1901-1934

ತೆಲಸಂಗದ ಶ್ರೀ ಘ. ಚ. ಬಸವಲಿಂಗ ಪಟ್ಟಾಧ್ಯಕ್ಷರು  ; 1918

 

 ತೆಲಸಂಗದ ಶ್ರೀ ಘ. ಚ. ಬಸವಲಿಂಗ ಪಟ್ಟಾಧ್ಯಕ್ಷರು   ಹಿರಿಯಮಠದ ಅಧಿಕಾರಿಗಳಾಗಿದ್ದಾರೆ. ಅವರು ಮಾದನಹಿಪ್ಪರಗಿ (ಜಿ. ಗುಲಬುರ್ಗಾ, ತಾ. ಆಲಂದ) ಹಿರೇಮಠದಲ್ಲಿ ಜನ್ಮ ತಾಳಿದರು. ಮೊದಲು ಗುತ್ತಲದ ವಿರಕ್ತಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಪಂ. ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ಸಾಹಿತ್ಯ-ವೇದಾಂತ ವಿಷಯಗಳ ಅಭ್ಯಾಸ ಮಾಡಿದರು. ನುರಿತ

ಪುರಾಣ-ಪ್ರವಚನಕಾರರೂ ಮತ್ತು ಉತ್ತಮ ಬರಹಗಾರರೆಂದು ಮನ್ನಣೆ ಪಡೆದವರು. ಮಂದಿರದಲ್ಲಿ ‘ಸುಕುಮಾರ’ವೆಂಬ ಕೈಬರಹದ ಮಾಸ ಪತ್ರಿಕೆಯನ್ನು ಸಂಪಾದಿಸಿದರು. ೧೯೩೮ರಲ್ಲಿ ತೆಲಸಂಗ (ಜಿ. ಬೆಳಗಾಂವ, ತಾ, ಅಥಣಿ)ದ ಹಿರಿಯ ಮಠಕ್ಕೆಅಧಿಕಾರಿಗಳಾದರು.

ತೆಲಸಂಗದ ಹಿರಿಯ ಮಠ ಶ್ರೀಮಜ್ಜಗದ್ಗುರು ಉಜ್ಜಯಿನಿ ಸಿಂಹಾಸನಾನುಯಾಯಿ ಪ್ರಸಿದ್ಧ ಗುರುಪೀಠ. ಈ ಮಠಕ್ಕೆ ಶಾಖಾ ಮಠಗಳು ಹಾಲಳ್ಳಿ, ಬೀಳೂರು ಮೊದಲಾದ ಗ್ರಾಮಗಳಲ್ಲಿವೆ. ಅಧಿಕಾರಿಗಳಾದ ಮೇಲೆ ಮಠದ ಅಭಿವೃದ್ಧಿಯನ್ನು ಮಾಡಿದ್ದಾರೆ. ‘ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ’ ದ ಬಸವೇಶ್ವರ ಕಾಲೇಜಿಗಾಗಿ ಪುರಾಣ ಹೇಳಿ ನಿಧಿಯನ್ನು ಸಂಗ್ರಹಿಸಿದರು.

ಶ್ರೀ ಪಟ್ಟಾಧ್ಯಕ್ಷರು ಹೆಸರಾದ ಲೇಖಕರೂ ಆಗಿದ್ದಾರೆ. ಹಾವೇರಿ ಲಿಂ. ಶ್ರೀ ಶಿವಬಸವ ಮಹಾಸ್ವಾಮಿಗಳವರ ಚರಿತೆಯನ್ನು ಸರಸವಾಗಿ ಬರೆದಿದ್ದಾರೆ. ವೀರಮಾತೆ ಗುಡ್ಡಾಪುರ ದಾನಮ್ಮ ತಾಯಿಯ ಪುರಾಣವನ್ನು ಸಂಶೋಧಿಸಿ ಸಂಪಾದಿಸಿದ್ದಾರೆ. ಅದು ಪುರಾತನ ಕನ್ನಡ ಕಾವ್ಯವಾಗಿದ್ದು ಇದುವರೆಗೂ ಸಂಶೋಧಿತವಾಗಿ ಪ್ರಕಟವಾಗಿರಲಿಲ್ಲ. ಅದರ ಪ್ರಕಟನೆಯ ಕಾರ್ಯವನ್ನು ಕೈಕೊಂಡಿದ್ದಾರೆ. ಅಥಣಿಯಲ್ಲಿ ಹೊಸದಾಗಿ ಸ್ಥಾಪಿತವಾಗಿರುವ ಹೈಸ್ಕೂಲಿನ ಸಂಚಾಲಕರಾಗಿಯೂ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.

ಶ್ರೀ ಸಣ್ಣಸಿದ್ದವೀರದೇವರು ಬೇವಿನಕಟ್ಟಿ :1917

 

ಶ್ರೀ ಸಣ್ಣಸಿದ್ದವೀರದೇವರು ಬೇವಿನಕಟ್ಟಿ (ಜಿ. ಧಾರವಾಡ, ತಾ. ರೋಣ) ಪುರಾಣಿಕಮಠದಲ್ಲಿ ಜನ್ಮ ತಾಳಿದರು.

