1901-1934

 ಕಲಬುರ್ಗಿಯ ಶ್ರೀ ಘ.ಚ. ಕೆಂಚಬಸವ ಪಟ್ಟಾಧ್ಯಕ್ಷರು.(1912)

 ಕಲಬುರ್ಗಿಯ ಶ್ರೀ ಘ.ಚ. ಕೆಂಚಬಸವ ಪಟ್ಟಾಧ್ಯಕ್ಷರು ರೋಜಾ ಹಿರೇಮಠದ ಅಧಿಪತಿಗಳು.

ಅವರ ಜನ್ಮಸ್ಥಳ  ವಿಜಾಪುರ ಜಿಲ್ಲೆಯ ಬಾಗಲಕೋಟಿ ತಾಲೂಕಿನ ಎಡಹಳ್ಳಿ. ಅವರು ಮಂದಿರದಲ್ಲಿ ಉಮಚಗಿಯ ಶಂಕರ ಶಾಸ್ತ್ರಿಗಳು, ಕೊಂಗವಾಡದ ವೀರಭದ್ರ ಶಾಸ್ತ್ರಿಗಳು ಮತ್ತು ರೇವಣಸಿದ್ಧಶಾಸ್ತ್ರಿಗಳವರಲ್ಲಿ ತರ್ಕ, ವೇದಾಂತ, ಸಾಹಿತ್ಯ, ವ್ಯಾಕರಣ ಶಾಸ್ತ್ರಗಳ ಅಧ್ಯಯನ ಮಾಡಿ ಪುರಾಣ ಪ್ರವಚನ ಪಟುಗಳಾದರು.

೧೯೪೬ರಲ್ಲಿ ರೋಜಾ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡರು. ಗುಲಬರ್ಗಾ (ಕಲಬುರ್ಗಿ) ದಲ್ಲಿ ‘ಸತ್ಸಂಗʼ ಎಂಬ ಸಂಘವನ್ನು ಸ್ಥಾಪಿಸಿ ಅದರ ಮುಖಾಂತರ ಪ್ರವಚನಗಳಿಂದ ವೀರಶೈವ ಧರ್ಮ ಬೋಧೆಯನ್ನು ಮಾಡುತ್ತಿರುವರು.

ಶ್ರೀ ಪಟ್ಟಾಧ್ಯಕ್ಷರು ಸಾರಡಗಿ, ಹರಸೂರು, ಮಹಾಗಾಂವ ಮೊದಲಾದ ಕಡೆ ಸಂಚರಿಸಿ ಶಿವಾನುಭವ ಪ್ರಸಾರವನ್ನು ಮಾಡಿರುವರು. ರಾವೂರು, ಗುಳೇದಗುಡ್ಡ ಮೊದಲಾದ ನಗರಗಳಲ್ಲಿ ಪುರಾಣಗಳನ್ನು ಹೇಳಿ ಜನರಲ್ಲಿ ಜಾಗ್ರತಿಯನ್ನು ಉಂಟುಮಾಡಿರುವರು.

ಬನವಾಸಿಯ ಶ್ರೀ ನಿ. ಪ್ರ. ಸಿದ್ಧವೀರ ಸ್ವಾಮಿಗಳು :1912

ಬನವಾಸಿಯ ಶ್ರೀ ನಿ. ಪ್ರ. ಸಿದ್ಧವೀರ ಸ್ವಾಮಿಗಳು  ಉತ್ತರ ಕನ್ನಡ ಜಿಲ್ಲೆಯ ಶಿರ್ಶಿ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಬನವಾಸಿಯ ಹೊಳೆಮಠದ ಅಧಿಕಾರಿಗಳಾಗಿದ್ದಾರೆ.

ಅವರ ಗುರುಗಳು ತರಿಕೆರೆ (ಜಿ. ಚಿಕ್ಕಮಗಳೂರು)ಯ ಶ್ರೀಮತ್ಶೀ ಸಂಪಾದನೆ ಎಣ್ಣೆಹೊಳೆಮಠದ ಶ್ರೀ ವೃಷಭದೇಶಿಕೇಂದ್ರ ಮಹಾಸ್ವಾಮಿಗಳು.  ಜನ್ಮಸ್ಥಲ ಹಾಸನ ಜಿ ಅರಸಿಕೆರೆ ತಾ. ಜಾವಗಲ್ಲಿನ ಬಂದೂರಮಠ.

