ಬಂದ ಸ್ವಪರಮತೀಯ ಮುಮುಕ್ಷುಗಳಿಗೂ ಯೋಗಸಾಧನೆ ಮತ್ತು ಧರ್ಮಗಳ ವಿಷಯವಾಗಿ ಬೋಧಿಸುವಷ್ಟು ದಕ್ಷರಾಗಿದ್ದರು. ಪುರಾಣ-ಪ್ರವಚನ ಪಟುಗಳಾಗಿದ್ದರು. ಹಾನಗಲ್ಲ ಶ್ರೀಗಳವರು ವ್ಯಾಕರಣಾಳ ಪಟ್ಟಾಧ್ಯಕ್ಷರ ಮೇಲೆಯೆ ಮಂದಿರದ ವ್ಯವಸ್ಥೆಯನ್ನು ವಹಿಸಿ ನಿಶ್ಚಿಂತರಾಗಿ ಭಿಕ್ಷೆಯಲ್ಲಿರುತ್ತಿದ್ದರು ಸಂಸ್ಥೆಯ ಹಿತವೇ ತಮ್ಮ ಹಿತವೆಂದು ಭಾವಿಸಿ ನಿಸ್ಪೃಹವಾಗಿ ಸಂಸ್ಥೆಗೆ ಶ್ರಮಿಸುತ್ತಿದ್ದ ಶ್ರೀ ಪಟ್ಟಾಧ್ಯಕ್ಷರು ೧೯೧೯ ರಲ್ಲಿ ಇನ್‌ಫ್ಲ್ಯಎಂಜಾದಿಂದ ಲಿಂಗೈಕ್ಯರಾದರು ಅವರ ಗದ್ದುಗೆ ಮಂದಿರದಲ್ಲಿಯೇ ಇದೆ.

6. ನವಿಲುಗುಂದದ ಶ್ರೀ ನಿ ಪ್ರ ಬಸವಲಿಂಗ ಸ್ವಾಮಿಗಳು

ನವಿಲುಗುಂದದ ಶ್ರೀ ನಿ ಪ್ರ ಬಸವಲಿಂಗ ಸ್ವಾಮಿಗಳು ಗವಿಮಠದ ಅಧಿಪತಿಗಳು ಅವರು ನವಿಲುಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಜನ್ಮತಾಳಿ ನವಿಲುಗುಂದ ಗವಿಮಠಾಧೀಶರಾದ ಲಿಂ ಸಿದ್ದಲಿಂಗ ಸ್ವಾಮಿಗಳ ಕೃಪಾಬಲದಿಂದ ಶಿವಯೋಗ ಮಾರ್ಗದಲ್ಲಿ ದೀಕ್ಷೆ ಪಡೆದರು.

ನವಿಲುಗುಂದ ಗವಿಮಠದ ಮೂಲಕರ್ತೃಗಳು ಶ್ರೀ ಜಡೆಸ್ವಾಮಿಗಳು; ಚಿತ್ರದುರ್ಗ ಪೀಠದ ಪರಂಪರೆಯವರು ಮುನ್ನೂರು ವರ್ಷಗಳ ಹಿಂದೆ ಇಲ್ಲಿಯೇ ಒಂದು ಗುಡಿಸಲಲ್ಲಿ ತಪೋನುಷ್ಠಾನ ಮಾಡಿ ಭಾವಿಯಲ್ಲಿ ನೀರು ಬರಿಸಿದ ಪವಾಡ ತೋರಿದರು ಅವರ ಸ್ಮಾರಕವಾಗಿ ಜೈನಮತದ ಗೌಡರು ಚಿಕ್ಕ ಮಠವೊಂದನ್ನು ಕಟ್ಟಿಸಿ ಭೂಮಿಯನ್ನು ದಾನವಾಗಿ ಕೊಟ್ಟು ಅನುಷ್ಠಾನಕ್ಕೆ ಅನುಕೂಲ ಮಾಡಿದರು.