ಅವರನ್ನು ೪ ನೆಯ ವರ್ಷದಲ್ಲಿಯೆ ತಂದೆ ತಾಯಿಗಳು ಶಿವಯೋಗ ಮಂದಿರಕ್ಕೆ ಅರ್ಪಿಸಿದರು. ಅವರ ಎಲ್ಲ ಶಿಕ್ಷಣವೂ ಮಂದಿರದಲ್ಲಿಯೆ ನಡೆಯಿತು. ಪಂ. ರೇವಣಸಿದ್ಧ ಶಾಸ್ತ್ರಿಗಳಿಂದ ಸಾಹಿತ್ಯ-ವ್ಯಾಕರಣ ವಿಷಯಗಳ ಅಧ್ಯಯನ ಮಾಡಿದರು. ಶ್ರೀ ರೇವಣಸಿದ್ಧೇಶ್ವರ ವಾಚನಾಲಯದ ಸೆಕ್ರೆಟರಿಗಳಾಗಿ ಗ್ರಂಥಾಲಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.

ಅವರ ಚಟುವಟಿಕೆ ಮತ್ತು ಅಚ್ಚುಕಟ್ಟುತನವು ನವಿಲುಗುಂದ ಶ್ರೀಗಳವರನ್ನು ಆಕರ್ಷಿಸಿತು. ಶ್ರೀ ಸಣ್ಣಸಿದ್ದವೀರ ದೇವರು ಸು. ೨೦ ವರ್ಷಗಳಿಂದ ನವಿಲುಗುಂದ ಗವಿಮಠದಲ್ಲಿದ್ದು ಶ್ರೀಗಳವರ ಅಪ್ಪಣೆಯಂತೆ ವಿದ್ಯಾರ್ಥಿ ನಿಲಯ, ಪುಸ್ತಕಾಲಯ ಮೊದಲಾದ ವಿಭಾಗಗಳ ಕಾರ್ಯಗಳನ್ನು ಶಿಸ್ತಿನಿಂದ ನಿಸ್ಪೃಹ ಭಾವದಿಂದ ನಡೆಯಿಸಿಕೊಂಡು ಬಂದಿರುವರು. ಅವರ ಮೂರ್ತಿ ಸಣ್ಣದಾದರೂ ಜೀವನದ ಅನುಭವ ಮತ್ತು ಓರಣ ಅನುಕರಣೀಯವಾದವು.

ಅಂಕಲಗಿಯ ಶ್ರೀ ನಿ. ಪ್ರ. ಸಿದ್ಧರಾಮ ಸ್ವಾಮಿಗಳು : 1916

 

ಅಂಕಲಗಿಯ ಶ್ರೀ ನಿ. ಪ್ರ. ಸಿದ್ಧರಾಮ ಸ್ವಾಮಿಗಳು ಅಡವೀಸ್ವಾಮಿ ಮಠಾಧ್ಯಕ್ಷರು ರೋಣದ ಹಿರಿಯ ಮಠದಲ್ಲಿ ೧೮೯೯ ರಲ್ಲಿ ಜನ್ಮವಾಯಿತು.

ರೋಣದಲ್ಲಿಯೆ ಮುಲ್ಕಿ ಪರೀಕ್ಷೆ ಮತ್ತು ಇಂಗ್ಲಿಷ್‌ ಎರಡನೆಯತ್ತೆವರೆಗೆ ಶಿಕ್ಷಣ ಹೊಂದಿ ಕ್ರಿ. ಶ. ೧೯೧೭ ರಲ್ಲಿ ಶಿವಯೋಗ ಮಂದಿರದಲ್ಲಿ ರೋಣದ ಪಟ್ಟದ ಶಾಂತಸ್ವಾಮಿ ಮಠದ ಪರವಾಗಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದರು. ಅಲ್ಲಿ ಸಾಹಿತ್ಯ-ನ್ಯಾಯಗಳ ಅಭ್ಯಾಸ ಮತ್ತು ಯೋಗಶಿಕ್ಷಣ ಪಡೆದು ೧೯೨೭ರಲ್ಲಿ ಕಾಶಿಗೆ ಹೋದರು.

ಅಲ್ಲಿ ಮಥುರಾ ವಿಶ್ವವಿದ್ಯಾನಿಲಯದ ‘ಸಾಹಿತ್ಯಾಚಾರ’ ಪದವಿಯನ್ನು ಸಂಪಾದಿಸಿ ೧೯೩೩ ರಲ್ಲಿ ಮರಳಿದರು. ೧೯೩೪ ರಲ್ಲಿ ಧಾರವಾಡದ ಶ್ರೀ ನಿ. ಪ್ರ. ಮೃತ್ಯುಂಜಯ ಸ್ವಾಮಿಗಳ ಸಂಸ್ಕೃತ ಪಾಠಶಾಲೆಯಲ್ಲಿ ಎರಡು ವರ್ಷ ಅಧ್ಯಾಪಕರಾಗಿದ್ದು ಕೆಲವು ವರ್ಷ ಮಂದಿರದಲ್ಲಿಯೂ ಅಧ್ಯಾಪಕರಾಗಿದ್ದರು. ೧೯೩೮ ರಲ್ಲಿ ಅಂಕಲಗಿ (ಜಿ. ಬೆಳಗಾಂವ) ಶ್ರೀ ಅಡವೀಸ್ವಾಮಿ ಮಠಕ್ಕೆ ಅಧಿಕಾರಿಗಳಾದರು.

ಶ್ರೀಗಳವರು ೬೦ ಸಾವಿರ ರೂಪಾಯಿಗಳ ವೆಚ್ಚದಿಂದ ಈ ಪುರಾತನ ಮಠದ ಪುನರ್‌ನಿರ್ಮಾಣ ಮಾಡಿದರು. ಮಠದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ವಿದ್ಯಾರ್ಥಿಗಳಿಗೆ ಪ್ರಸಾದ-ವಸತಿಗಳ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಮತ್ತು ಪ್ರತಿವರ್ಷ ಜಾತ್ರೆಯನ್ನು ನಡೆಯಿಸಿ ಧಾರ್ಮಿಕ ಮತ್ತು ಸಾಮಾಜಿಕ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ

ಶ್ರೀ ನಿ. ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು : 1916

 

ಶ್ರೀ ನಿ. ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು ಮುಂಡರಗಿಯ ಸಂಸ್ಥಾನ ಮಠದ ಅಧಿಪತಿಗಳಾಗಿದ್ದಾರೆ.

