1935-1960

ಶ್ರೀ ಷ.ಬ್ರ. ಲಿಂ ಡಾ. ಗುರು ಸಿದ್ಧದೇವ ಶಿವಾಚಾರ್ಯ ಮಹಾಸ್ವಾಮಿಗಳು

ಲೇಖಕರು: ಮಲ್ಲನಗೌಡ ಹಿರೇಸಕ್ಕರಗೌಡ್ರ , ಗದಗ

ಪೂರ್ಣತ್ವಕಾರ, ದರ್ಶನ ಶಾಸ್ತ್ರ ಚಕ್ರವರ್ತಿ, ಶಬ್ಧಬ್ರಹ್ಮ ಶ್ರೀ ಷ.ಬ್ರ. ಲಿಂ ಡಾ|| ಗುರುಸಿದ್ಧದೇವ ಶಿವಾಚಾರ್ಯ ಮಹಾಸ್ವಾಮಿಗಳು, ಎಂ.ಎ. ಪಿಎಚ್‍ಡಿ, ಕೆಳದಿ ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ-ಶಿವಯೋಗಮಂದಿರ-ಮಂಗಳೂರು ಇವರ ಸಂಕ್ಷಿಪ್ತ ಜೀವನ ಸುಧೆ.

“ಹಾನಗಲ್ಲ ಕುಮಾರ ಸ್ವಾಮಿಗಳ ಅಪೂರ್ವ ಪೂರ್ಣ –ಯೋಗದ ಮರಿ ಇದು. ಇದೂ ಪೂರ್ಣವೇ. ಪೂರ್ಣಾತ್ ಪೂರ್ಣಂ ಉದಚ್ಯತೇ .” – ದ.ರಾ.ಬೇಂದ್ರೆ

ಮೇಲಿನ ಉಕ್ತಿಯನ್ನು “ದರ್ಶನ ಶಾಸ್ತ್ರ-ಚಕ್ರವರ್ತಿ” ಪೂರ್ಣತ್ವಕಾರ, “ಸಪ್ತಬಾಷಾ ಸಾಗರ”, “ಸತ್ವಪೂರ್ಣ ಸಾಹಿತ್ಯ ಸಾಗರ” ಶಬ್ದಬ್ರಹ್ಮ ಲಿಂ ಡಾ|| ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು ಕೆಳದಿ ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ ಇವರ ಕುರಿತು  “ಶಾಸ್ತ್ರ ಕಾವ್ಯ” ವಾದ “ಪೂರ್ಣತ್ವ” ಗ್ರಂಥದ “ಶಿವ-ಸಂಕಲ್ಪ”ದಲ್ಲಿ ಬರೆದವರೆಂದರೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕತ ವರಕವಿ ಡಾ: ದ.ರಾ.ಬೇಂದ್ರೆ ರವರು. ಪೂರ್ಣತ್ವಕಾರ ಕಳದಿ ಪೂಜ್ಯರ “ಪೂರ್ಣತ್ವ”ದ ಪೂರ್ಣ ಪ್ರಜ್ಞೆಯನ್ನು ಮನಸಾ ಮೆಚ್ಚಿ ಮೇಲಿನಂತೆ ಮನದುಂಬಿ ನುಡಿದಿದ್ದಾರೆ.

ಇಲಕಲ್ ಹಿರೇಮಠದ ಬಡಕುಟುಂಬದಲ್ಲಿ ಜನಿಸಿ, ಶ್ರೀಮದ್ ವೀರಶೈವ ಶಿವಯೋಗಮಂದಿರದಲ್ಲಿ ಅಧ್ಯಯನ ಮಾಡಿ, ಶ್ರೀ ಹಾನಗಲ್ ಗುರುಕುಮಾರೇಶನನ್ನು ಸಂಪೂರ್ಣವಾಗಿ ಗ್ರಹಿಸಿ, ಅವರ ಪಥದಲ್ಲಿ ನಡೆದು ಸರ್ವರಿಗೂ ಆದರ್ಶದ ಬೆಳಕು ತೋರಿದ ಪರಮ ವೈರಾಗ್ಯಶಾಲಿ, ಪಂಡಿತೋತ್ತಮರು ಪೂರ್ಣತ್ವಕಾರ ಕಳದಿ ಪೂಜ್ಯರು.

 ಪೂರ್ಣತ್ವಕಾರ ಡಾ|| ಕೆಳದಿ ಶ್ರೀಗಳದ್ದು ವಿಶಾಲ ಆಳ ಹರಿವಿನ, ಸದಾ ಸಮಾಜದ, ಶಿವಯೋಗ ಮಂದಿರದ ಹಿತಕ್ಕಾಗಿ ತನು-ಮನ-ಧನ ಸವೆಸಿದ ಸುಗಂಧ ಭರಿತ ಹೋರಾಟದ ಜೀವನ.

ಬಾಲ್ಯ ಜೀವನ

ಗ್ರಾನೈಟ್ ಉದ್ಯಮ ಮತ್ತು ಸೀರೆಗಳಿಗೆ ಜಗತ್‍ಪ್ರಸಿದ್ಧವಾದ, ಮಹಾತಪಸ್ವಿ ವಿಜಯ ಮಹಾಂತೇಶನ ತಪೋಭೂಮಿ, ಆಧ್ಯಾತ್ಮದ ತವರಾದ  ಬಾಗಲಕೋಟ ಜಿಲ್ಲೆ, ಹುನಗುಂದ ತಾಲ್ಲೂಕಿನ ಇಳಕಲ್ ಪೂಜ್ಯರ ಹುಟ್ಟೂರು. ಇಳಕಲ್ ಹಿರೇಮಠದ ಪುಣ್ಯ ಶರಣ ದಂಪತಿಗಳಾದ ಶ್ರೀ ವೇ||ಗುರುಮೂರ್ತಯ್ಯ ಮತ್ತು ಅನ್ನದಾನಮ್ಮ ನವರ ಪುಣ್ಯ ಗರ್ಭದಲ್ಲಿ  ಜೇಷ್ಟ ಪುತ್ರರಾಗಿ ಆರನೇ ಮಾರ್ಚ 1930 ರಂದು ಜನಿಸಿದರು. ಇವರ ಜನ್ಮ ನಾಮ “ಗುರುಸಿದ್ದಯ್ಯ”.

“ಮನೆಯೇ ಮೊದಲು ಪಾಠ ಶಾಲೆ : ಜನನಿ ತಾನೇ ಮೊದಲು ಗುರು” ಎನ್ನುವಂತೆ,  ತಾಯಿ ಅನ್ನದಾನಮ್ಮನವರು ಎಳೆಯ ಬಾಲಕ ಗುರುಸಿದ್ಧಯ್ಯನಿಗೆ ಬಾಲ್ಯದಲೇ ಉತ್ತಮ ಸಂಸ್ಕಾರ ನೀಡುತ್ತಾ, ಅವನ ಬಾಲ ಲೀಲೆಗಳನ್ನು ನೋಡುತ್ತಾ ಆನಂದ ಪಡುತ್ತಿದ್ದರು.  “ತಿರಿದು ತಂದರೂ ಕರೆದು ಉಣ್ಣುವ” ಪರಮ ಸಂಸ್ಕತಿ  ಆ ಶರಣ ದಂಪತಿಗಳದಾಗಿತ್ತು.  ಗುರುಸಿದ್ದಯ್ಯನಿಗೆ ಎಳೆಯ ವಯಸ್ಸಿನಲ್ಲಿ ಕಾಯಕ, ದಾಸೋಹದ ಮಹತ್ವನ್ನು ಮನಗಾಣಿಸಿದ್ದರು. ಹಿರೇಮಠ ಮನೆತನಕ್ಕೆ ಸೇರಿದವರಾಗಿದ್ದರಿಂದ ಶಿಷ್ಯಮಕ್ಕಳ ಮನೆಗೆ ಹೋಗಿ ರೊಟ್ಟಿ ತರುವ ಸಂಪ್ರದಾಯ ಇದೆ. ಹೀಗೆ ರೊಟ್ಟಿಗೆ ಹೋಗುವಾಗ ಕೈಯಲ್ಲಿದ್ದ ಬುಟ್ಟಿ ಮತ್ತು ಬೆತ್ತಗಳು ಬಾಲಕ ಗುರುಸಿದ್ದಯ್ಯನಿಗಿಂತಲೂ ಎತ್ತರವಾಗಿದ್ದವು. ಆಗ ಊರಿನ ಜನರು ನಮ್ಮೂರಿನ ಮತ್ತೊಬ್ಬ  “ವಿಜಯ ಮಹಾಂತೇಶ” ಎನ್ನುತ್ತಿದ್ದರು.

ಬಾಲಕ ಗುರುಸಿದ್ದಯ್ಯ ಇಳಕಲ್ ನಲ್ಲಿಯೇ  ಗಾಂವಟಿ ಶಾಲೆಗೆ ಹೋಗುತ್ತಿದ್ದ. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ.  ಆದರೂ ಹೆತ್ತವರಿಗೆ ಮಗ ಗುರುಸಿದ್ದಯ್ಯನನ್ನು ಚೆನ್ನಾಗಿ ಓದಿಸಿಬೇಕೆಂಬ ಮಹದಾಸೆ, ಇದೇ ಆಸೆಯನ್ನು  ಹೆಣ್ಣಜ್ಜ ವೀರಯ್ಯ ನವರಿಗೂ ಇತ್ತು. ಅಂತೆಯೇ ಮೊಮ್ಮಗ ಗುರುಸಿದ್ಧಯ್ಯನನ್ನು  ಗಜೇಂದ್ರಗಡ ಕ್ಕೆ ಕರೆತಂದು  ಉರ್ದು ಶಾಲೆಗೆ ಸೇರಿಸಿದರು. ಆ ಶಾಲೆಯ ಅಬ್ದುಲ್ ಗಪಾರ್‍ಖಾನ್ ಮಾಸ್ತರರು ಮತ್ತು ವೀರಯ್ಯನವರು ಗೆಳೆಯರಾಗಿದ್ದರು. ಆಗ ಕುಷ್ಟಗಿ, ಯಲಬುರ್ಗಾ, ಗಜೇಂದ್ರಗಡ ಭಾಗದಲ್ಲಿ  ಇವರ ಶಿಷ್ಯಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದರಿಂದ, ನವಾಬರ ಆಡಳಿತ ಪ್ರಭಾವವೋ ಏನೋ ಅಲ್ಲಿನ ಜನರು  ಉರ್ದು ಹೆಚ್ಚು ಮಾತನಾಡುತ್ತಿದ್ದರಿಂದ, ಉರ್ದು ಭಾಷೆ ಕಲಿತರೆ ಒಳ್ಳೇದು ಎಂಬ ಉದ್ಧೇಶದಿಂದ ಉರ್ದು ಶಾಲೆಗೆ ಸೇರಿಸಿದ್ದರು.

ಅಬ್ದಲ್ ಗಫಾರ್ ಖಾನ್ ಮಾಸ್ತರರಿಂದ ಬಾಲಕ ಗುರುಸಿದ್ದಯ್ಯನ ಜೀವನ ಬಹಳ ಪ್ರಭಾವಿತಗೊಂಡಿತು. ಯಾಕೆಂದರೆ ಅಬ್ದುಲ್ ಗಫಾರ್‍ಖಾನ್ ಮಾಸ್ತರರು ಪ್ರತಿದಿನ ಗುರುಸಿದ್ಧಯ್ಯನಿಗೆ ನಮಿಸಿ ಪಾಠ ಪ್ರಾರಂಭ ಮಾಡುತ್ತಿದ್ದರು, ಅಲ್ಲದೆ ಮುಂದೆ ನೀನು ದೊಡ್ಡ ಯೋಗಿ ಆಗುವವನಿದ್ದಿ, ಸ್ವಾಮಿ ಜೀವನದಲ್ಲಿ ನಿಷ್ಠೆ ಇರಬೇಕು ಎನ್ನುವುದಕ್ಕೆ ಪ್ರತಿಜ್ಞೆಗೆ ಕುಳಿತ ಫಕೀರನ ಆಸೆಯನ್ನು ಪ್ರವಾಹ ರೂಪದಲ್ಲಿ ದೇವರು ಈಡೇಸಿದ ಕಥೆಯನ್ನು  ಹಾಗೂ ದೇವರು ಇದ್ದಾನೆ, ನಂಬಿದವರನ್ನು ದೇವರು ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಮಹ್ಮದ ಪೈಗಂಬರ್‍ರವರನ್ನು ವೈರಿಗಳಿಂದ ಜೇಡರಬಲೆ ರಕ್ಷಿಸಿದ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದನ್ನು ಕೆಳದಿ ಅಜ್ಜನವರ  ಬಾಯಿಂದಲೆ ಕೇಳಬೇಕು. ಅದರ ಸೊಗಸು, ರೋಮಾಂಚನ ಇನ್ನೆಲ್ಲು ಸಿಗುವುದಿಲ್ಲ. ಅದನ್ನು ಕೇಳಿದ್ದು ನನ್ನ ಪುಣ್ಯ. ಅಬ್ದುಲ್ ಗಫಾರ ಖಾನ್ ಮಾಸ್ತರರ ನೀತಿ ಕಥೆಗಳು, ನನ್ನ ಸ್ವಾಮಿ ಜೀವನಕ್ಕೆ, ಸ್ವಾಮಿ ಜೀವನದಲ್ಲಿ “ಗಟ್ಟಿ ಸ್ವಾಮಿ” ಆಗಲಿಕ್ಕೆ ಮುನ್ನುಡಿಯಾದವು ಎಂದು ನೆನಪಿಸಿಕೊಳ್ಳುತ್ತಿದ್ದರು.

ಹೆತ್ತವರಿಗೆ ಮಗ ಗುರುಸಿದ್ದಯ್ಯನಿಗೆ ಮದುವೆ ಮಾಡಿ, ಮೊಮ್ಮಕ್ಕಳನ್ನು ಆಡಿಸಬೇಕೆಂಬ ಆಸೆ, ಆದರೆ ವಿಧಿ ಲಿಖಿತವೇ ಬೇರೆ, ವಿಧಿ ಲಿಖಿತ ತಪ್ಪಿಸಲು ಯಾರಿಂದ ಸಾಧ್ಯ? ಬಾಲಕ ಗುರುಸಿದ್ದಯ್ಯ ಯಾವಾಗಲೂ ಕಾಯಕ, ದಾಸೋಹ ಹಾಗೂ ದೇವರ ಧ್ಯಾನದಲ್ಲೇ ಇರುತ್ತಿದ್ದ. ಕುಮಾರೇಶ ನನ್ನನ್ನು ಬಾ ಎಂದು ಕರೆಯುತ್ತಿದ್ದಾನೆ ಎಂದು ತಂದೆಯವರಲ್ಲಿ ಹೇಳಿಕೊಳ್ಳುತ್ತಿದ್ದ. ಇದರಿಂದ ವಿಧಿಯಿಲ್ಲದೆ, ಗುರುಸಿದ್ದಯ್ಯನನ್ನು ಶಿವಯೋಗಮಂದಿರಕ್ಕೆ ಒಪ್ಪಿಸಲು ನಿರ್ಧರಿಸಿ, ಶಿವಯೋಗಮಂದಿರಕ್ಕೆ ಕರೆತಂದು ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳ ಪಾದಕ್ಕೆ ಅರ್ಪಿಸಿದರು.

