1901-1934

ಹಾರ್ನಹಳ್ಳಿಯ ಶ್ರೀ ನಿ. ಪ್ರ. ಗುರುಲಿಂಗ ಸ್ವಾಮಿಗಳು :೧೯೧೫

 

ಹಾರ್ನಹಳ್ಳಿಯ ಶ್ರೀ ನಿ. ಪ್ರ. ಗುರುಲಿಂಗ ಸ್ವಾಮಿಗಳು ಕೋಡಿಮಠದ ಅಧಿಪತಿಗಳಾಗಿದ್ದರು. ಶ್ರೀ ಗುರುಲಿಂಗ ದೇವರು ಮಂದಿರದಲ್ಲಿ ೧೫ ವರ್ಷ ಕನ್ನಡ-ಸಂಸ್ಕೃತ ವಿದ್ಯಾ ವ್ಯಾಸಂಗವನ್ನು ಪೂರೈಸಿ ಯೋಗದಲ್ಲಿಯೂ ನಿಷ್ಣಾತರಾಗಿ ಹಾನಗಲ್ಲ ಶ್ರೀಗಳವರಿಂದ ಆಯುರ್ವೇದ ವಿದ್ಯೆಯನ್ನು ಸಂಪಾದಿಸಿದರು.

ಅವರು ವನಸ್ಪತಿಗಳಿಂದ ಉತ್ತಮ ಔಷಧಿಗಳನ್ನು ತಯಾರಿಸಿ ಉಚಿತವಾಗಿಯೇ ರೋಗಿಗಳಿಗೆ ಚಿಕಿತ್ಸೆಯನ್ನು ಮಾಡುತ್ತಿದ್ದರು. ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಕೆ. ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಶ್ರೀ ಗುರುಲಿಂಗ ದೇಶಿಕರನ್ನು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿರುವ ಪ್ರಸಿದ್ಧವಾದ ಶ್ರೀ ಕೋಡಿಮಠಕ್ಕೆ ಅಧಿಕಾರಿಗಳನ್ನಾಗಿ ಮಾಡಿದರು.

ಹಾಸನದ ಜವಹರನಹಳ್ಳಿ ಮಠದ ಶ್ರೀ ಚಿಕ್ಕಶಾಂತವೀರ ಮಹಾಸ್ವಾಮಿಗಳು ಆಶ್ರಮಾಧಿಕಾರ ದಯಪಾಲಿಸಿದರು. ಶ್ರೀ ಗುರುಲಿಂಗಸ್ವಾಮಿಗಳು ೫೦ ವರ್ಷಗಳಿಂದ ಅನಾಯಕವಾದ ಮಠವನ್ನು ಶ್ರಮವಹಿಸಿ ವ್ಯವಸ್ಥಿತವಾಗಿಟ್ಟರು. ಅಕಾಲದಲ್ಲಿಯ ಅಧಿಕಾರ ವಹಿಸಿದ ಮೂರು ವರ್ಷಗಳಲ್ಲಿಯೇ ಲಿಂಗೈಕ್ಯರಾದರು

ಕಲಬುರ್ಗಿಯ ಶ್ರೀ ನಿ. ಪ್ರ. ಶಿವಮೂರ್ತಿ ಸ್ವಾಮಿಗಳು :(1915)

  ಕಲಬುರ್ಗಿಯ ಶ್ರೀ ನಿ. ಪ್ರ. ಶಿವಮೂರ್ತಿ ಸ್ವಾಮಿಗಳು  ಗದ್ದಗಿ ಮಠದ ಅಧಿಪತಿಗಳಾಗಿದ್ದಾರೆ. ಕಲಬುರ್ಗಿ (ಗುಲಬುರ್ಗಾ)ಯಲ್ಲಿರುವ ಗದ್ದಗಿಮಠವು ಹೈದರಾಬಾದ ಪ್ರಾಂತದಲ್ಲಿ ಬಹು ಪ್ರಸಿದ್ಧವಾದ ವಿರಕ್ತಪೀಠ.

ಇದರ ಅನೇಕ ಶಾಖಾಮಠಗಳಿವೆ. ಹುಬ್ಬಳ್ಳಿಯಲ್ಲಿಯೂ ಒಂದು ಭವ್ಯವಾದ ಶಾಖಾಮಠವಿದೆ. ಈ ಮಠವು ಸು ೨೫೦ ವರ್ಷಗಳ ಹಿಂದೆ ಶ್ರೀ ರೇವಣಸಿದ್ಧ ಸ್ವಾಮಿಗಳೆಂಬ ಶಿವಾನುಭವಿಗಳಿಂದ ಸ್ಥಾಪಿತವಾಯಿತು.

ಈ ಪೀಠದ ಪರಂಪರೆಯಲ್ಲಿ ಅನೇಕ ಸ್ವಾಮಿಗಳು ತಪಸ್ವಿಗಳೂ ಶಿವಾನುಭವಿಗಳೂ ಆಗಿದ್ದಾರೆ. ಅವರಲ್ಲಿ ಲಿಂ. ಶ್ರೀ ಚರಲಿಂಗ ಸ್ವಾಮಿಗಳೂ ಒಬ್ಬರು. ಅವರು ಮಲ್ಲನಕೆರೆಯ ಶ್ರೀ ಚೆನ್ನಬಸವ ಸ್ವಾಮಿಗಳಲ್ಲಿ ಶಿವಾನುಭವ ಶಾಸ್ತ್ರವನ್ನು ಸಂಪಾದಿಸಿದ್ದರು.

