ಹಾರ್ನಹಳ್ಳಿಯ ಶ್ರೀ ನಿ. ಪ್ರ. ನೀಲಲೋಚನ ಸ್ವಾಮಿಗಳು : (೧೯೧೯)
ಹಾರ್ನಹಳ್ಳಿಯ ಶ್ರೀ ನಿ. ಪ್ರ. ನೀಲಲೋಚನ ಸ್ವಾಮಿಗಳು ಕೋಡಿಮಠದ ಅಧಿಪತಿಗಳಾಗಿದ್ದಾರೆ. ಅವರು ಕೊತಬಾಳ (ತಾ. ರೋಣ, ಜಿ. ಧಾರವಾಡ)ದಲ್ಲಿ ಜನ್ಮ ತಾಳಿದರು. ಗಜೇಂದ್ರಗಡ ಮಠದ ವತಿಯಿಂದ ಶಿವಯೋಗಮಂದಿರಕ್ಕೆ ಶಿಕ್ಷಣ ಪಡೆಯಲು ಬಂದರು. ಪಂ. ವೀರಭದ್ರ ಶಾಸ್ತ್ರಿಗಳು, ಪಂ. ಹೊನ್ನಿಗನೂರ ಅನ್ನದಾನ ಶಾಸ್ತ್ರಿಗಳು ಮತ್ತು ಪಂ. ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪಂಚಕಾವ್ಯಗಳನ್ನು ಸಿದ್ಧಾಂತ ಕೌಮುದಿಯನ್ನು ಅಭ್ಯಸಿಸಿದರು. ಅವರು ಕೆಲವು ಕಾಲ ಮಂದಿರದಲ್ಲಿ ಕನ್ನಡ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದರು. ಯೋಗ ಅನುಷ್ಠಾನ ಸಂಗೀತಗಳಲ್ಲಿ ಅಭಿರುಚಿಯುಳ್ಳವರಾಗಿ ಅವುಗಳಲ್ಲಿ ಪರಿಣಿತರಾದರು. ೧೯೩೩ ರಲ್ಲಿ ಶ್ರೀ ಗುರುಲಿಂಗ ಸ್ವಾಮಿಗಳ ನಂತರ ಕೋಡಿಮಠದ ಅಧಿಕಾರಿಗಳಾದರು. ಈ ಮಠವು ಬಹಳ ಪ್ರಾಚೀನವಾದುದು. ಶಾ. ಶ. ೮೫೧ ದುಂದುಭಿನಾಮ ಸಂವತ್ಸರದಲ್ಲಿ ಇದರ ಸ್ಥಾಪನೆಯಾಯಿತು. ತಪಸ್ವಿಗಳಾದ ಶ್ರೀ ಶಿವಲಿಂಗ ಸ್ವಾಮಿಗಳೇ ಈ ಪೀಠದ
ಮೂಲ ಕರ್ತರು. ಇವರ ತರುವಾಯ ರೇವಣ್ಣೊಡೆಯರು, ಕುಮಾರ ಒಡೆಯರು, ನೀಲಮ್ಮೊಡೆಯರು, ಇಮ್ಮಡಿ ಗುರುಸಿದ್ದ ಸ್ವಾಮಿಗಳು, ಪಂಚಾಕ್ಷರಿ ಸ್ವಾಮಿಗಳು, ಮುದ್ದಮಲ್ಲಿಕಾರ್ಜುನ ಸ್ವಾಮಿಗಳು, ಪ್ರಭುಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ನಂಜುಂಡ ಸ್ವಾಮಿಗಳು, ಶಿವಲಿಂಗ ಸ್ವಾಮಿಗಳು, (ನಂತರ ೫೦ ವರ್ಷ ಯಾರೂ ಅಧಿಕಾರಿಗಳಾಗಿರಲಿಲ್ಲ). ಹೀಗೆ ಮಠದ ಪರಂಪರೆಯಿದೆ. ಈ ನೀಲಮ್ಮೊಡೆಯರು ಬಹು ಮಹಿಮಾಶಾಲಿಗಳಾಗಿದ್ದು ಈ ಭಾಗದಲ್ಲಿ ಬಹಳ ಪ್ರಭಾವ ಬೀರಿದ್ದಾರೆ. ಅವರ