ಮೊದಲು ಗೋಣಿಬೀಡ ಸಂಪಾದನೆ ಮಠಕ್ಕೆ ಅಧಿಕಾರಿಗಳಾಗಿ ಮಂದಿರಕ್ಕೆ ಬರುವ ಮುನ್ನ ಬೀರೂರಿನ ಪಾಠಶಾಲೆಯಲ್ಲಿ ಸಂಪಿಗೆ ಮಠದ ಶ್ರೀ ಸಿದ್ಧಲಿಂಗ ಶಾಸ್ತ್ರಿಗಳಿಂದ ಕನ್ನಡ-ಸಂಸ್ಕೃತ ಶಿಕ್ಷಣ ಪಡೆದಿದ್ದರು. ಮಂದಿರದಲ್ಲಿ ಯೋಗಸಾಧನೆ, ಲಿಂಗಪೂಜೆ ಹಾಗೂ ಶಿವಾನುಭವ ಶಾಸ್ತ್ರದಲ್ಲಿ ಪರಿಣಿತರಾದರು. ಕ್ರಿ. ಶ. ೧೯೧೫ ರಲ್ಲಿ ಪಾದಚಾರಿಗಳಾಗಿ ಶ್ರೀಶೈಲಕ್ಕೆ ಹೋಗಿ ವೈರಾಗ್ಯ ವೃತ್ತಿಯಿಂದ ಅನುಷ್ಠಾನ ಮಾಡಿದರು.

ಕೆಳದಿ, ಗೊಗ್ಗಿಹಳ್ಳಿ, ಕೂಡ್ಲಿ ಮತ್ತು ಕಪನಳ್ಳಿಯಲ್ಲಿಯೂ ಶಿವಯೋಗಾನುಷ್ಠಾನದಲ್ಲಿದ್ದರು. ಕಬ್ಬೂರ ಶ್ರೀ ಶರಣರಲ್ಲಿ ಶಿವಾನುಭವ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಅವರು ಶ್ರೀ ಶರಣರ ಅಂತ್ಯಕಾಲದಲ್ಲಿ ಶುಶ್ತೂಷೆಯ ಸೇವೆ ಸಲ್ಲಿಸಿದರು.

ಶ್ರೀಗಳವರು ಕಾಲು ನಡಿಗೆಯಿಂದಲೇ ಎಡೆಯೂರ ಶ್ರೀಕ್ಷೇತ್ರ ಮತ್ತು ಶಂಭುಲಿಂಗನ ಬೆಟ್ಟದ ಪ್ರವಾಸಗಳನ್ನು ಕೈಕೊಂಡಿದ್ದರು. ಅವರು ಆಚಾರವಂತರು, ಲಿಂಗಪೂಜಾನಿಷ್ಠರು.

ಅಂತೆಯೇ ಹಾನಗಲ್ಲ ಪೂಜ್ಯರು ಪರಳಿಯ ಪ್ರಕರಣದ ನಿಮಿತ್ತ ಹೈದರಾಬಾದಿಗೆ ದಯಮಾಡಿದಂದಿನಿಂದ ಕೊನೆಯವರೆವಿಗೂ ಅವರ ಕ್ರಿಯಾಮೂರ್ತಿಗಳಾಗಿದ್ದರು. ಅವರು ಈಗ ೨೦ ವರ್ಷಗಳಿಂದ ಮಂದಿರದ ಟ್ರಸ್ಟಿಗಳಾಗಿದ್ದು ಸಂಸ್ಥೆಯ ಹಿತೇಚ್ಚುಗಳಾಗಿದ್ದಾರೆ.

