ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು - ಚಾಂಬೋಳ, ಬೀದರ
ಲೇಖಕರು: ಶ್ರೀ ಶಿವನಾಥ.ಕತ್ತೆ
ಪೂಜ್ಯರ ಜನನ – ಬಾಲ್ಯ:
ಬಿಜಾಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮವು ಕಲ್ಯಾಣ ಚಾಲೂಕ್ಯರ ಕಾಲದಲ್ಲಿ ಉಪರಾಜಧಾನಿಯಾಗಿತ್ತು. ಇಂಗಳೇಶ್ವರ ಒಂದು ಐತಿಹಾಸಿಕ ಐತಿಹ್ಯಗಳನ್ನು ಹೊಂದಿದೆ. ಆಲಮಟ್ಟಿಯ “ಕರ್ನಾಟಕ ಗಾಂಧಿ” ಎಂದು ಚಿರಪರಿಚಿತರಾದ ಹರ್ಡೆಕರ ಮಂಜಪ್ಪನವರ ತಪೋಭೂಮಿಯಾಗಿರುವುದು ವಿಶೆಷವಾಗಿದೆ. ಅಕ್ಕನಾಗಮ್ಮ, ಚೆನ್ನಬಸವಣ್ಣ, ಬಲದೇವಾ ಮೊದಲಾದ ಶರಣರು ಜನಸಿದ ನಾಡು. ಅದಲ್ಲದೆ ಶ್ರೀ ಗುರು ಬಸವಣ್ಣನವರ ತಾಯಿಯ ತವರೂರು ಇಂಗಳೇಶ್ವರವಾಗಿದ್ದು, ಬಸವಣ್ಣನವರ ಜನನವು ಇದೇ ಗ್ರಾಮದಲ್ಲಿ ಆಗಿತ್ತು. ಇಂತಹ ಶರಣರ ಜನ್ಮ ತಾಳಿದ ಊರಿನಲ್ಲಿ ಹಿರೇಮಠ ಮನೆತನದ ಶ್ರೀಮತಿ ಈರಮ್ಮಾ ಶ್ರಿ ಸಿದ್ದಯ್ಯಾ ಹಿರೇಮಠ ದಂಪತಿಯವರ ಉದರದಲ್ಲಿ ದಿನಾಂಕ ೧೧-೦೭-೧೯೩೮ರಂದು ೪ನೇ ಮಗನಾಗಿ ಜನಿಸಿದರು. ಬಸಯ್ಯಾ ಜನ್ಮ ತಾಳಿದ ಕೂಡಲೇ ಇವರ ತಂದೆ ತಾಯಿ ಇಂಗಳೆಶ್ವರದ ವಸ್ತçದ ಹಿರೇಮಠದ ಉತ್ತರಾಧಿಕಾರಿ ಮಾಡಬೇಕು ಎಂದು ಸಂಕಲ್ಪ ಮಾಡಿಕೊಂಡಿದರು. ಇವರ ತಂದೆ-ತಾಯಿ ಬಸಯ್ಯನನ್ನು ಸ್ವಾಮಿಜಿ ಮಾಡುವ ಸಂಕಲ್ಪ ಹೊಂದಿದರು ಆದರೆ ವಿದ್ಯಾಭ್ಯಾಸ ಎಲ್ಲಿ ಹೇಗೆ ಮಾಡಿಸಬೇಕೆಂದು ಗೊತ್ತಿರಲ್ಲಿಲ್ಲ. ಬಸಯ್ಯನ ವಿದ್ಯಭ್ಯಾಸದ ಜವಾಬ್ದಾರಿಯನ್ನು ಬಸಯ್ಯನ ಸೋದರ ಮಾವನಿಗೆ ನೀಡುತ್ತಾರೆ. ಸೋದರಮಾವರಿಗೆ ಬದಾಮಿಯಲ್ಲಿ ಪೋಲಿಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದರು. ಸೋದರಮಾವನವರಿಗೂ ಶಿವಯೋಗ ಮಂದಿರದ ಅಲ್ಲಿನ ಮುಖ್ಯಸ್ಥರಿಗೂ ಪರಿಚಯವಿದ್ದ ಕಾರಣ ಶಿವಯೋಗ ಮಂದಿರದ ಎಲ್ಲ ನಿಯಮಗಳನ್ನು ಕೇಳಿಕೊಳ್ಳುತ್ತಾರೆ. ಆವಾಗ ಸೊದರಮಾವ ಈ ವಿಷಯವನ್ನು ತನ್ನ ಅಕ್ಕ ಭಾವನಿಗೆ ತಿಳಿಸುತ್ತಾರೆ.