ಬದುಕು ಬೆಳಗಿಸಿದ ಶಿವಯೋಗ ಮಂದಿರ

ಶಿವಯೋಗ ಮಂದಿರದ ಮಣ್ಣು ಸ್ಪರ್ಶಿಸಿದ ಕೂಡಲೇ ಗುರುಸಿದ್ದಯ್ಯನಲ್ಲಿದ್ದ ತಂದೆ-ತಾಯಿ, ಬಂಧು-ಬಳಗದ ವ್ಯಾಮೋಹದ ಪೊರೆ ಕಳಚಿಹೋಯಿತು. ಯಾಕೆಂದರೆ ಮಂದಿರಕ್ಕೆ ಕಾಲಿಟ್ಟ ತಕ್ಷಣವೇ ತಂದೆಯವರಿಗೆ ತಂದೆ ಎಂದು ಕರೆಯದೇ “ಗುರುಮೂರ್ತಯ್ಯನವರೇ, ಮಂದಿರಕ ಪೂರ್ವಕ್ಕ ದಾರಿ ಇಲ್ಲೇನ್ರಿ? ಎಂದು ಪ್ರಶ್ನೆ ಮಾಡಿದ್ದರು. ಎಳೆವಯಸ್ಸಿನಲ್ಲೇ ಎಂತಹ ವೈರಾಗ್ಯ ನೋಡಿ. ಆಗ ತಂದೆಯವರು “ಇಲ್ಲಪ್ಪ” ಎಂದಾಗ “ಮುಂದ ಇಲ್ಲಿ ದಾರಿಯಾದರ ನಡಿತೈತಲ್ರೀ ?” ಎಂದು ಮರು ಪ್ರಶ್ನಿಸಿದಾಗ ತಂದೆಯವರು “ಕುಮಾರೇಶನ ಕೃಪೆ” ಎಂದಿದ್ದರು, ಬಾಲ್ಯದಲ್ಲಿ ತಂದೆಯವರ ಮುಂದೆ ಹೇಳಿದಂತೆ,  ಮಲಪ್ರಭೆ ನದಿಗೆ ಸೇತುವೇ ನಿರ್ಮಿಸುವ ಮೂಲಕ ಶಿವಯೋಗ ಮಂದಿರಕ್ಕೆ ಪೂರ್ವಕ್ಕೆ ದಾರಿ ಮಾಡಿದರು. ಇದು ಲೀಲೆ.

ಯತಿಕುಲ ತಿಲಕ ಹಾನಗಲ್ ಗುರುಕುಮಾರೇಶ್ವರ ಮಹಾಸ್ವಾಮಿಗಳಿಂದ ಸನ್ 1909 ರಲ್ಲಿ ಸ್ಥಾಪಿತವಾದ ಶಿವಯೋಗಮಂದಿರ ಮಲಪ್ರಭೆಯ ರಮ್ಯ ನಿಸರ್ಗದ ಒಡಲು.  ಗುರುಸಿದ್ದಯ್ಯ ಶಿವಯೋಗ ಮಂದಿರ ಸೇರಿದ ನಂತರ ಅಲ್ಲಿನ ಪದ್ದತಿಯಂತೆ ಗುರುಸಿದ್ದಾರ್ಯರಾಗಿ, ಗುರುಸಿದ್ದದೇವರಾಗಿ,  ಶಿವಯೋಗಮಂದಿರದ ವಾರಿಗೆ ಎಲ್ಲ ವಟು -ಸಾಧಕ, ಮರಿದೇವರಿಗಿಂತಲೂ ಶಿಕ್ಷಣ, ಸಾಹಿತ್ಯ, ಯೋಗ, ಶ್ರಮದಾನ, ಪೂಜೆ, ಆಟ-ಪಾಠ, ಈಜು ಎಲ್ಲದರಲ್ಲೂ ಮುಂದಿದ್ದರು. ಇವರು ಶಿವಯೋಗಮಂದಿರದ ವಿದ್ಯಾರ್ಜನೆ ಸಮಯದಲ್ಲಿ ಶಿವಯೋಗಮಂದಿರವನ್ನು ವರ್ಣಿಸಿ ಬರೆದಿರುವ “ನೋಡಿರಿಲ್ಲಿದೆ ಶಿವನಮಂದಿರ” ಎಂಬ ಕವಿತೆ ಬಹಳ ಜನಪ್ರಿಯವಾಗಿದೆ. ಶಿವಯೋಗ ಮಂದಿರದಲ್ಲಿ ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳು, ಹಂಡಿ ಮಾಸ್ತರರು, ದ್ಯಾಂಪುರ ಚನ್ನಕವಿಗಳು. ಪಗಡದಿನ್ನಿ ಬೃಹನ್ಮಠದ ಬಸವರಾಜ ಶಾಸ್ರ್ತಿಗಳು ಮುಂತಾದ ಪಂಡಿತೋತ್ತಮರ ಸನ್ನಿಧಿಯಲ್ಲಿ ವಿದ್ಯಾರ್ಜನೆ ಮಾಡಿ, ಪೂಜ್ಯ ಹಾನಗಲ್ ಸದಾಶಿವ ಸ್ವಾಮಿಗಳು “ಮಂದಿರದ ಹೆಸರುಳಿಸುವ ಗಟ್ಟಿಮರಿ ಅಂದರೆ ನೀವ” ಎಂದು ಹೇಳುವಷ್ಟರ ಮಟ್ಟಿಗೆ ಬೆಳೆದು ನಿಂತರು. ಶಿವಯೋಗ ಮಂದಿರ ಗುರುಸಿದ್ದಯ್ಯನ ಕತ್ತಲೆಯ ಬದುಕಿಗೆ ಬೆಳಕು, ನೀಡಿತು, ಕೆಳದಿ ಅಜ್ಜನವರ ರೂಪದಲ್ಲಿ ಸಮಾಜಕ್ಕೆ ಮಹಾನ್ ತಪಸ್ವಿಯನ್ನು ನೀಡಿತು.

ಕಾಶಿಯಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಶಿವಯೋಗ ಮಂದಿರಕ್ಕೆ ಮರಳಿದ ಮರಿದೇವರೊಬ್ಬರಿಗೆ ಶಿವಯೋಗಮಂದಿರದಲ್ಲಿ ಮಾಡಿದ ಸನ್ಮಾನದಿಂದ ಪ್ರಭಾವಿತರಾಗಿ, ತಾವೂ ಅವರಂತಯೇ ಹೆಚ್ಚಿನ ಉನ್ನತ ವ್ಯಾಸಂಗ ಮಾಡಬೇಕೆಂಬ ಮಹಾದಾಸೆಯಿಂದ, ಹಿರಿಯ ಗುರುಗಳ ಅನುಮತಿ, ಶಿಷ್ಯ ಮಕ್ಕಳ ಸಹಾಯ ಸಹಕಾರದಿಂದ ಉನ್ನತ ವ್ಯಾಸಂಗಕ್ಕೆ ಕಾಶಿ ಕ್ಷೇತ್ರಕ್ಕೆ ತೆರಳಿದರು.

ಕಾಶಿಯಲ್ಲಿ ಉನ್ನತ ವ್ಯಾಸಂಗ

1952 ರ ಡಿಸೆಂಬರ್ 07 ನೇ ತಾರೀಖಿಗೆ ಕಾಶಿಗೆ ಕಾಲಿರಿಸಿದ ಇಲಕಲ್ ಗುರುಸಿದ್ಧ ದೇವರು ಕಾಶಿಯ ಜಂಗಮವಾಡಿ ಮಠದಲ್ಲಿ 05 ವರ್ಷ, ಹಾಗೂ ಹನುಮಾನ್ ಘಾಟ್‍ನಲ್ಲಿ 11 ವರ್ಷ ಹೀಗೆ 16 ವರ್ಷಗಳ ಕಾಲ ಕಾಶಿ ನಿವಾಸಿಗಳಾಗಿದ್ದುಕೊಂಡು, ಉನ್ನತ ವ್ಯಾಸಂಗ ಮಾಡಿದರು. ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಎಂ.ಎ.ಯಲ್ಲಿ “ವೇದಾಂತ” ವಿಷಯವನ್ನು ಅಧ್ಯಯನ ಮಾಡಿದರು. ಪ್ರತಿ ವರ್ಷ ವಿಶ್ವ ವಿದ್ಯಾಲಯದ ತತ್ವ –ಜ್ಞಾನ- ವಿಭಾಗದಲ್ಲಿ “ಮೆರಿಟ್ ಸ್ಕಾಲರಶಿಫ್” ಪಡೆದು ಅಂತಿಮ ವರ್ಷದ “ವೇದಾಂತ ಶಾಸ್ತ್ರಾಚಾರ್ಯ” ಪರೀಕ್ಷೆಯಲ್ಲಿ 14 ಸಾವಿರ ಜನ ವಿದ್ಯಾರ್ಥಿಗಳಲ್ಲಿ ಸರ್ವ ಪ್ರಥಮ ಸ್ಥಾನಗಳಿಸಿ ಪ್ರಥಮ ರ್ಯಾಂಕ್ [ಈiಡಿsಣ ಖಚಿಟಿಞ] ಪಡೆದುಕೊಂಡರು. [1959-60] ಈ ಸಾಧನೆಯು ವೀರಶೈವ ಮಠಾಧೀಶರಲ್ಲಷ್ಟೆ ಅಲ್ಲದೆ ದಕ್ಷಿಣ ಭಾರತೀಯರೊಬ್ಬರು ಮಾಡಿದ ಅಂದಿನ ವಿಶಿಷ್ಟ ಸಾಧನೆ. ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಕಾಶ್ಮೀರದ ಅಂದಿನ ಮಹಾರಾಜ ಕರಣಸಿಂಗ್ ರವರಿಂದ ಬಂಗಾರದ ಪದಕವನ್ನು ಪಡೆದುಕೊಂಡರು.

ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ “ಶಾಸ್ತ್ರಾಚಾರ್ಯ” ರಾದರೆ, ಕಲ್ಕತ್ತ ವಿಶ್ವವಿದ್ಯಾಲಯದಿಂದ “ಕಾವ್ಯತೀರ್ಥ”ಪದವಿ [1954], ಡಾಕಾ ವಿಶ್ವವಿದ್ಯಾಲಯದಿಂದ [ಆಗಿನ ಪೂರ್ವ ಪಾಕಿಸ್ತಾನ –ಈಗಿನ ಬಾಂಗ್ಲಾದೇಶ] “ಕಾವ್ಯನಿಧಿ” ಪದವಿ [1955] ಯನ್ನು ಪಡೆದುಕೊಂಡರು.

ದೆಹಲಿಯ ಕೇಂದ್ರ ಸರ್ಕಾರದಿಂದ ಸ್ಕಾಲರ್‍ಶಿಫ್ ಪಡೆದು, ಪಂಡಿತ ಶ್ರೇಷ್ಠರೂ ಹಾಗೂ ಭಾರತ ಸಂಸ್ಕøತ ಆಯೋಗದ ಅಧ್ಯಕ್ಷರಾಗಿದ್ದ ಪಂಡಿತ ವಿ.ಎಸ್.ರಾಮಚಂದ್ರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ “ಅದ್ವೈತ ವೇದಾನ್ತ ಶಾಕ್ತ ತನ್ತ್ರಯೋ:ಸಾಮ್ಯ ವೈಷಮ್ಯ ಚಿನ್ತನಮ್ “ ಎಂಬ ಆಧ್ಯಾತ್ಮಿಕ ತತ್ವಜ್ಞಾನದ ಸಂಸ್ಕøತ ಪಿ.ಎಚ್.ಡಿ. ಗ್ರಂಥವನ್ನು ಸಮರ್ಪಿಸಿ, 8 ನೇ ಜೂನ್ 1973 ರಲ್ಲಿ ಡಾಕ್ಟರೇಟ್ ಪದವಿಗಳಿಸಿಕೊಂಡರು. ಇದಲ್ಲದೆ, ಅದುವರೆಗೂ ಯಾವ ವೀರಶೈವ ಮಠಾಧೀಶರು ಕಾಶಿ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಕøತ ಮಹಾವಿದ್ಯಾಲಯದ “ಪ್ರಾಚ್ಯ-ಧರ್ಮ-ವಿಜ್ಞಾನ” ವಿಭಾಗದಿಂದ ಪಡೆದಿರಲಾರದಂತಹ “ದರ್ಶನ ಶಾಸ್ತ್ರ ಚಕ್ರವರ್ತಿ” ಎಂಬ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಈ ಸಾಧನೆ ಇಂದಿಗೂ ಅಲ್ಲಿ ದಾಖಲೆಯಾಗಿ ಉಳಿದಿದೆ. ಜೊತೆಗೆ ಎಲ್‍ಎಲ್‍ಬಿ ಪದವಿಯನ್ನು ಸಹ ಪಡೆದುಕೊಂಡರು.

ಕಾಶಿಯಲ್ಲಿ ಉನ್ನತ ಅಧ್ಯಯನದೊಂದಿಗೆ ಬಿಡುವಿನ ಅವಧಿಯಲ್ಲಿ ರಾಮಕೃಷ್ಣಾಶ್ರಮ, ಥಿಯೋಸಫಿಕಲ್ ಸೋಸೈಟಿ ಮುಂತಾದ ಆಧಾತ್ಮಿಕ ಕೇಂದ್ರಗಳಗೆ ಬೇಟಿ ನೀಡುತ್ತಿದ್ದರು.ಅಲ್ಲಿ ನಡೆಯುತ್ತಿದ್ದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ, ಶ್ರಾವಣ ಮಾಸ ಮತ್ತು ಅಧ್ಯಯನ ಬಿಡುವಿನ ಸಮಯದಲ್ಲಿ ಹಿಮಾಲಯ, ಋಷಿಕೇಶ, ಗಂಗಾನದಿ ಶಾಂತ ಪರಿಸರದ ಘಾಟ್‍ಗಳಲ್ಲಿ ತಿಂಗಳುಗಟ್ಟಲೆ ಕಠಿಣ ತಪಸ್ಸು ಆಚರಿಸುತ್ತಿದ್ದರು. ಹೀಗೆ ಒಟ್ಟು 16 ವರ್ಷಗಳ ಕಾಶಿ ನಿವಾಸಿಗಳಾಗಿ, ಉನ್ನತ ವ್ಯಾಸಂಗವನ್ನು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಗಳಿಸಿ ಶಿವಯೋಗಮಂದಿರಕ್ಕೆ ದೊಡ್ಡ ಹೆಸರು, ಗೌರವನ್ನು ತಂದುಕೊಟ್ಟರು.

ಕೆಳದಿ ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ

ಕಾಶಿಯಿಂದ ಮರಳಿ ಶಿವಯೋಗಮಂದಿರಕ್ಕೆ ಬಂದ ನಂತರ, ಶಿವಯೋಗ ಮಂದಿರದಲ್ಲಿ  ವಟು-ಸಾಧಕರಿಗೆ ಪಾಠ ಹೇಳುತ್ತಿದ್ದರು. ಆ ಸಮಯದಲ್ಲಿ ಕೆಳದಿ ರಾಜಗುರು ಹಿರೇಮಠದ ಸ್ವಾಮಿಗಳಾಗಬೇಕು ಎಂಬ ಬೇಡಿಕೆ ಆ ಪ್ರಾಂತ್ಯದ ಭಕ್ತರಿಂದ ಬಂದಿದ್ದನನ್ನು ಒಪ್ಪಿ,  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ಯ ಸಮೀಪದ ಬಂದಗದ್ದೆಯಲ್ಲಿರುವ, ಕೆಳದಿಯ ನಾಯಕರು ಸ್ಥಾಪಿಸಿ, ಗುರುವಿಗರ್ಪಿಸಿದ ಕೆಳದಿ ಸಂಸ್ಥಾನ ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ  ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀಮನೃಪಶಾಲಿವಾಹನ ಶಕ 1891ಕ್ಕೆ ಸೌಮ್ಯನಾಮ ಸಂವತ್ಸರದ ಅಶ್ವಯುಜ ಶುದ್ಧ ವಿಜಯ ದಶಮಿಯ ದಿನಾಂಕ:20-10-1969 ನೇ ಇಸ್ವಿಯ ಸೋಮವಾರದಂದು ಅಧಿಕಾರ ವಹಿಸಿಕೊಂಡು ನ್ಯಾಯಾಲಯದಲ್ಲಿ ಹಲವಾರು ವ್ಯಾಜ್ಯಗಳ ಕಾರಣದಿಂದ ತೀರಾ ಹಿಂದುಳಿದಿದ್ದ ಮಠವನ್ನು ಅಭಿವೃದ್ದಿ ಪಡಿಸಿದರು.

ಮಠದಲ್ಲಿ ಬಡಮಕ್ಕಳಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭ ಮಾಡಿ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದರು, ಶ್ರೀಗಳ ಆಶ್ರಯದಲ್ಲಿ ವಿದ್ಯಾರ್ಜನೆ ಮಾಡಿದವರಲ್ಲಿ ಸರ್ಕಾರದ ವಿವಿಧ ಇಲಾಖೆ, ಹುದ್ದೆಗಳಲ್ಲಿ, ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಿವಯೋಗ ಮಂದಿರ – ಅದರ ಸಂರಕ್ಷಣೆ

ಪೂರ್ಣತ್ವಕಾರ ಡಾ:ಕೆಳದಿ ಶ್ರೀಗಳು ಪರಮಾತ್ಮನ ಸ್ವರೂಪ ಶ್ರೀ ಮ.ನಿ.ಪ್ರ. ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳನ್ನು ತಮ್ಮ ಹೃದಯ ಮಂದಿರದಲ್ಲಿ ಇರಿಸಿಕೊಂಡು, ತಮ್ಮ ಜೀವನ ರಥವನ್ನು ಶಿವನ ಪಥದಲ್ಲಿ ಸಾಗಿಸಿದವರು.  ಶ್ರೀಮದ್ ವೀರಶೈವ ಶಿವಯೋಗಮಂದಿರದ ಪ್ರಚಾರ ಹಾಗೂ ಪ್ರಚುರಕ್ಕಾಗಿ ಹಗಲಿರಳು ಹೋರಾಡಿದವರು.