 ಕಲ್ಯಾಣದ ಶ್ರೀ ನಿ. ಪ್ರ. ಜ. ಸಿದ್ಧಲಿಂಗ ಸ್ವಾಮಿಗಳು :(1912)

ಕಲ್ಯಾಣದ ಶ್ರೀ ನಿ. ಪ್ರ. ಜ. ಸಿದ್ಧಲಿಂಗ ಸ್ವಾಮಿಗಳು ಪ್ರಭುಸ್ವಾಮಿ ಮಠದ ಅಧಿಕಾರಿಗಳು. ಇವರನ್ನು ಹುಬ್ಬಳ್ಳಿಯ ಜ. ಗಂಗಾಧರ ಮಹಾಸ್ವಾಮಿಗಳವರೆ ಮಂದಿರದಲ್ಲಿ ಶಿಕ್ಷಣಕ್ಕಾಗಿ ಕಳಿಸಿದ್ದರು. ಅವರನ್ನು ಸಾಮಾನ್ಯವಾಗಿ ಜಡೆಸ್ವಾಮಿಗಳೆಂದು ಕರೆಯುವ ವಾಡಿಕೆ.

ಶ್ರೀ ಜಡೆ ಸ್ವಾಮಿಗಳು ಹೊಸೂರ ಸಿದ್ಧನಕೊಳ್ಳದಲ್ಲಿ ಅನುಷ್ಠಾನ ಮಾಡಿ ಸಿದ್ಧಿ ಪಡೆದವರು. ನಿಡಗುಂದಿ ಕೊಪ್ಪದ ಶಾಖಾಮಠದಲ್ಲಿಯೂ ಕೆಲವು ಕಾಲ ಶಿವಯೋಗಾನುಷ್ಠಾನವನ್ನು ಮಾಡಿದರು.

ಅವರು ಪ್ರಾರಂಭದಲ್ಲಿ ಭಿಕ್ಷೆ ಮಾಡಿ ಮಂದಿರದ ಪ್ರಗತಿಗೆ ಕಾರಣರಾದವರು. ದಾಸೋಹದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ದೂರ್ವಾಸಮುನಿಯಂತೆ ಅವರ ಪ್ರಭಾವ ಬಹು ಉಗ್ರವಾದುದು.

ಆದರೂ ದಯಾಳುಗಳು. ಜಡೆ ಶ್ರೀಗಳು ಬೀರೂರಲ್ಲಿ ನೆಲಸಿ ಅಲ್ಲಿಯ ಶಿಷ್ಯರ ಸಹಕಾರದಿಂದ ಸಂಪಾದನೆ ಮಠದಲ್ಲಿ ‘ಶ್ರೀ ಪ್ರಭುಲಿಂಗ ವಿದ್ಯಾರ್ಥಿ ನಿಲಯ’ವನ್ನು ಸ್ಥಾಪಿಸಿರುವರು.

ಜಡೆಯ ಶ್ರೀ ನಿ. ಪ್ರ. ಸಿದ್ಧಬಸವ ಸ್ವಾಮಿಗಳು:(1912)

ಜಡೆಯ ಶ್ರೀ ನಿ. ಪ್ರ. ಸಿದ್ಧಬಸವ ಸ್ವಾಮಿಗಳು ಮಲೆನಾಡಿನಲ್ಲಿ ಪ್ರಸಿದ್ಧವಾದ ಕುಮಾರ ಮಠದ ಅಧಿಪತಿಗಳು. ಪರಮ ತಪಸ್ವಿಗಳಾದ ಶ್ರೀ ಕುಮಾರ ಕೆಂಪಿನ ಸಿದ್ಧಬಸವ ಸ್ವಾಮಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆಮಠದ ಕರ್ತೃಗಳು, ಜಡೆಮಠವು ಹಾನಗಲ್ಲ, ಅಕ್ಕಿ ಆಲೂರು ಮೊದಲಾದ ಗ್ರಾಮಗಳಲ್ಲಿರುವ ಮಠಗಳಿಗೆ ಮೂಲವಾಗಿ ಸಂಸ್ಥಾನಮಠವೆಂದು ಪ್ರಸಿದ್ಧವಾಗಿದೆ.