ಶಿಕ್ಷಣ:
ಇಂಗಳೇಶ್ವರ ಗ್ರಾಮದಲ್ಲಿ ಬಸಯ್ಯ ಓದಲು ಪ್ರಾರಂಭಿಸಿದ ಕಾಲದಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಶಾಲೆಗೆ ಕಟ್ಟಡವಿರಲಿಲ್ಲ. ಗ್ರಾಮದ ಗಿಡದ ಕೆಳಗಡೆ ಅಥವಾ ಗುಡಿಗಳಲ್ಲಿ ಶಾಲೆ ನಡೆಸುತ್ತಿದ್ದರು. ಒಬ್ಬ ಶಿಕ್ಷಕರು ಮಾತ್ರ ಸರಿಯಾಗಿ ಬರುತ್ತಿರಲಿಲ್ಲ. ಯಾರು ಕೂಡ ಆ ಶಾಲೆಗೆ ಹೋಗುತ್ತಿರಲಿಲ್ಲ. ಏಕೆಂದರೆ ಅಲ್ಲಿಯೇ ಖಾಸಗಿ ಶಿಕ್ಷಕರೊಬ್ಬರು ಮಕ್ಕಳಿಗೆ ತುಂಬಾ ಉತ್ತಮ ರೀತಿಯಿಂದ ಅಭ್ಯಾಸ ಮಾಡಿಸುತ್ತಿದ್ದರು.ಅದಕ್ಕಾಗಿ ಎಲ್ಲರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಕಲಿಸುತ್ತಿದ್ದರು. ಬಸಯ್ಯಗೂ ಕೂಡ ಪ್ರಾರಂಭದ ಅಭ್ಯಾಸವೂ ಖಾಸಗಿ ಶಾಲೆಯಲ್ಲಿಯೇ ನಡೆಯುತ್ತದೆ. ಊರ ಶಾಲೆಯಲ್ಲಿಯೇ ೭ನೇ ತರಗತಿವರೆಗೆ ಕಲಿತರು. ೭ನೇ ತರಗತಿ ಪಾಸ ಆದಕೂಡಲೇ ೧೩ವರ್ಷ ಮುಗಿದು ೧೪ವರ್ಷ ಪ್ರಾರಂಭ ಸಮಯ ಇವರ ಸೋದರಮಾವ ಶಿವಯೋಗ ಮಂದಿರಕ್ಕೆ ಯೋಗ ಧ್ಯಾನ ಅಭ್ಯಸಕ್ಕಾಗಿ ಕರೆದುಕೊಂಡು ಒಯ್ದು ಬಿಟ್ಟು ಬರುತ್ತಾರೆ.
ಶಿವಯೋಗ ಮಂದಿರದತ್ತ ಪಯಣ:
ಮಾತೋಶ್ರೀ ಈರಮ್ಮಾ ಸಿದ್ದಯ್ಯ ಹಿರೇಮಠ ದಂಪತಿಗಳು ಬಸಯ್ಯನವರು ಹುಟ್ಟಿದಾಗಲೇ ಸಂಕಲ್ಪ ಮಾಡಿಕೊಂಡಿದರು. ಬಸಯ್ಯನನ್ನು ಸಮಾಜ ಸುಧಾರಕನಾಗಿ ಮಾಡಬೇಕೆಂದು. ಮಗ ೧೪ ವರ್ಷದವ ಆಗಿದ್ದ ಕೂಡಲೇ ಶಿವಯೋಗ ಮಂದಿರ ಸಂಸ್ಥೆಗೆ ೧೯೫೦ರಲ್ಲಿ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮ್ಮ ತಂದೆ-ತಾಯಿ ಇಚ್ಛೆಯಂತೆ ಬಸಯ್ಯನವರು ಶಿವಯೋಗ ಮಂದಿರದಲ್ಲೇ ಉಳಿದು ವಚನ ಸಾಹಿತ್ಯ, ವೇದ ಯೋಗ ಅಭ್ಯಾಸ ಮಾಡಿ ಸಂಸ್ಥೆಯ ನೋಡಿಕ್ಕೋಳ್ಳುತ್ತ ಇದ್ದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳ ಸೇವೆ ಮಾಡುತ್ತ ಕೆಲವು ವರ್ಷ ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಮುಗಿದ ಕೂಡಲೇ ತಂದೆ-ತಾಯಿ ಸಂಕಲ್ಪದಂತೆ ಇಂಗಳೇಶ್ವರದ ಹಿರೇಮಠದ ಅಧಿಕಾರ ವಹಿಸಿಕೊಳ್ಳುತ್ತಾರೆ. ಪೂಜ್ಯರಿಗೆ ಕೆಲವು ದಿನಗಳ ನಂತರ ಮಠದಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಅವರ ಮನಸು ಶಿವಯೋಗ ಮಂದಿರದಲ್ಲಿತ್ತು. ನಾನು ಹಿರೇಮಠ ಪಟ್ಟಾಭಿಷಕ ಆದರೂ ನನ್ನ ಮನಸು ಶಿವಯೋಗಮಂದಿರ ಕಡೆಯಿದೆ. ನಾನು ಅಲ್ಲೇ ಗುರುಗಳ ಸೇವೆ ಮಾಡುತ್ತಾ ಇರುತ್ತೆನೆ ಎಂದು ಹೇಳಿ ಶಿವಯೋಗ ಮಂದಿರಕ್ಕೆ ಬಂದು ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳಿಗೆ ಬುದ್ದಿ ನಾನು ನಿಮ್ಮ ಸೇವೆ ಮಾಡಿಕೋಳ್ಳುತ್ತಾ ಇಲ್ಲೆ ಇರುತ್ತೆನೆ ಎಂದು ಶ್ರೀ ಸದಾಶಿವ ಮಹಾಸ್ವಾಮಿಗಳು ನಿನ್ನ ಮನಸ್ಸು ಎಲ್ಲಿಯವರೆಗೇ ಇರುತ್ತದೆಯೋ ಅಲ್ಲಿಯವರೆಗೆ ಇರು ಎಂದು ಅಪ್ಪಣೆ ನೀಡುತ್ತಾರೆ. ಪೂಜ್ಯ ಶ್ರೀ ಶಿವಯೋಗ ಮಂದಿರದಲ್ಲಿ ಸುಮಾರು ಹತ್ತು ಹನ್ನೇರಡು ವರ್ಷಗಳ ಕಾಲ ಶಿವಯೋಗ ಮಂದಿರದಲ್ಲಿ ಅಧ್ಯಯನ ಮತ್ತು ಸೇವೆ ಮಾಡುತ್ತಾ ಬಂದಿದಾರೆ.
