ನಿಡಗುಂದಿ-ಕೋಪ್ಪದ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು : 1916
ನಿಡಗುಂದಿ-ಕೋಪ್ಪದ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು ಶಾಖಾ ಶಿವಯೋಗ ಮಂದಿರದ ಅಧಿಕಾರಿಗಳಾಗಿದ್ದಾರೆ.
ಅವರು ಬೆಳಗಾಂವ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರದ ಸಿಂಧೋಳ್ಳಿ ಮಠದಲ್ಲಿ ಜನಿಸಿದರು. ಮೊದಲು ಗೋಕಾಕ ಚರಂತಿಮಠದ ವತಿಯಿಂದ ಮಂದಿರಕ್ಕೆ ಶಿಕ್ಷಣ ಪಡೆಯಲು ಬಂದರು. ಕೊಂಗವಾಡದ ಪಂ. ವೀರಭದ್ರ ಶಾಸ್ತ್ರಿಗಳಿಂದ ಸಂಸ್ಕೃತ ಶಿಕ್ಷಣ ಪಡೆದು ಯೋಗಾಸನ ಮತ್ತು ಅನುಷ್ಠಾನದಲ್ಲಿ ಪರಿಣಿತರಾದರು. ಪೂಜ್ಯ ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಕೊಪ್ಪದ ಶಾಖಾ ಶಿವಯೋಗ ಮಂದಿರಕ್ಕೆ ಅನುಷ್ಠಾನ ಮಾಡಲು ೧೯೨೪ ರಲ್ಲಿ ಬಂದರು. ದಿನಾಂಕ ೪-೫-೧೯೫೫ ರಂದು ಈ ಮಂದಿರದ ಅಧಿಕಾರವನ್ನು ಪಡೆದರು. ಅವರ ಅನುಷ್ಠಾನದ ಪ್ರಭಾವದಿಂದ ಇಲ್ಲಿಯ ಮಂದಿರ ದಿನ ದಿನಕ್ಕೂ ಹೆಚ್ಚಿನ ಅಭಿವೃದ್ಧಿಯನ್ನು ಪಡೆಯುತ್ತಿದೆ. ಪ್ರತಿವರ್ಷ ಹಾನಗಲ್ಲ ಮತ್ತು ಹಾವೇರಿ ಶ್ರೀಗಳವರ ಪುಣ್ಯತಿಥಿಗಳನ್ನು ಆಚರಿಸುತ್ತಾರೆ. ಹಾನಗಲ್ಲ ಶ್ರೀಗಳವರ ಸ್ಮಾರಕವಾಗಿ ದೊಡ್ಡ ಪ್ರಮಾಣದಲ್ಲಿ ಜಾತ್ರೆಯನ್ನು ನಡೆಯಿಸಿ ಅದರ ಅಂಗವಾಗಿ ಧರ್ಮಬೋಧೆ, ಒಕ್ಕಲುತನ ಪ್ರದರ್ಶನವನ್ನು ಏರ್ಪಡಿಸಿ ಜನತೆಯಲ್ಲಿ ಸಾಮಾಜಿಕ ಚಟುವಟಿಕೆಗಳಿಗೂ ಉತ್ತೇಜನ ಕೊಟ್ಟಿರುವರು. ದಾಸೋಹವನ್ನು ನಡೆಸುತ್ತಿರುವರು. ಇಲ್ಲಿ ಶ್ರೀಗಳವರು ಜಾತಿಭೇದವಿಲ್ಲದೆ ಬಂದ ರೋಗಿಗಳಿಗೆಲ್ಲ ಪೂಜ್ಯ ಗುರುವರರ ಕೃಪೆಯಿಂದ ಔಷಧಿಗಳನ್ನು ದಯಪಾಲಿಸಿ ಕ್ಷಯ, ಕುಷ್ಠ ಮೊದಲಾದ ಅಸಾಧ್ಯ ರೋಗಗಳನ್ನು ಗುಣಪಡಿಸಿರುವರು.