ಶ್ರೀ ಸಿದ್ಧಬಸವ ಸ್ವಾಮಿಗಳು ಮಂದಿರದಲ್ಲಿ ಶಿವಯೋಗ ಮತ್ತು ಕನ್ನಡ-ಸಂಸ್ಕೃತ ಶಿಕ್ಷಣ ಪಡೆದು ಈ ಪೀಠಕ್ಕೆ ಅಧಿಕಾರಿಗಳಾಗಿ ಬಂದರು. ಈ ಮಠಕ್ಕೆ ಸೇರಿದ ಶಾಖಾಮಠಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಿದರು. ಸವದತ್ತಿ ತಾಲೂಕಿನ ಸಿಂದೇಮುನವಳ್ಳಿ  ಮಠವನ್ನು ಶ್ರೀಗಳವರು ಕಲ್ಲಿನಿಂದ ಕಟ್ಟಿಸಿ ಜೀರ್ಣೋದ್ಧಾರ ಮಾಡಿದ್ದಾರೆ. ಅವರು ಶಿವಾನುಭವಿಗಳು ಮತ್ತು ಮಂದಿರದ ಹಿತೈಷಿಗಳೂ ಆಗಿದ್ದಾರೆ.

ಹಾನಗಲ್ಲ ಶ್ರೀ ನಿ. ಪ್ರ. ಮಹೇಶ್ವರ ಸ್ವಾಮಿಗಳು:(1912)

 

ಹಾನಗಲ್ಲ ಶ್ರೀ ನಿ. ಪ್ರ. ಮಹೇಶ್ವರ ಸ್ವಾಮಿಗಳು ದಮ್ಮೂರಲ್ಲಿ (ತಾ. ಹುನಗುಂದ) ಜನ್ಮತಾಳಿ ಆದಾಪುರದ ಹಿರಿಯ ಮಠದ ವತಿಯಿಂದ ಮಂದಿರಕ್ಕೆ ಶಿಕ್ಷಣ ಪಡೆಯಲು ಬಂದರು. ಅವರು ಬಹಳ ಸರಳ ಜೀವಿಗಳಾಗಿದ್ದರು. ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ

ಸಾಹಿತ್ಯ, ವ್ಯಾಕರಣ, ವೇದಾಂತ ವಿಷಯಗಳ ಅಧ್ಯಯನ ಮಾಡಿ ಭಾಷಣ ಕಲೆಯನ್ನು ಸಾಧಿಸಿದ್ದರು. ಅವರ ಸಾತ್ವಿಕ ವೃತ್ತಿಯನ್ನು ಕಂಡು ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಭಕ್ತಾದಿಗಳ ಸಮ್ಮತಿಯಿಂದ ಜಡೆಮಠ ಶ್ರೀಗಳವರಿಂದ ಹಾನಗಲ್ಲಮಠದ ಅಧಿಕಾರವನ್ನು ಕೊಡಿಸಿದರು.

ಶ್ರೀ ಮಹೇಶ್ವರ ಸ್ವಾಮಿಗಳವರು ಹೊರಬ, ಸಾಗರ ಮತ್ತು ಅಕ್ಕಿ ಆಲೂರ ಶಾಖಾಮಠಗಳನ್ನು ವ್ಯವಸ್ಥಿತಗೊಳಿಸಿದರು. ಅಕ್ಕಿಅಲೂರ ವಿರಕ್ತಮಠದಲ್ಲಿಯ ಸಂಸ್ಕೃತ ಪಾಠಶಾಲೆಯ ಸಂಚಾಲಕರಾಗಿ ಅದನ್ನು ಒಳ್ಳೆ ಆಸ್ಥೆಯಿಂದ ನಡೆಯಿಸಿದರು. ೧೯೨೯ರಲ್ಲಿ ಆಲೂರ ರಥೋತ್ಸವವನ್ನು ಪ್ರಾರಂಭಿಸಿ ಹಿಂದಿನ ಶ್ರೀ ಅಡವಿ ಸ್ವಾಮಿಗಳ ಇಚ್ಛೆಯನ್ನು ಪೂರ್ಣ ಮಾಡಿದರು.

ಮಲೆನಾಡ ಪ್ರದೇಶದಲ್ಲಿ ಧರ್ಮ ಜಾಗ್ರತಿಯನ್ನು ಮೂಡಿಸಿದರು. ದುರ್ದೈವದಿಂದ ಚಿಕ್ಕ ವಯದಲ್ಲಿಯೇ  ದಿನಾಂಕ ೨೯-೩-೩೩ ರಂದು ಲಿಂಗೈಕ್ಯರಾದರು.