ಅವರ ಮೊದಲಿನ ಹೆಸರು ರಾಚೋಟಿ ದೇವರು. ವೆಂಕಟಾಪುರ (ಜಿ. ಧಾರವಾಡ, ತಾ. ಗದಗ)ದಲ್ಲಿ ದಿ. ೨೧-೪-೧೮೯೪ ರಂದು ಜನ್ಮತಾಳಿದರು.

ಬಾಗಲಕೋಟೆಯ ಟೆಂಗಿನಮಠದಲ್ಲಿದ್ದುಕೊಂಡು ಅಲ್ಲಿಯ ಪಾಠಶಾಲೆಯಲ್ಲಿ ಕೆಲವು ವರ್ಷ ಸಂಸ್ಕೃತ ಅಭ್ಯಾಸ ಮಾಡಿ ಮಂದಿರದಲ್ಲಿ ಪ್ರವೇಶ ಪಡೆದರು.

ಬೆನಕಲ್ಲ ಪಂ. ಸೋಮಶೇಖರ ಶಾಸ್ತ್ರಿಗಳಿಂದ ನ್ಯಾಯ-ಸಾಹಿತ್ಯಗಳಲ್ಲಿ ಶಿಕ್ಷಣ ಪಡೆದರು. ಯೋಗಾಸನಗಳ ಸಾಧನೆಯಲ್ಲಿಯೂ ಪ್ರಾವೀಣ್ಯ ಹೊಂದಿ ದಿ. ೬-೬-೧೯೨೬ ರಂದು ಮುಂಡರಗಿಯ ಸಂಸ್ಥಾನ ಪೀಠವನ್ನು ಅಲಂಕರಿಸಿದರು. ಬಹಳ ಜೀರ್ಣವಾಗಿದ್ದ ಮಠವನ್ನು ಕಟ್ಟಿಸಿದರು. ಬೀಳು ಬಿದ್ದ ಜಮೀನುಗಳನ್ನು ಸಾಗು ಮಾಡಿಸಿ ಮಠದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದರು.

ಮುಂಡರಗಿಯ ಸಂಸ್ಥಾನ ಮಠವು ಗದಗಿನ ದಕ್ಷಿಣಕ್ಕೆ ೨ ಮೈಲು ದೂರದಲ್ಲಿದೆ. ಇದು ಪ್ರಾಚೀನವಾದ ಮಠ, ಪೂರ್ವದ ಪರಂಪರೆಯಲ್ಲಿಯ ಶ್ರೀಗಳವರು ತಪಸ್ವಿಗಳು, ಶಿವಾನುಗ್ರಹ ಸಮರ್ಥರೂ ಆಗಿದ್ದು ಅನೇಕ ಪವಾಡಗಳಿಂದ ಸಮಾಜದ ಉದ್ಧಾರ ಕಾರ್ಯವನ್ನು ಮಾಡಿರುತ್ತಾರೆ.

ಇಂದಿನ ಶ್ರೀ ಅನ್ನದಾನ ಮಹಾಸ್ವಾಮಿಗಳವರ ದಕ್ಷತೆಪೂರ್ಣ ಆಡಳಿತದಲ್ಲಿ ಸಂಸ್ಥಾನ ಮಠವು ಒಳ್ಳೆಯ ಊರ್ಜಿತ ಸ್ಥಿತಿಯನ್ನು ಪಡೆದಿದೆ. ಮುಂಡರಗಿಯಲ್ಲಿ ಶ್ರೀ ಮಠದ ವತಿಯಿಂದ ‘ಶ್ರೀ ಜ ಅನ್ನದಾನೇಶ್ವರ ಮಾಧ್ಯಮಿಕ ಶಾಲೆ’ ಯನ್ನು ಸ್ಥಾಪಿಸಿ ಅದರ ಕಟ್ಟಡಕ್ಕಾಗಿ ೩೩ ಸಾವಿರ ರೂಪಾಯಿಗಳನ್ನು ‘ಪ್ರಸಾದ ನಿಲಯಕ್ಕಾಗಿ ೧೫ ಸಾವಿರ ರೂಪಾಯಿಗಳನ್ನು ದಯಪಾಲಿಸಿ ವಿದ್ಯಾಭಿವೃದ್ಧಿಯ ಪವಿತ್ರ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಇದಲ್ಲದೆ ಅನೇಕ ವಿದ್ಯಾಸಂಸ್ಥೆಗಳಿಗೂ ಆರ್ಥಿಕ ನೆರವು ದಯಪಾಲಿಸಿದ್ದಾರೆ. ಇದುವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗಾಗಿ ಶ್ರೀ ಮಠದ ವತಿಯಿಂದ ಒಂದು ಲಕ್ಷ ರೂಪಾಯಿಗಳ ವಿನಿಯೋಗವಾಗಿದೆ. ಶ್ರೀ ಮಠದಲ್ಲಿ ದಾಸೋಹವೂ ಇದೆ. ವೈದಿಕ ಪಾಠಶಾಲೆಯೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರತಿವರ್ಷ ಶ್ರೀ ಸಂಸ್ಥಾನ ಮಠ ಮತ್ತು ಶಾಖಾ ಮಠಗಳಲ್ಲಿ ಪುರಾಣ ಪ್ರವಚನ-ವ್ಯಾಖ್ಯಾನಗಳನ್ನು ಏರ್ಪಡಿಸಿ ಜನತೆಯಲ್ಲಿ ಧಾರ್ಮಿಕ ಭಾವನೆ ಸಾತ್ವಿಕ ಜೀವನ ಒಡಮೂಡುವಂತೆ ಕಾರ್ಯ ಮಾಡುತ್ತಿದ್ದಾರೆ; ಆದರ್ಶ ಶ್ರೀಗಳೆಂದು ಜನಮನ್ನಣೆಯನ್ನು ಪಡೆದಿದ್ದಾರೆ.