ಹಾನಗಲ್ಲ ಶ್ರೀಗಳವರ ಮಾರ್ಗದರ್ಶನದಲ್ಲಿ ಶ್ರೀ ಬಸವಲಿಂಗ ದೇಶಿಕರು ಮಂದಿರದಲ್ಲಿ ಪಂ ಸೋಮನಾಥ ಶಾಸ್ತ್ರಿಗಳು, ಉಮಚಗಿಯ ಪಂ ಶಂಕರಶಾಸ್ತ್ರಿಗಳು, ಕೊಂಗವಾಡದ ಪಂ ವೀರಭದ್ರ ಶಾಸ್ತ್ರಿಗಳವರಲ್ಲಿ ವೇದಾಂತ, ತರ್ಕ ಮತ್ತು ಸಾಹಿತ್ಯ ವಿಷಯಗಳ ಅಧ್ಯಯನ ಮಾಡಿದರು ಯೋಗದಲ್ಲಿಯೂ ಸಾಧನೆ ಮಾಡಿದರು.

೧೯೨೧ರಲ್ಲಿ ಶ್ರೀ ಗವಿಮಠಕ್ಕೆ ಬಂದ ಬಳಿಕ ಶಿವಯೋಗ ಮಂದಿರಕ್ಕೆ ಕಾಣಿಕೆಯೆಂದು ಸುಮಾರು ಎಂಟು ಸಾವಿರ ರೂಪಾಯಿಗಳನ್ನು ಐದುವರೆ ಕೂರಿಗೆ ಭೂಮಿಯನ್ನು ನವಿಲುಗುಂದ ಭಕ್ತರಿಂದ ಪಡೆದು ಅರ್ಪಿಸಿದರು ಪಂ ಪಂಚಾಕ್ಷರ ಗವಾಯಿಗಳಿಗೆ ಮಿರ್ಜಿಯ ನೀಲಕಂಠ ಬುವಾ ಅವರಿಂದ ಸಂಗೀತ ಪಾಠವನ್ನು ಮಠದ ವತಿಯಿಂದ ಹೇಳಿಸಿದರು ಕೆಲವು ಕಾಲ ಗವಾಯಿಗಳ ಸಂಗೀತ ಪಾಠಸಾಲೆಗೆ ಮಠದಲ್ಲಿಯೇ ಆಶ್ರಯ ನೀಡಿದರು ಶಿವಯೋಗ ಮಂದಿರಕ್ಕೆ ಆರ್ಥಿಕ ಬಿಕ್ಕಟ್ಟು ಬಂದಾಗಲೆಲ್ಲ ಭಿಕ್ಷೆಯ ರೂಪದಿಂದ ಸಹಾಯ ನೀಡಿ ಸಂಸ್ಥೆಯ ಯೋಗಕ್ಷೇಮದಲ್ಲಿ ಭಾಗಿಗಳಾಗಿದ್ದಾರೆ.

ಶ್ರೀಗಳವರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸ್ಥಾನಮಾನಗಳನ್ನು ಸಂಪಾದಿಸಿದ್ದಾರೆ ಬೆಂಗಳೂರಿನʼ ಕನ್ನಡ ಸಾಹಿತ್ಯ ಪರಿಷತ್ತಿʼನ ಕಾರ್ಯಕಾರಿ ಮಂಡಲದ ಸದಸ್ಯರಾಗಿ ‘ಉತ್ತರ ಕರ್ನಾಟಕ ಪ್ರಾಂತೀಯ ಸಾಹಿತ್ಯ ಸಮಿತಿ’ಯ ಅಧ್ಯಕ್ಷರಾಗಿ, ʼಕರ್ನಾಟಕ ವಿದ್ಯಾವರ್ಧಕ ಸಂಘ’ ದ ಉಪಾಧ್ಯಕ್ಷರಾಗಿ ಮತ್ತು ೧೯೨೨ ರಿಂದ ಇದುವರೆಗೆ ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷರಾಗಿಯೂ, ಕೆಲವು ವರ್ಷ ಮ್ಯಾನೇಜಿಂಗ ಟ್ರಸ್ಟಿಗಳಾಗಿಯೂ ಕಾರ್ಯ ಮಾಡಿ ಅನೇಕ ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾಗಿದ್ದಾರೆ. ಬಾಗಲಕೋಟೆ ಬಸವೇಶ್ವರ ಕಾಲೇಜು ಪ್ರಾರಂಭವಾದಂದಿನಿಂದ ಇದುವರೆಗೂ ಬಾಗಲಕೋಟೆಯ ‘ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವರು.