1976 ರಲ್ಲಿ ಶಿವಯೋಗ ಮಂದಿರದ ಟ್ರಸ್ಟ ಕಮಿಟಿ ಸದಸ್ಯರಾಗಿ, 1984 ರಲ್ಲಿ ಶಾಖಾ ಬಾದಾಮಿ ಮಠದ ಸಂಚಾಲಕರಾಗಿ, ಶಿವಯೋಗಮಂದಿರ ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿ, ಮಠಗಳ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಅದರಲ್ಲೂ ಶಾಖಾ ಬಾದಾಮಿ ಮಠದ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ದುಡಿದ್ದಾರೆ. ಈ ಬಗ್ಗೆ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಮಠ, ಮುಂಡರಗಿ ರವರು ತಮ್ಮ “ಕಾರಣಿಕ ಸುಕುಮಾರ” ಗ್ರಂಥದಲ್ಲಿ “ಶಿವಯೋಗಮಂದಿರ ಶಾಖಾ ಬಾದಾಮಿ ಮಠದ ಏಳಿಗೆಗಾಗಿ ಕೆಳದಿ ಡಾ:ಗುರುಸಿದ್ಧ ದೇವ ಶಿವಾಚಾರ್ಯರು, ಹೆಚ್ಚು ಕಷ್ಟಪಟ್ಟಿದ್ದಾರೆ” ಎಂಬುದನ್ನು ಉಲ್ಲೇಖಿಸಿದ್ದಾರೆ.

ಪರಮಪೂಜ್ಯ ಮೌನ ತಪಸ್ವಿ ಶ್ರೀಮ.ನಿ.ಪ್ರ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ಶಾಂತಲಿಂಗೇಶ್ವರ ವಿರಕ್ತಮಠ, ನಿಂಬಾಳ, ಸಮಾಧಾನ ಧ್ಯಾನ ಕೇಂದ್ರಗಳು, ಕಲ್ಬುಗಿ, ರವರು “ ಡಾ:ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ ಸಂಸ್ಥಾನ ರಾಜಗುರು ಹಿರೇಮಠ ರವರು “ವೀರಶೈವ ತತ್ವ -ಸಿದ್ಧಾಂತದ ಪ್ರತಿಬೋಧಕ, ಪ್ರತಿರೂಪಕರಾಗಿದ್ದರು, ಹಾನಗಲ್ಲ  ಶ್ರೀ ಗುರುಕುಮಾರ ಕೃಪೆಯ ಕರುಣೆಯ ಕಂದರಾದ ಕೆಳದಿ ಪೂಜ್ಯರು ಶಿವಯೋಗ ಮಂದಿರದ ಸರ್ವತೋಮುಖ ಶ್ರೇಯೋಭಿವೃದ್ದಿಗೆ ತಮ್ಮ ಜೀವನವನ್ನೆ ಮುಡಿಪಾಗಿರಿಸಿದ್ದ ಮಹಾತ್ಮರವರು” ಎಂದು ಹಲವಾರು ತಮ್ಮ ಬರವಣಿಗೆಗಳಲ್ಲಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ.

ಏನೆ ಕಾರ್ಯವಗೈದರದು ನಿಜ
ಹಾನಗಲ್ಲ ಕುಮಾರ ಕೃಪೆಯದು
ಮಾನದಿಂದಲಿ ನುಡಿವ ಗುರುಸಿದ್ಧೇಶ ಮನಸಾರೆ
ಪ್ರಾಣವೇ ಶಿವಯೋಗಮಂದಿರ
ಧ್ಯಾನವೇ ಸುಕುಮಾರ ನಾಮವು
ತ್ರಾಣವೇ ವಟುಸಾಧಕರು ನಿಜ ಎಂದಿಹನು ಗುರುಸಿದ್ಧ ||

ಎಂಬ ಕೆಳದಿ ಗುರುಸಿದ್ದೇಶ್ವರ ಪುರಾಣದ ಕವಿ ವಾಣಿಯಂತೆ ಶಿವಯೋಗ ಮಂದಿರ ಮತ್ತು ಅದರ ನೀತಿ, ನಿಯಮಾವಳಿ, ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಕೆಳದಿ ಶ್ರೀಗಳು ತಮ್ಮ ತನು-ಮನ-ಪ್ರಾಣವನ್ನು ಮುಡಿಪಿಟ್ಟು ದುಡಿದ ದಿವ್ಯಾತ್ಮರವರು.

ಶಿವಯೋಗ ಮಂದಿರದಲ್ಲಿ ಪಾಠ-ಪ್ರವಚನ

ಕೆಳದಿ ಶ್ರೀಗಳು ಶಿವಯೋಗ ಮಂದಿರದಲ್ಲಿ ವಟು –ಸಾಧಕ – ಮರಿದೇವರುಗಳಿಗೆ ಧಾರ್ಮಿಕ ವಿಧಿ – ವಿಧಾನಗಳನ್ನು , ಆಧ್ಯಾತ್ಮಿಕ ವಿಚಾರಗಳನ್ನು ಪ್ರಾತ್ಯಕ್ಷತೆಯಿಂದ ತಿಳಿಸಿ ಹೇಳುತ್ತಿದ್ದರು. ವಿವಿಧ ವಿಷಯಗಳಲ್ಲಿ ಪರಿಣಿತರಾದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಪಾಠ ಹೇಳಿಸುತ್ತಿದ್ದರಲ್ಲದೆ ಪ್ರಾಯೋಗಿಕ ತರಬೇತಿಗಳನ್ನು ಸಹ ನೀಡಿಸುತ್ತಿದ್ದರು.

ಮರಿದೇವರಿಗೆ ಆಧ್ಯಾತ್ಮ ಪಾಠ ಹೇಳುವಾಗ ಕೆಳದಿ ಶ್ರೀಗಳು ತೆಂಗಿನಕಾಯಿ ಹಾಗೂ ಬಾಳೆಯ ಹಣ್ಣು ಇವುಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಹೇಳುತ್ತಿದ್ದರು.

ಪರಮಾತ್ಮನು “ಬ್ರಹ್ಮ –ವಿಷ್ಣು-ಮಹೇಶ್ವರ” ಎಂಬ ಮೂರು ಭಾಗಗಳಾಗಿದ್ದಾನೆ. “ಸೃಷ್ಟಿ ಕಾರ್ಯವನ್ನು ಬ್ರಹ್ಮನ ಮೂಲಕ, ರಕ್ಷಣಾ ಕಾರ್ಯವನ್ನು ವಿಷ್ಣುವಿನ ಮೂಲಕ ಹಾಗೂ ಲಯ ಕಾರ್ಯವನ್ನು ಮಹೇಶ್ವರನ ಮೂಲಕ ನೆರವೇರಿಸುತ್ತಾನೆ” ಎಂಬ ವಿಚಾರಗಳನ್ನು ತೆಂಗಿನಕಾಯಿಯಿಂದ ಶ್ರೀಗಳು ಪ್ರಾತ್ಯಕ್ಷಿಕವಾಗಿ ತೋರಿಸುತ್ತಿದ್ದರು. ಸುಲಿದ ತೆಂಗಿನಕಾಯಿಯಲ್ಲಿ ಮೂರು ಪ್ರತ್ಯೇಕ ಭಾಗಗಳು ಕಂಡುಬರುತ್ತವೆ, ದೊಡ್ಡದಾದ ಭಾಗವು ಬ್ರಹ್ಮ ಸೂಚಕ, ಅದರ ಎಡ ಭಾಗವು ವಿಷ್ಣು ಸೂಚಕ ಮತ್ತು ಬಲಭಾಗವು ಮಹೇಶ್ವರ ಸೂಚಕಗಳಾಗಿರುತ್ತವೆ. ಅದರಲ್ಲಿ ಪರಮಾತ್ಮನಿಗೆ ಇರುವಂತೆ ಮೂರು ಕಣ್ಣುಗಳು ಇವೆ. ದೊಡ್ಡ ಭಾಗದಲ್ಲಿರುವ ಕಣ್ಣಿನಿಂದ ಮಾತ್ರ ತೆಂಗಿನಕಾಯಿಯು ಮೊಳಕೆಯೊಡೆದು, ಸಸಿಯಾಗಿ, ಮರವಾಗಿ ಫಲಪ್ರದವಾಗುವುದು.

ಹಾಗೆಯೇ ಬಾಳೆ ಹಣ್ಣಿನಲ್ಲೂ ಸಹ ಮೂರು ಭಾಗಗಳಿವೆ. “ಏಕ ಮೂರ್ತಿ ತ್ರಯೋಭಾಗ” ಎಂಬುದಕ್ಕೆ ಇದು ನಿದರ್ಶನವಾಗಿದೆ ಅಂತಾ ಕೆಳದಿ ಶ್ರೀಗಳು ಪಾಠವನ್ನು ಹೇಳುತ್ತಿದ್ದರು.

ಓಂ ಮತ್ತು  ಇವುಗಳ ಅರ್ಥದ ಮರ್ಮ

ಒಮ್ಮೆ ಪಾಠ ಬೋಧನೆಯ ಸಮಯದಲ್ಲಿ ಓಂ ಮತ್ತು  ಇವುಗಳ ಅರ್ಥದ ಮರ್ಮ ತಿಳಿಸಿ, ಓಂ = ಅ+ಉ+ಮ್ ಇದು ಮೂರಕ್ಷರಗಳ ಸಂಯೋಜನೆಯಿಂದ ಆಗಿರುವುದು. ಬ್ರಹ್ಮ – ವಿಷ್ಣು- ಮಹೇಶ್ವರರ ಸಂಕೇತವೇ ಓಂ ಆಗಿರುತ್ತದೆ. ಆದರೆ  ಇದು ಅಕ್ಷರ ಅಲ್ಲ. ಅದೊಂದು ಧರ್ಮದ ಸಂಕೇತ, ಅದು ಸರ್ವ ಧರ್ಮವನ್ನು ಪ್ರತಿನಿಧಿಸುತ್ತದೆ. ಹೇಗೆಂದರೆ  ನ್ನು ಬಿಚ್ಚಿ ಇಟ್ಟಾಗ ತ್ರಿಶೂಲ  ಸಂಕೇತವು ಪರಮಾತ್ಮನ ಕೈಯಲ್ಲಿರುವುದು ಇದು ವೀರಶೈವರ ಧರ್ಮದ ದ್ಯೂತಕವಾಗಿ. ಇದು ಇಸ್ಲಾಂ ಧರ್ಮೀಯರ ಸಂಕೇತವಾದ ಅರ್ಧ ಚಂದ್ರಾಕೃತಿಯನ್ನು ತೋರಿಸುತ್ತದೆ. ಕ್ರೈಸ್ತ್ ಧರ್ಮೀಯರ ಕ್ರಾಸ್ ದಂತೆಯೂ ಇದು ಇರುತ್ತದೆ. ಹೀಗಾಗಿ ಇದು ಸರ್ವಧರ್ಮೀಯರ ಸಂಕೇತವಾಗಿದೆ ವಿನಃ ಅದು ಅಕ್ಷರವಲ್ಲ. ಅಂತಾ ಸ್ಪಷ್ಟೀಕರಿಸಿದರು. ಅಧಿಕ ಚಿನ್ಹೆ, ಭಾಗಾಕಾರ ಚಿನ್ಹೆ, ಗುಣಾಕಾರ ಚಿನ್ಹೆ,  ಬರಾಬರಿ ಚಿನ್ಹೆ, ಒಟ್ಟಿನಲ್ಲಿ  ಕಾರವು ಚಿನ್ಹೆಯೆ ಆಗಿದೆ ; ಅಕ್ಷರ ಅಲ್ಲ. ಹೀಗೆ ಕೆಳದಿ ಶ್ರೀಗಳವರ ಜ್ಞಾನ ಆಳವಾಗಿ, ಅಪಾರವಾಗಿ, ಅಪರಿಮಿತವಾಗಿ ಹೊಂದಿದ್ದ ಪುಣ್ಯಾತ್ಮ, ಧರ್ಮಾತ್ಮ, ದಿವ್ಯಾತ್ಮ, ಮಹಾತ್ಮ ಅಷ್ಟೇ ಏಕೆ ಸಾಕ್ಷಾತ್ ಪರಮಾತ್ಮರೆ ಆಗಿದ್ದಾರೆ.

ವೀರಶೈವ ಧರ್ಮ

ವೀರಶೈವ ಧರ್ಮ ಭಾವಲಿಂಗದವರೆಗೆ ವಿಸ್ತಾರವಾಗಿರುತ್ತದೆ. ನವ ಲಿಂಗಗಳು ಹಂತ ಹಂತವಾಗಿ ಹೀಗೆ ವಿಸ್ತøತಗೊಳ್ಳುತತವೆ. [1] ಆಚಾರ ಲಿಂಗ [2] ಗುರುಲಿಂಗ [3] ಶಿವಲಿಂಗ [4] ಜಂಗಲಿಂಗ [5] ಪ್ರಸಾದ ಲಿಂಗ [6] ಮಹಾಲಿಂಗ [7] ಇಷ್ಟಲಿಂಗ [8] ಪ್ರಾಣಲಿಂಗ [9] ಭಾವಲಿಂಗ ಹೀಗೆ ಅಂಗ ಲಿಂಗ ಸ್ವರೂಪವಾಗಿ ಲಿಂಗಾಂಗ ಸಾಮರಸ್ಯದ ರಹಸ್ಯದ ಗುಟ್ಟನ್ನು ಇಡಿ ಇದ್ದದ್ದನ್ನು ಬಿಡಿಯಾಗಿ ತಿಳಿಸಿದರು. ಭಾವದಂತೆ ಬ್ರಹ್ಮನಿದ್ದಾನೆ ; ಭಾವದಲ್ಲಿ ಭಗವಂತನಿದ್ದಾನೆ, ಅಂತೆಯೇ ಶಿವಯೋಗಿಗಳು ಅವರವರ ಭಾವಕ್ಕೆ, ಅವರವರ ತೆರನಾಗಿ ಇರುತಿಹರು ಶಿವಯೋಗಿಗಳು ಎಂದು ವರ್ಣಿಸಿದ್ದಾರೆ ಹೀಗೆ ಸರಳವಾಗಿ  ತಿಳಿಸಿ ಹೇಳುತ್ತಿದ್ದರು.

ವೀರಶೈವ ಧರ್ಮದ ಲಾಂಛನದಲ್ಲಿ ಆರು ಸ್ಥಲಗಳಿವೆ. ಅದರ ಮಂತ್ರ ಓಂ ನಮಃ ಶಿವಾಯ ಎಂಬ ಷಡಕ್ಷರ ಮಂತ್ರವಾಗಿರುವುದು. ಈ ಆರು ಅಕ್ಷರಗಳು ಧರ್ಮಲಾಂಛನದಲ್ಲಿ ನಮೂದಿತವಾಗಿರುತ್ತವೆ. ಇದು ದೀಕ್ಷಾ ಮಂತ್ರವೂ ಹೌದು. 07 ಕೋಟಿ ಮಂತ್ರಗಳಲ್ಲಿ ಅತ್ಯಂತ ಶ್ರೇಷ್ಠ “ಮಹಾ” ಮಂತ್ರ ಇದಾಗಿದೆ. ಇದು ಪರಮಾತ್ಮನ ನಾಮಸ್ಮರಣೆಯಾಗಿರುವುದು. “ನೀನ್ಯಾಕೋ ? ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕು” ಓಂ ನಮಃ ಶಿವಾಯ ಅಂತಾ ನಾಮ ಬಲದಿಂದ ಬರಡು ಜೀವನದಲ್ಲಿ ಚೈತನ್ಯ ತುಂಬುವ ಚೇತನ ಮಂತ್ರ ಇದಾಗಿದೆ ಎಂದು ಹೇಳುತ್ತಿದ್ದರು.

