ಕೆರೂರ ಶ್ರೀ ನಿ. ಪ್ರ. ರಾಚೋಟಿ ಸ್ವಾಮಿಗಳು : (೧೯೧೯)
ಕೆರೂರ ಶ್ರೀ ನಿ. ಪ್ರ. ರಾಚೋಟಿ ಸ್ವಾಮಿಗಳು ರಾಚೋಟೇಶ್ವರ ವಿರಕ್ತ ಮಠದ ಅಧಿಕಾರಿಗಳು. ಅವರ ಜನ್ಮಸ್ಥಳ ತುಗ್ಗಲಡೋಣಿ (ತಾ. ಕುಷ್ಟಗಿ, ಜಿ. ರಾಯಚೂರು). ಶಾ. ಶ. ೧೮೧೫ರ ಶ್ರಾವಣ ಮಾಸದಲ್ಲಿ ಜನನವಾಯಿತು.
ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದು ಶ್ರೀ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದರು. ಶಿವಾನುಭವ ಮತ್ತು ಅನುಷ್ಠಾನದಲ್ಲಿ ನಿಷ್ಣಾತರಾದರು. ಶಾ. ಶ. ೧೮೩೭ ರಲ್ಲಿ ಮಠಾಧಿಕಾರವನ್ನು ವಹಿಸಿಕೊಂಡರು.
ಕೆರೂರ ವಿರಕ್ತ ಮಠವು ಬಹಳ ಪ್ರಾಚೀನವಾದುದು. ಹಿಂದಿನ ಸ್ವಾಮಿಗಳಲ್ಲಿ ಕೆಲವರು ಕಾಶಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಬಂದವರು, ವಚನಗಳಿಗೆ ಟೀಕೆಗಳನ್ನು ಬರೆದಿದ್ದಾರೆ. ಈ ಮಠದ ಓಲೆಗರಿ ಸಂಗ್ರಹವನ್ನು ಮಂದಿರಕ್ಕೆ ಅರ್ಪಿಸಲಾಗಿದೆ.
ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯವರಿಗೂ ಇಲ್ಲಿಯ ಕೆಲವು ಅಪ್ರಕಾಶಿತ ಓಲೆಗರಿ ಕಟ್ಟುಗಳನ್ನು ಕಳಿಸಲಾಗಿದೆ. ಶ್ರೀಗಳವರು ಮಠದಲ್ಲಿ ಪುರಾಣ, ಪ್ರವಚನ, ಕೀರ್ತನಗಳನ್ನು ನಡೆಯಿಸಿ ಧರ್ಮ ಪ್ರಸಾರ ಸೇವೆಯನ್ನು ಮಾಡುತ್ತಿರುವರು.