೧೯೨೪ ರಲ್ಲಿ ‘ಲಿಂಗ’ ಮತ್ತು ೧೯೨೮ ರಲ್ಲಿ ‘ಗುರು’ ವಿಷಯಗಳನ್ನು ಕುರಿತು ಪುಸ್ತಕಗಳನ್ನು ಬರೆದರು ೧೯೩೩ ರಿಂದ ೧೯೩೭ರ ವರೆಗೆ ಶಿವಯೋಗ ಮಂದಿರದ ಪರವಾಗಿ ಪುಣೆ, ಬೆಂಗಳೂರು, ಮೈಸೂರು, ವಿಜಾಪುರ ಮೊದಲಾದ ಕಡೆ ಪ್ರಯಾಣ ಮಾಡಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಪ್ರಚಾರ ಕಾರ್ಯವನ್ನು ಮಾಡಿದರು.

೧೯೪೧ ರಲ್ಲಿ ಶ್ರೀಮಠದಲ್ಲಿ ʼಉತ್ತರ ಕರ್ನಾಟಕ ಪ್ರಾಂತೀ ಸಾಹಿತ್ಯ ಸಮ್ಮೇಲನ’ವನ್ನು ಜರುಗಿಸಿದರು ಶಿವಯೋಗ ಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ ವಾಚನಾಲಯವನ್ನು ಸ್ಥಾಪಿಸಿ, ದಾನಿಗಳಿಂದ ಗ್ರಂಥಗಳನ್ನು ಶೇಖರಿಸಿದರು ‘ಸುಕುಮಾರ’ ಕೈಬರಹ ಮಾಸಿಕವನ್ನು ಹೊರಡಿಸಿದರು ʼಆರ್ಯಧರ್ಮ ಪ್ರದೀಪಿಕೆ’ಯಲ್ಲಿ ವೀರಶೈವ ಧರ್ಮದ ಬಗೆಗೆ ವಿವೇಚನಾತ್ಮಕ ಲೇಖನ ಬರೆದರು.

೧೯೪೨ರ ಜೂನ ೧೫ನೆಯ ದಿನಾಂಕದಲ್ಲಿ ಧಾರವಾಡದ ಪೂಜ್ಯ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳವರಲ್ಲಿ ಹೋಗಿ ಶಿವಾನುಭವ ಸಂಘದ ಸ್ಥಾಪನೆಯ ಬಗ್ಗೆ ವಿಚಾರ ಮಾಡಿ ಅಲ್ಲಿಯೇ ‘ಶಿವಾನುಭವ ಸಂಸ್ಥೆ’ಯನ್ನು ಪ್ರಾರಂಭಿಸಿದರು ೧೯೪೩ನೆಯ ನವಂಬರ ದಿನಾಂಕ ೧೪ ರಂದು ಬಸವೇಶ್ವರ ಕಾಲೇಜನ್ನು ತೆರೆಯುವ ಬಗ್ಗೆ ಆಲೋಚನಾ ಕಮೀಟಿಯನ್ನು ಕರೆದು, ನಿರ್ಧರಿಸಿ ಬಾಗಲಕೋಟೆ ಮತ್ತು ಇತರ ಪಟ್ಟಣಗಳ ಗ್ರಾಮಗಳ ಮಹಾಜನರ ಸಹಕಾರ-ಸಹಾಯದಿಂದ ಬಾಗಲಕೋಟೆಯಲ್ಲಿಯೆ ಬಸವೆ ಕಾಲೇಜನ್ನು ಸ್ಥಾಪಿಸಿದರು.