ಸಂಪಗಾಂವಿಯ ಶ್ರೀ ನೀಲಕಂಠ ಶಿವಾಚಾರ್ಯ ಚರಮೂರ್ತಿಗಳು: ( 1912)

 

ಸಂಪಗಾಂವಿಯ ಶ್ರೀ ನೀಲಕಂಠ ಶಿವಾಚಾರ್ಯ ಚರಮೂರ್ತಿಗಳು ಯರಗಂಬಳಿಯಮಠದ ಅಧಿಕಾರಿಗಳಾಗಿದ್ದರು. ಅವರು ಶಿವಯೋಗ ಮಂದಿರದಲ್ಲಿ ಸಂಸ್ಕೃತ ಯೋಗ ಶಿಕ್ಷಣವನ್ನು ಪಡೆದರಲ್ಲದೆ ಇಂಗ್ಲಿಷಿನಲ್ಲಿ ಭಾಷಣ ಮಾಡುವಷ್ಟು ಯೋಗ್ಯತೆಯನ್ನು ಪಡೆದಿದ್ದರು. ಅವರು ಬೆಳಗಾಂವ ಪ್ರಾಂತದಲ್ಲಿ ಪ್ರವಚನ ವ್ಯಾಖ್ಯಾನಗಳಿಂದ ಧರ್ಮ ಜಾಗ್ರತಿಯ ಕಾರ್ಯವನ್ನು ಮಾಡಿ ಅಕಾಲದಲ್ಲಿಯೇ ಲಿಂಗೈಕ್ಯರಾದರು.

ಕೆಳದಿಯ ಶ್ರೀ ಘ. ಚ. ರೇವಣಸಿದ್ದ ಪಟ್ಟಾಧ್ಯಕ್ಷರು:(1910)

ಕೆಳದಿಯ ಶ್ರೀ ಘ. ಚ. ರೇವಣಸಿದ್ದ ಪಟ್ಟಾಧ್ಯಕ್ಷರು ಹಿರೇಮಠದ ಅಧಿಕಾರಿಗಳಾಗಿದ್ದಾರೆ. ಲಿಂ. ಶ್ರೀ ರೇವಣಸಿದ್ಧ ಪಟ್ಟಾಧ್ಯಕ್ಷರ ತರುವಾಯ ಈ ಸಂಸ್ಥಾನಮಠಕ್ಕೆ ಉತ್ತರಾಧಿಕಾರಿಗಳಾಗಿ ಬಂದರು. ಅವರು ತಮ್ಮ ಮಠದಲ್ಲಿ ಕೆಲವು ವರ್ಷ ಸಂಸ್ಕೃತ ಪಾಠಶಾಲೆಯನ್ನು ಇಟ್ಟು ಕೆಲವು ಸಾಧಕರೊಂದಿಗೆ ಶಿವಯೋಗಾನುಷ್ಠಾನವನ್ನು ಮಾಡುತ್ತಿದ್ದರು. ಸಾಗರದಲ್ಲಿಯ ಶಾಖಾಮಠದಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ವಿದ್ಯಾಪ್ರಸಾರ ಕಾರ್ಯವನ್ನು ಮಾಡಿದರು. ಅವರು ಬಹಳ ಸಾತ್ವಿಕ ಸ್ವಭಾವದವರು. ಅನೇಕ ವಿದ್ಯಾರ್ಥಿಗಳಿಗೆ ಸಹಾಯ ನೀಡಿದ್ದಾರೆ.

