ಸಖರಾಯ ಪಟ್ಟಣದ ಶ್ರೀ ಘ. ಚ. ಸದಾಶಿವ ಪಟ್ಟಾಧ್ಯಕ್ಷರು :
ಸಖರಾಯ ಪಟ್ಟಣದ ಶ್ರೀ ಘ. ಚ. ಸದಾಶಿವ ಪಟ್ಟಾಧ್ಯಕ್ಷರು ಹಾಲುಸ್ವಾಮಿ ಮಠದ ಅಧಿಕಾರಿಗಳು. ಗುರುಗಳಾದ ಶ್ರೀ ಹಾಲುಸ್ವಾಮಿಗಳು ಶ್ರೀ ಸದಾಶಿವ ದೇವರನ್ನು ತಮ್ಮ ಮಠದ ಉತ್ತರಾಧಿಗಳೆಂದು ನಿರ್ಣಯಿಸಿ ಅವರ ಶಿಕ್ಷಣದ ಭಾರವನ್ನು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಮತ್ತು ಅನಂತಪುರದ ಶ್ರೀ ಜ. ಲಿಂಗಸ್ವಾಮಿಗಳಿಗೆ ಒಪ್ಪಿಸಿದ್ದರು. ಅದರಂತೆ ಅವರು ಮಂದಿರದಲ್ಲಿದ್ದು ಕನ್ನಡ-ಸಂಸ್ಕೃತ ವಿದ್ಯಾ ಸಂಪತ್ತನ್ನು ಗಳಿಸಿದರು. ಯೋಗವಿದ್ಯೆಯಲ್ಲಿ ನೈಪುಣ್ಯ ಪಡೆದರು. ಭಾಷಣ ಮತ್ತು ಲೇಖನ ಕಲೆಯಲ್ಲಿ ಪಳಗಿದರು. ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ೧೯೨೬ರಲ್ಲಿ ಸಖರಾಯ ಪಟ್ಟಣದ ಹಾಲುಸ್ವಾಮಿ ಪೀಠವನ್ನು ಅಲಂಕರಿಸಿದರು.
ಶ್ರೀ ಪಟ್ಟಾಧ್ಯಕ್ಷರು ಗುರುವರ್ಯ ಯೋಗಿರಾಜ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಲಿಂಗೈಕ್ಯವಾಗಿದ್ದ ಗಿರಿಯಾಪುರ (ತಾ. ಕಡೂರು) ಗ್ರಾಮದಲ್ಲಿಯೇ ವಾಸವಾಗಿದ್ದು ಅವರ ಗದ್ದುಗೆಯನ್ನು ಅಂದವಾಗಿ ಕಟ್ಟಿಸಿದರು. ಅಲ್ಲಿಯೇ ‘ಶ್ರೀ ಗುರುಕುಮಾರಾಶ್ರಮ’ವನ್ನು ಸ್ಥಾಪಿಸಿದರು. ಅದು ಅವರ ಸತ್ಕಾರ್ಯಗಳ ಕೇಂದ್ರವಾಯಿತು. ಹಾನಗಲ್ಲ ಪೂಜ್ಯರ ಸ್ಮಾರಕವಾಗಿ ‘ಶಿವದ್ವೈತ ತತ್ವಪ್ರಚಾರ ಸಮಿತಿ’ಯನ್ನು ನಿರ್ಮಿಸಿ ಅದರ ಅಂಗವಾಗಿ ಪೂಜ್ಯರ ಪುಣ್ಯತಿಥಿ ಸಪ್ತಾಹವನ್ನು ಪ್ರತಿವರ್ಷ ಆಚರಿಸುತ್ತಾರೆ. ವಿದ್ವಾಂಸರ ಅನುಭವಿಗಳ ಭಾಷಣ ಮತ್ತು ಪ್ರವಚನಗಳಿಂದ ಅಲ್ಲಿನ ಜನತೆಯ ನಡೆ ನುಡಿಗಳನ್ನು ತಿದ್ದಿ ಉತ್ತಮ ವಾತಾವರಣವನ್ನು ಕಲ್ಪಿಸಿದ್ದಾರೆ. ಶ್ರೀ ಪಟ್ಟಾಧ್ಯಕ್ಷರು ಶೀಲಾಚರಣೆಯನ್ನು ಅಕ್ಷುಣ್ಣವಾಗಿ ನಡೆಯಿಸಿಕೊಂಡು ಬಂದಿದ್ದಾರೆ. ಅವರು ಸ್ವಾಧ್ಯಾಯದಿಂದ ಸಂಸ್ಕೃತದಲ್ಲಿ ಕನ್ನಡದಲ್ಲಿಯೂ ಪ್ರೌಢಿಮೆಯನ್ನು ಪಡೆದವರು. ‘ಕೈವಲ್ಯೋಪನಿಷದ್ಭಾಷ್ಯ’ವನ್ನು ರಚಿಸಿ ತಮ್ಮ ಸಂಸ್ಕೃತ ಪಾಂಡಿತ್ಯವನ್ನು ತಮಗಿರುವ ಶಿವಾನುಭವ ಶಕ್ತಿಯನ್ನು ನಾಡಿನಲ್ಲಿ ಬೆಳಗಿಸಿದ್ದಾರೆ. ಅವರಲ್ಲಿ ಕವಿತ್ವ ಪ್ರತಿಭೆಯೂ ಇದೆ. ಇದುವರೆಗೆ ಅವರು ೨೫ಕ್ಕೂ ಮಿಕ್ಕಿ ಗ್ರಂಥಗಳನ್ನು ರಚಿಸಿದ್ದಾರೆ, ಉತ್ತಮ ಸಾಹಿತ್ಯವನ್ನು ಬೆಳಕಿಗೆ ತಂದಿದ್ದಾರೆ. ತರುತ್ತಿದ್ದಾರೆ. ಶಿವಯೋಗ ಮಂದಿರದ ಉದ್ದೇಶಗಳನ್ನು ಕೃತಿಗಿಳಿಸಿದ ಆದರ್ಶ ಗುರುಗಳಾಗಿದ್ದಾರೆ. ಅವರು ತಮ್ಮ ಮಠದ ಆಡಳಿತವನ್ನು ನೋಡಿಕೊಳ್ಳಲು ಜಕ್ಕಲಿಯ ಶ್ರೀ ಬಸವಲಿಂಗ ದೇಶಿಕರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿರುವರು. ಶ್ರೀ ಬಸವಲಿಂಗದೇಶಿಕರು ಹುಣಸಿಘಟ್ಟದ ಶಾಖಾಮಠದಲ್ಲಿದ್ದುಕೊಂಡು ಮಠದ ವ್ಯವಸ್ಥೆಯನ್ನು ದಕ್ಷತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಮಠವನ್ನು ಅಭಿವೃದ್ಧಿಗೆ ತಂದಿದ್ದಾರೆ. ಅವರು ಶಿವಪೂಜಾನಿಷ್ಠರು, ವಾಗ್ಮಿಗಳು ಮತ್ತು ಪುರಾಣ-ಪ್ರವಚನ ಪಟುಗಳೂ ಆಗಿರುವರು.