ಶ್ರೀಗಳವರು ೧೯೪೫ರ ಫೆಬ್ರುವರಿ ದಿನಾಂಕ ೮-೯ ರಿಂದ ‘ಸರ್ವಧರ್ಮ ಸಮ್ಮೇಲನ’ವನ್ನು ಗವಿಮಠದಲ್ಲಿ ಸೇರಿಸಿ ಇದುವರೆಗೂ ಅದನ್ನು ಪ್ರತಿವರ್ಷ ನಡೆಯಿಸಿಕೊಂಡು ಬಂದಿರುವರು ಧರ್ಮದ ವ್ಯಾಪಕ ಭಾವನೆಯನ್ನು ಜನತೆಯಲ್ಲಿ ಮೂಡಿಸಿರುವರು ಶ್ರೀ ಮಠದಲ್ಲಿ ಒಂದು ಫ್ರೀ ಬೋರ್ಡಿಂಗನ್ನು ಮತ್ತು ಕನ್ನಡ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ನಡೆಯಿಸುತ್ತಿರುವರು ಪ್ರತಿವರ್ಷ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯನ್ನು ಏರ್ಪಡಿಸಿ ಅದರ ಅಂಗವಾಗಿ ಶಿವಾನುಭವ ಸಮ್ಮೇಲನ, ಒಕ್ಕಲುತನ ಪರಿಷತ್ತು ಸಹಕಾರಿ ಪರಿಷತ್ತು ಮಹಿಳಾ ಗೋಷ್ಠಿಗಳನ್ನು ಜರುಗಿಸಿ ನಾಡಿನ ಜನತೆಯಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಜನಜಾಗ್ರತಿಯನ್ನುಂಟು ಮಾಡುತ್ತಲಿರುವರು.

7. ಕುರವತ್ತಿ ಶ್ರೀ ನಿ ಪ್ರ ತೋಂಟದಾರ್ಯ (ಮಹಾದೇವ) ಸ್ವಾಮಿಗಳು

ಕುರವತ್ತಿ ಶ್ರೀ ನಿ ಪ್ರ ತೋಂಟದಾರ್ಯ (ಮಹಾದೇವ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳು, ಅವರು ಮೊದಲು ಬಾಗಲಕೋಟೆಯ ಕರವೀರಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆದರು ಅವರು ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡಿದ್ದಲ್ಲದೆ ಕಪನಳ್ಳಿ ಮೊದಲಾದ ಶಾಖಾಮಂದಿರಗಳಲ್ಲಿ ಅನುಷ್ಠಾನವನ್ನು ಮಾಡಿದರು. ಅವರು ೧೯೩೩ ನೆಯ ಇಸ್ವಿಯವರೆಗೂ ಶಿವಯೋಗ ಮಂದಿರದಲ್ಲಿಯೇ ಇದ್ದು ಮಂದಿರದ ಒಕ್ಕಲುತನ-ಗೋಶಾಲೆಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಶ್ರೀ ಮಹಾದೇವ ದೇಶಿಕರ ಹಿರಿಯತನದಲ್ಲಿ ಮಂದಿರದ ಒಕ್ಕಲುತನವು ಬಹಳ ಪ್ರಗತಿಯನ್ನು ಪಡೆದಿತ್ತು ಅವರು ಕೆಲವು ವರ್ಷ ಕೆಳದಿಯ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಈಗ ಕುರವತ್ತಿಯಲ್ಲಿ ತೋಂಟದಾರ್ಯ ಮಠದ ಜೀರ್ಣೋದ್ಧಾರವನ್ನು ಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಹಾನಗಲ್ಲ ವಿರಕ್ತಮಠದ ಜೀರ್ಣೋದ್ಧಾರವನ್ನು ಮಾಡಿ ಸೇವೆ ಸಲ್ಲಿಸಿದವರು.