ನಿಡಗುಂದಿ-ಕೋಪ್ಪದ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು : 1916

 

ನಿಡಗುಂದಿ-ಕೋಪ್ಪದ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು ಶಾಖಾ ಶಿವಯೋಗ ಮಂದಿರದ ಅಧಿಕಾರಿಗಳಾಗಿದ್ದಾರೆ.

ಅವರು ಬೆಳಗಾಂವ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರದ ಸಿಂಧೋಳ್ಳಿ ಮಠದಲ್ಲಿ ಜನಿಸಿದರು. ಮೊದಲು ಗೋಕಾಕ ಚರಂತಿಮಠದ ವತಿಯಿಂದ ಮಂದಿರಕ್ಕೆ ಶಿಕ್ಷಣ ಪಡೆಯಲು ಬಂದರು. ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳಿಂದ ಸಂಸ್ಕೃತ ಶಿಕ್ಷಣ ಪಡೆದು ಯೋಗಾಸನ ಮತ್ತು ಅನುಷ್ಠಾನದಲ್ಲಿ ಪರಿಣಿತರಾದರು. ಪೂಜ್ಯ ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಕೊಪ್ಪದ ಶಾಖಾ ಶಿವಯೋಗ ಮಂದಿರಕ್ಕೆ ಅನುಷ್ಠಾನ ಮಾಡಲು ೧೯೨೪ ರಲ್ಲಿ ಬಂದರು. ದಿನಾಂಕ ೪-೫-೧೯೫೫ ರಂದು ಈ ಮಂದಿರದ ಅಧಿಕಾರವನ್ನು ಪಡೆದರು. ಅವರ ಅನುಷ್ಠಾನದ ಪ್ರಭಾವದಿಂದ ಇಲ್ಲಿಯ ಮಂದಿರ ದಿನ ದಿನಕ್ಕೂ ಹೆಚ್ಚಿನ ಅಭಿವೃದ್ಧಿಯನ್ನು ಪಡೆಯುತ್ತಿದೆ. ಪ್ರತಿವರ್ಷ ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರ ಪುಣ್ಯತಿಥಿಗಳನ್ನು ಆಚರಿಸುತ್ತಾರೆ. ಹಾನಗಲ್ಲ ಶ್ರೀಗಳವರ ಸ್ಮಾರಕವಾಗಿ ದೊಡ್ಡ ಪ್ರಮಾಣದಲ್ಲಿ ಜಾತ್ರೆಯನ್ನು ನಡೆಯಿಸಿ ಅದರ ಅಂಗವಾಗಿ ಧರ್ಮಬೋಧೆ, ಒಕ್ಕಲುತನ ಪ್ರದರ್ಶನವನ್ನು ಏರ್ಪಡಿಸಿ ಜನತೆಯಲ್ಲಿ ಸಾಮಾಜಿಕ ಚಟುವಟಿಕೆಗಳಿಗೂ ಉತ್ತೇಜನ ಕೊಟ್ಟಿರುವರು. ದಾಸೋಹವನ್ನು ನಡೆಸುತ್ತಿರುವರು. ಇಲ್ಲಿ ಶ್ರೀಗಳವರು ಜಾತಿಭೇದವಿಲ್ಲದೆ ಬಂದ ರೋಗಿಗಳಿಗೆಲ್ಲ ಪೂಜ್ಯ ಗುರುವರರ ಕೃಪೆಯಿಂದ ಔಷಧಿಗಳನ್ನು ದಯಪಾಲಿಸಿ ಕ್ಷಯ, ಕುಷ್ಠ ಮೊದಲಾದ ಅಸಾಧ್ಯ ರೋಗಗಳನ್ನು ಗುಣಪಡಿಸಿರುವರು.

 

ಖೇಳಗಿಯ ಶ್ರೀ ನಿ. ಪ್ರ. ಆದಿನಾಥ (ಶಿವಲಿಂಗ) ಸ್ವಾಮಿಗಳು :1916

 

ಖೇಳಗಿಯ ಶ್ರೀ ನಿ. ಪ್ರ. ಆದಿನಾಥ (ಶಿವಲಿಂಗ) ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳಾಗಿದ್ದಾರೆ. ಮಂಟೂರು (ತಾ. ಹುಬ್ಬಳ್ಳಿ) ಗ್ರಾಮದಲ್ಲಿ ೧೯೦೫ ರಲ್ಲಿ ಜನ್ಮವೆತ್ತಿದರು. ಶಿವಯೋಗ ಮಂದಿರದಲ್ಲಿ ಪಂ. ಶಂಕರಶಾಸ್ತ್ರಿಗಳು ಪಂ. ವೀರಭದ್ರ ಶಾಸ್ತ್ರಿಗಳು ಮತ್ತು ಶ್ರೀ ವ್ಯಾಕರಣಾಳ ಪಟ್ಟದೇವರಿಂದಲೂ ಪಂಚ ಕಾವ್ಯಗಳನ್ನು ಕಲಿತರು.

