ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು : . (೧೯೨೦)

ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು : . (೧೯೨೦)

ಭಾಲ್ಕಿ ಶ್ರೀ ಘ. ಚ. ಚನ್ನಬಸವಸ್ವಾಮಿ ಪಟ್ಟದ್ದೇವರು ಹಿರೇಮಠದ ಅಧ್ಯಕ್ಷರು. ಅವರು ಕಮಾಲನಗರ (ಜಿ. ಬೀದರ)ದಲ್ಲಿ ಕ್ರಿ. ಶ. ೧೮೯೫ ರಲ್ಲಿ ಜನಿಸಿದರು. ಅವರಾದಿಯ ಪಾಠಶಾಲೆಯಲ್ಲಿ ಕನ್ನಡ ಕಾವ್ಯಗಳ ಅಭ್ಯಾಸ ಮಾಡಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದರು.

ಪಂ. ಸೋಮಶೇಖರ ಶಾಸ್ತ್ರಿಗಳಲ್ಲಿ ಪಂಚಕಾವ್ಯಗಳನ್ನು ಕಲಿತರು. ಶಿವಾನುಭವಶಾಸ್ತ್ರ ಮತ್ತು ಯೋಗದ ಷಟ್ಕರ್ಮಗಳಲ್ಲಿಯೂ ಪರಿಶ್ರಮವಿದ್ದಿತು. ಪೂಜ್ಯ ಹಾನಗಲ್ಲ ಶ್ರೀಗಳವರ ಸೇವೆಯನ್ನು ಮಾಡುವ ಭಾಗ್ಯ ಪಡೆದರು.

೧೯೨೪ರಲ್ಲಿ ಕಾಶೀ ಸಿಂಹಾಸನಾನ್ವಯಾನುಗತ ಪ್ರತಿನಿಧಿ ಚರಪಟ್ಟಾಧಿಕಾರದ ಭಾಲ್ಕಿ ಹಿರೇಮಠದ ಪೀಠಕ್ಕೆ ಅಧಿಕಾರಿಗಳಾದರು. ಮಠದ ಜೀರ್ಣೋದ್ಧಾರವನ್ನು ಮಾಡಿ ಪರಕೀಯರ ಕೈಸೇರಿ ಹೋಗಿದ್ದ ಆಸ್ತಿಗಳನ್ನು ಪುನಃ ಸಂಪಾದಿಸಿದರು.

ಬೀದರ ಜಿಲ್ಲೆಯಲ್ಲಿ ಶತಮಾನಗಳಿಂದ ಕನ್ನಡ ಸಾಹಿತ್ಯ-ಸಂಸ್ಕೃತಿಗಳು ಅವನತಿ ಪಡೆದಿದ್ದವು. ಶ್ರೀ ಪಟ್ಟದ್ದೇವರು ‘ಕನ್ನಡ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಮುಖಾಂತರವಾಗಿ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿರುವರು.

ಕಮಲ ನಗರದಲ್ಲಿ ೨೦ ವರ್ಷಗಳಿಂದ ಕನ್ನಡ ಶಾಲೆಯನ್ನು ನಡೆಯಿಸಿಕೊಂಡು ಬಂದು ಈಗ ಅದನ್ನು ‘ಶಾಂತಿ ವರ್ಧಕ ಹೈಸ್ಕೂಲಿನ ಮಟ್ಟಕ್ಕೆ ತಂದು ಅದರ ಸಂಚಾಲಕರಾಗಿರುವರು. ಪ್ರೀ ಬೋರ್ಡಿಂಗನ್ನು ನಡೆಯಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲ ಅನುಕೂಲತೆಗಳನ್ನು ದಯಾಪಾಲಿಸಿರುವರು.

ಮೋರಗಿ, ಕೂಡಲಸಂಗಮ, ಬೀದರ, ಲಾತೂರು ಹಣೆಗಾವ, ಭಾಲ್ಕಿ ಮೊದಲಾದ ನಗರಗಳಲ್ಲಿ ಗ್ರಾಮಗಳಲ್ಲಿಯೂ ಕನ್ನಡ ಸ್ಕೂಲು ಮತ್ತು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಮಾಜ ಸೇವೆಯನ್ನು ಕೈಕೊಂಡಿರುವ ಭಾಲ್ಕಿ ಶ್ರೀ ಪಟ್ಟಾಧ್ಯಕ್ಷರು ಹೈದರಾಬಾದದ ಗಡಿನಾಡಿನಲ್ಲಿ ಕನ್ನಡ ನುಡಿಯ ಗೌರವವನ್ನು ಉಳಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.