ಧಾರ್ಮಿಕ ಕ್ಷೇತ್ರ:
ಧರ್ಮಾಚರಣೆಯ ಮಾರ್ಗ ಮತ್ತು ವೈಜ್ಞಾನಿಕವಾಗಿ, ವೈಚಾರಿಕವಾಗಿ ಅರಿವನ್ನು ಜಾಗೃತಗೊಳಿಸಿಕೊಳ್ಳವುದಕ್ಕಾಗಿ ಬಸವಣ್ಣನವರು ಮತ್ತು ಶರಣರ ತತ್ವ ಮಹಾತ್ಮರ ಸಂತರ ಪ್ರಸಾರಕ್ಕಾಗಿ ತಮ್ಮ ಇಡೀ ಜೀವನವನ್ನೆ ಭಕ್ತರಿಗಾಗಿ ಸಮರ್ಪಿಸಿಕೊಂಡಿದ್ದಾರೆ. ನಿರಂತರವಾಗಿ ಶ್ರಮಿಸುತ್ತಿರುವ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಮಠದಲ್ಲಿ ಪ್ರತಿದಿನ , ಪ್ರತಿವಾರ, ಪ್ರತಿ ತಿಂಗಳು, ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತ ಧರ್ಮ ಪ್ರಸಾರ ನಡೆಸುತ್ತಿದ್ದಾರೆ.
ಶ್ರೀಮಠದಲ್ಲಿ ೧೯೯೧ರಲ್ಲಿ ಪ್ರಸಾದ ನಿಲಯ ವಿದ್ಯಾರ್ಥಿಗಳಿಗಾಗಿ ‘ಸಾಮೂಹಿಕ ಪ್ರಾರ್ಥನೆ ಮತ್ತು ವಚನ ಚಿಂತನೆ’ ಎಂಬ ಅಧ್ಯಾತ್ಮಿಕ ಪರಂಪರೆಯನ್ನು ಪ್ರಾರಂಭಿಸಿದರು. ಈ ಪ್ರಾರ್ಥನಾ ಮಾರ್ಗವನ್ನು ಪ್ರತಿಯೊಬ್ಬ ವ್ಯಕ್ತಿ ತನ್ನ ಬಾಲ್ಯದಿಂದಲೇ ರೂಢಿಸಿಕೊಳ್ಳುವುದು ಒಳ್ಳೆಯದು, ಎಂದು ಮನಗಂಡು ಗ್ರಾಮೀಣ ಭಾಗದಲ್ಲಿ ಮನಸಿನ ಶುಧ್ದಿಗೆ ಅಂತರಂಗದ ದರ್ಶನಕ್ಕೆ ಆತ್ಮ-ಪರಮಾತ್ಮನ ಮಧುರ ಬಾಂಧವ್ಯಕ್ಕೆ ಶರಣರು ಸಾಧು-ಸಂತರ ಅನುಸರಿಸಿದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಾರ್ಗಗಳಲ್ಲಿ ಪ್ರಾರ್ಥನೆಯೂ ಒಂದಾಗಿದೆ.
ಮಾಸಿಕ ಶಿವಾನುಭವ ಗೋಷ್ಠಿ:
ತನು-ಮನ, ಭಾವ-ಪ್ರಾಣ ಶುದ್ದಿಗಾಗಿ ಮತ್ತು ಭವಭಂಧನದ ಮುಕ್ತಿಗೆ ಅಂತರಂಗದ ಅರಿವಿನ ಬೆಳಕಿಗೆ ನಿಜದ ನಿಲುವಿನ ದರ್ಶನ, ಸಾಕ್ಷಾತ್ಕಾರ ಹಾಗೂ ಸಾಮರಸ್ಯದ ಸುಖಕ್ಕೆ ಏರುವ ಸಾಧು-ಸಂತರ ಮಹಾತ್ಮರ ಶರಣರ ಪರಂಪರೆಯನ್ನು ಪಾಲಿಸಬೇಕೆಂಬ ನಿಟ್ಟಿನಲ್ಲಿ ಚಾಂಬೋಳ ಸಂಸ್ಥಾನ ಮಠದ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಶಿವಾನುಭವಗೋಷ್ಠಿಯನ್ನು ನಡೆಸುವುದರ ಮೂಲಕ ಸಮಾಜದಲ್ಲಿನ ಜನರಲ್ಲಿರುವ ಅಹಂಕಾರದ ಗುಣ, ಸ್ವಾರ್ಥಭಾವನೆ,ಅಜ್ಞಾನ,ಮೌಢ್ಯತೆ ಮೊದಲಾದವುಗಳನ್ನು ಓಡಿಸಿ ಅವರಲ್ಲಿ ವೈಚಾರಿಕತೆ ತರುವುದರ ಜೊತೆಗೆ ಅವರ ವ್ಯಕ್ತಿತ್ವವನ್ನು ಬೆಳೆಸುವ ಈ ಶಿವಾನುಭವದ ಗೋಷ್ಠಿಗಳಿಗೆ ನಾಡಿನ ಅನುಭವಿ ಸಾಹಿತಿಗಳಿಗೆ, ವಚನ ಸಾಹಿತ್ಯ ವಿದ್ವಾಂಸರ ಕರೆಸಿ ಉಪನ್ಯಾಸ ಕೊಡಿಸುತ್ತಾರೆ.