 ಶ್ರೀ ನಿ. ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ (ಇಲಕಲ್ಲ):(1910)

  ಶ್ರೀ ನಿ. ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ (ಇಲಕಲ್ಲ) ಪೀಠದ ಅಧಿಪತಿಗಳಾಗಿದ್ದರು. ಅವರು ಮೊದಲು ಹುನಗುಂದ ತಾಲೂಕಿನ ಕೊಪ್ಪದ ವಿರಕ್ತಮಠಕ್ಕೆ ಸ್ವಾಮಿಗಳಾಗಿದ್ದರು. ಶ್ರೀಗುರು ಮಹಾಂತ ಸ್ವಾಮಿಗಳ ನಂತರ ೧೯೩೯ರಲ್ಲಿ ಇಲಕಲ್ಲ ಮಠದ ಅಧಿಕಾರವನ್ನು ವಹಿಸಿಕೊಂಡರು. ಅವರು ಮಂದಿರದಲ್ಲಿ ಹುಕ್ಕೇರಿ ಸದಾಶಿವ ಶಾಸ್ತ್ರಿಗಳು ಮತ್ತು ಕಂದಗಲ್ಲ ಪರ್ವತ ಶಾಸ್ತ್ರಿಗಳಲ್ಲಿ ಸಾಹಿತ್ಯ-ವೇದಾಂತ ವಿಷಯಗಳ ಅಭ್ಯಾಸ ಮಾಡಿದರು. ಶ್ರೀಗಳವರು ಭಾಷಣ ಪ್ರವಚನಗಳನ್ನು ಮಾಡುವದರಲ್ಲಿ ಅದ್ವಿತೀಯರಾಗಿದ್ದರು. ಅವರ ಅಸ್ಖಲಿತವಾದ ವಾಣಿ ಹಾಸ್ಯಮಯ ಶೈಲಿ ಆಕರ್ಷಕವಾಗಿದ್ದವು. ಅವರು ಗಡಹಿಂಗ್ಲಜ ಪ್ರಾಂತದಲ್ಲಿ ದ್ಯಾವಾಪುರದ ಬಸವಲಿಂಗ ಶಾಸ್ತ್ರಿಗಳವರೊಡನೆ ಸಂಚರಿಸಿ ಧರ್ಮ ಪ್ರಚಾರವನ್ನು ಮಾಡಿದರು.

ಕಪನಳ್ಳಿಯ ಶಿವಯೋಗಾಶ್ರಮದಲ್ಲಿ ಮತ್ತು ಗದಗಿನ ಆನಂದಾಶ್ರಮದಲ್ಲಿಯೂ ಅನುಷ್ಠಾನ ಮಾಡಿದರು. ಸಂಗಮದಲ್ಲಿ ನಿಧಿಯನ್ನು ಕೂಡಿಸಿ ಇಂಗ್ಲಿಷ್ ಸ್ಕೂಲನ್ನು ಸ್ಥಾಪಿಸಿದ್ದರು. ಹುನಗುಂದದ ‘ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ’ದ ಅಧ್ಯಕ್ಷರಾಗಿ ಅಲ್ಲಿಯ ವಿದ್ಯಾಸಂಸ್ಥೆಗಳ ಪ್ರಗತಿಗೆ ಕಾರಣರಾದರು. ಶ್ರೀ ಪಂಚಾಕ್ಷರ ಗವಾಯಿಗಳ ಸಂಚಾರಿ ಪಾಠಶಾಲೆಗೆ ಶ್ರೀಗಳವರು ಕೊನೆಯವರೆಗೂ ಸಹಾಯ ನೀಡಿದರು. ಶಿವಯೋಗ ಮಂದಿರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಗಳಾಗಿ ಅದರ ಸರ್ವತೋಮುಖ ಏಳ್ಗೆಗೆ ಶ್ರಮಿಸುತ್ತಿದ್ದರು. ದಿ. ೧೩-೮-೧೯೫೯ ರಂದು ಇಲಕಲ್ಲಲ್ಲಿ ಲಿಂಗೈಕ್ಯರಾದರು.