ವೀರಶೈವ ಎಂಬ ಮಾರ್ಮಿಕವಾಗಿ ಕೆಳದಿ ಶ್ರೀಗಳು ಅರ್ಥೈಸಿದ್ದಾರೆ. ವಿ =ವಿದ್ಯೆ, ರ =ರಮಿಸು,    ಶೈವ =ಶಿವನ ಆರಾಧಕನು, ಯಾವನು ಶಿವನ ಆರಾಧಕನಾಗಿದ್ದು ವಿದ್ಯೆಯಿಂದ ರಮಿಸುವನೋ ಅವನೇ ವಿರಶೈವ ಎಂದಿದ್ದಾರೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೀರ =ಶೂರ + ಧೀರ ಅಂತಾ ಅರ್ಥೈಸಿದ್ದಾರೆ. “ಶೂರ” ಇದು ದೇಹ ಧಾಢ್ರ್ಯಡ ಸೂಚಕವಾಗಿದರೆ “ಧೀರ” ಇದು ಮನೋ ಬಲವನ್ನು ತಿಳಿಸುವುದು. ದೇಹಧಾಢ್ರ್ಯ ಹಾಗೂ ಮನೋಬಲ ಇವೆರಡರ ಸಮ್ಮಿಳನದ ದ್ಯೋತಕವಾಗಿರುವುದೆ “ವೀರಶೈವ” ವಾಗಿದೆ. ಎಂದು ನೈಜ ಧಾರ್ಮಿಕತೆಯನ್ನು ತಿಳಿಸಿ ಹೇಳಿದರು. “ಧೈರ್ಯಂ ಸರ್ವತ್ರ ಸಾಧನಂ” ಇದು ನಿಜ ಧರ್ಮದ ಸಾರವಾಗಿದೆ. “ಶರೀರಂ ಆದ್ಯಂ ಖಲು ಧರ್ಮ ಸಾಧನಂ” ಎಂಬ ವೇದ ವಾಕ್ಯ ನಿಜವೆಂದು ಸಾರುತ್ತಿದ್ದಾರೆ ಕೆಳದಿ ಶ್ರೀಗಳು.

ಚೀನಿಯರ ವಿಚಾರಧಾರೆಯಂತೆ ಅಂದರೆ “ಒಂದು ವರ್ಷದ ಫಲ ಬೇಕಾದರೆ ಧಾನ್ಯದ ಬೀಜ ಬಿತ್ತಬೇಕು. ಹತ್ತು ವರ್ಷದ ಫಲ ಬೇಕಾದರೆ ಹಣ್ಣಿನ ಗಿಡದ ಬೀಜ ಬಿತ್ತಬೇಕು,, ನೂರು ವರ್ಷದ ಫಲ ಬೇಕಾದರೆ ವಿದ್ಯೆಯ ಬೀಜ ಬಿತ್ತಬೇಕು” ಎಂಬ ಭಾವವನ್ನು ತಳೆದು ಕೆಳದಿ ಶ್ರೀಗಳು ಶಿವಯೋಗ ಮಂದಿರದ ವಟು ಸಾಧಕರಿಗೆ ವಿದ್ಯೆಯೆಂಬ ಬೀಜವನ್ನು ಧಾರೆಯರೆದಿದ್ದಾರೆ.

ಅದೇ ರೀತಿ ಶಿವಯೋಗ ಮಂದಿರದಲ್ಲಿ ಅಶಿಸ್ತು, ಕುಮಾರ ಸ್ವಾಮಿಗಳು ಹಾಕಿದ ನೇಮವನ್ನು ಭಂಗಮಾಡುವಂತಿರಲಿಲ್ಲ. ಒಮ್ಮೆ ಶಿವಯೋಗಮಂದಿರದಲ್ಲಿ ಒಬ್ಬ ಮರಿದೇವರ ಪೂಜಾ ಕೊಠಡಿಯಲ್ಲಿ ಕೆಳದಿ ಶ್ರೀಗಳು ಮೆಣಸಿನಕಾಯಿಯನ್ನು ಕಂಡರು. ಕೂಡಲೇ ಶ್ರೀ ಹಾನಗಲ್ ಕುಮಾರ ಸ್ವಾಮಿಗಳು ಹಾಕಿದ ನೇಮ ಭಂಗವಾಯಿತು ಎಂದು ತಿಳಿದು ಆ ಮರಿದೇವರಿಗೆ ಶಿಕ್ಷೆ ನೀಡಿ, ಮರಿದೇವರನ್ನಾಗಿಸಲು ಶ್ರೀ ಬನಶಂಕರಿ ದೇವಸ್ಥಾನದವರೆಗೆ ಒಂದು ಕಲ್ಲನ್ನು ಆ ಮರಿದೇವರ ತಲೆಯ ಮೇಲೆ ಹೊರಿಸಿ, ತಾವು ಅವರ ಹಿಂದೆ ನಡೆದುಕೊಂಡು ಹೋಗಿ ಬಂದರು. ಇದು ಕೆಳದಿ ಶ್ರೀಗಳು ಶಿವಯೋಗಮಂದಿರದ ನಿಯಮಾವಳಿಗಳನ್ನು ಎಷ್ಟೊಂದು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು, ಹಾಗೂ “ಹಾನುಗಲ್ಲ ಕುಮಾರ ಮಹಾಸ್ವಾಮಿಗಳವರ ಮೇಲೆ ಎಷ್ಟೊಂದು ಪ್ರೀತಿ ಗೌರವ ವಿಶ್ವಾಸ ಇಟ್ಟಿದ್ದರು. ಎಂಬುದು ಎದ್ದು ಕಾಣುತ್ತದೆ.

“ಜೀವನ ಸುಗಮವಾಗಿ, ಸುಂದರವಾಗಿ ಸಾಗಬೇಕಾದರೆ ದಿನ ನಿತ್ಯದ ಖರ್ಚನ್ನು ಅತ್ಯವಶ್ಯಕ,   ಅವಶ್ಯಕ ಮತ್ತು ಅನಾವಶ್ಯಕ “ ಇವುಗಳನ್ನು ಕ್ರಮವಾಗಿ ಅರಿತು ಮಾಡಬೇಕು. “ಹೊಸ ದುಡ್ಡು ಬರುವವರೆಗೆ, ಹಳೆ ದುಡ್ಡನ್ನು ಕಾಪಾಡಿಕೊಂಡು ಬರಬೇಕು” ಎಂಬ ಮಹತ್ವದ ಜ್ಞಾನ ಪೂಜ್ಯ ಕೆಳದಿ ಶ್ರೀಗಳು ನೀಡುತ್ತಿದ್ದರು, ಇದನ್ನು ಅನುಸರಿಸಿದ ಬಹಳ ಜನರಿಗೆ ಆರ್ಥಿಕ ತೊಂದರೆಗಳು ಇಲ್ಲದಂತಾದವು.

ಬೇಸಿಗೆಯಲ್ಲಿ ಪ್ರವಾಸಕ್ಕೆ ವಟು-ಸಾಧಕರು, ಮರಿದೇವರುಗಳನ್ನು ಮಲೆನಾಡು ಕೆಳದಿಗೆ ಕರೆದಕೊಂಡು ಹೋಗುತ್ತಿದ್ದರು. ಹದಿನೈದು ದಿವಸ ತಿಂಗಳಾನುಗಟ್ಟಲೆ ಕೆಳದಿ ಮಠದಲ್ಲಿಟ್ಟುಕೊಂಡು ಸಂಸ್ಕøತ ಪಾಠ ಪ್ರವಚನಗಳನ್ನು ನೀಡುತ್ತಿದ್ದರು.  ಸಾಗರದ ರಾಜಗುರು ಕಲ್ಯಾಣ ಕೇಂದ್ರದ ಉದ್ಘಾಟನೆ ಸಮಯದಲ್ಲಿ 36 ಮರಿದೇವರ ಮಂಟಪ ಪೂಜೆ ಮಾಡಿ, ಅವರಿಗೆ ಬೆಳ್ಳಿಯ ಪೂಜಾ ಪರಿಕರಗಳನ್ನು ನೀಡಿದರು. ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯ ದಿನದಂದು ಅಮವಾಸ್ಯೆ ಪಾಢ್ಯದ ದಿನದಂದು ಬಾದಾಮಿ ಶಾಖಾ ಮಠದಿಂದ ಮಹಾಕೂಟ ಮಾರ್ಗವಾಗಿ ಶಿವಯೋಗ ಮಂದಿರದವೆಗೆ ಪಾದಯಾತ್ರೆ ಮಾಡಿ, ಮರಿದೇವರುಗಳ ಪಾದಪೂಜೆ ಮಾಡುವ ಮೂಲಕ ಮುಕ್ತಾಯ ಮಾಡುತ್ತಿದ್ದರು. “ಶಿವಯೋಗ ಮಂದಿರದ ವಟು-ಸಾಧಕ-ಮರಿದೇವರುಗಳನ್ನು ಹಾನಗಲ್ ಕುಮಾರೇಶನ ಪ್ರತಿರೂಪ” ಎಂದೇ ಭಾವಿಸಿ ನಡೆಯುತ್ತಿದ್ದರು.

ಹೀಗೆ ವಟು-ಸಾಧಕರಿಗೆ ಶಿವಪೂಜೆ, ಶಿವಧ್ಯಾನ, ಜ್ಞಾನ, ವಿಜ್ಞಾನ, ಆಧ್ಯಾತ್ಮ, ಶಿವಯೋಗ, ಪಾಠ – ಬೋಧನೆ ಮಾಡುತ್ತಾ, ಅವರ ಬಾಳಿಗೆ ಬೆಳಕಾದವರು. ಶಿವಯೋಗ ಮಂದಿರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಇವರ ಗರಡಿಯಲ್ಲಿ ವಿದ್ಯಾರ್ಜನೆ ಮಾಡಿದ ವಟು-ಸಾಧಕ-ಮರಿದೇವರುಗಳು ಇಂದು ದೊಡ್ಡ ದೊಡ್ಡ ಮಠಗಳ ಮಠಾಧಿಪತಿಗಳಾಗಿ, ಪೀಠಾಧಿಪತಿಗಳಾಗಿ, ಜಗದ್ಗುರುಗಳಾಗಿ ಕಾಯಕ-ದಾಸೋಹದ ಸೇವೆಯನ್ನು ನಾಡಿಗೆ ನೀಡುತ್ತಿದ್ದಾರೆ.

ಶಿವಯೋಗ ಮಂದಿರದ ವಟು-ಸಾಧಕರಿಗೆ ಎಲ್ಲವೂ ಆಗಿದ್ದ  ಪೂರ್ಣತ್ವಕಾರ ಡಾ||ಕೆಳದಿ ಶ್ರೀಗಳನ್ನು ಕುರಿತು ಪೂಜ್ಯ ಮ.ಘ.ಚ. ಪ್ರಭುಕುಮಾರು ಶಿವಾಚಾರ್ಯರು ತ್ರಿಪದಿ ಛಂದಸ್ಸಿನಲ್ಲಿ ಬರೆದ “ಅರಳಿದ ಅರಿವು” ತ್ರಿಪದಿಯಲ್ಲಿ ಬರೆದ ಈ ತ್ರಿಪದಿಯನ್ನು ಸ್ಮರಿಸಬಹುದಾಗಿದೆ.

ಹಡೆದ ತಾಯಿಯ ಮಮತೆ | ಪಡೆದೆ ಶಿವಮಂದಿರದಿ
ಒಡೆಯ ಗುರುಸಿದ್ಧ ಕೆಳದೀಶ ಗುರುವೆನಗೆ
ಬಿಡದೆ ಕೈಹಿಡಿದ ಜಗದೀಶ  ||968||

ಸಮಾಜ ಸೇವೆ ಮತ್ತು ಧಾರ್ಮಿಕ ಜನ ಜಾಗೃತಿ

“ಗುರುವಿನ ವಿರಕ್ತಿ –ವಿರಕ್ತಿಯಲ್ಲಿ ಗುರುತ್ವ” ಇರಬೇಕು .ನಾ ಹೆಚ್ಚು ನಾ ಹೆಚ್ಚು ಎಂಬ ಬೇದ ಭಾವನೆ ಇರಬಾರದು . ಗುರು-ವಿರಕ್ತರೊಂದೆ ಎಂಬ ಸಮತೆ ಸಾರುವ ಉದ್ದೇಶದಿಂದ ದಿನಾಂಕ:27.11.1978 ರಿಂದ 07.12.1978 ರವರೆಗೆ ಹುಬ್ಬಳ್ಳಿಯಿಂದ ಶಿವಯೋಗಮಂದಿರದವರೆಗೆ 11 ದಿನಗಳ ಪಾದಯಾತ್ರೆಯನ್ನು ಹುಬ್ಬಳ್ಳಿ ಜಗದ್ಗುರುಗಳು ಸೇರಿದಂತೆ ಅನೇಕ ಸ್ವಾಮೀಜಿಗಳೊಂದಿಗೆ ಕೈಗೊಂಡು, ಗುರು-ವಿರಕ್ತರು ಒಂದೆ ಎಂಬ ಹಾನಗಲ್ ಕುಮಾರೇಶನ ಸಂದೇಶವನ್ನು ಸಾರಿದರು. ಪಾದಯಾತ್ರೆಯುದ್ದಕ್ಕೂ ಸುಮಾರು 05 ಸಹಸ್ರಕ್ಕಿಂತಲೂ ಅಧಿಕ ಜನರಿಗೆ ಲಿಂಗಧಾರಣೆ ಮಾಡಿ, ಧರ್ಮ ಜಾಗೃತಿ ಮೂಡಿಸಿದರು.

1979 ರಲ್ಲಿ ತಮಿಳುನಾಡಿನಲ್ಲಿ ಧರ್ಮ ಪ್ರಚಾರ ಕೈಗೊಂಡು ಅಲ್ಲಿಯೂ ಸಹಸ್ರಾರು ಜನರಿಗೆ ಲಿಂಗಧಾರಣೆ ಮಾಡಿದ್ದಲ್ಲದೆ. ಮಲೇಷಿಯಾ, ಸಿಂಗಾಪೂರ, ಲಂಕಾದಿಂದ ಬಂದವರಿಗೂ ಕೆಳದಿ ಶ್ರೀಗಳು ಶಾಸ್ತ್ರೋಕ್ತವಾಗಿ ಲಿಂಗಧಾರಣೆ ಮಾಡಿದರು. ಹೀಗೆ ತಮಿಳು ನಾಡು ಸೇರಿದಂತೆ ಹಿಂದೂಸ್ತಾನದ ಹಲವಾರು ರಾಜ್ಯಗಳಲ್ಲಿ ಸಂಚರಿಸಿ, ಲಕ್ಷಾಂತರ ಭಕ್ತರಿಗೆ ಲಿಂಗಧಾರಣೆ, ಶಿವದೀಕ್ಷೆ, ರುದ್ರಾಕ್ಷಿ ಧಾರಣ ಮಾಡಿ ಅಜ್ಞಾನ ಕಳೆದು ಜಾಗೃತಗೊಳಿಸಿದರು.

ವೀರಶೈವರು ಇಷ್ಟ ಲಿಂಗ ಧಾರಣೆ ಮಾಡಿರಬೇಕು ಎಂದು ತಿಳಿಸಿ ಲಿಂಗಧಾರಣೆ ಮಾಡುತ್ತಿದ್ದರು. “ಪೂರ್ಣತ್ವ” ಗ್ರಂಥದ  ಪೂರ್ಣತ್ವ -ಭಾವಾಭಿವ್ಯಕ್ತಿ ಯ ಪುಟ -156 ರಲ್ಲಿ ವೀರಶೈವನ ಇಷ್ಟಲಿಂಗಧಾರಣೆ ಮಹತ್ವವನ್ನು ಈ ಕೆಳಗಿನಂತೆ ತಿಳಿಸಿದ್ದಾರೆ.