ಧಾರ್ಮಿಕ ವೃತ್ತಿಯಿಂದ ಜನಾನುರಾಗಿಗಳಾಗಿದ್ದರು. ಅವರ ನಂತರ ಶ್ರೀ ಶಿವಮೂರ್ತಿ ಸ್ವಾಮಿಗಳವರು ಈ ಮಠದ ಅಧಿಪತಿಗಳಾಗಿ ತಮ್ಮ ಪೀಠದ ಘನವಾದ ಪರಂಪರೆಯನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಅವರು ಅನುಭವಿಗಳು ಮತ್ತು ಸರಳ ಜೀವಿಗಳು.

ಶಿವಯೋಗ ಮಂದಿರದ ಟ್ರಸ್ಟಿಗಳಾಗಿ ಸಂಸ್ಥೆಯ ಏಳೆಗೆ ಶ್ರಮಿಸಿದ್ದಾರೆ.

ನಾಗನೂರ ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠ :(1915)

 ನಾಗನೂರ ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠದ ಅಧಿಪತಿಗಳು. ನಾಗನೂರು ಬೆಳಗಾಂವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿದೆ. ಅಲ್ಲಿಯ ರುದ್ರಾಕ್ಷಿ ವಿರಕ್ತಮಠವು ಬಹಳ ಪ್ರಸಿದ್ಧವಾದುದು. ಮಠದ ಮೂಲ ಕರ್ತೃಗಳು ಶ್ರೀ

ಪ್ರಭುಸ್ವಾಮಿಗಳು, ಅವರ ತರುವಾಯ ಶ್ರೀ ಸಿದ್ದರಾಮ ಸ್ವಾಮಿಗಳು, ೨ ನೆಯ ಶ್ರೀ ಸಿದ್ದರಾಮ ಸ್ವಾಮಿಗಳು, ಶ್ರೀ ವೀರಭದ್ರ ಸ್ವಾಮಿಗಳು, ಶ್ರೀ ಗುರುಲಿಂಗ ಸ್ವಾಮಿಗಳು ನಂತರ ಈಗಿನ ಶ್ರೀಗಳು. ಹೀಗೆ ಈ ಮಠದ ಪರಂಪರೆ ಸು. ೨೦೦ ವರ್ಷ ಪ್ರಾಚೀನವಾಗಿದೆ.

ಶ್ರೀಗಳವರು ದಿ. ೨೫-೧೨-೧೮೯೮ರಲ್ಲಿ ನಾಗನೂರಿನಲ್ಲಿ ಜನಿಸಿದರು. ೧೨ನೆಯ ವಯಸ್ಸಿನಲ್ಲಿ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದು ಪಂ, ಸೋಮನಾಥ ಶಾಸ್ತ್ರಿಗಳು ಮತ್ತು ಉಮಚಗಿ ಪಂ. ಶಂಕರಶಾಸ್ತ್ರಿಗಳವರಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ಅವರು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಸೇವೆ ಮತ್ತು ಅನುಷ್ಠಾನದಲ್ಲಿಯೆ ಹೆಚ್ಚಾಗಿದ್ದು ಪುಣ್ಯಭಾಗಿಗಳಾದರು. ೧೯೨೪ ರಲ್ಲಿ ಮಠದ ಅಧಿಕಾರವನ್ನು ವಹಿಸಿಕೊಂಡು ಅದರ ಜೀರ್ಣೋದ್ಧಾರ ಕೈಕೊಂಡರು.

೧೯೩೨ ರಲ್ಲಿ ‘ವೀರಶೈವ ವಿದ್ಯಾರ್ಥಿ ಪ್ರಸಾದ ನಿಲಯ’ವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರು. ಅಲ್ಲಿ ಪ್ರಾರಂಭದಲ್ಲಿ ೨೫ ವಿದ್ಯಾರ್ಥಿಗಳಿದ್ದು ಈಗ ಅವರ ಸಂಖ್ಯೆ ೨೫೦ಕ್ಕೂ ಮಿಕ್ಕಿದೆ. ಹನುಮನ ಬೀದಿಯಲ್ಲಿ ಲಕ್ಷಾಂತರ ಧನದ ವಿನಿಯೋಗದಿಂದ ಭವ್ಯವಾದ ಕಟ್ಟಡವಾಗಿದೆ. ಅದರ ಉದ್ಘಾಟನೆಯು ೧೯೫೧ರಲ್ಲಿ ಮೈಸೂರಿನ ಶ್ರೀ ಮನ್ಮಹಾರಾಜರವರ ಅಮೃತ ಹಸ್ತದಿಂದ ಜರುಗಿತು. ಈ ಕಟ್ಟಡಕ್ಕೆ ಹುಬ್ಬಳ್ಳಿಯ ಲಿಂ. ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಧನ ಸಹಾಯ ದಯಪಾಲಿಸಿದರು.

ಪ್ರಸಾದ ನಿಲಯದಲ್ಲಿ ಶ್ರೀ ಗುರುಸಿದ್ಧೇಶ್ವರ ಗ್ರಂಥಾಲಯವನ್ನು ವಾಚನಾಲಯವನ್ನೂ ಸ್ಥಾಪಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಪಯುಕ್ತ ಮತ್ತು ಬೆಲೆ ಬಾಳುವ ಗ್ರಂಥಗಳನ್ನು, ತಾಡವೋಲೆ ಹಾಗೂ ಕೈಬರಹದ ಅಮೂಲ್ಯ ಗ್ರಂಥಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ನಿಲಯದ ಪರವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಶ್ರೀ ಶಿವಬಸವ ಸ್ವಾಮಿಗಳು ಶ್ರೀ ಈಶ್ವರ ಸಣಕಲ್ಲ ಅವರಿಗೂ ‘ವಚನ ಪಿತಾಮಹ’ರಾದ ಶ್ರೀ ಫ. ಗು. ಹಳಕಟ್ಟಿ, ಅವರಿಗೂ ಸಾಹಿತ್ಯ ಸೇವೆಗಾಗಿ ನಿಧಿಯನ್ನು ದಯಪಾಲಿಸಿದರು.

