ಹಾನಗಲ್ಲ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳು :೧೯೧೫
ಹಾನಗಲ್ಲ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳು ವಿರಕ್ತಮಠದ ಅಧಿಕಾರಿಗಳಾಗಿದ್ದಾರೆ. ಅವರು ಹುಬ್ಬಳ್ಳಿಯ ಹತ್ತಿರದ ಅರಳಿಕಟ್ಟಿಯ ಹಿರಿಯ ಮಠದಲ್ಲಿ ಜನಿಸಿದರು. ಕುಮಾರ ಚಂದ್ರಶೇಖರಯ್ಯನನ್ನು ಊರ ಹಿರಿಯರು ತಮ್ಮ ಹಿರೇಮಠದ ಮೂರ್ತಿಗಳನ್ನಾಗಿ ಮಾಡಲು ಹಾನಗಲ್ಲ ಕುಮಾರ ಶ್ರೀಗಳವರ ಸನ್ನಿಧಿಗೆ ಒಪ್ಪಿಸಿದರು.
ಶ್ರೀಗಳವರು ಅವರನ್ನು ಮಂದಿರದಲ್ಲಿ ಶಿಕ್ಷಣಕ್ಕಾಗಿ ಕರೆತಂದರು. ಶ್ರೀ ರೇಣುಕಾರ್ಯನೆಂದು ನಾಮಕರಣವಾಯಿತು. ಶ್ರೀ ರೇಣುಕಾರ್ಯರು ಕನ್ನಡ ಶಿಕ್ಷಣ ಮುಗಿಸಿ ದೀಕ್ಷೆ ಪಡೆದು ಸಂಸ್ಕೃತದ ಪ್ರೌಢ ಶಿಕ್ಷಣವನ್ನು ಪಂ. ವೀರಭದ್ರ ಶಾಸ್ತ್ರಿಗಳು ಮತ್ತು ಪಂ. ರೇವಣಸಿದ್ಧ ಶಾಸ್ತ್ರಿಗಳಲ್ಲಿ ಪಡೆದರು. ಸಂಗೀತ ಯೋಗ ವಿದ್ಯೆಗಳಲ್ಲಿಯೂ ಪರಿಣತೆ ಸಂಪಾದಿಸಿ ದೇಶಿಕರಾದರು.
ಸಂಸ್ಥೆಯ ಸ್ಥಾನಿಕ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ಮಹೇಶ್ವರ ಸ್ವಾಮಿಗಳು ಲಿಂಗೈಕ್ಯರಾದ ನಂತರ ಹಾನಗಲ್ಲ ಪೀಠಕ್ಕೆ ಅಧಿಕಾರಿಗಳಿರಲಿಲ್ಲ. ಲಿಂ. ಜ. ಶ್ರೀ ಗುರುಸಿದ್ಧರಾಜ ಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಅವರು ನವಿಲುಗುಂದ ಮತ್ತು ಗುತ್ತಲದ ಶ್ರೀಗಳು ರಾ. ಬ. ದೇವೀಹೊಸೂರು ಶೆಟ್ಟರು ಮೊದಲು ಪ್ರಮುಖರ ಇಚ್ಛೆಯಂತೆ ಶ್ರೀ ರೇಣುಕ ದೇಶಿಕರನ್ನೆ ೧೯೩೬ರಲ್ಲಿ ಹಾನಗಲ್ಲ ಪೀಠಕ್ಕೆ ಅಧಿಕಾರಿಗಳನ್ನಾಗಿ ಮಾಡಿದರು. ಶ್ರೀ ಸದಾಶಿವ ಸ್ವಾಮಿಗಳೆಂದು ಅಭಿದಾನವನ್ನು ಇಡಲಾಯಿತು.
ಅಂದಿನಿಂದ ಶ್ರೀಗಳವರು ಹಾನಗಲ್ಲ ಮಠದ ಅಭಿವೃದ್ಧಿಯನ್ನು ಮಾಡಿ ಮಂದಿರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಲಿಂ. ಹಾನಗಲ್ಲ ಪೂಜ್ಯರ ಭವ್ಯವಾದ ಗದ್ದುಗೆಯ ನಿರ್ಮಾಣದ ಹೊಣೆಯನ್ನು ಹೊತ್ತು ಒಂದು ಲಕ್ಷ ರೂ.ಗಳ ನಿಧಿಯನ್ನು ಭಕ್ತರಿಂದ ಕೂಡಿಸಿ ಅದನ್ನು ಕಲಾಪೂರ್ಣವಾಗಿ ಪೂರೈಸಿರುವರು.
ಅವರು ಸ್ವತಃ ಚಿತ್ರಕಾರರು. ಗದ್ದುಗೆಯ ಮಂಟಪದ ಶಿಲ್ಪಕ್ಕೆ ಬೇಕಾದ ಕೆಲವು ನಕ್ಷೆಗಳನ್ನು ತಾವೇ ಬರೆದು ಶಿಲ್ಪಿಗಳಿಂದ ಅಂದವಾಗಿ ಕೆತ್ತಿಸಿದ್ದಾರೆ. ಅವರು ಶಿವಯೋಗ ಮಂದಿರದ ಮ್ಯಾನೇಜಿಂಗ್ ಟ್ರಸ್ಟಿಗಳಾಗಿರುವರು. ಮಂದಿರದ ಸೇವೆಯೆ ಅವರ ಜೀವನದ ಉದಾತ್ತ ಧೈಯವಾಗಿದೆ.