ಶ್ರೀ ನಿ. ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು : 1916
ಶ್ರೀ ನಿ. ಪ್ರ. ಜಗದ್ಗುರು ಅನ್ನದಾನ ಮಹಾಸ್ವಾಮಿಗಳು ಮುಂಡರಗಿಯ ಸಂಸ್ಥಾನ ಮಠದ ಅಧಿಪತಿಗಳಾಗಿದ್ದಾರೆ.
ಅವರ ಮೊದಲಿನ ಹೆಸರು ರಾಚೋಟಿ ದೇವರು. ವೆಂಕಟಾಪುರ (ಜಿ. ಧಾರವಾಡ, ತಾ. ಗದಗ)ದಲ್ಲಿ ದಿ. ೨೧-೪-೧೮೯೪ ರಂದು ಜನ್ಮತಾಳಿದರು.
ಬಾಗಲಕೋಟೆಯ ಟೆಂಗಿನಮಠದಲ್ಲಿದ್ದುಕೊಂಡು ಅಲ್ಲಿಯ ಪಾಠಶಾಲೆಯಲ್ಲಿ ಕೆಲವು ವರ್ಷ ಸಂಸ್ಕೃತ ಅಭ್ಯಾಸ ಮಾಡಿ ಮಂದಿರದಲ್ಲಿ ಪ್ರವೇಶ ಪಡೆದರು.
ಬೆನಕಲ್ಲ ಪಂ. ಸೋಮಶೇಖರ ಶಾಸ್ತ್ರಿಗಳಿಂದ ನ್ಯಾಯ-ಸಾಹಿತ್ಯಗಳಲ್ಲಿ ಶಿಕ್ಷಣ ಪಡೆದರು. ಯೋಗಾಸನಗಳ ಸಾಧನೆಯಲ್ಲಿಯೂ ಪ್ರಾವೀಣ್ಯ ಹೊಂದಿ ದಿ. ೬-೬-೧೯೨೬ ರಂದು ಮುಂಡರಗಿಯ ಸಂಸ್ಥಾನ ಪೀಠವನ್ನು ಅಲಂಕರಿಸಿದರು. ಬಹಳ ಜೀರ್ಣವಾಗಿದ್ದ ಮಠವನ್ನು ಕಟ್ಟಿಸಿದರು. ಬೀಳು ಬಿದ್ದ ಜಮೀನುಗಳನ್ನು ಸಾಗು ಮಾಡಿಸಿ ಮಠದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದರು.
ಮುಂಡರಗಿಯ ಸಂಸ್ಥಾನ ಮಠವು ಗದಗಿನ ದಕ್ಷಿಣಕ್ಕೆ ೨ ಮೈಲು ದೂರದಲ್ಲಿದೆ. ಇದು ಪ್ರಾಚೀನವಾದ ಮಠ, ಪೂರ್ವದ ಪರಂಪರೆಯಲ್ಲಿಯ ಶ್ರೀಗಳವರು ತಪಸ್ವಿಗಳು, ಶಿವಾನುಗ್ರಹ ಸಮರ್ಥರೂ ಆಗಿದ್ದು ಅನೇಕ ಪವಾಡಗಳಿಂದ ಸಮಾಜದ ಉದ್ಧಾರ ಕಾರ್ಯವನ್ನು ಮಾಡಿರುತ್ತಾರೆ.
ಇಂದಿನ ಶ್ರೀ ಅನ್ನದಾನ ಮಹಾಸ್ವಾಮಿಗಳವರ ದಕ್ಷತೆಪೂರ್ಣ ಆಡಳಿತದಲ್ಲಿ ಸಂಸ್ಥಾನ ಮಠವು ಒಳ್ಳೆಯ ಊರ್ಜಿತ ಸ್ಥಿತಿಯನ್ನು ಪಡೆದಿದೆ. ಮುಂಡರಗಿಯಲ್ಲಿ ಶ್ರೀ ಮಠದ ವತಿಯಿಂದ ‘ಶ್ರೀ ಜ ಅನ್ನದಾನೇಶ್ವರ ಮಾಧ್ಯಮಿಕ ಶಾಲೆ’ ಯನ್ನು ಸ್ಥಾಪಿಸಿ ಅದರ ಕಟ್ಟಡಕ್ಕಾಗಿ ೩೩ ಸಾವಿರ ರೂಪಾಯಿಗಳನ್ನು ‘ಪ್ರಸಾದ ನಿಲಯಕ್ಕಾಗಿ ೧೫ ಸಾವಿರ ರೂಪಾಯಿಗಳನ್ನು ದಯಪಾಲಿಸಿ ವಿದ್ಯಾಭಿವೃದ್ಧಿಯ ಪವಿತ್ರ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಇದಲ್ಲದೆ ಅನೇಕ ವಿದ್ಯಾಸಂಸ್ಥೆಗಳಿಗೂ ಆರ್ಥಿಕ ನೆರವು ದಯಪಾಲಿಸಿದ್ದಾರೆ. ಇದುವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗಾಗಿ ಶ್ರೀ ಮಠದ ವತಿಯಿಂದ ಒಂದು ಲಕ್ಷ ರೂಪಾಯಿಗಳ ವಿನಿಯೋಗವಾಗಿದೆ. ಶ್ರೀ ಮಠದಲ್ಲಿ ದಾಸೋಹವೂ ಇದೆ. ವೈದಿಕ ಪಾಠಶಾಲೆಯೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರತಿವರ್ಷ ಶ್ರೀ ಸಂಸ್ಥಾನ ಮಠ ಮತ್ತು ಶಾಖಾ ಮಠಗಳಲ್ಲಿ ಪುರಾಣ ಪ್ರವಚನ-ವ್ಯಾಖ್ಯಾನಗಳನ್ನು ಏರ್ಪಡಿಸಿ ಜನತೆಯಲ್ಲಿ ಧಾರ್ಮಿಕ ಭಾವನೆ ಸಾತ್ವಿಕ ಜೀವನ ಒಡಮೂಡುವಂತೆ ಕಾರ್ಯ ಮಾಡುತ್ತಿದ್ದಾರೆ; ಆದರ್ಶ ಶ್ರೀಗಳೆಂದು ಜನಮನ್ನಣೆಯನ್ನು ಪಡೆದಿದ್ದಾರೆ.