ಶ್ರೀ ಶಿವಬಸವ ಸ್ವಾಮಿಗಳು ಮಂದಿರದ ಟ್ರಸ್ಟಿಗಳಾಗಿದ್ದಾರೆ. ಕೆಲವು ವರ್ಷ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ಮಂದಿರದ ಹಿತೈಷಿಗಳು; ಆಗಾಗ ಭಿಕ್ಷೆಯಿಂದ ಮಂದಿರದ ಯೋಗಕ್ಷೇಮವನ್ನು ಬಿಡದೆ ವಹಿಸಿಕೊಂಡು ಬಂದವರು. ಕನ್ನಡದ ಗಡಿನಾಡಿನಲ್ಲಿ ವೀರಶೈವ ಸಾಹಿತ್ಯ-ಸಂಸ್ಕೃತಿಗಳ ಪ್ರಸಾರ ಕಾರ್ಯವನ್ನು ಕೈಕೊಂಡ ಶ್ರೀಗಳವರ ಸಾಹಸ ಪ್ರಶಂಸನೀಯವಾದುದು. ಸಮಾಜ ಸೇವೆಯೆ ಅವರ ನಿತ್ಯದ ಸತ್ಯ ಕಾಯಕವಾಗಿದೆ.

ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು :(1915)

 

ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಲಿಂ. ಶ್ರೀ ಜ. ಗಂಗಾಧರ ಮಹಾಸ್ವಾಮಿಗಳ ನಂತರ ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠವನ್ನು ಅಲಂಕರಿಸಿದರು.

ಬೆಳಗಾಂವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕ್ರಿ. ಶ. ೧೮೯೮, ಸಪ್ಟೆಂಬರ ೭ ನೆಯ ದಿನಾಂಕ ಜನಿಸಿದರು. ಅವರು ಕೊಣ್ಣೂರಿನ ಪ್ರಸಿದ್ಧ ಗುರುಪೀಠವಾದ ಶ್ರೀ ಕೆಂಪಯ್ಯ ಸ್ವಾಮಿ ಮಠಕ್ಕೆ ಅಧಿಕಾರಿಗಳಾಗಿ ಮಂದಿರದಲ್ಲಿ ಶಿಕ್ಷಣ ಪಡೆಯಲು ಬಂದರು.

ಕನ್ನಡ-ಸಂಸ್ಕೃತ ಶಿಕ್ಷಣದೊಂದಿಗೆ ಯೋಗ ಸಾಧನೆಯಲ್ಲಿಯೂ ಪ್ರಾವೀಣ್ಯ ಪಡೆದರು. ಕೊಣ್ಣೂರ ಮಠದ ಅಭಿವೃದ್ಧಿಯನ್ನು ಮಾಡಿ ಅಲ್ಲಿ ಸಂಸ್ಕೃತ ಪಾಠ ಶಾಲೆ ಮತ್ತು ಇಂಗ್ಲಿಷ್ ಸ್ಕೂಲನ್ನು ಸ್ಥಾಪಿಸಿ ವಿದ್ಯಾವಿತರಣೆಯ ಪವಿತ್ರ ಕಾರ್ಯ ಪ್ರಾರಂಭಿಸಿದರು. ನೂರು ಜನ ವಿದ್ಯಾರ್ಥಿಗಳು ಮತ್ತು ಐದು ಜನ ಪ್ರಾಧ್ಯಾಪಕರ ಉಚಿತ ಪ್ರಸಾದ-ವಸತಿಗಳ ವೆಚ್ಚವನ್ನು ಮಠದ ವತಿಯಿಂದಲೇ ಏರ್ಪಡಿಸಿದರು.

ಕಾಶಿಯಲ್ಲಿ ಕಲಿಯುವ ಅನೇಕ ವಿದ್ಯಾರ್ಥಿಗಳಿಗೆ ವೇತನವನ್ನು ದಯಪಾಲಿಸಿ ಪ್ರೌಢ ಶಿಕ್ಷಣಕ್ಕೆ ಪ್ರೋತ್ಸಾಹವಿತ್ತರು. ಶಿವಯೋಗ ಮಂದಿರದ ಸಲುವಾಗಿ ಹತ್ತು ಸಾವಿರ ರೂಪಾಯಿಗಳ ಭಿಕ್ಷೆಯನ್ನು ಮಾಡಿ ಕಳಿಸಿದ್ದರು. ಶ್ರೀ ಕೆಂಪಯ್ಯದೇವರ ಕಾರ್ಯದಕ್ಷತೆಯನ್ನು ಕಂಡು ಹುಬ್ಬಳ್ಳಿ-ಧಾರವಾಡ ಮಹಾಜನಗಳ ಪ್ರಾರ್ಥನೆಯಂತೆ ಲಿಂ. ಹಾವೇರಿಯ ಶ್ರೀ ಶಿವಬಸವ ಮಹಾಸ್ವಾಮಿಗಳವರು ಅವರನ್ನು ಹುಬ್ಬಳ್ಳಿಯ ಶ್ರೀ ಮೂರುಸಾವಿರ ಪೀಠಕ್ಕೆ ಅಧಿಕಾರಿಗಳನ್ನಾಗಿ ಮಾಡಿದರು. ಶ್ರೀ

ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳವರು ಹುಬ್ಬಳ್ಳಿಯ ಪೀಠವನ್ನು ಅಲಂಕರಿಸಿದಂದಿನಿಂದ ಕನ್ನಡ ನಾಡಿನ ಶಿಕ್ಷಣ ಪ್ರಪಂಚದಲ್ಲಿ ಸುವರ್ಣ  ಯುಗವು ಪ್ರಾರಂಭವಾಯಿತು. ವಿವೇಕಪೂರ್ಣವಾದ ವಿಚಕ್ಷಣವಾದ ವ್ಯಾವಹಾರಿಕವಾದ

ಶೈಕ್ಷಣಿಕ ದೃಷ್ಟಿಯುಳ್ಳ ಶ್ರೀ ಜಗದ್ಗುರುಗಳ ಆದರ್ಶ ಧೈಯಗಳು ನಾಡಿನ ಸರ್ವತೋಮುಖ ಪ್ರಗತಿಗೆ ಪೋಷಕವಾದವು. ಬರಿಯ ವ್ಯಾಪಾರ ಕೇಂದ್ರವಾಗಿದ್ದ ಹುಬ್ಬಳ್ಳಿ ನಗರವು ಶ್ರೀ ಜಗದ್ಗುರುಗಳವರ ಕೃಪಾಶೀರ್ವಾದದಿಂದ ಕರ್ನಾಟಕದ ಶೈಕ್ಷಣಿಕ ಕೇಂದ್ರವಾಗಿ ‘ವಿದ್ಯಾನಗರ’ವಾಗಿ ಬೆಳೆಯುವಂತಾಯಿತು. ಶ್ರೀ ಮಠದಲ್ಲಿ  ಜ. ಗಂಗಾಧರ ಸ್ವಾಮಿಗಳು ಸಂಸ್ಕೃತ ಕಾಲೇಜನ್ನು ನಡೆಯಿಸಿದರು.

ನೂರಾರು ಜನ ವಿದ್ಯಾರ್ಥಿಗಳ ಅನುಕೂಲತೆಗಾಗಿ ಲಿಂಗರಾಜ ಫ್ರೀ ಬೋರ್ಡಿಂಗನ್ನು ಸ್ಥಾಪಿಸಿದರು. ಕ್ರಿ. ಶ. ೧೯೪೭ ರಲ್ಲಿ ಶ್ರೀ ಜಗದ್ಗುರು ಗಂಗಾಧರ  ಸ್ವಾಮಿಗಳು ವಾಣಿಜ್ಯ ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ೧೯೫೨ ರಲ್ಲಿ ಶ್ರೀ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜನ್ನು ಪ್ರಾರಂಭಿಸಲು ೮೦ ಸಾವಿರ ರೂ.ಗಳ ದೇಣಿಗೆಯನ್ನು ದಯಪಾಲಿಸಿದರು. ಇವೆರಡೂ ಕಾಲೇಜಗಳ ಆಡಳಿತವನ್ನು ಬೆಳಗಾಂವಿಯ ಕೆ.ಎಲ್.ಇ. ಸೊಸೈಟಿಗೆ ಒಪ್ಪಿಸಿದರು. ಇವಲ್ಲದೆ ಜ. ಗಂಗಾಧರ ಹೈಸ್ಕೂಲು,

ಜ. ಗುರುಸಿದ್ಧೇಶ್ವರ ಕನ್ನಡ ಟ್ರೇನಿಂಗ ಕಾಲೇಜ, ಮಾದರಿಯ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮಠದ ಉದಾರ ಪೋಷಣೆಯಲ್ಲಿ ನಿರಾತಂಕವಾಗಿ ನಡೆಯುವಂತೆ ಏರ್ಪಡಿಸಿದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಅನೇಕ ಸಂಘ ಸಂಸ್ಥೆಗಳು ಶ್ರೀ ಜಗದ್ಗುರುಗಳವರ ದೇಣಿಗೆಯ ಲಾಭವನ್ನು ಪಡೆದು ಪ್ರಗತಿ ಸಾಧಿಸಿವೆ.

ಬೆಳಗಾಂವಿಯ ‘ವೀರಶೈವ ಪ್ರಸಾದ ನಿಲಯ’ದ ಕಟ್ಟಡಕ್ಕೆ ೬೦ ಸಾವಿರ ರೂಪಾಯಿಗಳ ಸಹಾಯ ದಯಪಾಲಿಸಿದರು. ಬೆಳಗಾಂವಿ ಜಿಲ್ಲೆಯ ಹುಕ್ಕೇರಿಯ ಘಟಪ್ರಭೆಯ ರೇಲ್ವೆ ನಿಲ್ದಾಣದ ಹತ್ತಿರ ನಿರ್ಮಿಸಿದ ಆರೋಗ್ಯ ಧಾಮಕ್ಕೆ ಐದು ಲಕ್ಷಕ್ಕಿಂತ ಹೆಚ್ಚಿಗೆ ದೇಣಿಗೆಯನ್ನು ಕೊಡಮಾಡಿದ್ದಾರೆ. ಅದನ್ನು ಮಾದರಿಯ ಸಹಕಾರಿ ಆರೋಗ್ಯಧಾಮವನ್ನಾಗಿ ಮಾರ್ಪಡಿಸಿ ನಾಡಿನ ಜನರ ಆರೋಗ್ಯ ರಕ್ಷಣೆಯ ಮಹಾಸೇವೆಯು ನಿರಾಬಾಧವಾಗಿ ನಡೆಯುವಂತೆ ಏರ್ಪಡಿಸಿರುವದು. ಶ್ರೀ ಜಗದ್ಗುರುಗಳವರ ಉದಾರತೆ ಮತ್ತು ವಿಶಾಲ ದೃಷ್ಟಿಗಳ ದ್ಯೋತಕವಾಗಿದೆ.