೧೯೪೧ ರಲ್ಲಿ ಖೇಳಗಿ (ಜಿ. ಬೀದರ, ತಾ. ಹುಮನಾಬಾದ) ಶಿವಲಿಂಗೇಶ್ವರ ಮಠದ ಅಧಿಕಾರವನ್ನು ಪಡೆದರು. ಈ ಮಠವು ಪುರಾತನವಾಗಿದ್ದು ಕರ್ತೃ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು ಪರಮ ತಪಸ್ವಿಗಳಾಗಿದ್ದರು. ಶ್ರೀಗಳವರು ಪರಾಧೀನವಾಗಿದ್ದ ಮಠದ ಆಸ್ತಿಗಳನ್ನು ವಶಪಡಿಸಿಕೊಂಡು ಅದರ ಜೀರ್ಣೋದ್ಧಾರವನ್ನು ಮಾಡಿದ್ದಾರೆ;

ಹುಬ್ಬಳ್ಳಿಯಲ್ಲಿರುವ ಹರ್ಷದೇವರ ಮಠಕ್ಕೂ ಅಧಿಕಾರಿಗಳಾಗಿ ಅದರ ಅಭಿವೃದ್ಧಿಯನ್ನು ಮಾಡಿದ್ದಾರೆ. ಕಲಬುರ್ಗಿಯ ಗದ್ದಿಗೆ ಮಠದಲ್ಲಿಯ ಪ್ರಸಾದ ನಿಲಯಕ್ಕೆ ಸಹಾಯಕರಾಗಿ ಕೆಲವು ವರ್ಷ ಸೇವೆ ಸಲ್ಲಿಸಿದ್ದಾರೆ.

ಮೊರಬದ ಶ್ರೀ ಘ. ಚ. ಶಂಭುಲಿಂಗ ಪಟ್ಟಾಧ್ಯಕ್ಷರು :೧೯೧೫

 

ಮೊರಬದ ಶ್ರೀ ಘ. ಚ. ಶಂಭುಲಿಂಗ ಪಟ್ಟಾಧ್ಯಕ್ಷರು  ಹಾನಗಲ್ಲ ಹಿರಿಯ ಮಠದಲ್ಲಿ ಜನ್ಮ ತಾಳಿದರು. ಲಿಂ. ಹಾನಗಲ್ಲ ಶ್ರೀಗಳವರೆ ಬಾಲ್ಯದಲ್ಲಿ ಇವರನ್ನು ಮಂದಿರದಲ್ಲಿ ಶಿಕ್ಷಣಕ್ಕಾಗಿ ಕರೆತಂದರು. ಅವರು ಪಗಡದಿನ್ನಿಯ ಪಂ. ರೇವಣಸಿದ್ಧ ಶಾಸ್ತ್ರಿಗಳಿಂದ ಸಾಹಿತ್ಯ-ವೇದಾಂತ ಶಿಕ್ಷಣ ಪಡೆದು ಸಂಗೀತ-ಯೋಗಗಳಲ್ಲಿ ಸಾಧನೆ ಮಾಡಿದರು. ಪುರಾಣ ಪ್ರವಚನಗಳನ್ನು ಹೇಳುವ ಯೋಗ್ಯತೆ ಪಡೆದರು.

ಅವರು ಕೆಲವು ವರ್ಷ ಮಂದಿರದಲ್ಲಿ ಒಕ್ಕಲುತನದ ವ್ಯವಸ್ಥೆಯನ್ನು ನೋಡಿಕೊಂಡಿದ್ದರು. ಅವರು ಉಸ್ಮಾನಾಬಾದ ಜಿಲ್ಲೆಯಲ್ಲಿರುವ ಮೊರಬ ಗ್ರಾಮದ ಟೆಂಗಿನಮಠದ ಅಧಿಕಾರಿಗಳಾಗಿ ಅಲ್ಲಿ ಪುರಾಣ-ಕೀರ್ತನಗಳಿಂದ ಧರ್ಮಪ್ರಸಾರವನ್ನು ಮಾಡುತ್ತಿರುವರು.

ಸೊಲ್ಲಾಪುರದ ನಾಲ್ವತ್ತವಾಡ ಶ್ರೀ ಶರಣರ ಮಠದಲ್ಲಿ ‘ಕುಮಾರೇಶ್ವರ ಪುರಾಣ’ವನ್ನು ಹೇಳಿ ಜನಾನುರಾಗಿಗಳಾದರು.

ಕ್ರಿ. ಶ. ೧೯೫೫ ರಲ್ಲಿ ತಮ್ಮ ಮಠದಲ್ಲಿ ಏಕಾದಶ ಮಂಟಪ ಪೂಜೆಯನ್ನು ಉತ್ಸಾಹದಿಂದ ನೆರವೇರಿಸಿ ಆ ಕಾಲಕ್ಕೆ ಜ್ಞಾನದಾಸೋಹವನ್ನ ಏರ್ಪಡಿಸಿ ಅಲ್ಲಿಯ ಜನತೆಯಲ್ಲಿ ಹೊಸ ಚೈತನ್ಯ ಒಡಮೂಡುವಂತೆ ಮಾಡಿದರು. ಮಂದಿರದ ವಿಶೇಷ ಕಾರ್ಯಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ, ನಿಸ್ಪೃಹ ಸೇವೆ ಸಲ್ಲಿಸುತ್ತಾರೆ.