ಪೂಜ್ಯ ಶ್ರೀ ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ:
ಪೂಜ್ಯ ಶ್ರೀರುದ್ರಮುನಿ ಪಟ್ಟದೇವರು, ‘ಪೂಜ್ಯ ಶ್ರೀ ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳ’ ಸ್ಮರಣೋತ್ಸವವನ್ನು ಕೂಡ ಪ್ರತಿ ವರ್ಷ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮ ಮಹಾ ಶಿವರಾತ್ರಿ ಹಬ್ಬದ ಮೊದಲು ಎರಡು ದಿನ ಮುಂಚೆ ಅಂದರೆ ದಶಮಿ ದಿನದಂದು ಕಾರ್ಯಕ್ರಮ ಮಾಡುತ್ತಾರೆ.
ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ:
ಮಾರ್ಚ-೧೧ ರಿಂದ ೧೮ ವರೆಗೆ ಒಂದು ವಾರಗಳ ಕಾಲ ಸಮಾರಂಭದಲ್ಲಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರು, ಡೋಳು ಕುಣಿತ, ಭಜನೆ ಜೈಘೊಷ ಹಾಕುತ್ತಾ ಮೇರವಣೆಗೆ ಮಾಡುತ್ತಾರೆ. ಹಾಗೂ ಪೂಜ್ಯರು ಶ್ರೀಗಳು ಬರಿಗಾಲಲ್ಲಿ ಅಗ್ನಿ ಪ್ರವೇಶ ಮಾಡುತ್ತಾರೆ. ಮತ್ತು ನಾಡಿನ ಪ್ರಸಿದ್ದ ಪ್ರವಚನಕಾರರು, ಉಪನ್ಯಾಸಕರು, ಮಠಾಧೀಶರು, ರಾಜಕಾರಣಿಗಳು, ಅನುಭವಿಗಳು ಮೊದಲಾದ ಗಣ್ಯರನ್ನು ಕರೆಸುತ್ತಾರೆ. ವಿಶೇಷ ಉಪನ್ಯಾಸಗಳು ನಡೆಯುತ್ತದೆ. ರಾಜಕರಣಿಗಳು ನಾಡಿನ ಸೇವೆಯ ಬಗ್ಗೆ ಮಾತನಾಡುತ್ತಾರೆ. ಮಠಾಧೀಶರು ಆಶೀರ್ವಚನದ ರೂಪದಲ್ಲಿ ಅನುಭಾವ ನೀಡುತ್ತಾರೆ. ಶಾಲೆಯ ಮಕ್ಕಳಿಂದ ವಚನ ನೃತ್ಯ, ರೂಪಕ ನಾಟಕ, ಒಟ್ಟಾರೆ ಈ ಕಾರ್ಯಕ್ರಮ ಎಲ್ಲದರಕ್ಕಿಂತಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಲಿಂ. ಹಾನಗಲ್ಲ ಕುಮಾರೇಶ್ವರ ಜಯಂತಿ:
ಶ್ರೀಮದ್ ವೀರಶೈವ ಮಹಾಸಭೆಯ ಸಂಸ್ಥಾಪಕರಾದ ಹಾಗೂ ಶ್ರೀಮದ್ ವೀರಶೈವ ಶಿವಯೋಗ ಮಂದಿರದ ಸಂಸ್ಥಾಪಕರಾದ ಹಾನಗಲ್ಲ ಕುಮಾರೇಶ್ವರ ಜಯಂತಿ ಶ್ರೀ ಮಠದಲ್ಲಿ ಪ್ರತಿ ವರ್ಷ ಜಿಲ್ಲೆಯ ಮಠಾಧೀಶರನ ಆಹ್ವಾನಿಸಿ ಸುತ್ತ-ಮುತ್ತಲಿನ ಗ್ರಾಮದ ಭಕ್ತರನ್ನು ಭಾಗಿಯಾಗಿ ಲಿಂ.ಹಾನಗಲ್ಲ ಕುಮಾರೇಶ್ವರ ಜಯಂತಿ ಆಚರಿಸುತ್ತಾರೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀಗಳು:
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ಷೇತ್ರಗಳಂತೆ ಪೂಜ್ಯರು ಸಾಂಸ್ಕçತಿಕ ಕ್ಷೇತ್ರದಲ್ಲೂ ಅಮೋಘ ಸೇವೆ ಸಲ್ಲಿಸಿದ್ದಾರೆ. ಸಂಗೀತ, ನಾಟಕ, ಭಜನೆಯಂಥ ಈ ನೆಲದ ಕಲೆ, ಕ್ರೀಡೆಗಳನ್ನು ಪೋಷಿಸಿದ್ದಾರೆ. ಸಂಗೀತಕ್ಕಾಗಿ ಪೂಜ್ಯಶ್ರೀಗಳು ಸಂಗೀತ ಕಲಾವಿದರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