ಶ್ರೀ ಜಗದ್ಗುರುಗಳು ‘ಶ್ರೀ ಜ. ಗಂಗಾಧರ ಗಾಂಧೀ ಸ್ಮಾರಕ ನೇತ್ರ ಚಿಕಿತ್ಸಾ ಫಂಡ’ನ್ನು ಸ್ಥಾಪಿಸಿ ಅದಕ್ಕೆ ೧೦ ಸಾವಿರ ರೂ.ಗಳ ದೇಣಿಗೆಯನ್ನು ಕೊಡಮಾಡಿದರು. ಅದರಿಂದ ನೇತ್ರ ಚಿಕಿತ್ಸೆಯ ಹೆಚ್ಚಿನ ಶಿಕ್ಷಣ ಪಡೆಯಲು ಪರದೇಶಗಳಿಗೆ ಹೋಗುವ ಡಾಕ್ಟರರಿಗೆ ಸಹಾಯ ನೀಡುವ ಯೋಜನೆಯಾಯಿತು. ಇದರ ಲಾಭವನ್ನು ಪಡೆದುಕೊಂಡು ಡಾ. ಎಂ. ಸಿ  ಮೋದಿ ಅವರು ಅಮೇರಿಕೆಗೆ ಹೋಗಿ ಬಂದರು; ಕನ್ನಡ ನಾಡಿನ ಜನತೆಯ ಸೇವೆ ಮಾಡಿ * ಪದ್ಮಶ್ರೀ’ಯ ಘನತೆಯನ್ನು ಪಡೆದು ಇಡಿಯ ಭಾರತದ ಕಣ್ಮಣಿಯಾಗಿದ್ದಾರೆ.

ಶ್ರೀ ಮಠದ ವತಿಯಿಂದ ಗ್ರಂಥಮಾಲೆಯನ್ನು ಪ್ರಾರಂಭಿಸಿದರು ಅದರಲ್ಲಿ ಅನೇಕ ಉತ್ತಮ ಕನ್ನಡ ವಚನ ಗ್ರಂಥಗಳನ್ನು ಮತ್ತು ‘ವೀರಶೈವಾನಂದ ಚ೦ದ್ರಿಕೆ’ಯಂಥ ಅಮೌಲ್ಯ ಸಂಸ್ಕೃತ ಗ್ರಂಥಗಳನ್ನು ಪ್ರಕಟಿಸಿದ್ದಲ್ಲದೆ ವೀರಶೈವವಾಗ್ಮಯದ ಪ್ರಸಾರ ಮತ್ತು ಪ್ರಕಾಶನಕ್ಕಾಗಿ ಎರಡು ಲಕ್ಷ ರೂಪಾಯಿಗಳ ನಿಧಿಯನ್ನು ಏರ್ಪಡಿಸಿರುವರು.

ಶ್ರೀ ಜಗದ್ಗುರುಗಳವರು ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿಯೂ ಅದರ ಸರ್ವಾಂಗೀಣ ಪ್ರಗತಿಗೆ ಉಪಾಯಗಳನ್ನು ಕೈಕೊಂಡಿದ್ದರು. ಅವುಗಳನ್ನು ಪೂರ್ಣ ಮಾಡಲು ಸಮರ್ಥರಾದ ಶಿವಯೋಗ ಮಂದಿರ ಮತ್ತು ಕಾಶಿಯಲ್ಲಿ ಕಲಿತು ವಿದ್ವಾಂಸರಾದ ಚಿತ್ತರಗಿ-ಇಲಕಲ್ಲ ಶ್ರೀ ವಿಜಯ ಮಹಾಂತ ದೇವರನ್ನು ಈ ಪೀಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಮಾಡಿದರು.

ಆಧುನಿಕ ಜೀವನದ ವಿಶಾಲ ದೃಷ್ಟಿಯನ್ನು ಪಡೆದ ಶ್ರೀ ಜಗದ್ಗುರುಗಳು ನಾಡಿನ ಉತ್ಕರ್ಷಕ್ಕಾಗಿ ಅನೇಕ ಮುಖವಾಗಿ ತ್ಯಾಗ ಮಾಡಿ ಕಾಯಕಯೋಗಿಗಳಾಗಿ ಬೆಳಗುತ್ತ ೧೯೫೮ ರಲ್ಲಿ ಲಿಂಗೈಕ್ಯರಾದುದು ನಾಡಿಗೆ ತುಂಬಿಬಾರದ ಹಾನಿಯಾಗಿದೆ.

ಕಿತ್ತೂರ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು :

 ಕಿತ್ತೂರ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು ಕಲ್ಮಠದ ಅಧಿಕಾರಿಗಳು. ಅವರು ಮಂದಿರದಲ್ಲಿದ್ದು ಕನ್ನಡ-ಸಂಸ್ಕೃತ ವಿದ್ಯಾ ವ್ಯಾಸಂಗವನ್ನು ಮಾಡಿ ಶಿವಯೋಗ ಸಾಧನೆಯಲ್ಲಿಯೇ ಯೋಗ್ಯತೆ ಪಡೆದವರು. ಕಿತ್ತೂರಿನ ಕಲ್ಮಠ ಇತಿಹಾಸ ಪ್ರಸಿದ್ಧವಾದ ವಿರಕ್ತಪೀಠ.