ಇಷ್ಟಾರ್ಥ ಸಿದ್ಧಿಸಿತು;
ಇಷ್ಟಕ್ಕೆ ಸಾಕೆಂದು
ಇಷ್ಟ ಲಿಂಗವ ಬಿಡುವ ವೀರಶೈವ ; ಅರೆ ವೀರಶೈವ |
ಅಷ್ಟ ಮಾಸದ ಗರ್ಭ
ಸೃಷ್ಟಿಯಿಂ ಲಯತನಕ
ಇಷ್ಟಲಿಂಗವ ಬಿಡದ ವೀರಶೈವ ; ವರ ವೀರಶೈವ|

ಪ್ರತಿ ವರ್ಷ ಕೆಳದಿ ರಾಜಗುರು ಹಿರೇಮಠದಲ್ಲಿ ವಿಜಯದಶಮಿ ದಿನದಂದು ಸಹಸ್ರ ಸಹಸ್ರ ಜನರಿಗೆ ಲಿಂಗದಾರಣೆ, ಧೀಕ್ಷೆ, ಅಯ್ಯಾಚಾರ,ಗಳನ್ನು ಜರುಗಿಸಿ ಧರ್ಮ ಜಾಗೃತಿ ಮಾಡಿದ್ದಾರೆ.

ಕೆಳದಿ ಅಜ್ಜನವರು ಸಮಾಜ ಮುಖಿಯಾಗಿ, 01.06.1989 ರಲ್ಲಿ ಸಾಗರ ಪಟ್ಟಣದಲ್ಲಿ ರಾಜಗುರು ವಿದ್ಯಾವರ್ಧಕ ಸಂಘದ ಸ್ಥಾಪನೆ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿ ನಿಂತ ಪೂಜ್ಯರು ಸಾಗರ ಪಟ್ಟಣದಲ್ಲಿ ರಾಜಗುರು ಕಲ್ಯಾಣ ಕೇಂದ್ರ ಸ್ಥಾಪನೆ [1993],  ಮತ್ತು ಶಿವಯೋಗಮಂದಿರದ ಬಳಿ ಮಂಗಳೂರು ಗ್ರಾಮದ ಸೇತುವೆ ಬಸವೇಶ್ವರನ ಸನ್ನಿದಾನದಲ್ಲಿ ಸೇತುವೆ ಬಸವೇಶ್ವರ ಕಲ್ಯಾಣ ಮಂಟಪ ನಿರ್ಮಾಣ [1995], ಮಾಡುವ ಮೂಲಕ ಉಚಿತ ಸಾಮೂಹಿಕ ವಿವಾಹಗಳಿಗೆ ಚಾಲನೆ ನೀಡಿ, ಬಡವರಿಗೆ ದೀನರಿಗೆ ಆಸರೆಯಾದರು.

 ಶಿವಯೋಗ ಮಂದಿರ ಸ್ಥಾಪನೆಯಾಗಿ ಶತಮಾನವಾಗುತ್ತಾ ಬಂದರೂ ಪೂರ್ವ ದಿಕ್ಕಿನ ದಾರಿ ಇಲ್ಲವೆಂದು ಕೆಳದಿ ಪೂಜ್ಯರು ತಮ್ಮ ಭಕ್ತರ ಸಹಾಯ ಸಹಕಾರದಿಂದ ಲಕ್ಷಾಂತರ ರೂಪಾಯಿ ಸ್ವಂತ ಖರ್ಚಿನಲ್ಲಿ ಮಲಪ್ರಭಾ ನದಿಗೆ ಶಿವಯೋಗ ಮಂದಿರದ ಬಳಿ ಸೇತುವೆ ನಿರ್ಮಾಣ [1994-2007] ಮಾಡಿದರು. ಇವರ ಈ ಕಾರ್ಯವನ್ನು ಮೆಚ್ಚಿದ ಬಾಗಲಕೋಟ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಮದನಗೋಪಾಲ, ಐ.ಎ.ಎಸ್ ರವರು 50 ಸಾವಿರ ರೂಪಾಯಿ ಸರ್ಕಾರದ ಹಣವನ್ನು ಮಂಜೂರಿಸಿದ್ದರು. ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ಕೆಳದಿ ಪೂಜ್ಯರು ಸ್ವತ: ತಾವೆ ಕಲ್ಲು, ಸಿಮೆಂಟು, ಕರಣಿ, ಹಿಡಿದು ಸೇತುವೆ ಕಟ್ಟಿದ್ದು, ಕೆಳದಿ ಶ್ರೀಗಳ ಹಠಯೋಗದ ಘನ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದೆ, ಇದು ಹಠಯೋಗಿಗಳು, ತಪಸ್ವಿಗಳಿಂದ ಮಾತ್ರ ಸಾಧ್ಯ. ಇದರಿಂದ ಸುತ್ತ ಮುತ್ತಲಿನ ಗ್ರಾಮಗಳ ಜನರ ಕಷ್ಟವನ್ನು ಪರಿಹರಿಸಿದರು. ಸಮಾಜದಿಂದ ಪಡದಿದ್ದನ್ನು ಸಮಾಜಕ್ಕೆ ನೀಡಿದ ದಿವ್ಯಾತ್ಮ ಕೆಳದಿ ಪೂಜ್ಯರು.

ಸಾಹಿತ್ಯ

ಪೂಜ್ಯ ಪೂರ್ಣತ್ವಕಾರ ಡಾ: ಕೆಳದಿ ಶ್ರೀಗಳು ಕನ್ನಡ, ಸಂಸ್ಕತ, ಹಿಂದಿ, ಮರಾಠಿ, ಇಂಗ್ಲೀಷ್, ಉರ್ದು, ಬಂಗಾಳಿ ಬಾಷೆಗಳಲ್ಲಿ ವ್ಯಾಕರಣ ಬದ್ದ ಪ್ರಭುತ್ವ ಸಾಧಿಸಿದ್ದರು. ಕೆಳದಿ ಗುರುಗಳ ಪಾಂಡಿತ್ಯ ಅಪರಾವಾದದ್ದು, “ಶಬ್ದಗಳ ಡಾಕ್ಟರ್”, “ಪುರುಷ ಸರಸ್ವತಿ” ಎಂದೇ ಖ್ಯಾತರಾದವರು.  ಇವರ ಕಾವ್ಯನಾಮ “ಗುರುಮೂರ್ತಿ” ಮಹಾನ್ ಪಂಡಿತರಾಗಿದ್ದ ಗುರುಗಳು “ಶಿವ-ಶಕ್ತಿ” “ಹಾನಗಲ್ ಗುರುಕುಮಾರ” “ರಾಮಕೃಷ್ಣ ಪರಮಹಂಸ” “ವಿವೇಕಾನಂದ” ಮುಂತಾದ ಸಂಸ್ಕøತ ಕೃತಿಗಳನ್ನು ಹಾಗೂ ಕ್ನನಡದಲ್ಲಿ “ಪೂಣತ್ವ” , ಲಿಂಗೈಕ್ಯ ಜಗದ್ಗುರು ಗಂಗಾಧರ ಸ್ವಾಮಿಗಳು“ ಎಂದು ಕೃತಿಯನ್ನು ಬರೆದಿದ್ದಾರೆ. “ಶ್ರೀ ಗುರುಸಿದ್ಧೇಶ್ವರ ಭಕ್ತಿಗೀತೆಗಳು”         “ಶ್ರೀ ಕರಡೀಶ ಚರಿತಾಮೃತ ಚಂಪೂ ಪ್ರಬಂಧ” “ಕುಮಾರವಾಣಿ” ಇವರು ಸಂಪಾದಿತ ಕೃತಿಗಳು.

ಪೂರ್ಣತ್ವಕಾರ ಡಾ:ಕೆಳದಿ ಶ್ರೀಗಳ  ಸಾಹಿತ್ಯದ ಅಮೂಲ್ಯ ಮತ್ತು , ಶ್ರೇಷ್ಟವಾದ ಕೃತಿ ಎಂದರೆ, “ಪೂರ್ಣತ್ವ” ಇದು ವರಕವಿ ದ.ರಾ. ಬೇಂದ್ರೆಯವರಿಂದ ಪ್ರಶಂಸಿಲ್ಪಟ್ಟಿದೆ. ಅಲ್ಲದೆ, ವರಕವಿ ದ.ರಾ ಬೇಂದ್ರೆಯವರು ಈ ಪೂರ್ಣತ್ವ ಕೃತಿಯ “ಶಿವ ಸಂಕಲ್ಪ” ದಲ್ಲಿ  “ಹಾನಗಲ್ ಕುಮಾರಸ್ವಾಮಿಗಳ ಅಪೂರ್ವ ಪೂರ್ಣ ಯೋಗದ ಮರಿ ಇದು, ಪೂರ್ಣಾತ್ ಪೂರ್ಣಮ್ ಉದಚ್ಯತೇ “ ಎಂದು ಕೆಳದಿ ಅಜ್ಜನವರ ಬಗ್ಗೆ  ಮನಮೆಚ್ಚಿ ನುಡಿದಿದ್ದಾರೆ.

ಓಂ ಪೂರ್ಣ; ಅದು ಪೂರ್ಣ;
ಇದು ಪೂರ್ಣವಿದೆ ಮತ್ತು
ಪೂರ್ಣದಿಂದಲೆ ಪೂರ್ಣ;
ಅದೆ ಸತ್ತು ; ಅದೆ ಚಿತ್ತು;
ಪೂರ್ಣದಲಿ ಪೂರ್ಣ ಕಳೆ-
ದರು, ಬೆರೆಸುವದು ಮತ್ತು.
ಬೆರೆಸು; ಪೂರ್ಣ ಬೆರೆಸದೆ
ಬಿಡಬೇಡ ಬೇಸತ್ತು.   [ಪೂರ್ಣತ್ವ ಪುಟ-36]

‘ತಿರುಗದ್ದೆ ತಿರುಗುವುದೇ?’
ಇತಿ ನಿಲ್ಲದಿರು ಅತ್ತು,
“ಅ-ಕ್ಷ” ಎಂಭೈವತ್ತು
ಅಕ್ಷರದ ನಿಜ ಸುತ್ತು
ಜಗ ತುಂಬ ಬೆಳೆದಿಹುದು
ವಿದ್ಯೆ ನಾಮದ ಸುತ್ತು
ಬೆಳೆಸು; ಪೂರ್ಣ ಬೆಳಸದೆ
ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-3 ]

ಸ್ವಯಮೇವ ಜೀಕಾಲಿ
ಜೀಕಲಿಕೆ ಮನ ತೆತ್ತು,
ಅದರಲ್ಲಿ ನೀಟಾಗಿ
ಕುಳಿತೊ, ನಿಂತೋ ಮತ್ತು
ಎರಡು ಕೈಯಲಿ ಎರಡು
ಹಗ್ಗ ಹಿಡಿ ; ಜೀಕೆತ್ತು.
ಜೀಕು; ಪೂರ್ಣ ಜೀಕದೆ
ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-7]

ಗಡಿಯಾರ ಮುಳ್ಳುಗಳು
ಅಷ್ಟೆ ಅಂಕೆಯ ಸುತ್ತು
ಕೀಲೆ ಇರೆ ತಿರುಗುವು-
ದಿನ-ದಿನಕು ಕೆಲ ಸುತ್ತು.
ಸುತ್ತದಿರೆ ಸರಿಯಾಗಿ
ತಿಳಿಸಲಾರವು ಹೊತ್ತು.
ತಿಳಿಸು; ಪೂರ್ಣ ತಿಳಿಸದೆ
ಬಿಡಬೇಡ ಬೇಸತ್ತು. [ಪೂರ್ಣತ್ವ ಪುಟ-4]

ಪೂರ್ಣತ್ವ ಗ್ರಂಥವು ವೀರಶೈವ ಧರ್ಮಧ 36 ತತ್ವಗಳ ವರ್ಣನೆ ಹೊಂದಿದ್ದು, ಬೆರೆಸು, ಬೆಳೆಸು, ಜೀಕು, ತಿಳಿಸು ಹೀಗೆ ಕ್ರಿಯಾ ಸಂಯೋಜನೆ ಮೆರಗು ನೀಡಿ ಆಲಸ್ಯದಿಂದ, ಬೇಸರಿಂದ ಪರಮೋನ್ನತ ಸಾಧನೆಯನ್ನು ಮರೆಯಲಾರದಂತೆ ಸದಾ ಸದ್ ವೃತ್ತಿಯನ್ನು ನೆನಪು ಮಾಡಿಕೊಡುತ್ತಾ “ಪೂರ್ಣ ಮುಗಿಸದೇ ಬಿಡಬೇಡ ಬೇಸತ್ತು” ಎಂದು ಸೂಚಿಸುವ ಪೂರ್ಣತ್ವದ ಸೂತ್ರಗಳು ಸದಾ ಸದ್‍ವೃತ್ತಿ ಸಾಧನೆಯನ್ನು ಸಾಧಿಸುತ್ತಿರಬೇಕೆಂದು ಹೇಳುತ್ತವೆ. ಕೆಳದಿ ಅಜ್ಜನವರು “ಪೂರ್ಣತ್ವ” ಎಂಬ ಶ್ರೇಷ್ಠ ಕೃತಿಯನ್ನು ಬರೆದಿದ್ದರಿಂದಲೂ ಹಾಗೂ ನುಡಿದಂತೆ ನಡೆದು, ನಡೆದಂತೆ ನುಡಿದು, ಹಿಡಿದ ಕಾರ್ಯವನ್ನು ಪೂರ್ಣಗೊಳ್ಳುವವರೆಗೆ ಬಿಡದ ಛಲವಂತರಾಗಿದ್ದರು, ಹಾಗಾಗಿ ಅವರು “ಪೂರ್ಣತ್ವಕಾರ” ರಾಗಿದ್ದಾರೆ. ಹಠಯೋಗಿಯಾಗಿದ್ದಾರೆ.

 “ಇಂಗ್ಲೀಷ್ “SಔUಐ’ =ಆತ್ಮ ಗಟ್ಟಿ ಇದ್ದರೆ, ಕನ್ನಡದ ಸೋಲ್ (ಸೋಲು) =ಅಪಜಯ ಎಂದೂ ಆಗುವುದಿಲ್ಲ” ಎಂದು ಕೆಳದಿ ಅಜ್ಜನವರು ಯಾವಾಗಲೂ ಹೇಳುತ್ತಿದ್ದರು.

ಬಹುಭಾಷಾ ಪಂಡಿತರೂ, ಶ್ರೇಷ್ಠ ಬರಹಗಾರರೂ, ವಾಗ್ಮಿಗಳೂ ಆಗಿದ್ದ ಕೆಳದಿ ಗುರುಗಳು ಅವರು ಬರೆದಿದ್ದನ್ನು ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಿದ್ದರೆ ಇಂದು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿರುತ್ತಿದ್ದರು. ಅದನ್ನು ಮಾಡಲಿಲ್ಲವೆಂಬ ಕೊರಗು ಆಪ್ತ ಭಕ್ತರಲ್ಲಿದೆ. ಗುರುಗಳು ಈ ರೀತಿಯ ಬರವಣಿಗೆಗಳನ್ನು ಸಂಗ್ರಹಿಸಿ, ಪ್ರಕಟಿಸಬೇಕಾದ ಕಾರ್ಯ ನಡೆಯಬೇಕಾಗಿದೆ.

ಮಹಾ ತಪಸ್ವಿ

ಮಹಾತಪಸ್ವಿಯಾಗಿದ್ದ ಪೂರ್ಣತ್ವಕಾರ ಕೆಳದಿ ಪೂಜ್ಯರು ತಮ್ಮ ತಪಃಶಕ್ತಿಯಿಂದಲೆ ಲೀಲೆಗಳನ್ನು ಗೈದ ಲೀಲಾಪರುಷರಾಗಿದ್ದಾರೆ. ಹಿಮಾಲಯ, ಋಷಿಕೇಶ, ಶಿವಯೋಗ ಮಂದಿರ, ಕೆಳದಿ ಮುಂತಾದ ಪುಣ್ಯ ತಪೋಭೂಮಿಯಲ್ಲಿ ತಪ ಗೈದ ಕೆಳದಿ ಪೂಜ್ಯರು ನೊಂದು ಬಂದ ಭಕ್ತರ ಕಷ್ಟಗಳನ್ನು ತಮ್ಮ ತಪಃಶಕ್ತಿಯಿಂದ ನಿವಾರಿಸಿದ ದಿವ್ಯಾತ್ಮರು. ಅಂತಹ ನೂರಾರು , ಸಾವಿರಾರು ಲೀಲೆಗಳನ್ನು ಉದಾರಿಸಬಹುದಾಗಿದೆ.