ನಾಟಕ:
ಸಮಾಜದಲ್ಲಿ ಜನರಿಗೆ ಉಪನ್ಯಾಸ ಪ್ರವಚನಗಿಂತಲೂ ತುಂಬ ಪರಿಣಾಮಕಾರಿಯಾಗಿರುವುದು ದೃಶ್ಯ ಮಾಧ್ಯಮ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ನಾಟಕ ಮತ್ತು ರೂಪಕಗಳೂ ಸಂಯೋಜಿಸಿ ಪ್ರದರ್ಶಿಸುತ್ತಾರೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ದೆಗಳಿಗೆ ಪ್ರೋತ್ಸಾಹ ನೀಡುತ್ತಾ ಸ್ವಾತಂತ್ರ ದಿನಾಚಾರಣೆ, ಗಣರಾಜ್ಯೋತ್ಸವದಂಥ ವಿಶೇಷ ದಿನಗಳಲ್ಲಿ ಅವರು ಕನ್ನಡ ನಾಡಿನ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಗಾಯನ ವಚನ ಕಂಠಪಾಠ, ಭಾಷಣ ,ನಿಬಂಧ, ರಂಗೋಲಿ, ಚಿತ್ರಕಲೆ, ರಸಪ್ರಶ್ನೆ, ರೂಪಕ, ನಾಟಕದಂಥ ಸಾಂಸ್ಕೃತಿಕ ವಿಷಯಗಳಲ್ಲಿ ಪುಟ್-ಬಾಲ್,ವಾಲಿಬಾಲ್, ಎತ್ತರ ಜಿಗಿತ, ಖೋ-ಖೋ,ಓಟ ಮೊದಲಾದ ಕ್ರೀಡೆಗಳಲ್ಲಿ ಈ ಸ್ಪರ್ದೆಗಳು ನಡೆಯುತ್ತವೆ. ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ.
ಶೈಕ್ಷಣಿಕ ಕ್ಷೇತ್ರ:
ಬೀದರ ಜಿಲ್ಲೆಯ ಶೈಕಣಿಕ ಪರಿಸ್ಥಿತಿ ಉತ್ತಮವಾಗಿ ಇಲ್ಲವೆಂದೂ, ಹಿಂದುಳಿದವರು ಎಂಬ ಹಣೆ ಪಟ್ಟಿ ಹೊತ್ತಿದೆ. ಇಲ್ಲಿನ ಆರ್ಥಿಕ ಪರಿಸ್ಥಿತಿಯೂ ಅಷ್ಟೊಂದು ಹೇಳಿಕೊಳ್ಳವ ಹಾಗಿಲ್ಲ. ಮತ್ತೆ ರೈತರು ಸಂಪೂರ್ಣವಾಗಿ ಮಳೆಯನ್ನೇ ನಂಬಿಕೊಂಡು ಬದುಕುವಂಥವರು. ರೈತರಲ್ಲಿ ಸಣ್ಣ ರೈತರೆ ಹೆಚ್ಚು. ಇಲ್ಲಿ ಕೂಲಿ ಕಾರ್ಮಿಕರು, ನಿರ್ಗತಿಕರು, ದಲಿತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸುವ ಬದಲಿಗೆ ಕೂಲಿಗೆ ಕಳುಹಿಸುತ್ತಿದ್ದಾರೆ.ಇತ್ತಿಚೆಗೆ ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸುತ್ತಾ ಮಕ್ಕಳಿಗೆ ಶಾಲೆಗೆ ಕಳುಹಿಸಬೇಕೆಂದು ಈ ಹಳ್ಳಿಗಳಲ್ಲಿ ಪಾಲಕರು ಸರಕಾರಿ ಶಾಲೆಗೆ ಕಳುಹಿಸಬೇಕೆಂದರು ಸರಕಾರಿ ಶಾಲೆ ಕೂಡ ಇಲ್ಲ. ಆದರೆ ನಮ್ಮ ಆಧುನಿಕ ಶಿಕ್ಷಣವು ಹಲವಾರು ದೋಷಗಳಿಂದ ಕೂಡಿದೆ. ಪ್ರಾಥಮಿಕ ಹಂತದ ಶೈಕ್ಷಣಿಕ ಬೋಧನಾ ಪದ್ದತಿಯಲ್ಲಿನ ಗುಣಮಟ್ಟ ಹೆಚ್ಚೆನಿಲ್ಲ. ನೈತಿಕ ಆಧ್ಯಾತ್ಮಿಕದಿಂದ ವಿಷಯಗಳ ಭೋಧನೆ ಕಳೆದುಕೊಂಡಿದೆ. ಸಂಸ್ಕಾರ ಶಿಕ್ಷಣವಂತೂ ಮಾಯವಾಗಿ ಬಿಟ್ಟಿದೆ. ಕೇವಲ ಗೀಚುವುದು ಗಿಳಿಪಾಠ ಮಾಡವುದು ಮುಂದಿನ ಕ್ಲಾಸಿಗೆ ನೂಕುವುದು ಇಂಥಹ ಶಿಕ್ಷಣ ಪದ್ದತಿಯ ಮೇಲೆ ಮಕ್ಕಳ ಭವಿಷ್ಯ ನಿಂತಿದೆ.