ಅದರ ಅಧಿಪತಿಗಳು ಕನ್ನಡ ನಾಡಿನಲ್ಲಿ ಸ್ವಾತಂತ್ರ್ಯ ಕ್ರಾಂತಿಯನ್ನು ಮಾಡಿದ ವೀರಮಹಿಳೆ ಶ್ರೀ ಚೆನ್ನಮ್ಮರಾಣಿಗೆ ಮಾರ್ಗದರ್ಶನ ಮಾಡಿದರು. ಶ್ರೀಗಳವರು ಕಿತ್ತೂರ ಸಂಸ್ಥಾನದ ಇತಿಹಾಸ ಸಂಶೋಧಕ ಮಂಡಳಿಗೆ ಅನೇಕ ಮುಖವಾಗಿ ನೆರವಾಗಿದ್ದಾರೆ.

ಕೃಷ್ಣಾಪುರ (ಕೋಪ್ಪ)ದ ಶ್ರೀ ಸದಾಶಿವದೇವರು :

 

ಕೃಷ್ಣಾಪುರ (ಕೋಪ್ಪ)ದ ಶ್ರೀ ಸದಾಶಿವದೇವರು ಮಂದಿರಲ್ಲಿ ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳು ಮತ್ತು ಬೆಣಕಲ್ಲ ಸೋಮಶೇಖರ ಶಾಸ್ತ್ರಿಗಳಲ್ಲಿ ಪಂಚಕಾವ್ಯ, ಚಂಪೂ, ನಾಟಕಗಳನ್ನು ಅಭ್ಯಾಸ ಮಾಡಿದರು. ಯೋಗಾನುಷ್ಠಾನ ಸಂಗೀತದಲ್ಲಿ

ಪರಿಣತರಾಗಿ ಪುರಾಣ ಪ್ರವಚನಗಳನ್ನು ಹೇಳುವ ಯೋಗ್ಯತೆ ಪಡೆದಿದ್ದರು. ಅಲ್ಪ ವಯಸ್ಸಿನಲ್ಲಿಯೇ ೧೯೩೨ ರಲ್ಲಿ ಲಿಂಗೈಕ್ಯರಾದರು.

ಸಖರಾಯ ಪಟ್ಟಣದ ಶ್ರೀ ಘ. ಚ. ಸದಾಶಿವ ಪಟ್ಟಾಧ್ಯಕ್ಷರು :

 

ಸಖರಾಯ ಪಟ್ಟಣದ ಶ್ರೀ ಘ. ಚ. ಸದಾಶಿವ ಪಟ್ಟಾಧ್ಯಕ್ಷರು ಹಾಲುಸ್ವಾಮಿ ಮಠದ ಅಧಿಕಾರಿಗಳು. ಗುರುಗಳಾದ ಶ್ರೀ ಹಾಲುಸ್ವಾಮಿಗಳು ಶ್ರೀ ಸದಾಶಿವ ದೇವರನ್ನು ತಮ್ಮ ಮಠದ ಉತ್ತರಾಧಿಗಳೆಂದು ನಿರ್ಣಯಿಸಿ ಅವರ ಶಿಕ್ಷಣದ ಭಾರವನ್ನು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಮತ್ತು ಅನಂತಪುರದ ಶ್ರೀ ಜ. ಲಿಂಗಸ್ವಾಮಿಗಳಿಗೆ ಒಪ್ಪಿಸಿದ್ದರು. ಅದರಂತೆ ಅವರು ಮಂದಿರದಲ್ಲಿದ್ದು ಕನ್ನಡ-ಸಂಸ್ಕೃತ ವಿದ್ಯಾ ಸಂಪತ್ತನ್ನು ಗಳಿಸಿದರು. ಯೋಗವಿದ್ಯೆಯಲ್ಲಿ ನೈಪುಣ್ಯ ಪಡೆದರು. ಭಾಷಣ ಮತ್ತು ಲೇಖನ ಕಲೆಯಲ್ಲಿ ಪಳಗಿದರು. ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ೧೯೨೬ರಲ್ಲಿ ಸಖರಾಯ ಪಟ್ಟಣದ ಹಾಲುಸ್ವಾಮಿ ಪೀಠವನ್ನು ಅಲಂಕರಿಸಿದರು.