ಹಾನಗಲ್ಲ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳು  :೧೯೧೫

ಹಾನಗಲ್ಲ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳು  ವಿರಕ್ತಮಠದ ಅಧಿಕಾರಿಗಳಾಗಿದ್ದಾರೆ. ಅವರು ಹುಬ್ಬಳ್ಳಿಯ ಹತ್ತಿರದ ಅರಳಿಕಟ್ಟಿಯ ಹಿರಿಯ ಮಠದಲ್ಲಿ ಜನಿಸಿದರು. ಕುಮಾರ ಚಂದ್ರಶೇಖರಯ್ಯನನ್ನು ಊರ ಹಿರಿಯರು ತಮ್ಮ ಹಿರೇಮಠದ ಮೂರ್ತಿಗಳನ್ನಾಗಿ ಮಾಡಲು ಹಾನಗಲ್ಲ ಕುಮಾರ ಶ್ರೀಗಳವರ ಸನ್ನಿಧಿಗೆ ಒಪ್ಪಿಸಿದರು.

ಶ್ರೀಗಳವರು ಅವರನ್ನು ಮಂದಿರದಲ್ಲಿ ಶಿಕ್ಷಣಕ್ಕಾಗಿ ಕರೆತಂದರು. ಶ್ರೀ ರೇಣುಕಾರ್ಯನೆಂದು ನಾಮಕರಣವಾಯಿತು. ಶ್ರೀ ರೇಣುಕಾರ್ಯರು ಕನ್ನಡ ಶಿಕ್ಷಣ ಮುಗಿಸಿ ದೀಕ್ಷೆ ಪಡೆದು ಸಂಸ್ಕೃತದ ಪ್ರೌಢ ಶಿಕ್ಷಣವನ್ನು ಪಂ. ವೀರಭದ್ರ ಶಾಸ್ತ್ರಿಗಳು ಮತ್ತು ಪಂ. ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪಡೆದರು. ಸಂಗೀತ ಯೋಗ ವಿದ್ಯೆಗಳಲ್ಲಿಯೂ ಪರಿಣತೆ ಸಂಪಾದಿಸಿ ದೇಶಿಕರಾದರು.

ಸಂಸ್ಥೆಯ ಸ್ಥಾನಿಕ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ಮಹೇಶ್ವರ ಸ್ವಾಮಿಗಳು ಲಿಂಗೈಕ್ಯರಾದ ನಂತರ ಹಾನಗಲ್ಲ ಪೀಠಕ್ಕೆ ಅಧಿಕಾರಿಗಳಿರಲಿಲ್ಲ. ಲಿಂ. ಜ. ಶ್ರೀ ಗುರುಸಿದ್ಧರಾಜ ಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಅವರು ನವಿಲುಗುಂದ ಮತ್ತು ಗುತ್ತಲದ ಶ್ರೀಗಳು ರಾ. ಬ. ದೇವೀಹೊಸೂರು ಶೆಟ್ಟರು ಮೊದಲು ಪ್ರಮುಖರ ಇಚ್ಛೆಯಂತೆ ಶ್ರೀ ರೇಣುಕ ದೇಶಿಕರನ್ನೆ ೧೯೩೬ರಲ್ಲಿ ಹಾನಗಲ್ಲ ಪೀಠಕ್ಕೆ ಅಧಿಕಾರಿಗಳನ್ನಾಗಿ ಮಾಡಿದರು. ಶ್ರೀ ಸದಾಶಿವ ಸ್ವಾಮಿಗಳೆಂದು ಅಭಿದಾನವನ್ನು ಇಡಲಾಯಿತು.

ಅಂದಿನಿಂದ ಶ್ರೀಗಳವರು ಹಾನಗಲ್ಲ ಮಠದ ಅಭಿವೃದ್ಧಿಯನ್ನು ಮಾಡಿ ಮಂದಿರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಲಿಂ. ಹಾನಗಲ್ಲ ಪೂಜ್ಯರ ಭವ್ಯವಾದ ಗದ್ದುಗೆಯ ನಿರ್ಮಾಣದ ಹೊಣೆಯನ್ನು ಹೊತ್ತು ಒಂದು ಲಕ್ಷ ರೂ.ಗಳ ನಿಧಿಯನ್ನು ಭಕ್ತರಿಂದ ಕೂಡಿಸಿ ಅದನ್ನು ಕಲಾಪೂರ್ಣವಾಗಿ ಪೂರೈಸಿರುವರು.

ಅವರು ಸ್ವತಃ ಚಿತ್ರಕಾರರು. ಗದ್ದುಗೆಯ ಮಂಟಪದ ಶಿಲ್ಪಕ್ಕೆ ಬೇಕಾದ ಕೆಲವು ನಕ್ಷೆಗಳನ್ನು ತಾವೇ ಬರೆದು ಶಿಲ್ಪಿಗಳಿಂದ ಅಂದವಾಗಿ ಕೆತ್ತಿಸಿದ್ದಾರೆ. ಅವರು ಶಿವಯೋಗ ಮಂದಿರದ ಮ್ಯಾನೇಜಿಂಗ್ ಟ್ರಸ್ಟಿಗಳಾಗಿರುವರು. ಮಂದಿರದ ಸೇವೆಯೆ ಅವರ ಜೀವನದ ಉದಾತ್ತ ಧೈಯವಾಗಿದೆ.