ಪ್ರಸಕ್ತ ತಾಂತ್ರಿಕ ಯುಗದಲ್ಲಿ ವೃತಿಪರ ಶಿಕ್ಷಣ ಪಡೆದವರಿಗೆ ಮಾತ್ರ ಆದ್ಯತೆ ಇದೆ. ಇಲ್ಲಿ ಪ್ರೀತಿ, ನ್ಯಾಯ, ದಯೆ, ಅನುಕಂಪ, ಯಾವ ಮಾನವೀಯ ಆದರ್ಶಗಳಾಗಲಿ, ಮನುಷ್ಯ ಸಂಬಂಧಗಳಾಗಲಿ ಬೇಕಾಗಿಲ್ಲ. ಈ ಆಧುನಿಕ ಕಾಲದ ಅನೇಕ ಸಮಸ್ಯಗಳಿಗೆ ಪರ್ಯಾಯ ಹುಡುಕುತ್ತಾ ಶೈಕ್ಷಣಿಕ ಸಾಧನೆಯ ಮಾರ್ಗದಲ್ಲಿ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಅನ್ನದಾಸೊಹ ಒಂದು ಕಣ್ಣಾದರೆ, ಜ್ಞಾನದಾಸೋಹ ಇನ್ನೊಂದು ಕಣ್ಣು. ಅನ್ನ ದಾಸೋಹದ ಮೂಲಕ ಸಾಮಾಜಿಕವಾಗಿ ಜೀವನ ಉನ್ನತ್ತಿಕರಿಸಿದರೆ ಶಿಕ್ಷಣ ದಾಸೋಹದ ಮೂಲಕ ಬದುಕನ್ನು ಸಾರ್ಥಕಗೊಳಿಸುವಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಮಠಕ್ಕೆ ಬಂದಾಗ ಕೇವಲ ಕೈಯಲ್ಲಿ ಬೆತ್ತ ಬಿಟ್ಟು ಏನು ಇರಲ್ಲಿಲ್ಲ. ಖಾಲಿ ಕೈ ಅನೇಕ ನೋವು ನುಂಗುತ್ತಲೇ ಕಷ್ಟ ನಷ್ಟಗಳನ್ನು ಎದುರುಸುತ್ತಲೇ ಶೈಕ್ಷಣಿಕ ನೀಲಿ ನಕ್ಷೆಯೊಂದು ರೂಪಿಸಿ ೧೯೯೦-೯೧ನೇ ಶೈಕ್ಷಣಿಕ ವರ್ಷದಲ್ಲಿ ಪೂಜ್ಯರು ‘ಶ್ರೀ ರುದ್ರಮುನಿ ಪಟ್ಟದೇವರು ವಿದ್ಯಾ ಸಂಸ್ಥೆ’ ಎಂಬ ಶಿಕ್ಷಣ ಸಂಸ್ಥೆಯನ್ನು ಚಾಂಬೋಳ ಮಠದಲ್ಲಿ ಪ್ರಾರಂಭಿಸಿದರು.
ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ:
ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ೧೦-ಜೂನ್-೧೯೯೦ ರಂದು ಮಠದ ಪರಿಸರದಲ್ಲೇ ಪ್ರಾರಂಭಿಸಿದರು. ಮೂವರು ಶಿಕ್ಷಕರು ೨೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯನ್ನು ಹತ್ತು ವರ್ಷಗಳವರೆಗೆ ಮಠದಲ್ಲಿಯೇ ನಡೆಸಿದರು. ಅನಂತರ ಸ್ಥಳದ ಅಭಾವದಿಂದ ಗ್ರಾಮದ ಹೊರಗೆ ವಿಶಾಲವಾದ ಭೂಮಿಯಲ್ಲಿ ಮಾಡಿಕೊಳ್ಳಲಾಗಿತ್ತು.