ಶ್ರೀ ಪಟ್ಟಾಧ್ಯಕ್ಷರು ಗುರುವರ್ಯ ಯೋಗಿರಾಜ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಲಿಂಗೈಕ್ಯವಾಗಿದ್ದ ಗಿರಿಯಾಪುರ (ತಾ. ಕಡೂರು) ಗ್ರಾಮದಲ್ಲಿಯೇ ವಾಸವಾಗಿದ್ದು ಅವರ ಗದ್ದುಗೆಯನ್ನು ಅಂದವಾಗಿ ಕಟ್ಟಿಸಿದರು. ಅಲ್ಲಿಯೇ ‘ಶ್ರೀ ಗುರುಕುಮಾರಾಶ್ರಮ’ವನ್ನು ಸ್ಥಾಪಿಸಿದರು. ಅದು ಅವರ ಸತ್ಕಾರ್ಯಗಳ ಕೇಂದ್ರವಾಯಿತು. ಹಾನಗಲ್ಲ ಪೂಜ್ಯರ ಸ್ಮಾರಕವಾಗಿ ‘ಶಿವದ್ವೈತ ತತ್ವಪ್ರಚಾರ ಸಮಿತಿ’ಯನ್ನು ನಿರ್ಮಿಸಿ ಅದರ ಅಂಗವಾಗಿ ಪೂಜ್ಯರ ಪುಣ್ಯತಿಥಿ ಸಪ್ತಾಹವನ್ನು ಪ್ರತಿವರ್ಷ ಆಚರಿಸುತ್ತಾರೆ. ವಿದ್ವಾಂಸರ ಅನುಭವಿಗಳ ಭಾಷಣ ಮತ್ತು ಪ್ರವಚನಗಳಿಂದ ಅಲ್ಲಿನ ಜನತೆಯ ನಡೆ ನುಡಿಗಳನ್ನು ತಿದ್ದಿ ಉತ್ತಮ ವಾತಾವರಣವನ್ನು ಕಲ್ಪಿಸಿದ್ದಾರೆ. ಶ್ರೀ ಪಟ್ಟಾಧ್ಯಕ್ಷರು ಶೀಲಾಚರಣೆಯನ್ನು ಅಕ್ಷುಣ್ಣವಾಗಿ ನಡೆಯಿಸಿಕೊಂಡು ಬಂದಿದ್ದಾರೆ. ಅವರು ಸ್ವಾಧ್ಯಾಯದಿಂದ ಸಂಸ್ಕೃತದಲ್ಲಿ ಕನ್ನಡದಲ್ಲಿಯೂ ಪ್ರೌಢಿಮೆಯನ್ನು ಪಡೆದವರು. ‘ಕೈವಲ್ಯೋಪನಿಷದ್ಭಾಷ್ಯ’ವನ್ನು ರಚಿಸಿ ತಮ್ಮ ಸಂಸ್ಕೃತ ಪಾಂಡಿತ್ಯವನ್ನು ತಮಗಿರುವ ಶಿವಾನುಭವ ಶಕ್ತಿಯನ್ನು ನಾಡಿನಲ್ಲಿ ಬೆಳಗಿಸಿದ್ದಾರೆ. ಅವರಲ್ಲಿ ಕವಿತ್ವ ಪ್ರತಿಭೆಯೂ ಇದೆ. ಇದುವರೆಗೆ ಅವರು ೨೫ಕ್ಕೂ ಮಿಕ್ಕಿ ಗ್ರಂಥಗಳನ್ನು ರಚಿಸಿದ್ದಾರೆ, ಉತ್ತಮ ಸಾಹಿತ್ಯವನ್ನು ಬೆಳಕಿಗೆ ತಂದಿದ್ದಾರೆ. ತರುತ್ತಿದ್ದಾರೆ. ಶಿವಯೋಗ ಮಂದಿರದ ಉದ್ದೇಶಗಳನ್ನು ಕೃತಿಗಿಳಿಸಿದ ಆದರ್ಶ ಗುರುಗಳಾಗಿದ್ದಾರೆ. ಅವರು ತಮ್ಮ ಮಠದ ಆಡಳಿತವನ್ನು ನೋಡಿಕೊಳ್ಳಲು ಜಕ್ಕಲಿಯ ಶ್ರೀ ಬಸವಲಿಂಗ ದೇಶಿಕರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿರುವರು. ಶ್ರೀ ಬಸವಲಿಂಗದೇಶಿಕರು ಹುಣಸಿಘಟ್ಟದ ಶಾಖಾಮಠದಲ್ಲಿದ್ದುಕೊಂಡು ಮಠದ ವ್ಯವಸ್ಥೆಯನ್ನು ದಕ್ಷತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಮಠವನ್ನು ಅಭಿವೃದ್ಧಿಗೆ ತಂದಿದ್ದಾರೆ. ಅವರು ಶಿವಪೂಜಾನಿಷ್ಠರು, ವಾಗ್ಮಿಗಳು ಮತ್ತು ಪುರಾಣ-ಪ್ರವಚನ ಪಟುಗಳೂ ಆಗಿರುವರು.

  ಕುಷ್ಟಗಿಯ ಶ್ರೀ ಘ. ಚ. ಪಟ್ಟದ ಕರಿಬಸವ ಶಿವಾಚಾರ್ಯರು :(೧೯೧೨)

 

ಕುಷ್ಟಗಿಯ ಶ್ರೀ ಘ. ಚ. ಪಟ್ಟದ ಕರಿಬಸವ ಶಿವಾಚಾರ್ಯರು ಹಿರೇಮಠದ ಅಧ್ಯಕ್ಷರಾಗಿದ್ದಾರೆ. ರಾಯಚೂರ ಜಿಲ್ಲೆಯ  ಗುರುಪೀಠಗಳಲ್ಲಿ ಕುಷ್ಟಗಿಯ ಹಿರಿಯ ಮಠವು ಬಹಳ ಪ್ರಸಿದ್ಧವಾದುದು. ತಪಸ್ವಿ ಶ್ರೀಮದ್ದಾನಿ ಕರಿಬಸವ ಸ್ವಾಮಿಗಳು ಈ ಗುರುಪೀಠದ ಮೂಲಕರ್ತರು. ಶ್ರೀ ಕರಿಬಸವ ಪಟ್ಟಾಧ್ಯಕ್ಷರು ಪಂ. ಉಮಚಗಿಯ ಶಂಕರ ಶಾಸ್ತ್ರಿಗಳು ಮತ್ತು ಬಿದರಿ ಶಿವಲಿಂಗ ಶಾಸ್ತ್ರಿಗಳಲ್ಲಿ ನ್ಯಾಯಶಾಸ್ತ್ರವನ್ನು ಪಂಚಕಾವ್ಯಗಳನ್ನು ಅಭ್ಯಾಸ ಮಾಡಿದರು ಯೋಗಾಸನಗಳಲ್ಲಿ ಪರಿಪೂರ್ಣತೆ ಪಡೆದರು. ಅನುಷ್ಠಾನ ಪರರು ಮತ್ತು ಸಂಗೀತದಲ್ಲಿ ಸಾಕಷ್ಟು ಪರಿಶ್ರಮವುಳ್ಳವರು ಶಾ. ಶ. ೧೮೩೭ರಲ್ಲಿ ಮಠದ ಅಧಿಕಾರಿಗಳಾಗಿ ಮೂಲ ಮಠದ ಜೀರ್ಣೋದ್ಧಾರವಲ್ಲದೆ ಹಿರೇಮನ್ನಾಪುರ,  ಹುಣಸಿಹಾಳ,  ಬೋದೂರು, ಚಿಕ್ಕಮನ್ನಾಪುರ ಗ್ರಾಮಗಳಲ್ಲಿ ಹೊಸದಾಗಿ ಮಠಮಾನ್ಯಗಳನ್ನು ಸಂಪಾದಿಸಿದರು. ಅವುಗಳಲ್ಲಿ ಶಿವಲಿಂಗ ಮತ್ತು ನಂದೀಶ್ವರ ಪ್ರತಿಷ್ಠೆಗಳನ್ನು ಮಾಡಿಸಿರುವರು. ೨೦೦ಕ್ಕೂ ಮೇಲ್ಪಟ್ಟು ಭಕ್ತರಿಗೆ ಶಿವದೀಕ್ಷೆ ಸಂಸ್ಕಾರಗಳನ್ನು ಕೊಟ್ಟು ಸಮಾಜೋದ್ಧಾರ ಕಾರ್ಯ ಮಾಡಿಸಿರುವರು.