ಆಡಂಬರವನ್ನು ಬಯಸುವ ಇಂದಿನ ಸಮಾಜವು ಪೂರ್ಣತ್ವಕಾರ ಕೆಳದಿ ಶ್ರೀಗಳ ‘ನಿರಾಡಂಬರ” “ಸರಳ” “ತತ್ವಗತ” ಜೀವನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅವರ ಪ್ರತಿಭೆ- ಪಾಂಡಿತ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ.

“ನಿಸ್ವಾರ್ಥ” “ನಿಷ್ಕಳಂಕ” ನಿರ್ಮಲಾತ್ಮದ” ಪೂರ್ಣತ್ವಕಾರ ಕೆಳದಿ ಶ್ರೀಗಳಿಗೆ ಕೆಲವು ಜನ ಸ್ವಾರ್ಥಿಗಳು, ಕಳಂಕಿತರು, ಕಲ್ಮಶ ರು ಅನೇಕ ರೀತಿಯಲ್ಲಿ ತೊಂದರೆ, ಚಿತ್ರಹಿಂಸೆ ನೀಡಿದರೂ ಅದನ್ನೆಲ್ಲ ತಾಳ್ಮೆಯಿಂದ ಸಹಿಸಿದರೆ, ಹೊರತು ತೊಂದರೆ ಮಾಡಿದವರೆಂದಿಗೂ ಕೆಳದಿ ಪೂಜ್ಯರು ಕೇಡುಬಯಸಲಿಲ್ಲ.

ರಾಜಗುರು ಹಿರೇಮಠದ ಪಟ್ಟಾಧ್ಯಕ್ಷರಾಗಿ ತಮ್ಮ ಇಚ್ಚೆಯಂತೆ ಸನ್ 2200 ನೇ ಇಸ್ವಿಯಲ್ಲಿ ತಮ್ಮ ತರುವಾಯ ಶ್ರೀ ಮೃತ್ಯಂಜಯ ದೇಶಿಕ ಶಿವಾಚಾರ್ಯರನ್ನು ಕೆಳದಿ ರಾಜಗುರು ಹಿರೇಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳಿಸಿದರು.

ಲಿಂಗೈಕ್ಯ

ಮೌನ ತಪಸ್ವಿ ಶ್ರೀಮ.ನಿ.ಪ್ರ.ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತ ಮಠ ನಿಂಬಾಳ ರವರು ಹೇಳುವಂತೆ “ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಮ್” ಮಹಾತ್ಮರಾದವರಿಗೆ ಕೃತಿ (ಕಾಯ), ಮಾತು (ವಾಕ್), ಮತಿ (ಮನಸ್ಸು) ಈ ಮೂರರಲ್ಲಿಯೂ ಏಕರೂಪತೆಯಿರುತ್ತದೆ. ಈ ಸುಭಾಷಿತೋಕ್ತಿಯೇ ವ್ಯಕ್ತಿರೂಪದಂತಿದ್ದವರು ಕೆಳದಿ ಡಾ:ಗುರುಸಿದ್ಧ ದೇವ ಶಿವಾಚಾರ್ಯ ಮಹಾಸ್ವಾಮಿಗಳು, ಸರಳತೆ, ಸಹನೆ, ತಾಳ್ಮೆ, ಸಮ-ಚಿತ್ತತೆ, ದೈರ್ಯ, ತ್ಯಾಗ, ಆದರ್ಶ, ಸಿದ್ದಾಂತ, ಮಹಾನ್ ಪಾಂಡಿತ್ಯ, ತಪಃಶಕ್ತಿ, ಇವುಗಳ ಸಮ್ಮಿಳಿತದ ಮೇರು ವ್ಯಕ್ತಿತ್ವ ಕೆಳದಿ ಅಜ್ಜನವರದಾಗಿತ್ತು. ತ್ಯಾಗ ಜೀವನದಲ್ಲಿ, ಆದರ್ಶ ಯೋಗಿಯಾಗಿ ಬೆಳಿಗಿದ ಕೆಳದಿ ಅಜ್ಜನವರು “ಹಾನಗಲ್ ಗುರು ಕುಮಾರೇಶ್ವರರನ್ನು ಸಂಪೂರ್ಣವಾಗಿ ಗ್ರಹಿಸಿ, ಅವರ ಪಥದಲ್ಲಿ ನಡೆದು, ಶ್ರೀಮದ್ ವೀರಶೈವ ಶಿವಯೋಗ ಮಂದಿರದ ಪ್ರಚಾರ ಹಾಗೂ ಪ್ರಚುರಕ್ಕಾಗಿ ಹಗಳಿರುಳು ಶ್ರಮಿಸಿ, “ಹಾನಗಲ್ ಗುರುಕುಮಾರ ಶಿವಯೋಗಿಗಳ ಮತ್ತೊಂದು ಅವತಾರ”ವಾಗಿದ್ದರು.

ಅವರನ್ನು “ರಾಜಗುರುಗಳು ಎನ್ನುವದಕ್ಕಿಂತಲೂ ಗುರುಗಳಲ್ಲಿ ರಾಜರಂತಿದ್ದು “ “ಗುರುತ್ವ, ದಿವ್ಯತ್ವ, ಸಿದ್ದಿ ಹೊಂದಿದ ಮಹಾನ್ ತಪಸ್ವಿಯಾಗಿದ್ದರು.

ಏಕ-ನಿಷ್ಠೆಗೆ = ಗುರಿಗೆ ಸಿದ್ಧಿ ದೊರೆವುದು ಸಹಜ |
ಸಾಧಕನ ಸಾಧನೆಗೆ ಸಿದ್ದಿ ದೊರೆತರೆ ಸಿದ್ಧ ;||
ಅಣಿಮಾದಿ ಸಿದ್ದಿ ದೊರೆತ ಗುರುವೇ ಗುರುಸಿದ್ಧ |
ಗುರು-ಸಿದ್ಧ – ದೇವನೇ “ಗುರುಸಿದ್ಧದೇವ” =ಶಿವ ||

ಕೆಳದಿ ಪೂಜ್ಯರು ಲಿಲತ ರಗಳೆ ಛಂದಸ್ಸಿನಲ್ಲಿ ಬರೆದ ಪದ್ಯದ 03 ನೇ ಪ್ಯಾರಾ

ಇಂತಹ ಮಹಾನ್ ತಪಸ್ವಿಗಳು ಆಷಾಡ ಶುದ್ಧ ಏಕಾದಶಿ,  ಜುಲೈ 09 2009 ರ ಮಂಗಳವಾರ ದಂದು ತಮ್ಮ 79 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.

ಕೆಳದಿ ಅಜ್ಜನವರ ಕರ್ತೃ ಗದ್ದುಗೆಯನ್ನು ಶ್ವೇತಾಂಬರದಾರಿ, ಮೌನತಪಸ್ವಿ  ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತಮಠ, ನಿಂಬಾಳ, ಇವರ ಮಾರ್ಗದರ್ಶನದಲ್ಲಿ  ಶಿವಯೋಗ ಮಂದಿರದ ಪಲಪ್ರಭೆ ನದಿ ಬಲದಂಡೆ ಮೇಲೆ ನಿರ್ಮಿಸಲಾಗಿದೆ.

ಪರಮ ಪೂಜ್ಯ ಮೌನ ತಪಸ್ವಿ ಜಡೆಯೊಡೆಯರ ಪರಿಶ್ರಮದಿಂದ ಇಂದು ದೊಡ್ಡ ಮಠವಾಗಿ ಬೆಳದು ನಿಂತಿದ್ದು, ಇದು ಪೂರ್ಣತ್ವಕಾರ ಲಿಂ ಡಾ||ಕೆಳದಿ ಶ್ರೀಗಳ ಹಾಗೂ ಮೌನತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಪರಿಶುದ್ಧ ಗೆಳೆತನದ ಸಂಕೇತವಾಗಿದೆ.

ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು - ಚಾಂಬೋಳ, ಬೀದರ

ಲೇಖಕರು: ಶ್ರೀ ಶಿವನಾಥ.ಕತ್ತೆ

ಪೂಜ್ಯರ ಜನನ – ಬಾಲ್ಯ:

ಬಿಜಾಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮವು ಕಲ್ಯಾಣ ಚಾಲೂಕ್ಯರ ಕಾಲದಲ್ಲಿ ಉಪರಾಜಧಾನಿಯಾಗಿತ್ತು. ಇಂಗಳೇಶ್ವರ ಒಂದು ಐತಿಹಾಸಿಕ ಐತಿಹ್ಯಗಳನ್ನು ಹೊಂದಿದೆ. ಆಲಮಟ್ಟಿಯ “ಕರ್ನಾಟಕ ಗಾಂಧಿ” ಎಂದು ಚಿರಪರಿಚಿತರಾದ ಹರ್ಡೆಕರ ಮಂಜಪ್ಪನವರ ತಪೋಭೂಮಿಯಾಗಿರುವುದು ವಿಶೆಷವಾಗಿದೆ. ಅಕ್ಕನಾಗಮ್ಮ, ಚೆನ್ನಬಸವಣ್ಣ, ಬಲದೇವಾ ಮೊದಲಾದ ಶರಣರು ಜನಸಿದ ನಾಡು. ಅದಲ್ಲದೆ ಶ್ರೀ ಗುರು ಬಸವಣ್ಣನವರ ತಾಯಿಯ ತವರೂರು ಇಂಗಳೇಶ್ವರವಾಗಿದ್ದು, ಬಸವಣ್ಣನವರ ಜನನವು ಇದೇ ಗ್ರಾಮದಲ್ಲಿ ಆಗಿತ್ತು. ಇಂತಹ ಶರಣರ ಜನ್ಮ ತಾಳಿದ ಊರಿನಲ್ಲಿ ಹಿರೇಮಠ ಮನೆತನದ ಶ್ರೀಮತಿ ಈರಮ್ಮಾ ಶ್ರಿ ಸಿದ್ದಯ್ಯಾ ಹಿರೇಮಠ ದಂಪತಿಯವರ ಉದರದಲ್ಲಿ ದಿನಾಂಕ ೧೧-೦೭-೧೯೩೮ರಂದು ೪ನೇ ಮಗನಾಗಿ ಜನಿಸಿದರು. ಬಸಯ್ಯಾ ಜನ್ಮ ತಾಳಿದ ಕೂಡಲೇ ಇವರ ತಂದೆ ತಾಯಿ ಇಂಗಳೆಶ್ವರದ ವಸ್ತçದ ಹಿರೇಮಠದ ಉತ್ತರಾಧಿಕಾರಿ ಮಾಡಬೇಕು ಎಂದು ಸಂಕಲ್ಪ ಮಾಡಿಕೊಂಡಿದರು. ಇವರ ತಂದೆ-ತಾಯಿ ಬಸಯ್ಯನನ್ನು ಸ್ವಾಮಿಜಿ ಮಾಡುವ ಸಂಕಲ್ಪ ಹೊಂದಿದರು ಆದರೆ ವಿದ್ಯಾಭ್ಯಾಸ ಎಲ್ಲಿ ಹೇಗೆ ಮಾಡಿಸಬೇಕೆಂದು ಗೊತ್ತಿರಲ್ಲಿಲ್ಲ. ಬಸಯ್ಯನ ವಿದ್ಯಭ್ಯಾಸದ ಜವಾಬ್ದಾರಿಯನ್ನು ಬಸಯ್ಯನ ಸೋದರ ಮಾವನಿಗೆ ನೀಡುತ್ತಾರೆ. ಸೋದರಮಾವರಿಗೆ ಬದಾಮಿಯಲ್ಲಿ ಪೋಲಿಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದರು. ಸೋದರಮಾವನವರಿಗೂ ಶಿವಯೋಗ ಮಂದಿರದ ಅಲ್ಲಿನ ಮುಖ್ಯಸ್ಥರಿಗೂ ಪರಿಚಯವಿದ್ದ ಕಾರಣ ಶಿವಯೋಗ ಮಂದಿರದ ಎಲ್ಲ ನಿಯಮಗಳನ್ನು ಕೇಳಿಕೊಳ್ಳುತ್ತಾರೆ.  ಆವಾಗ ಸೊದರಮಾವ ಈ ವಿಷಯವನ್ನು ತನ್ನ ಅಕ್ಕ ಭಾವನಿಗೆ ತಿಳಿಸುತ್ತಾರೆ.


ಶಿಕ್ಷಣ:

ಇಂಗಳೇಶ್ವರ ಗ್ರಾಮದಲ್ಲಿ ಬಸಯ್ಯ ಓದಲು ಪ್ರಾರಂಭಿಸಿದ ಕಾಲದಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಶಾಲೆಗೆ ಕಟ್ಟಡವಿರಲಿಲ್ಲ. ಗ್ರಾಮದ ಗಿಡದ ಕೆಳಗಡೆ ಅಥವಾ ಗುಡಿಗಳಲ್ಲಿ ಶಾಲೆ ನಡೆಸುತ್ತಿದ್ದರು. ಒಬ್ಬ ಶಿಕ್ಷಕರು ಮಾತ್ರ ಸರಿಯಾಗಿ ಬರುತ್ತಿರಲಿಲ್ಲ. ಯಾರು ಕೂಡ ಆ ಶಾಲೆಗೆ ಹೋಗುತ್ತಿರಲಿಲ್ಲ. ಏಕೆಂದರೆ ಅಲ್ಲಿಯೇ ಖಾಸಗಿ ಶಿಕ್ಷಕರೊಬ್ಬರು ಮಕ್ಕಳಿಗೆ ತುಂಬಾ ಉತ್ತಮ ರೀತಿಯಿಂದ ಅಭ್ಯಾಸ ಮಾಡಿಸುತ್ತಿದ್ದರು.ಅದಕ್ಕಾಗಿ ಎಲ್ಲರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಕಲಿಸುತ್ತಿದ್ದರು. ಬಸಯ್ಯಗೂ ಕೂಡ ಪ್ರಾರಂಭದ ಅಭ್ಯಾಸವೂ ಖಾಸಗಿ ಶಾಲೆಯಲ್ಲಿಯೇ ನಡೆಯುತ್ತದೆ. ಊರ ಶಾಲೆಯಲ್ಲಿಯೇ ೭ನೇ ತರಗತಿವರೆಗೆ ಕಲಿತರು. ೭ನೇ ತರಗತಿ ಪಾಸ ಆದಕೂಡಲೇ ೧೩ವರ್ಷ ಮುಗಿದು ೧೪ವರ್ಷ ಪ್ರಾರಂಭ ಸಮಯ ಇವರ ಸೋದರಮಾವ ಶಿವಯೋಗ ಮಂದಿರಕ್ಕೆ ಯೋಗ ಧ್ಯಾನ ಅಭ್ಯಸಕ್ಕಾಗಿ ಕರೆದುಕೊಂಡು ಒಯ್ದು ಬಿಟ್ಟು ಬರುತ್ತಾರೆ.


