ನಾಗನೂರ ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠ :(1915)
ನಾಗನೂರ ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠದ ಅಧಿಪತಿಗಳು. ನಾಗನೂರು ಬೆಳಗಾಂವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿದೆ. ಅಲ್ಲಿಯ ರುದ್ರಾಕ್ಷಿ ವಿರಕ್ತಮಠವು ಬಹಳ ಪ್ರಸಿದ್ಧವಾದುದು. ಮಠದ ಮೂಲ ಕರ್ತೃಗಳು ಶ್ರೀ
ಪ್ರಭುಸ್ವಾಮಿಗಳು, ಅವರ ತರುವಾಯ ಶ್ರೀ ಸಿದ್ದರಾಮ ಸ್ವಾಮಿಗಳು, ೨ ನೆಯ ಶ್ರೀ ಸಿದ್ದರಾಮ ಸ್ವಾಮಿಗಳು, ಶ್ರೀ ವೀರಭದ್ರ ಸ್ವಾಮಿಗಳು, ಶ್ರೀ ಗುರುಲಿಂಗ ಸ್ವಾಮಿಗಳು ನಂತರ ಈಗಿನ ಶ್ರೀಗಳು. ಹೀಗೆ ಈ ಮಠದ ಪರಂಪರೆ ಸು. ೨೦೦ ವರ್ಷ ಪ್ರಾಚೀನವಾಗಿದೆ.
ಶ್ರೀಗಳವರು ದಿ. ೨೫-೧೨-೧೮೯೮ರಲ್ಲಿ ನಾಗನೂರಿನಲ್ಲಿ ಜನಿಸಿದರು. ೧೨ನೆಯ ವಯಸ್ಸಿನಲ್ಲಿ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದು ಪಂ, ಸೋಮನಾಥ ಶಾಸ್ತ್ರಿಗಳು ಮತ್ತು ಉಮಚಗಿ ಪಂ. ಶಂಕರಶಾಸ್ತ್ರಿಗಳವರಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ಅವರು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಸೇವೆ ಮತ್ತು ಅನುಷ್ಠಾನದಲ್ಲಿಯೆ ಹೆಚ್ಚಾಗಿದ್ದು ಪುಣ್ಯಭಾಗಿಗಳಾದರು. ೧೯೨೪ ರಲ್ಲಿ ಮಠದ ಅಧಿಕಾರವನ್ನು ವಹಿಸಿಕೊಂಡು ಅದರ ಜೀರ್ಣೋದ್ಧಾರ ಕೈಕೊಂಡರು.
೧೯೩೨ ರಲ್ಲಿ ‘ವೀರಶೈವ ವಿದ್ಯಾರ್ಥಿ ಪ್ರಸಾದ ನಿಲಯ’ವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರು. ಅಲ್ಲಿ ಪ್ರಾರಂಭದಲ್ಲಿ ೨೫ ವಿದ್ಯಾರ್ಥಿಗಳಿದ್ದು ಈಗ ಅವರ ಸಂಖ್ಯೆ ೨೫೦ಕ್ಕೂ ಮಿಕ್ಕಿದೆ. ಹನುಮನ ಬೀದಿಯಲ್ಲಿ ಲಕ್ಷಾಂತರ ಧನದ ವಿನಿಯೋಗದಿಂದ ಭವ್ಯವಾದ ಕಟ್ಟಡವಾಗಿದೆ. ಅದರ ಉದ್ಘಾಟನೆಯು ೧೯೫೧ರಲ್ಲಿ ಮೈಸೂರಿನ ಶ್ರೀ ಮನ್ಮಹಾರಾಜರವರ ಅಮೃತ ಹಸ್ತದಿಂದ ಜರುಗಿತು. ಈ ಕಟ್ಟಡಕ್ಕೆ ಹುಬ್ಬಳ್ಳಿಯ ಲಿಂ. ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಧನ ಸಹಾಯ ದಯಪಾಲಿಸಿದರು.
ಪ್ರಸಾದ ನಿಲಯದಲ್ಲಿ ಶ್ರೀ ಗುರುಸಿದ್ಧೇಶ್ವರ ಗ್ರಂಥಾಲಯವನ್ನು ವಾಚನಾಲಯವನ್ನೂ ಸ್ಥಾಪಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಪಯುಕ್ತ ಮತ್ತು ಬೆಲೆ ಬಾಳುವ ಗ್ರಂಥಗಳನ್ನು, ತಾಡವೋಲೆ ಹಾಗೂ ಕೈಬರಹದ ಅಮೂಲ್ಯ ಗ್ರಂಥಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ನಿಲಯದ ಪರವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಶ್ರೀ ಶಿವಬಸವ ಸ್ವಾಮಿಗಳು ಶ್ರೀ ಈಶ್ವರ ಸಣಕಲ್ಲ ಅವರಿಗೂ ‘ವಚನ ಪಿತಾಮಹ’ರಾದ ಶ್ರೀ ಫ. ಗು. ಹಳಕಟ್ಟಿ, ಅವರಿಗೂ ಸಾಹಿತ್ಯ ಸೇವೆಗಾಗಿ ನಿಧಿಯನ್ನು ದಯಪಾಲಿಸಿದರು.
ಶ್ರೀ ಶಿವಬಸವ ಸ್ವಾಮಿಗಳು ಮಂದಿರದ ಟ್ರಸ್ಟಿಗಳಾಗಿದ್ದಾರೆ. ಕೆಲವು ವರ್ಷ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ಮಂದಿರದ ಹಿತೈಷಿಗಳು; ಆಗಾಗ ಭಿಕ್ಷೆಯಿಂದ ಮಂದಿರದ ಯೋಗಕ್ಷೇಮವನ್ನು ಬಿಡದೆ ವಹಿಸಿಕೊಂಡು ಬಂದವರು. ಕನ್ನಡದ ಗಡಿನಾಡಿನಲ್ಲಿ ವೀರಶೈವ ಸಾಹಿತ್ಯ-ಸಂಸ್ಕೃತಿಗಳ ಪ್ರಸಾರ ಕಾರ್ಯವನ್ನು ಕೈಕೊಂಡ ಶ್ರೀಗಳವರ ಸಾಹಸ ಪ್ರಶಂಸನೀಯವಾದುದು. ಸಮಾಜ ಸೇವೆಯೆ ಅವರ ನಿತ್ಯದ ಸತ್ಯ ಕಾಯಕವಾಗಿದೆ.