ಅನಂತಪುರದ ಶ್ರೀ ನಿ. ಪ್ರ. ಜ. ಸಚ್ಚಿದಾನಂದ ಮುರಘಾರಾಜೇಂದ್ರ ಸ್ವಾಮಿಗಳು  : ೧೯೧೫

ಅನಂತಪುರದ ಶ್ರೀ ನಿ. ಪ್ರ. ಜ. ಸಚ್ಚಿದಾನಂದ ಮುರಘಾರಾಜೇಂದ್ರ ಸ್ವಾಮಿಗಳು  ಮುರಘಾ ಸಂಸ್ಥಾನಮಠದ ಅಧ್ಯಕ್ಷರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂತಪುರ (ಆನಂದಪುರ) ಬಹಳ ಪ್ರಾಚೀನವಾದ ಗ್ರಾಮ. ಅದು ಕಲಚುರಿ ರಾಜರ ಗುರುಗಳಾದ ಪರಮ ಶೈವಾಚಾರ ಅನಂತ ಶಿವಶಕ್ತಿಯಾಚಾರ್ಯರ ಕ್ಷೇತ್ರವಾಗಿದ್ದಿತು.

ಅದರ ಅವಶೇಷಗಳು ತೀರ್ಥಗಳು, ಗುಡಿಗಳು ಮತ್ತು ಶಿಲಾಶಾಸನಗಳ ರೂಪದಲ್ಲಿ ಅಲ್ಲಿ ಇವೆ. ಆನಂದಪುರಕ್ಕೆ ಎರಡು ಮೈಲು ದೂರದಲ್ಲಿ ಆಚಾರಪುರದ ಹತ್ತಿರ ಮುರಘಾಮಠವಿದೆ. ಅದರ ಶಾಖಾಮಠಗಳು ಬೆಕ್ಕಿನಕಲ್ಲು, ಎಲವಟ್ಟಿ, ಭದ್ರಾವತಿ, ಶಿವಮೊಗ್ಗ, ಹಾರ್ನಹಳ್ಳಿ, ಸಂಸಿ, ಸೊಲ್ಲಾಪುರ ಮೊದಲಾದ ಗ್ರಾಮ-ನಗರಗಳಲ್ಲಿವೆ.

ಶ್ರೀ ಇಮ್ಮಡಿಯ ಗುರುಸಿದ್ದ ಸ್ವಾಮಿಗಳು, ಶ್ರೀ ಗಂಗಾಧರ ಸ್ವಾಮಿಗಳು, ಶ್ರೀ ಮುದ್ವೀರ ಸ್ವಾಮಿಗಳು, ಶ್ರೀ ಶಾಂತವೀರ ಸ್ವಾಮಿಗಳು, ಶ್ರೀ ಸಿದ್ಧಲಿಂಗ ಸ್ವಾಮಿಗಳು, ಶ್ರೀ ಗುರುಬಸವ ಸ್ವಾಮಿಗಳು, ಶ್ರೀ ಲಿಂಗ ಸ್ವಾಮಿಗಳು ಹೀಗೆ ಗುರು ಪರಂಪರೆಯು ನಡೆದು ಬಂದಿದೆ.

ಶ್ರೀ ಇಮ್ಮಡಿಯ ಮುರಿಗೆ ಗುರುಸಿದ್ದ ಸ್ವಾಮಿಗಳು ಕನ್ನಡ-ಸಂಸ್ಕೃತಗಳಲ್ಲಿ   ಪಂಡಿತರೂ ಕವಿಗಳೂ ಆಗಿದ್ದರು. ಅವರು ‘ಹಾಲಾಸ್ಯ ಪುರಾಣ’ವನ್ನು ಅನೇಕ ಕಂದ ಷಟ್ಪದಿಗಳನ್ನು ಶತಕ ರೂಪದಲ್ಲಿ ರಚಿಸಿದ್ದಾರೆ. ಶ್ರೀ ಮುದ್ವೀರ ಸ್ವಾಮಿಗಳು ಪರಮ ತಪಸ್ವಿಗಳು ಯೋಗಿಗಳೂ ಆಗಿದ್ದರು. ಅವರು ಗೌರಾಪುರ (ಅಜ್ಜಂಪುರದ ಹತ್ತಿರ, ತಾ ತರಿಕೆರೆ) ದಲ್ಲಿ ಜನಿಸಿದವರು. ಗವಿಮಠದಲ್ಲಿ ಅವರ ಗದ್ದುಗೆಯಿದೆ.

 

ಶ್ರೀ ಲಿಂ. ಜಗದ್ಗುರು ಲಿಂಗಮಹಾಸ್ವಾಮಿಗಳ ನಂತರ ಶ್ರೀ ನಿ. ಪ್ರ. ಜಗದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳು ಈ ಪೀಠವನ್ನು ಅಲಂಕರಿಸಿದರು. ಅವರು ಮಂದಿರದಲ್ಲಿ ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ ಸಂಸ್ಕೃತ ವ್ಯಾಸಂಗವನ್ನು ಮುಗಿಸಿ ದಿನಾಂಕ ೨೩-೫-೧೯೨೬ ರಂದು ಪೀಠಾಧಿಕಾರವನ್ನು ಪಡೆದರು.

ಅವರು ಮಠವನ್ನು ವಿಸ್ತರಿಸಿ ಕಟ್ಟಿಸಿರುವರು. ಶಿವಮೊಗ್ಗೆಯ ಬೆಕ್ಕಿನ ಕಲ್ಮಠದಲ್ಲಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿ ನಡೆಯಿಸಿದ್ದಾರೆ. ಅಲ್ಲಿ ಹೈಸ್ಕೂಲು ಮತ್ತೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ಪ್ರಸಾದದ ಅನುಕೂಲತೆ ಕಲ್ಪಿಸಿಕೊಡಲಾಗಿದೆ.