ಶಿವಯೋಗ ಮಂದಿರದತ್ತ ಪಯಣ:

ಮಾತೋಶ್ರೀ ಈರಮ್ಮಾ ಸಿದ್ದಯ್ಯ ಹಿರೇಮಠ ದಂಪತಿಗಳು ಬಸಯ್ಯನವರು ಹುಟ್ಟಿದಾಗಲೇ ಸಂಕಲ್ಪ ಮಾಡಿಕೊಂಡಿದರು. ಬಸಯ್ಯನನ್ನು ಸಮಾಜ ಸುಧಾರಕನಾಗಿ ಮಾಡಬೇಕೆಂದು. ಮಗ ೧೪ ವರ್ಷದವ ಆಗಿದ್ದ ಕೂಡಲೇ ಶಿವಯೋಗ ಮಂದಿರ ಸಂಸ್ಥೆಗೆ ೧೯೫೦ರಲ್ಲಿ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮ್ಮ ತಂದೆ-ತಾಯಿ ಇಚ್ಛೆಯಂತೆ ಬಸಯ್ಯನವರು ಶಿವಯೋಗ ಮಂದಿರದಲ್ಲೇ ಉಳಿದು ವಚನ ಸಾಹಿತ್ಯ, ವೇದ ಯೋಗ ಅಭ್ಯಾಸ ಮಾಡಿ ಸಂಸ್ಥೆಯ ನೋಡಿಕ್ಕೋಳ್ಳುತ್ತ ಇದ್ದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳ ಸೇವೆ ಮಾಡುತ್ತ ಕೆಲವು ವರ್ಷ ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಮುಗಿದ ಕೂಡಲೇ ತಂದೆ-ತಾಯಿ ಸಂಕಲ್ಪದಂತೆ ಇಂಗಳೇಶ್ವರದ  ಹಿರೇಮಠದ ಅಧಿಕಾರ ವಹಿಸಿಕೊಳ್ಳುತ್ತಾರೆ. ಪೂಜ್ಯರಿಗೆ ಕೆಲವು ದಿನಗಳ ನಂತರ  ಮಠದಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಅವರ ಮನಸು ಶಿವಯೋಗ ಮಂದಿರದಲ್ಲಿತ್ತು. ನಾನು  ಹಿರೇಮಠ ಪಟ್ಟಾಭಿಷಕ ಆದರೂ ನನ್ನ ಮನಸು ಶಿವಯೋಗಮಂದಿರ ಕಡೆಯಿದೆ. ನಾನು ಅಲ್ಲೇ ಗುರುಗಳ ಸೇವೆ ಮಾಡುತ್ತಾ ಇರುತ್ತೆನೆ ಎಂದು ಹೇಳಿ ಶಿವಯೋಗ ಮಂದಿರಕ್ಕೆ ಬಂದು ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳಿಗೆ ಬುದ್ದಿ ನಾನು ನಿಮ್ಮ ಸೇವೆ ಮಾಡಿಕೋಳ್ಳುತ್ತಾ ಇಲ್ಲೆ ಇರುತ್ತೆನೆ ಎಂದು ಶ್ರೀ ಸದಾಶಿವ ಮಹಾಸ್ವಾಮಿಗಳು ನಿನ್ನ ಮನಸ್ಸು ಎಲ್ಲಿಯವರೆಗೇ ಇರುತ್ತದೆಯೋ ಅಲ್ಲಿಯವರೆಗೆ ಇರು ಎಂದು ಅಪ್ಪಣೆ ನೀಡುತ್ತಾರೆ. ಪೂಜ್ಯ ಶ್ರೀ ಶಿವಯೋಗ ಮಂದಿರದಲ್ಲಿ ಸುಮಾರು ಹತ್ತು ಹನ್ನೇರಡು ವರ್ಷಗಳ ಕಾಲ ಶಿವಯೋಗ ಮಂದಿರದಲ್ಲಿ ಅಧ್ಯಯನ ಮತ್ತು ಸೇವೆ ಮಾಡುತ್ತಾ ಬಂದಿದಾರೆ.


ಧಾರ್ಮಿಕ ಕ್ಷೇತ್ರ:

ಧರ್ಮಾಚರಣೆಯ ಮಾರ್ಗ ಮತ್ತು ವೈಜ್ಞಾನಿಕವಾಗಿ, ವೈಚಾರಿಕವಾಗಿ ಅರಿವನ್ನು ಜಾಗೃತಗೊಳಿಸಿಕೊಳ್ಳವುದಕ್ಕಾಗಿ  ಬಸವಣ್ಣನವರು ಮತ್ತು ಶರಣರ ತತ್ವ ಮಹಾತ್ಮರ ಸಂತರ ಪ್ರಸಾರಕ್ಕಾಗಿ ತಮ್ಮ ಇಡೀ ಜೀವನವನ್ನೆ ಭಕ್ತರಿಗಾಗಿ ಸಮರ್ಪಿಸಿಕೊಂಡಿದ್ದಾರೆ. ನಿರಂತರವಾಗಿ ಶ್ರಮಿಸುತ್ತಿರುವ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಮಠದಲ್ಲಿ ಪ್ರತಿದಿನ , ಪ್ರತಿವಾರ, ಪ್ರತಿ ತಿಂಗಳು, ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತ ಧರ್ಮ ಪ್ರಸಾರ ನಡೆಸುತ್ತಿದ್ದಾರೆ.

ಶ್ರೀಮಠದಲ್ಲಿ ೧೯೯೧ರಲ್ಲಿ ಪ್ರಸಾದ ನಿಲಯ ವಿದ್ಯಾರ್ಥಿಗಳಿಗಾಗಿ ‘ಸಾಮೂಹಿಕ ಪ್ರಾರ್ಥನೆ ಮತ್ತು ವಚನ ಚಿಂತನೆ’ ಎಂಬ ಅಧ್ಯಾತ್ಮಿಕ ಪರಂಪರೆಯನ್ನು ಪ್ರಾರಂಭಿಸಿದರು. ಈ ಪ್ರಾರ್ಥನಾ ಮಾರ್ಗವನ್ನು ಪ್ರತಿಯೊಬ್ಬ ವ್ಯಕ್ತಿ ತನ್ನ ಬಾಲ್ಯದಿಂದಲೇ ರೂಢಿಸಿಕೊಳ್ಳುವುದು ಒಳ್ಳೆಯದು, ಎಂದು ಮನಗಂಡು ಗ್ರಾಮೀಣ ಭಾಗದಲ್ಲಿ ಮನಸಿನ ಶುಧ್ದಿಗೆ ಅಂತರಂಗದ ದರ್ಶನಕ್ಕೆ ಆತ್ಮ-ಪರಮಾತ್ಮನ ಮಧುರ ಬಾಂಧವ್ಯಕ್ಕೆ ಶರಣರು ಸಾಧು-ಸಂತರ ಅನುಸರಿಸಿದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಾರ್ಗಗಳಲ್ಲಿ ಪ್ರಾರ್ಥನೆಯೂ ಒಂದಾಗಿದೆ.


ಮಾಸಿಕ ಶಿವಾನುಭವ ಗೋಷ್ಠಿ:

ತನು-ಮನ, ಭಾವ-ಪ್ರಾಣ ಶುದ್ದಿಗಾಗಿ ಮತ್ತು ಭವಭಂಧನದ ಮುಕ್ತಿಗೆ ಅಂತರಂಗದ ಅರಿವಿನ ಬೆಳಕಿಗೆ ನಿಜದ ನಿಲುವಿನ ದರ್ಶನ, ಸಾಕ್ಷಾತ್ಕಾರ ಹಾಗೂ ಸಾಮರಸ್ಯದ ಸುಖಕ್ಕೆ ಏರುವ ಸಾಧು-ಸಂತರ ಮಹಾತ್ಮರ ಶರಣರ ಪರಂಪರೆಯನ್ನು ಪಾಲಿಸಬೇಕೆಂಬ ನಿಟ್ಟಿನಲ್ಲಿ ಚಾಂಬೋಳ ಸಂಸ್ಥಾನ ಮಠದ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಶಿವಾನುಭವಗೋಷ್ಠಿಯನ್ನು ನಡೆಸುವುದರ ಮೂಲಕ ಸಮಾಜದಲ್ಲಿನ ಜನರಲ್ಲಿರುವ ಅಹಂಕಾರದ ಗುಣ, ಸ್ವಾರ್ಥಭಾವನೆ,ಅಜ್ಞಾನ,ಮೌಢ್ಯತೆ ಮೊದಲಾದವುಗಳನ್ನು ಓಡಿಸಿ ಅವರಲ್ಲಿ ವೈಚಾರಿಕತೆ ತರುವುದರ ಜೊತೆಗೆ ಅವರ ವ್ಯಕ್ತಿತ್ವವನ್ನು ಬೆಳೆಸುವ ಈ ಶಿವಾನುಭವದ ಗೋಷ್ಠಿಗಳಿಗೆ ನಾಡಿನ ಅನುಭವಿ ಸಾಹಿತಿಗಳಿಗೆ, ವಚನ ಸಾಹಿತ್ಯ ವಿದ್ವಾಂಸರ ಕರೆಸಿ ಉಪನ್ಯಾಸ ಕೊಡಿಸುತ್ತಾರೆ.


ಪೂಜ್ಯ ಶ್ರೀ ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ:

ಪೂಜ್ಯ ಶ್ರೀರುದ್ರಮುನಿ ಪಟ್ಟದೇವರು, ‘ಪೂಜ್ಯ ಶ್ರೀ ಲಿಂಗೈಕ್ಯ ರುದ್ರಮುನಿ ಶಿವಯೋಗಿಗಳ’ ಸ್ಮರಣೋತ್ಸವವನ್ನು ಕೂಡ ಪ್ರತಿ ವರ್ಷ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮ ಮಹಾ ಶಿವರಾತ್ರಿ ಹಬ್ಬದ ಮೊದಲು ಎರಡು ದಿನ ಮುಂಚೆ ಅಂದರೆ ದಶಮಿ ದಿನದಂದು ಕಾರ್ಯಕ್ರಮ ಮಾಡುತ್ತಾರೆ.


ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ:

ಮಾರ್ಚ-೧೧ ರಿಂದ ೧೮ ವರೆಗೆ ಒಂದು ವಾರಗಳ ಕಾಲ ಸಮಾರಂಭದಲ್ಲಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರು, ಡೋಳು ಕುಣಿತ, ಭಜನೆ ಜೈಘೊಷ ಹಾಕುತ್ತಾ ಮೇರವಣೆಗೆ ಮಾಡುತ್ತಾರೆ. ಹಾಗೂ ಪೂಜ್ಯರು ಶ್ರೀಗಳು ಬರಿಗಾಲಲ್ಲಿ ಅಗ್ನಿ ಪ್ರವೇಶ ಮಾಡುತ್ತಾರೆ. ಮತ್ತು ನಾಡಿನ ಪ್ರಸಿದ್ದ ಪ್ರವಚನಕಾರರು, ಉಪನ್ಯಾಸಕರು, ಮಠಾಧೀಶರು, ರಾಜಕಾರಣಿಗಳು, ಅನುಭವಿಗಳು ಮೊದಲಾದ ಗಣ್ಯರನ್ನು ಕರೆಸುತ್ತಾರೆ. ವಿಶೇಷ ಉಪನ್ಯಾಸಗಳು ನಡೆಯುತ್ತದೆ. ರಾಜಕರಣಿಗಳು ನಾಡಿನ ಸೇವೆಯ ಬಗ್ಗೆ ಮಾತನಾಡುತ್ತಾರೆ. ಮಠಾಧೀಶರು ಆಶೀರ್ವಚನದ ರೂಪದಲ್ಲಿ ಅನುಭಾವ ನೀಡುತ್ತಾರೆ. ಶಾಲೆಯ ಮಕ್ಕಳಿಂದ ವಚನ ನೃತ್ಯ, ರೂಪಕ ನಾಟಕ, ಒಟ್ಟಾರೆ ಈ ಕಾರ್ಯಕ್ರಮ ಎಲ್ಲದರಕ್ಕಿಂತಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.


ಲಿಂ. ಹಾನಗಲ್ಲ ಕುಮಾರೇಶ್ವರ ಜಯಂತಿ:

ಶ್ರೀಮದ್ ವೀರಶೈವ ಮಹಾಸಭೆಯ ಸಂಸ್ಥಾಪಕರಾದ ಹಾಗೂ ಶ್ರೀಮದ್ ವೀರಶೈವ ಶಿವಯೋಗ ಮಂದಿರದ ಸಂಸ್ಥಾಪಕರಾದ ಹಾನಗಲ್ಲ ಕುಮಾರೇಶ್ವರ ಜಯಂತಿ ಶ್ರೀ ಮಠದಲ್ಲಿ ಪ್ರತಿ ವರ್ಷ ಜಿಲ್ಲೆಯ ಮಠಾಧೀಶರನ ಆಹ್ವಾನಿಸಿ ಸುತ್ತ-ಮುತ್ತಲಿನ ಗ್ರಾಮದ ಭಕ್ತರನ್ನು ಭಾಗಿಯಾಗಿ ಲಿಂ.ಹಾನಗಲ್ಲ ಕುಮಾರೇಶ್ವರ ಜಯಂತಿ ಆಚರಿಸುತ್ತಾರೆ.


ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀಗಳು:

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ಷೇತ್ರಗಳಂತೆ ಪೂಜ್ಯರು ಸಾಂಸ್ಕçತಿಕ ಕ್ಷೇತ್ರದಲ್ಲೂ ಅಮೋಘ ಸೇವೆ ಸಲ್ಲಿಸಿದ್ದಾರೆ. ಸಂಗೀತ, ನಾಟಕ, ಭಜನೆಯಂಥ ಈ ನೆಲದ ಕಲೆ, ಕ್ರೀಡೆಗಳನ್ನು ಪೋಷಿಸಿದ್ದಾರೆ. ಸಂಗೀತಕ್ಕಾಗಿ ಪೂಜ್ಯಶ್ರೀಗಳು ಸಂಗೀತ ಕಲಾವಿದರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.


ನಾಟಕ:

ಸಮಾಜದಲ್ಲಿ ಜನರಿಗೆ ಉಪನ್ಯಾಸ ಪ್ರವಚನಗಿಂತಲೂ ತುಂಬ ಪರಿಣಾಮಕಾರಿಯಾಗಿರುವುದು ದೃಶ್ಯ ಮಾಧ್ಯಮ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ನಾಟಕ ಮತ್ತು ರೂಪಕಗಳೂ ಸಂಯೋಜಿಸಿ ಪ್ರದರ್ಶಿಸುತ್ತಾರೆ.

ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ದೆಗಳಿಗೆ ಪ್ರೋತ್ಸಾಹ ನೀಡುತ್ತಾ ಸ್ವಾತಂತ್ರ ದಿನಾಚಾರಣೆ, ಗಣರಾಜ್ಯೋತ್ಸವದಂಥ ವಿಶೇಷ ದಿನಗಳಲ್ಲಿ ಅವರು ಕನ್ನಡ ನಾಡಿನ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಗಳ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಗಾಯನ ವಚನ ಕಂಠಪಾಠ, ಭಾಷಣ ,ನಿಬಂಧ, ರಂಗೋಲಿ, ಚಿತ್ರಕಲೆ, ರಸಪ್ರಶ್ನೆ, ರೂಪಕ, ನಾಟಕದಂಥ ಸಾಂಸ್ಕೃತಿಕ ವಿಷಯಗಳಲ್ಲಿ ಪುಟ್-ಬಾಲ್,ವಾಲಿಬಾಲ್, ಎತ್ತರ ಜಿಗಿತ, ಖೋ-ಖೋ,ಓಟ ಮೊದಲಾದ ಕ್ರೀಡೆಗಳಲ್ಲಿ ಈ ಸ್ಪರ್ದೆಗಳು ನಡೆಯುತ್ತವೆ. ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ.


ಶೈಕ್ಷಣಿಕ ಕ್ಷೇತ್ರ:

ಬೀದರ ಜಿಲ್ಲೆಯ ಶೈಕಣಿಕ ಪರಿಸ್ಥಿತಿ ಉತ್ತಮವಾಗಿ ಇಲ್ಲವೆಂದೂ, ಹಿಂದುಳಿದವರು ಎಂಬ ಹಣೆ ಪಟ್ಟಿ ಹೊತ್ತಿದೆ. ಇಲ್ಲಿನ ಆರ್ಥಿಕ ಪರಿಸ್ಥಿತಿಯೂ ಅಷ್ಟೊಂದು ಹೇಳಿಕೊಳ್ಳವ ಹಾಗಿಲ್ಲ. ಮತ್ತೆ ರೈತರು ಸಂಪೂರ್ಣವಾಗಿ ಮಳೆಯನ್ನೇ ನಂಬಿಕೊಂಡು ಬದುಕುವಂಥವರು. ರೈತರಲ್ಲಿ ಸಣ್ಣ ರೈತರೆ ಹೆಚ್ಚು. ಇಲ್ಲಿ ಕೂಲಿ ಕಾರ್ಮಿಕರು, ನಿರ್ಗತಿಕರು, ದಲಿತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸುವ ಬದಲಿಗೆ ಕೂಲಿಗೆ ಕಳುಹಿಸುತ್ತಿದ್ದಾರೆ.ಇತ್ತಿಚೆಗೆ ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸುತ್ತಾ ಮಕ್ಕಳಿಗೆ ಶಾಲೆಗೆ ಕಳುಹಿಸಬೇಕೆಂದು ಈ ಹಳ್ಳಿಗಳಲ್ಲಿ ಪಾಲಕರು ಸರಕಾರಿ ಶಾಲೆಗೆ ಕಳುಹಿಸಬೇಕೆಂದರು ಸರಕಾರಿ ಶಾಲೆ ಕೂಡ ಇಲ್ಲ. ಆದರೆ ನಮ್ಮ ಆಧುನಿಕ ಶಿಕ್ಷಣವು ಹಲವಾರು ದೋಷಗಳಿಂದ ಕೂಡಿದೆ. ಪ್ರಾಥಮಿಕ ಹಂತದ ಶೈಕ್ಷಣಿಕ ಬೋಧನಾ ಪದ್ದತಿಯಲ್ಲಿನ ಗುಣಮಟ್ಟ ಹೆಚ್ಚೆನಿಲ್ಲ. ನೈತಿಕ ಆಧ್ಯಾತ್ಮಿಕದಿಂದ ವಿಷಯಗಳ ಭೋಧನೆ ಕಳೆದುಕೊಂಡಿದೆ. ಸಂಸ್ಕಾರ ಶಿಕ್ಷಣವಂತೂ ಮಾಯವಾಗಿ ಬಿಟ್ಟಿದೆ. ಕೇವಲ ಗೀಚುವುದು ಗಿಳಿಪಾಠ ಮಾಡವುದು ಮುಂದಿನ ಕ್ಲಾಸಿಗೆ ನೂಕುವುದು ಇಂಥಹ ಶಿಕ್ಷಣ ಪದ್ದತಿಯ ಮೇಲೆ ಮಕ್ಕಳ ಭವಿಷ್ಯ ನಿಂತಿದೆ.

