ಹುಬ್ಬಳ್ಳಿ ಹೊಸಮಠದ ಶ್ರೀ ನಿ. ಪ್ರ. ಶಿವಬಸವ ಸ್ವಾಮಿಗಳು : (೧೯೧೯)
ಹುಬ್ಬಳ್ಳಿ ಹೊಸಮಠದ ಶ್ರೀ ನಿ. ಪ್ರ. ಶಿವಬಸವ ಸ್ವಾಮಿಗಳು ಕ್ರಿ. ಶ. ೧೯೧೩ ರಲ್ಲಿ ಅಂದಲಗಿ (ತಾ. ಸಿಗ್ಗಾಂವ, ಜಿ. ಧಾರವಾಡ)ಯ ಹಿರೇಮಠದಲ್ಲಿ ಜನಿಸಿದರು. ಐದು ವರ್ಷದ ವಯಸ್ಸಿನಲ್ಲಿ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದರು.
ಕನ್ನಡ ಶಿಕ್ಷಣ ಪಡೆದ ಶ್ರೀ ರೇಣುಕಾಚಾರ್ಯರು (ಈಗಿನ ಶ್ರೀ ಸದಾಶಿವ ಸ್ವಾಮಿಗಳು ಹಾನಗಲ್ಲ) ಮತ್ತು ಪಂ. ಪಡೇಕನೂರ ರೇವಣಸಿದ್ಧ ಶಾಸ್ತ್ರಿಗಳಲ್ಲಿಯೂ ಸಾಹಿತ್ಯ, ವ್ಯಾಕರಣ, ವೇದಾಂತ ವಿಷಯಗಳಲ್ಲಿ ಪ್ರೌಢ ಶಿಕ್ಷಣ ಪಡೆದರು. ‘ಕಾವ್ಯತೀರ್ಥ’ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಯೋಗಾಸನಗಳನ್ನು ಮಾಡುವಲ್ಲಿ ಪ್ರವೀಣರಾಗಿದ್ದರು. ೧೯೪೫ರಲ್ಲಿ ಹುಬ್ಬಳ್ಳಿ ಅಕ್ಕಿಹೊಂಡದಲ್ಲಿರುವ ಹೊಸಮಠಕ್ಕೆ ಅಧಿಕಾರಿಗಳಾದರು. ಹೊಸ ಹುಬ್ಬಳ್ಳಿಯನ್ನು ನಿರ್ಮಾಣ ಮಾಡಿದ ಪೇಟೆಯ ಶೆಟ್ಟರಾದ ಶ್ರೀ ಬಸಪ್ಪ ಶೆಟ್ಟರು ಬಹಳಿ ಪೂಜಾನಿಷ್ಠರಾಗಿದ್ದರು.
ಅವರು ತಮ್ಮ ಕ್ರಿಯಾಮೂರ್ತಿಗಳಾದ ಸ್ವಾಮಿಗಳಿಗೆ ಈ ಮಠವನ್ನು ಕಟ್ಟಿಸಿದರು. ಶ್ರೀಗಳು ಅಧಿಕಾರಿಗಳಾಗಿ ಜೀರ್ಣವಾದ ಮಠವನ್ನು ಕಟ್ಟಿಸಿರುವರು. ಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪುರಾಣ-ಕೀರ್ತನಗಳನ್ನು ನಡೆಯಿಸಿ ಶಿವಾನುಭವ ಪ್ರಚಾರವನ್ನು ಮಾಡಿರುವರು.
ಶಿವಯೋಗಮಂದಿರದಲ್ಲಿ ಕೆಲವು ವರ್ಷ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವರು. ಮಠದಲ್ಲಿ ೧೫ ವಿದ್ಯಾರ್ಥಿಗಳಿಗೆ ಪ್ರಸಾದ-ವಸತಿಗಳನ್ನು ಅನುಕೂಲಿಸಿಕೊಟ್ಟಿರುವರು. ಲಿಂ. ಹುಬ್ಬಳ್ಳಿ ಜಗದ್ಗುರು ಸನ್ನಿಧಿಯವರ ಅಪ್ಪಣೆಯಂತೆ ‘ಕರಡೀಶ ಚಂಪೂ’ ಗ್ರಂಥವನ್ನು ಪರಿಷ್ಕರಿಸಿರುವರು;
ಅಲ್ಲದೆ ಶ್ರೀ ಜ. ಗಂಗಾಧರ ಮಹಾಸ್ವಾಮಿಗಳ ಸ್ಮಾರಕವಾಗಿ ಸ್ಥಾಪಿತವಾಗಿರುವ ‘ಧರ್ಮ ಪ್ರಸಾರ ಸಂಶೋಧನ ಸಂಸ್ಥೆ’ಯ ಸದಸ್ಯರಾಗಿ ಸಾಹಿತ್ಯ ಸಂಶೋಧನೆಯ ಕಾರ್ಯವನ್ನು ಮಾಡುತ್ತಿರುವರು. ಶಿವಯೋಗಮಂದಿರದ ಟ್ರಸ್ಟಿಗಳಾಗಿ ಸೇವೆ ಸಲ್ಲಿಸಿರುವರು