ಅಂಕಲಗಿಯ ಶ್ರೀ ನಿ. ಪ್ರ. ಸಿದ್ಧರಾಮ ಸ್ವಾಮಿಗಳು : 1916
ಅಂಕಲಗಿಯ ಶ್ರೀ ನಿ. ಪ್ರ. ಸಿದ್ಧರಾಮ ಸ್ವಾಮಿಗಳು ಅಡವೀಸ್ವಾಮಿ ಮಠಾಧ್ಯಕ್ಷರು ರೋಣದ ಹಿರಿಯ ಮಠದಲ್ಲಿ ೧೮೯೯ ರಲ್ಲಿ ಜನ್ಮವಾಯಿತು.
ರೋಣದಲ್ಲಿಯೆ ಮುಲ್ಕಿ ಪರೀಕ್ಷೆ ಮತ್ತು ಇಂಗ್ಲಿಷ್ ಎರಡನೆಯತ್ತೆವರೆಗೆ ಶಿಕ್ಷಣ ಹೊಂದಿ ಕ್ರಿ. ಶ. ೧೯೧೭ ರಲ್ಲಿ ಶಿವಯೋಗ ಮಂದಿರದಲ್ಲಿ ರೋಣದ ಪಟ್ಟದ ಶಾಂತಸ್ವಾಮಿ ಮಠದ ಪರವಾಗಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದರು. ಅಲ್ಲಿ ಸಾಹಿತ್ಯ-ನ್ಯಾಯಗಳ ಅಭ್ಯಾಸ ಮತ್ತು ಯೋಗಶಿಕ್ಷಣ ಪಡೆದು ೧೯೨೭ರಲ್ಲಿ ಕಾಶಿಗೆ ಹೋದರು.
ಅಲ್ಲಿ ಮಥುರಾ ವಿಶ್ವವಿದ್ಯಾನಿಲಯದ ‘ಸಾಹಿತ್ಯಾಚಾರ’ ಪದವಿಯನ್ನು ಸಂಪಾದಿಸಿ ೧೯೩೩ ರಲ್ಲಿ ಮರಳಿದರು. ೧೯೩೪ ರಲ್ಲಿ ಧಾರವಾಡದ ಶ್ರೀ ನಿ. ಪ್ರ. ಮೃತ್ಯುಂಜಯ ಸ್ವಾಮಿಗಳ ಸಂಸ್ಕೃತ ಪಾಠಶಾಲೆಯಲ್ಲಿ ಎರಡು ವರ್ಷ ಅಧ್ಯಾಪಕರಾಗಿದ್ದು ಕೆಲವು ವರ್ಷ ಮಂದಿರದಲ್ಲಿಯೂ ಅಧ್ಯಾಪಕರಾಗಿದ್ದರು. ೧೯೩೮ ರಲ್ಲಿ ಅಂಕಲಗಿ (ಜಿ. ಬೆಳಗಾಂವ) ಶ್ರೀ ಅಡವೀಸ್ವಾಮಿ ಮಠಕ್ಕೆ ಅಧಿಕಾರಿಗಳಾದರು.
ಶ್ರೀಗಳವರು ೬೦ ಸಾವಿರ ರೂಪಾಯಿಗಳ ವೆಚ್ಚದಿಂದ ಈ ಪುರಾತನ ಮಠದ ಪುನರ್‌ನಿರ್ಮಾಣ ಮಾಡಿದರು. ಮಠದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ವಿದ್ಯಾರ್ಥಿಗಳಿಗೆ ಪ್ರಸಾದ-ವಸತಿಗಳ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಮತ್ತು ಪ್ರತಿವರ್ಷ ಜಾತ್ರೆಯನ್ನು ನಡೆಯಿಸಿ ಧಾರ್ಮಿಕ ಮತ್ತು ಸಾಮಾಜಿಕ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