ಯೋಗಸಮಾಧಿಯು ಈಗ ಮಠದ ಕರ್ತೃ ಪೀಠವಾಗಿ ಪೂಜೆಗೊಳ್ಳುತ್ತಿದೆ. ಶ್ರೀ ಶಿವಲಿಂಗ ಸ್ವಾಮಿಗಳೂ ಬಹಳ ಮಹಿಮಾವಂತರು, ಪವಾಡ ಪುರುಷರು. ಇವೆರಡು ಗದ್ದುಗೆಗಳ ಪ್ರಭಾವ ಈ ನಾಡಿನಲ್ಲಿ ಬಹಳವಾಗಿದೆ. ಇಲ್ಲಿಯ ಸುತ್ತುಮುತ್ತನಾಡಿನ ಗ್ರಾಮಗಳ ಜನರು ತಮ್ಮ ಧಾರ್ಮಿಕ, ಸಾಮಾಜಿಕ ವ್ಯಾಜ್ಯಗಳ ನ್ಯಾಯ ನಿರ್ಣಯಗಳನ್ನು ಈ ಮಠದಲ್ಲಿಯೆ
ಬಂದು ಪಡೆಯುವ ಪದ್ಧತಿಯು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಚಿತ್ರಕಲ್ಲದುರ್ಗದ ಲಿಂ. ಜಗದ್ಗುರು ಶ್ರೀ ಜಯದೇವ ಮುರಘರಾಜೇಂದ್ರ ಮಹಾಸ್ವಾಮಿಗಳು ಇಲ್ಲಿಯ ಪೀಠದ ಪ್ರಭಾವವನ್ನು ಕಂಡು ಅದರ ಅಭಿವೃದ್ಧಿಗಾಗಿ ತೆಂಗಿನ ತೋಟವನ್ನು ಮಾಡಲು ಸನ್ನಿಧಿಯ ಕಾಣಿಕೆಯನ್ನು ದಯಪಾಲಿಸಿದ್ದರು. ಭಕ್ತರ ಪ್ರಯತ್ನದಿಂದ ಈ ಮಠಕ್ಕೆ ಘನವಾದ ಆಸ್ತಿಯಾಗಿದೆ. ಹಿಂದಿನ ಮೈಸೂರ ಮಹಾರಾಜರೂ ಈ ಮಠದಲ್ಲಿ ಪೂಜಾವಿನಿಯೋಗಕ್ಕೆ ೧೦ ಎಕರೆ ಜಮೀನು ದಾನವಾಗಿ ಕೊಟ್ಟಿರುವರು. ಹೈದರ-ಟೀಪು ಸುಲ್ತಾನರೂ ಈ ಪೀಠಕ್ಕೆ ಗೌರವವನ್ನು ಕೊಟ್ಟಿದ್ದರು.
ಈಗಿನ ಶ್ರೀ ನೀಲಲೋಚನ ಸ್ವಾಮಿಗಳು ಈ ಪೀಠದ ಪರಂಪರೆಯನ್ನು ಅನೂಚಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಪ್ರತಿ ವರ್ಷವೂ ಮಹದೇಶ್ವರನ ಜಾತ್ರೆಯನ್ನು ಮಾಡಿ ಪುರಾಣ ಕೀರ್ತನಗಳಿಂದ ಧರ್ಮ ಪ್ರಸಾರವನ್ನು ಮಾಡುತ್ತಿದ್ದಾರೆ. ಮಠದಲ್ಲಿ ವೈದಿಕ ಪಾಠಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಪ್ರಸಾದ-ವಸತಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಹಾರ್ನಹಳ್ಳಿಯಲ್ಲಿ ಶ್ರೀ ಶಿವಲಿಂಗೇಶ್ವರ ಅಗ್ರಿಕಲ್ಚರ ಹೈಸ್ಕೂಲನ್ನು ಸ್ಥಾಪಿಸುವ ಯೋಜನೆಯಿದೆ. ೧೯೫೮ ರಲ್ಲಿ ೬೩ ಪುರಾತನರ ಮಂಟಪ ಪೂಜೆಯನ್ನು ಮಾಡಿ ಆ ಕಾಲಕ್ಕೆ ಶಿವಾನುಭವಗೋಷ್ಠಿಯನ್ನು ಏರ್ಪಡಿಸಿದ್ದರು. ಶ್ರೀಗಳವರ ಕಾರ್ಯೋತ್ಸಾಹದಿಂದಾಗಿ ಜನತೆಯಲ್ಲಿಯ ಧಾರ್ಮಿಕ ಸಾತ್ವಿಕ ಭಾವನೆ ಅಳಿಯದೆ ಉಳಿದಿದೆ.