ಪ್ರಸಕ್ತ ತಾಂತ್ರಿಕ ಯುಗದಲ್ಲಿ ವೃತಿಪರ ಶಿಕ್ಷಣ ಪಡೆದವರಿಗೆ ಮಾತ್ರ ಆದ್ಯತೆ ಇದೆ. ಇಲ್ಲಿ ಪ್ರೀತಿ, ನ್ಯಾಯ, ದಯೆ, ಅನುಕಂಪ, ಯಾವ ಮಾನವೀಯ ಆದರ್ಶಗಳಾಗಲಿ, ಮನುಷ್ಯ ಸಂಬಂಧಗಳಾಗಲಿ ಬೇಕಾಗಿಲ್ಲ. ಈ ಆಧುನಿಕ ಕಾಲದ ಅನೇಕ ಸಮಸ್ಯಗಳಿಗೆ ಪರ್ಯಾಯ ಹುಡುಕುತ್ತಾ ಶೈಕ್ಷಣಿಕ ಸಾಧನೆಯ ಮಾರ್ಗದಲ್ಲಿ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಅನ್ನದಾಸೊಹ ಒಂದು ಕಣ್ಣಾದರೆ, ಜ್ಞಾನದಾಸೋಹ ಇನ್ನೊಂದು ಕಣ್ಣು. ಅನ್ನ ದಾಸೋಹದ ಮೂಲಕ ಸಾಮಾಜಿಕವಾಗಿ ಜೀವನ ಉನ್ನತ್ತಿಕರಿಸಿದರೆ ಶಿಕ್ಷಣ ದಾಸೋಹದ ಮೂಲಕ ಬದುಕನ್ನು ಸಾರ್ಥಕಗೊಳಿಸುವಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಮಠಕ್ಕೆ ಬಂದಾಗ ಕೇವಲ ಕೈಯಲ್ಲಿ ಬೆತ್ತ ಬಿಟ್ಟು ಏನು ಇರಲ್ಲಿಲ್ಲ. ಖಾಲಿ ಕೈ ಅನೇಕ ನೋವು ನುಂಗುತ್ತಲೇ ಕಷ್ಟ ನಷ್ಟಗಳನ್ನು ಎದುರುಸುತ್ತಲೇ ಶೈಕ್ಷಣಿಕ ನೀಲಿ ನಕ್ಷೆಯೊಂದು ರೂಪಿಸಿ ೧೯೯೦-೯೧ನೇ ಶೈಕ್ಷಣಿಕ ವರ್ಷದಲ್ಲಿ ಪೂಜ್ಯರು ‘ಶ್ರೀ ರುದ್ರಮುನಿ ಪಟ್ಟದೇವರು ವಿದ್ಯಾ ಸಂಸ್ಥೆ’ ಎಂಬ ಶಿಕ್ಷಣ ಸಂಸ್ಥೆಯನ್ನು ಚಾಂಬೋಳ ಮಠದಲ್ಲಿ ಪ್ರಾರಂಭಿಸಿದರು.


ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ:

ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ೧೦-ಜೂನ್-೧೯೯೦ ರಂದು ಮಠದ ಪರಿಸರದಲ್ಲೇ ಪ್ರಾರಂಭಿಸಿದರು. ಮೂವರು ಶಿಕ್ಷಕರು ೨೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯನ್ನು ಹತ್ತು ವರ್ಷಗಳವರೆಗೆ ಮಠದಲ್ಲಿಯೇ ನಡೆಸಿದರು. ಅನಂತರ ಸ್ಥಳದ ಅಭಾವದಿಂದ ಗ್ರಾಮದ ಹೊರಗೆ ವಿಶಾಲವಾದ ಭೂಮಿಯಲ್ಲಿ ಮಾಡಿಕೊಳ್ಳಲಾಗಿತ್ತು.


ಶ್ರೀ ವೀರಭದ್ರೇಶ್ವರ ವಸತಿ ನಿಲಯ:

ಶ್ರೀ ವೀರಭದ್ರೇಶ್ವರ ವಸತಿ ನಿಲಯವು ೦೧-೦೬-೧೯೯೧ ರಲ್ಲಿ ಶ್ರೀಮಠದಲ್ಲಿಯೇ ಪ್ರಾರಂಭ ಮಾಡಿದರು. ಆ ಸಮಯದಲ್ಲಿ ಮಠದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರು ವಸತಿ ನಿಲಯ ಪ್ರಾರಂಭ ಮಾಡಿ ಮಕ್ಕಳನ್ನು ಇಟ್ಟುಕೊಂಡು ಕಂತಿಭೀಕ್ಷೆ ಬೇಡಿ ಮಕ್ಕಳಿಗೆ ಅನ್ನವನ್ನು ಹಾಕುತ್ತಿರುವುದಲ್ಲದೆ, ಉಚಿತ ಶಿಕ್ಷಣ, ವಸತಿ ಕೂಡ ನೀಡುತ್ತಿದ್ದಾರೆ. ಇತ್ತಿಚಿಗೆ ವಸತಿ ಕೋಣೆಗಳಲ್ಲದೇ ಅಡುಗೆ, ಪ್ರಸಾದ, ಉಗ್ರಾಣ, ಶೌಚಾಲಯ, ಸ್ನಾನಗೃಹ, ಪ್ರಾಥನಾಮಂದಿರ ಕಾರ್ಯಲಯ ಹೀಗೆ ಪ್ರತಿಯೊಂದು ಪ್ರತೇಕ ಕೋಣೆಗಳನ್ನು ನಿರ್ಮಿಸಿದ್ದಾರೆ. ಈ ಕೋಣೆಗಳನ್ನು ಬೆಳಕಿನಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ನೋಡಿಕೊಳ್ಳವುದಕ್ಕಾಗಿ ನಿಷ್ಠಾವಂತ ಮೇಲ್ವಿಚಾರಕರಿದ್ದಾರೆ. ವಿದ್ಯಾರ್ಥಿಗಳು ತಡರಾತ್ರಿವರೆಗೂ ಅಭ್ಯಾಸದಲ್ಲಿ ತೊಡಗಿದ್ದರು ಯಾವ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ವಸತಿ ನಿಲಯದಲ್ಲಿ ಶುದ್ದ ಕುಡಿಯುವ ನೀರು ಮತ್ತು ಪೌಷ್ಟಿಕ ಹಾಗೂ ಸಾತ್ವಿಕವಾದ ಆಹಾರದೊಂದಿಗೆ ಮಕ್ಕಳನ್ನು ಶಾರೀರಿಕ ಬೆಳವಣಿಗೆಗೆ ಬೇಕಾಗುವ ಅತ್ಯಂತ ದೊಡ್ಡ ಭಾಗ್ಯ ಆರೋಗ್ಯ ಭಾಗ್ಯವಾಗಿದೆ. ಶ್ರೀರುದ್ರಮುನಿ ಪಟ್ಟದೇವರು ಮಕ್ಕಳ ಆರೋಗ್ಯ ಕಾಪಾಡುವುದಕ್ಕಾಗಿ ವಾರಕ್ಕೊಮ್ಮೆ ವೈದ್ಯರನ್ನ ಕರೆಸಿ ಮಕ್ಕಳನ್ನು ತಪಾಸಣೆ ಮಾಡುತ್ತಾರೆ. ಸಂಸ್ಕಾರ ಸಹಿತ ಗುಣಮಟ್ಟ ಶಿಕ್ಷಣ ನೀಡುತ್ತಿದ್ದಾರೆ.


ಶ್ರೀಮತಿ ನೀಲಮ್ಮಾ ತಾಯಿ ಹಿರಿಯ ಪ್ರಾಥಮಿಕ ಶಾಲೆ:

ಮೊದಲೇ ಮಠದಲ್ಲಿ ಪ್ರೌಢ ಶಾಲೆ ಮತ್ತು ವಸತಿ ನಿಲಯ ಪ್ರಾರಂಭ ಮಾಡಿದ್ದರಿಂದ ಪ್ರಾಥಮಿಕ ಶಾಲೆ ಪ್ರಾರಂಭ ಮಾಡಬೇಕಾದರೆ ಸ್ಥಳದ ಸಮಸ್ಯ ಬರುತ್ತದೆ. ಮೊದಲೆ ಮಠದ ಎಲ್ಲಾ ಕೋಣೆಗಳು ಆರ್ಧ್ ಮರ್ದ ಬಿದ್ದ ಕೋಣೆಗಳು ಶ್ರೀಗಳ ಸ್ವಂತ ಜಮೀನಾಗಲಿ, ಪ್ಲಾಟ್‌ಗಳಾಗಲಿ ಇರಲಿಲ್ಲ. ಇದೇ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ಚನ್ನಬಸಪ್ಪಾ ನಾಗಶೆಟ್ಟಿ ಪಾಟೀಲ್ ಚಾಂಬೋಳ ಅವರು ಸಂಸ್ಥೆಗಾಗಿ ಅವರ ತಾಯಿ ಹೆಸರಿನ ಮೇಲೆ ಸಂಸ್ಥೆಗೆ ಒಂದು ಎಕರೆ ಜಮೀನು ಗ್ರಾಮದ ಹತ್ತಿರ ಸಂಸ್ಥೆಗೆ ದಾನವಾಗಿ ನೀಡುತ್ತಾರೆ. ಮುಂದೆ ಸಂಸ್ಥೆಯು ದಾನವಾಗಿ ನೀಡಿದ ಜಮೀನಿಗೆ ಸ್ಥಳಾಂತರಿಸೋಣ ಎಂದು ಪ್ರಾಥಮಿಕ ಶಾಲೆಯು ೦೧-೦೬-೧೯೯೩ರಲ್ಲಿ ಸಂಸ್ಥೆಯ ಎಲ್ಲಾ ಸದಸ್ಯರ ಸಭೆಯನ್ನು ಕರೆದು ಸಭೆಯಲ್ಲಿ ಸದಸ್ಯರ ಒಪ್ಪಿಗೆಯ ಮೇರೆಗೆ ಪ್ರಾಥಮಿಕ ಶಾಲೆ ಹೆಸರನ್ನು ಶ್ರೀ ಚನ್ನಬಸಪ್ಪಾ ನಾಗಶೆಟ್ಟಿ ಪಾಟೀಲ್‌ರ ತಾಯಿ ಹೆಸರಿನ ಮೇಲೆ “ಶ್ರೀಮತಿ ನೀಲಮ್ಮಾ ತಾಯಿ ಹಿರಿಯ ಪ್ರಾಥಮಿಕ ಶಾಲೆ ” ೧ನೇ ತರಗತಿಯಿಂದ ೭ನೇ ತರಗತಿವರೆಗೆ ಪ್ರತಿ ವರ್ಷ ಒಂದೊಂದು ತರಗತಿ ಪ್ರಾರಂಭ ಮಾಡಿರುತ್ತಾರೆ.

ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಸಂಸ್ಥೆ ಪ್ರಾರಂಭದಿಂದ ಇಲ್ಲಿಯವರೆಗೂ ಕೇವಲ ಸರಕಾರದ ಫೀ ಮಾತ್ರ ತೆಗೆದುಕೊಂಡು ಯಾವ ಡೋನೆಷನ್ ಇಲ್ಲದೇ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಮುಂದೆ ಸಂಸ್ಥೆಯ ಅಡಿಯಲ್ಲಿ ‘ಶ್ರೀ ಹಾನಗಲ್ಲ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ’ ತೆರೆಯುವ ಉದ್ದೇಶ ಹೊಂದಿದ್ದಾರೆ.


ಪ್ರಶಸ್ತಿ ಪುರಸ್ಕಾರ:

ಪೂಜ್ಯ ಶ್ರೀಗಳ ವಿದ್ಯಾಗುರುಗಳಾದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಶಿವಯೋಗ ಮಂದಿರ ಇವರು ಪೂಜ್ಯ ಶ್ರಿ ರುದ್ರಮುನಿ ಪಟ್ಟದೇವರ ಸೇವೆ ನೋಡಿ ಶಿವಯೋಗ ಮಂದಿರ ಬಿಟ್ಟು ಚಾಂಬೋಳ ಮಠಕ್ಕೆ ಬರುವಾಗ ಒಂದು ಮಾತು ಹೇಳುತ್ತಾರೆ. ನೀವು ಇಲ್ಲಿ ಕಲಿತು ಹೋಗುತ್ತಿದ್ದಿರಿ. ಸಮಾಜ ಸೇವೆ ಹಾಗೂ ನಿಮ್ಮ ಮಠದ ಕಾರ್ಯದ ಜೊತೆಗೆ ನಮ್ಮ ಸಂಸ್ಥೆಯ ಕಾರ್ಯಕೂಡ ಜವಾಬ್ದಾರಿಯಿಂದ ಮಾಡಬೇಕು ಎಂದು ಹೇಳುತ್ತಾರೆ. ಆವಾಗ ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು “ಬುದ್ದಿ! ನಾನು ನನ್ನ ಜೀವಮಾನದವರೆಗೆ ತಾವು ಒಪ್ಪಿಸಿದ ಕಾರ್ಯ ಮಾಡುತ್ತೇನೆ” ಎಂದು ಹೇಳುತ್ತಾರೆ. ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಶ್ರೀಗಳಿಗೆ ಹೇಳುತ್ತಾರೆ. ನೀವು ಪ್ರತಿ ವರ್ಷ ಶಿವಯೋಗ ಮಂದಿರದ ವಟು-ಸಾಧಕರಿಗೆ ನಿಮ್ಮ ಲಿಂಗಹಸ್ತದಿಂದಲೇ ಅಯ್ಯಾಚಾರ- ಲಿಂಗಧೀಕ್ಷೆ ಮಾಡಬೇಕು ಎಂದು ಹೇಳುತ್ತಾರೆ. ಪೂಜ್ಯ ಶ್ರೀ ರುದ್ರಮುನಿ ಪಟ್ಟದೇವರು ಮನಸಾ ಪೂರ್ವಕವಾಗಿ ಒಪ್ಪಿಕೊಂಡು ಸುಮಾರು ೧೯೬೩ರಿಂದ ಇಲ್ಲಿಯವರೆಗೆ ಒಂದು ವರ್ಷವು ಕೂಡ ತಪ್ಪದೇ ಪ್ರತಿ ವರ್ಷ ಮಹಾಶಿವರಾತ್ರಿಯಂದು ಶಿವಯೋಗ ಮಂದಿರದ ವಟು-ಸಾಧಕರಿಗೆ ಅಯ್ಯಾಚಾರ ಮತ್ತು ಲಿಂಗಧೀಕ್ಷೆ ಮಾಡಿಬರುತ್ತಾರೆ.

ಶ್ರೀ ರುದ್ರಮುನಿ ಪಟ್ಟದೇವರ ಸಮಕಾಲೀನ ಜಗದ್ಗುರುಗಳಾದ ಹಾಗೂ  ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ, ಪೂಜ್ಯರ ಅನುಪಮ ಸೇವೆಯನ್ನು ಮನಗಂಡು ಪೂಜ್ಯ ಶ್ರೀ ಜಗದ್ಗುರು ಸಂಗನಬಸವ ಮಹಾಸ್ವಾಮಿಗಳ ಲಿಂಗ ಹಸ್ತದಿಂದ “ವೀರಶೈವಧರ್ಮ ಕ್ರಿಯಾಶೀಲ ರತ್ನ” ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.