ತೆಲಸಂಗದ ಶ್ರೀ ಘ. ಚ. ಬಸವಲಿಂಗ ಪಟ್ಟಾಧ್ಯಕ್ಷರು ; 1918
ತೆಲಸಂಗದ ಶ್ರೀ ಘ. ಚ. ಬಸವಲಿಂಗ ಪಟ್ಟಾಧ್ಯಕ್ಷರು ಹಿರಿಯಮಠದ ಅಧಿಕಾರಿಗಳಾಗಿದ್ದಾರೆ. ಅವರು ಮಾದನಹಿಪ್ಪರಗಿ (ಜಿ. ಗುಲಬುರ್ಗಾ, ತಾ. ಆಲಂದ) ಹಿರೇಮಠದಲ್ಲಿ ಜನ್ಮ ತಾಳಿದರು. ಮೊದಲು ಗುತ್ತಲದ ವಿರಕ್ತಮಠದ ವತಿಯಿಂದ ಮಂದಿರದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಪಂ. ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ಸಾಹಿತ್ಯ-ವೇದಾಂತ ವಿಷಯಗಳ ಅಭ್ಯಾಸ ಮಾಡಿದರು. ನುರಿತ
ಪುರಾಣ-ಪ್ರವಚನಕಾರರೂ ಮತ್ತು ಉತ್ತಮ ಬರಹಗಾರರೆಂದು ಮನ್ನಣೆ ಪಡೆದವರು. ಮಂದಿರದಲ್ಲಿ ‘ಸುಕುಮಾರ’ವೆಂಬ ಕೈಬರಹದ ಮಾಸ ಪತ್ರಿಕೆಯನ್ನು ಸಂಪಾದಿಸಿದರು. ೧೯೩೮ರಲ್ಲಿ ತೆಲಸಂಗ (ಜಿ. ಬೆಳಗಾಂವ, ತಾ, ಅಥಣಿ)ದ ಹಿರಿಯ ಮಠಕ್ಕೆಅಧಿಕಾರಿಗಳಾದರು.
ತೆಲಸಂಗದ ಹಿರಿಯ ಮಠ ಶ್ರೀಮಜ್ಜಗದ್ಗುರು ಉಜ್ಜಯಿನಿ ಸಿಂಹಾಸನಾನುಯಾಯಿ ಪ್ರಸಿದ್ಧ ಗುರುಪೀಠ. ಈ ಮಠಕ್ಕೆ ಶಾಖಾ ಮಠಗಳು ಹಾಲಳ್ಳಿ, ಬೀಳೂರು ಮೊದಲಾದ ಗ್ರಾಮಗಳಲ್ಲಿವೆ. ಅಧಿಕಾರಿಗಳಾದ ಮೇಲೆ ಮಠದ ಅಭಿವೃದ್ಧಿಯನ್ನು ಮಾಡಿದ್ದಾರೆ. ‘ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ’ ದ ಬಸವೇಶ್ವರ ಕಾಲೇಜಿಗಾಗಿ ಪುರಾಣ ಹೇಳಿ ನಿಧಿಯನ್ನು ಸಂಗ್ರಹಿಸಿದರು.
ಶ್ರೀ ಪಟ್ಟಾಧ್ಯಕ್ಷರು ಹೆಸರಾದ ಲೇಖಕರೂ ಆಗಿದ್ದಾರೆ. ಹಾವೇರಿ ಲಿಂ. ಶ್ರೀ ಶಿವಬಸವ ಮಹಾಸ್ವಾಮಿಗಳವರ ಚರಿತೆಯನ್ನು ಸರಸವಾಗಿ ಬರೆದಿದ್ದಾರೆ. ವೀರಮಾತೆ ಗುಡ್ಡಾಪುರ ದಾನಮ್ಮ ತಾಯಿಯ ಪುರಾಣವನ್ನು ಸಂಶೋಧಿಸಿ ಸಂಪಾದಿಸಿದ್ದಾರೆ. ಅದು ಪುರಾತನ ಕನ್ನಡ ಕಾವ್ಯವಾಗಿದ್ದು ಇದುವರೆಗೂ ಸಂಶೋಧಿತವಾಗಿ ಪ್ರಕಟವಾಗಿರಲಿಲ್ಲ. ಅದರ ಪ್ರಕಟನೆಯ ಕಾರ್ಯವನ್ನು ಕೈಕೊಂಡಿದ್ದಾರೆ. ಅಥಣಿಯಲ್ಲಿ ಹೊಸದಾಗಿ ಸ್ಥಾಪಿತವಾಗಿರುವ ಹೈಸ್ಕೂಲಿನ ಸಂಚಾಲಕರಾಗಿಯೂ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.