 

 ಕುಂಕೋವದ ಶ್ರೀ ಮಲ್ಲಿಕಾರ್ಜುನ ಚರಮೂರ್ತಿಗಳು :(1912)

ಕುಂಕೋವದ ಶ್ರೀ ಮಲ್ಲಿಕಾರ್ಜುನ ಚರಮೂರ್ತಿಗಳು ಹಿರಿಯ ಮಠದ ಅಧಿಪತಿಗಳು.

ಇದು ಬಾಳೆಹಳ್ಳ ಸಂಸ್ಥಾನದ ಶಾಖಾಮಠ.  ಶ್ರೀ ಚರಮೂರ್ತಿಗಳು ಮಂದಿರದಲ್ಲಿ ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳವರಿಂದ ಸಂಸ್ಕೃತ ಪಂಚಕಾವ್ಯಗಳನ್ನು ಕಲಿತರು.

೧೯೨೯ರಲ್ಲಿ ಮಠದ ಅಧಿಕಾರವನ್ನು ವಹಿಸಿಕೊಂಡು ಜೀರ್ಣವಾದ ಮಠವನ್ನು ಅಭಿವೃದ್ಧಿಗೆ ತಂದು ಮಲೆನಾಡ ಭಕ್ತರಲ್ಲಿ ಧಾರ್ಮಿಕ ಪ್ರಚಾರ ಕಾರ್ಯವನ್ನು ಮಾಡಿರುವರು

 ಚಿತ್ತಾಪುರದ ಶ್ರೀ ಘ. ಚ. ಚಂದ್ರಶೇಖರ ಪಟ್ಟಾಧ್ಯಕ್ಷರು :1912

ಚಿತ್ತಾಪುರದ ಶ್ರೀ ಘ. ಚ. ಚಂದ್ರಶೇಖರ ಪಟ್ಟಾಧ್ಯಕ್ಷರು ಹಿರೇಮಠದ ಅಧಿಕಾರಿಗಳು. ಅವರು ಸಿರೂರು (ಜಿ. ವಿಜಾಪುರ ತಾ. ಬಾಗಲಕೋಟೆ) ಗ್ರಾಮದಲ್ಲಿ ಶಾ. ಶ. ೧೮೨೦ ಮಾಘ ಬ. ೧೩ ರಂದು ಜನ್ಮ ತಾಳಿದರು.

ಅವರು ಸಿರೂರ ಹಿರಿಯಮಠದ ವತಿಯಿಂದ ಮಂದಿರದಲ್ಲಿ ಪ್ರವೇಶ ಪಡೆದು ಉಮಚಗಿ ಪಂ. ಶಂಕರ ಶಾಸ್ತ್ರಿಗಳು ಮತ್ತು ಪಂ. ವೀರಭದ್ರ ಶಾಸ್ತ್ರಿಗಳಲ್ಲಿ ನ್ಯಾಯ-ಸಾಹಿತ್ಯಗಳ ಅಭ್ಯಾಸ ಮಾಡಿದರು.

೧೯೨೪ರಲ್ಲಿ ಚಿತ್ತಾಪುರ ಮಠದ ಅಧಿಕಾರಿಗಳಾಗಿ ಮಠದ ಜೀರ್ಣೋದ್ಧಾರ ಮಾಡಿದರು. ಭೂಸಂಪತ್ತನ್ನು ಹೆಚ್ಚಿಸಿ ಅದರ ಸದ್ವಿನಿಯೋಗವನ್ನು ಮಾಡುತ್ತಿರುವರು. ನೆರೆಯ ಗ್ರಾಮಗಳಲ್ಲಿ ಪುರಾಣ ಪ್ರವಚನಗಳಿಂದ ಸಾಮಾಜಿಕ ಸೇವೆಯನ್ನು  ಮಾಡುತ್ತಿರುವರು. ಕೆಲವು ವರ್ಷ ಮಂದಿರದಲ್ಲಿ ಸಾಧಕರ ಸಂಸ್ಕೃತ ಶಿಕ್ಷಕರಾಗಿದ್ದರು.