ಮಳಲಿಯಲ್ಲಿ ಅಡಿಕೆ ತೋಟವನ್ನು ಅಭಿವೃದ್ಧಿಗೆ ತಂದು ಸಂಸ್ಥಾನದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ಅದರ ವಿನಿಯೋಗದಿಂದ ವಿದ್ಯೆ ಮತ್ತು ಧರ್ಮಗಳ ಪ್ರಸಾರ ಕಾರ್ಯವನ್ನು ಕೈಕೊಂಡಿದ್ದಾರೆ.

ಕಪನಳ್ಳಿಯ ಶ್ರೀ ನಿ. ಪ್ರ. ರುದ್ರಮುನಿ ಸ್ವಾಮಿಗಳು 

ಕಪನಳ್ಳಿಯ ಶ್ರೀ ನಿ. ಪ್ರ. ರುದ್ರಮುನಿ ಸ್ವಾಮಿಗಳು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಪನಳ್ಳಿಯ ಶಿವಯೋಗಾಶ್ರಮ (ಶಾಖಾ ಶಿವಯೋಗಮಂದಿರ) ದ ಅಧ್ಯಕ್ಷರಾಗಿದ್ದಾರೆ. ಸೀತಿಕೊಂಡ (ಜಿ. ಧಾರವಾಡ ತಾ. ಹಿರೇಕೆರೂರು) ಗ್ರಾಮದಲ್ಲಿ ಜನ್ಮ ತಾಳಿದರು.

ಮೊದಲು ಚಿಕ್ಕ ಜಂಬೂರ ಮಠದ ವತಿಯಿಂದ ಸಿಕಾರಿಪುರದ ಪಾಠಶಾಲೆಯಲ್ಲಿ ಕಲಿತು ಶಿವಯೋಗ ಮಂದಿರದಲ್ಲಿ ಪ್ರೌಢ ಶಿಕ್ಷಣ ಪಡೆಯಲು ಬಂದರು. ಪಂ. ಉಮಚಗಿ ಶಂಕರ ಶಾಸ್ತ್ರಿಗಳವರಿಂದ ಸಾಹಿತ್ಯ ಮತ್ತು ವೇದಾಂತ ವಿಷಯಗಳಲ್ಲಿ ವ್ಯಾಸಂಗ ಮಾಡಿದರು. ಯೋಗಸಾಧನೆ ಮತ್ತು ಅನುಷ್ಠಾನದಲ್ಲಿಯೂ ಪರಿಣಿತರಾದರು. ಕಪನಳ್ಳಿಯ ಶಿವಯೋಗಾಶ್ರಮದ ಸ್ಥಾಪನೆಯಾದ ಮೇಲೆ ಅಂಗಿರಸ ಸಂವತ್ಸರ ಮಾಘ ಬ. ೧೪ ರಲ್ಲಿ ಅಲ್ಲಿಯ ಅಧಿಕಾರವನ್ನು ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ವಹಿಸಿಕೊಂಡಿರುವರು. ಮೊದಲು ಈ ಶಾಖಾಮಂದಿರಕ್ಕೆ ಪರಮಪೂಜ್ಯ ಹಾನಗಲ್ಲ ಮಹಾಸ್ವಾಮಿಗಳವರು ಒಂದು ನೂರು ಎಕರೆ ಕಾಡನ್ನು ದೊರಕಿಸಿಕೊಟ್ಟಿದ್ದರು. ಶ್ರೀ ರುದ್ರಮುನಿ ಸ್ವಾಮಿಗಳು ಶ್ರಮವಹಿಸಿ ಅದರಲ್ಲಿ ೩೦ ಎಕರೆ ಭೂಮಿಯನ್ನು ಸಾಗು ಮಾಡಿಸಿದ್ದಾರೆ. ಒಂದು ಲಕ್ಷ ರೂಪಾಯಿಗಳ ವಿನಿಯೋಗದಿಂದ ಆಶ್ರಮದ ನೂತನ ಕಟ್ಟಡವನ್ನು ಕಟ್ಟಿಸಿದ್ದಾರೆ. ಗೋಶಾಲೆಯನ್ನು ಸ್ಥಾಪಿಸಿ ಅದನ್ನು ವ್ಯವಸ್ಥಿತವಾಗಿ ನಡೆಯಿಸಿದ್ದಾರೆ. ನೀರಾವರಿ ಯೋಜನೆಯಿಂದ ಸಾಕಷ್ಟು ಭತ್ತ-ಕಬ್ಬು ಬೆಳೆಯುವ ಅನುಕೂಲತೆಯನ್ನು ಮಾಡಿಕೊಂಡಿದ್ದಾರೆ. ಈ ಆಶ್ರಮದ ಸ್ಥಾಪನೆಯ ಕಾಲಕ್ಕೆ ಹಾನಗಲ್ಲ ಪೂಜ್ಯ ಶ್ರೀಗಳು ಯಾರನ್ನು ಬೇಡದೆ ಬಂದುದರಲ್ಲಿ ತೃಪ್ತರಾಗಿ ಅನುಷ್ಠಾನ ಮಾಡಬೇಕು” ಎಂದು ಅಪ್ಪಣೆ ಮಾಡಿದ ಪ್ರಕಾರ ಅದನ್ನು ಪರಿಪಾಲಿಸುತ್ತ ಮಲೆನಾಡ ಜನರಲ್ಲಿ ಧಾರ್ಮಿಕ ನೈತಿಕ ಜಾಗ್ರತಿಯನ್ನುಂಟು ಮಾಡುತ್ತಿರುವರು.