ಶ್ರೀ ವೀರಭದ್ರೇಶ್ವರ ವಸತಿ ನಿಲಯ:
ಶ್ರೀ ವೀರಭದ್ರೇಶ್ವರ ವಸತಿ ನಿಲಯವು ೦೧-೦೬-೧೯೯೧ ರಲ್ಲಿ ಶ್ರೀಮಠದಲ್ಲಿಯೇ ಪ್ರಾರಂಭ ಮಾಡಿದರು. ಆ ಸಮಯದಲ್ಲಿ ಮಠದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರು ವಸತಿ ನಿಲಯ ಪ್ರಾರಂಭ ಮಾಡಿ ಮಕ್ಕಳನ್ನು ಇಟ್ಟುಕೊಂಡು ಕಂತಿಭೀಕ್ಷೆ ಬೇಡಿ ಮಕ್ಕಳಿಗೆ ಅನ್ನವನ್ನು ಹಾಕುತ್ತಿರುವುದಲ್ಲದೆ, ಉಚಿತ ಶಿಕ್ಷಣ, ವಸತಿ ಕೂಡ ನೀಡುತ್ತಿದ್ದಾರೆ. ಇತ್ತಿಚಿಗೆ ವಸತಿ ಕೋಣೆಗಳಲ್ಲದೇ ಅಡುಗೆ, ಪ್ರಸಾದ, ಉಗ್ರಾಣ, ಶೌಚಾಲಯ, ಸ್ನಾನಗೃಹ, ಪ್ರಾಥನಾಮಂದಿರ ಕಾರ್ಯಲಯ ಹೀಗೆ ಪ್ರತಿಯೊಂದು ಪ್ರತೇಕ ಕೋಣೆಗಳನ್ನು ನಿರ್ಮಿಸಿದ್ದಾರೆ. ಈ ಕೋಣೆಗಳನ್ನು ಬೆಳಕಿನಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ನೋಡಿಕೊಳ್ಳವುದಕ್ಕಾಗಿ ನಿಷ್ಠಾವಂತ ಮೇಲ್ವಿಚಾರಕರಿದ್ದಾರೆ. ವಿದ್ಯಾರ್ಥಿಗಳು ತಡರಾತ್ರಿವರೆಗೂ ಅಭ್ಯಾಸದಲ್ಲಿ ತೊಡಗಿದ್ದರು ಯಾವ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ವಸತಿ ನಿಲಯದಲ್ಲಿ ಶುದ್ದ ಕುಡಿಯುವ ನೀರು ಮತ್ತು ಪೌಷ್ಟಿಕ ಹಾಗೂ ಸಾತ್ವಿಕವಾದ ಆಹಾರದೊಂದಿಗೆ ಮಕ್ಕಳನ್ನು ಶಾರೀರಿಕ ಬೆಳವಣಿಗೆಗೆ ಬೇಕಾಗುವ ಅತ್ಯಂತ ದೊಡ್ಡ ಭಾಗ್ಯ ಆರೋಗ್ಯ ಭಾಗ್ಯವಾಗಿದೆ. ಶ್ರೀರುದ್ರಮುನಿ ಪಟ್ಟದೇವರು ಮಕ್ಕಳ ಆರೋಗ್ಯ ಕಾಪಾಡುವುದಕ್ಕಾಗಿ ವಾರಕ್ಕೊಮ್ಮೆ ವೈದ್ಯರನ್ನ ಕರೆಸಿ ಮಕ್ಕಳನ್ನು ತಪಾಸಣೆ ಮಾಡುತ್ತಾರೆ. ಸಂಸ್ಕಾರ ಸಹಿತ ಗುಣಮಟ್ಟ ಶಿಕ್ಷಣ ನೀಡುತ್ತಿದ್ದಾರೆ.
ಶ್ರೀಮತಿ ನೀಲಮ್ಮಾ ತಾಯಿ ಹಿರಿಯ ಪ್ರಾಥಮಿಕ ಶಾಲೆ:
ಮೊದಲೇ ಮಠದಲ್ಲಿ ಪ್ರೌಢ ಶಾಲೆ ಮತ್ತು ವಸತಿ ನಿಲಯ ಪ್ರಾರಂಭ ಮಾಡಿದ್ದರಿಂದ ಪ್ರಾಥಮಿಕ ಶಾಲೆ ಪ್ರಾರಂಭ ಮಾಡಬೇಕಾದರೆ ಸ್ಥಳದ ಸಮಸ್ಯ ಬರುತ್ತದೆ. ಮೊದಲೆ ಮಠದ ಎಲ್ಲಾ ಕೋಣೆಗಳು ಆರ್ಧ್ ಮರ್ದ ಬಿದ್ದ ಕೋಣೆಗಳು ಶ್ರೀಗಳ ಸ್ವಂತ ಜಮೀನಾಗಲಿ, ಪ್ಲಾಟ್‌ಗಳಾಗಲಿ ಇರಲಿಲ್ಲ. ಇದೇ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ಚನ್ನಬಸಪ್ಪಾ ನಾಗಶೆಟ್ಟಿ ಪಾಟೀಲ್ ಚಾಂಬೋಳ ಅವರು ಸಂಸ್ಥೆಗಾಗಿ ಅವರ ತಾಯಿ ಹೆಸರಿನ ಮೇಲೆ ಸಂಸ್ಥೆಗೆ ಒಂದು ಎಕರೆ ಜಮೀನು ಗ್ರಾಮದ ಹತ್ತಿರ ಸಂಸ್ಥೆಗೆ ದಾನವಾಗಿ ನೀಡುತ್ತಾರೆ. ಮುಂದೆ ಸಂಸ್ಥೆಯು ದಾನವಾಗಿ ನೀಡಿದ ಜಮೀನಿಗೆ ಸ್ಥಳಾಂತರಿಸೋಣ ಎಂದು ಪ್ರಾಥಮಿಕ ಶಾಲೆಯು ೦೧-೦೬-೧೯೯೩ರಲ್ಲಿ ಸಂಸ್ಥೆಯ ಎಲ್ಲಾ ಸದಸ್ಯರ ಸಭೆಯನ್ನು ಕರೆದು ಸಭೆಯಲ್ಲಿ ಸದಸ್ಯರ ಒಪ್ಪಿಗೆಯ ಮೇರೆಗೆ ಪ್ರಾಥಮಿಕ ಶಾಲೆ ಹೆಸರನ್ನು ಶ್ರೀ ಚನ್ನಬಸಪ್ಪಾ ನಾಗಶೆಟ್ಟಿ ಪಾಟೀಲ್‌ರ ತಾಯಿ ಹೆಸರಿನ ಮೇಲೆ “ಶ್ರೀಮತಿ ನೀಲಮ್ಮಾ ತಾಯಿ ಹಿರಿಯ ಪ್ರಾಥಮಿಕ ಶಾಲೆ ” ೧ನೇ ತರಗತಿಯಿಂದ ೭ನೇ ತರಗತಿವರೆಗೆ ಪ್ರತಿ ವರ್ಷ ಒಂದೊಂದು ತರಗತಿ ಪ್ರಾರಂಭ ಮಾಡಿರುತ್ತಾರೆ.
ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಸಂಸ್ಥೆ ಪ್ರಾರಂಭದಿಂದ ಇಲ್ಲಿಯವರೆಗೂ ಕೇವಲ ಸರಕಾರದ ಫೀ ಮಾತ್ರ ತೆಗೆದುಕೊಂಡು ಯಾವ ಡೋನೆಷನ್ ಇಲ್ಲದೇ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಮುಂದೆ ಸಂಸ್ಥೆಯ ಅಡಿಯಲ್ಲಿ ‘ಶ್ರೀ ಹಾನಗಲ್ಲ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ’ ತೆರೆಯುವ ಉದ್ದೇಶ ಹೊಂದಿದ್ದಾರೆ.
ಪ್ರಶಸ್ತಿ ಪುರಸ್ಕಾರ:
ಪೂಜ್ಯ ಶ್ರೀಗಳ ವಿದ್ಯಾಗುರುಗಳಾದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಶಿವಯೋಗ ಮಂದಿರ ಇವರು ಪೂಜ್ಯ ಶ್ರಿ ರುದ್ರಮುನಿ ಪಟ್ಟದೇವರ ಸೇವೆ ನೋಡಿ ಶಿವಯೋಗ ಮಂದಿರ ಬಿಟ್ಟು ಚಾಂಬೋಳ ಮಠಕ್ಕೆ ಬರುವಾಗ ಒಂದು ಮಾತು ಹೇಳುತ್ತಾರೆ. ನೀವು ಇಲ್ಲಿ ಕಲಿತು ಹೋಗುತ್ತಿದ್ದಿರಿ. ಸಮಾಜ ಸೇವೆ ಹಾಗೂ ನಿಮ್ಮ ಮಠದ ಕಾರ್ಯದ ಜೊತೆಗೆ ನಮ್ಮ ಸಂಸ್ಥೆಯ ಕಾರ್ಯಕೂಡ ಜವಾಬ್ದಾರಿಯಿಂದ ಮಾಡಬೇಕು ಎಂದು ಹೇಳುತ್ತಾರೆ. ಆವಾಗ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು “ಬುದ್ದಿ! ನಾನು ನನ್ನ ಜೀವಮಾನದವರೆಗೆ ತಾವು ಒಪ್ಪಿಸಿದ ಕಾರ್ಯ ಮಾಡುತ್ತೇನೆ” ಎಂದು ಹೇಳುತ್ತಾರೆ. ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಶ್ರೀಗಳಿಗೆ ಹೇಳುತ್ತಾರೆ. ನೀವು ಪ್ರತಿ ವರ್ಷ ಶಿವಯೋಗ ಮಂದಿರದ ವಟು-ಸಾಧಕರಿಗೆ ನಿಮ್ಮ ಲಿಂಗಹಸ್ತದಿಂದಲೇ ಅಯ್ಯಾಚಾರ- ಲಿಂಗಧೀಕ್ಷೆ ಮಾಡಬೇಕು ಎಂದು ಹೇಳುತ್ತಾರೆ. ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಮನಸಾ ಪೂರ್ವಕವಾಗಿ ಒಪ್ಪಿಕೊಂಡು ಸುಮಾರು ೧೯೬೩ರಿಂದ ಇಲ್ಲಿಯವರೆಗೆ ಒಂದು ವರ್ಷವು ಕೂಡ ತಪ್ಪದೇ ಪ್ರತಿ ವರ್ಷ ಮಹಾಶಿವರಾತ್ರಿಯಂದು ಶಿವಯೋಗ ಮಂದಿರದ ವಟು-ಸಾಧಕರಿಗೆ ಅಯ್ಯಾಚಾರ ಮತ್ತು ಲಿಂಗಧೀಕ್ಷೆ ಮಾಡಿಬರುತ್ತಾರೆ.
ಶ್ರೀ ರುದ್ರಮುನಿ ಪಟ್ಟದೇವರ ಸಮಕಾಲೀನ ಜಗದ್ಗುರುಗಳಾದ ಹಾಗೂ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ, ಪೂಜ್ಯರ ಅನುಪಮ ಸೇವೆಯನ್ನು ಮನಗಂಡು ಪೂಜ್ಯ ಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳ ಲಿಂಗ ಹಸ್ತದಿಂದ “ವೀರಶೈವಧರ್ಮ ಕ್ರಿಯಾಶೀಲ ರತ್ನ” ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.