ಶ್ರೀ ನಿ. ಪ್ರ. ಗುರುಮಹಾಂತ ಸ್ವಾಮಿಗಳು ಚಿತ್ತರಗಿ ಇಲಕಲ್ಲ ಪೀಠದ ಅಧಿಕಾರಿಗಳಾಗಿದ್ದರು. ಶ್ರೀ ವಿಜಯಮಹಾಂತ ಶಿವಯೋಗಿಗಳ ತರುವಾಯ ಈ ಮಠದ ಅಧಿಕಾರವನ್ನು ವಹಿಸಿಕೊಂಡರು. ಹಾನಗಲ್ಲ ಶ್ರೀಗಳವರು ಶ್ರೀಗುರು ಮಹಾಂತ ಸ್ವಾಮಿಗಳ ಅಧಿಕಾರದ ಉತ್ಸವವನ್ನು ತಾವೇ ನೆರವೇರಿಸಿದರು. ಶ್ರೀಗಳವರ ಅಪ್ಪಣೆಯಂತೆ ಶ್ರೀ ಗುರುಮಹಾಂತ ಸ್ವಾಮಿಗಳು ಮಂದಿರಿದ ಶ್ರೀ ಶಿವಬಸವ ದೇವರು ನಾಗನೂರು ಮೊದಲಾದ ಸಾಧಕರೊಂದಿಗೆ ಶ್ರೀ ಮಠದಲ್ಲಿ ಇದ್ದು ಒಂದು ಪಾಠಶಾಲೆಯನ್ನು ನಡೆಸುತ್ತಿದ್ದರು. ಪುರಾಣ ಪ್ರವಚನಗಳಿಂದ ಜನತೆಯಲ್ಲಿ ಧರ್ಮ ಜಾಗ್ರತಿಯನ್ನು ತಂದರು. ಮಠದ ಆಸ್ತಿ-ಪಾಸ್ತಿಗಳ ವ್ಯವಸ್ಥೆಯನ್ನು ಚೆನ್ನಾಗಿ ನೋಡಿಕೊಂಡು ಅವುಗಳ ಸದ್ವಿನಿಯೋಗವಾಗುವಂತೆ ಮಾಡಿದರು. ತಮ್ಮ ಮಠದಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪಿಸಿ ನಡೆಯಿಸಿದರು. ಮಂದಿರದ ಹಿತೈಷಿಗಳಾಗಿದ್ದರು. ಅವರೀಗ ಲಿಂಗೈಕ್ಯರಾಗಿದ್ದಾರೆ

ಶ್ರೀ ಸದಾಶಿವ ದೇವರು (1910)

.ಶ್ರೀ ಸದಾಶಿವ ದೇವರು ಐಹೊಳೆಯ ಹುಚ್ಚಪ್ಪಯ್ಯನವರ ಮಠದ ಅಧಿಕಾರಿಗಳು. ಅವರ ಗುರುಗಳು ಸಂಗಮೇಶ್ವರ ಸ್ವಾಮಿಗಳು. ಶ್ರೀ ಸದಾಶಿವ ದೇವರು ತಮ್ಮ ಇಡಿಯ ಆಯುಷ್ಯವನ್ನು ಸಂಸ್ಥೆಯ ಸೇವೆಗೆಂದು ಮುಡುಪಾಗಿಟ್ಟು ಅದರಂತೆ ವರ್ತಿಸಿದ ಆದರ್ಶ

ಶಿವಯೋಗ ಸಾಧಕರು. ಅವರು ಬಹಳ ಮುಗ್ಧರು. ಶಿವಯೋಗ ಮಂದಿರಕ್ಕೆ ಬಂದ ಅತಿಥಿಗಳ ಯೋಗಕ್ಷೇಮವೇ ಅವರ ನಿತ್ಯ ನೇಮವಾಗಿದ್ದವು. ದಾಸೋಹದ ವ್ಯವಸ್ಥೆಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ತುಂಬಿದ ಹೊಳೆಯಲ್ಲಿಯೂ ಈಜಿ ಮಂಗಳೂರ

ಮೊದಲಾದ ಗ್ರಾಮಗಳಿಂದ ಕಜ್ಜಾಯಗಳನ್ನು ಎತ್ತಿತರುವ ಕಾಯಕವನ್ನು ಕೈಕೊಂಡಿದ್ದರು. ಅವರು ಮಂದಿರದಲ್ಲಿಯೆ ಲಿಂಗೈಕ್ಯರಾದರು. ಅವರ ಗದ್ದುಗೆ ದಾಸೋಹದ ಮುಂದಿನ ಹೊಲದಲ್ಲಿದೆ; ಶಿವರಾತ್ರಿಯ ರಥಯಾತ್ರೆಯ ಪಾದಗಟ್ಟೆಯಾಗಿ ಪೂಜೆಗೊಂಡಿದೆ.